ಲೇಖಕರು- ಸತೀಶ ಗಣೇಶ ನಾಗಠಾಣ.
ಮುಂದುವರೆದ ಭಾಗ..
ದಟ್ಟಣೆಯಿಂದ ಕೂಡಿದ ಬೃಹತ ಗಾತ್ರದ ಮರದ ಸಾಲುಗಳನ್ನು ಕಣ್ಣೆತ್ತಿ ನೋಡುತ್ತ ಆ ದಿನದ ಆಹ್ಲಾದಕರವಾದ ಮುಂಜಾವಿನ ಮಂಪರು ಬರೆಸುವಂತಹ ತಂಗಾಳಿಯ ಆನಂದದ ಸುಖವನ್ನು ಸವೆಯುತ್ತ ದಂಡಾಕಾರದ ಕಾನನದ ಒಳಗೆ ಪ್ರವೇಶಿಸಲು ನಿಸರ್ಗ ಬಾ ಎಂದು ಕರೆಯುತ್ತಿತ್ತು.
ಕಲ್ಪವೃಕ್ಷಗಳ ದಟ್ಟ ಕಾಡುಗಳನ್ನು ಹೊಂದಿದ ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯ ಸಾಲು ಸಾಲುಗಳನ್ನ ನೋಡುತ್ತ ತಲ್ಲಿನವಾದಂತಹ ಸಮಯದಲ್ಲಿ ಏನೋ ಒಂಥರಹ ಮನಸ್ಸಿನಲ್ಲಿ ಭಾವನಾತ್ಮಕ ಅಲೆಗಳ ಹೊಯದಾಟ ಝೆಂಕರಿಸುತ್ತ ಅತ್ತಂದಿತ್ತ ಸುಳಿದಾಡುತ್ತ ಮರದಿಂದ ಮರಕ್ಕೆ ನೆಗೆಯುತ್ತ ಸುಳಿಗಾಳಿಯ ಹತೋಟಿಗೆ ಸಿಲುಕಿ ಅಜರಾಮರವಾಗಿ ಬಾನಂಗಳದಲ್ಲಿ ಮನಸ್ಸು ತೇಲಾಡುತ್ತಿತ್ತು.
ಅದೋ ಕೇರಳ ರಾಜ್ಯದ ನಿತ್ಯ ಹರಿದ್ವರ್ಣದ ಕಾನನಗಳನ್ನು ಹೊತ್ತ ವಯನಾಡು ಹಲವಾರು ಬಗೆ ಬಗೆಯ ಜೀವವೈವಿಧ್ಯತೆಯಿಂದ ಕೂಡಿದ ಪ್ರಕೃತಿಯ ವಿಸ್ಮಯ ತಾಣಗಳ ಕಣಜವೆ ಸರಿ.
ನೀಲಾಕಾಶದ ತುಂಬೆಲ್ಲ ಚುಯಂ! ಚುಯಂ! ಎಂದು ಗಾನ ಮೊಳಗಿಸುವ ಪಕ್ಷಿಗಳ ಕಲರವಗಳ ಮಧ್ಯೆ ನವಿಲುಗಳ ನರ್ತನಗಳನ್ನ ಕಣ್ತುಂಬಿ ನೋಡುತ್ತ ಮೈ ಜುಮ್ಮೆನ್ನಿಸುವ ವಾತಾವರಣದಲ್ಲಿ ತಣ್ಣನೆ ಚಳಿಗಾಳಿಯ ಸಮ್ಮೊಹನಕ್ಕೊಳಗಾಗಿ ಮೈಮನವೆನ್ನಲ್ಲ ನಡುಗಿಸಿದ ಚಳಿಯ ತಾಂಡವ ನೃತ್ಯದ ಮಧ್ಯೆಯು ಗುಯಂ.. ಗುಯಂ.. ಎಂದು ಕಿವಿಯಲ್ಲಿ ಗುಯಂಗುಟ್ಟುವ ನೊಣಗಳ ಇಂಪಾದ ಸಂಗೀತ ಕೇಳಲು ಬಲು ಹಿತವೆನ್ನಿಸುತ್ತಿತ್ತು.
ಆ ದಿನ ಬೆಳಿಗ್ಗೆ ನಾಲ್ಕು ಗಂಟೆ ಸಮಯ, ಗಾಢಾಕಾರವಾದ ಕತ್ತಲೆ ಆವರಿಸಿತ್ತು. ಮೈ ಕೊರೆಯುವ ಚಳಿ ಎಲ್ಲಿ ನೋಡಿದರು ಇಬ್ಬನಿ ಆವರಿಸಿತ್ತು. ಬೆಳಕು ಬರಲು ಇನ್ನು ಒಂದುವರೆ ಗಂಟೆ ಬೇಕಾಗಿತ್ತು. ಟಾರ್ಚನ್ನ ಹಿಡಿಯುತ್ತ ಜೀಪಿನ ಹತ್ತಿರ ಓಡುತ್ತಿದ್ದ ವಾಹನ ಚಾಲಕ ತನಗೆ ವಹಿಸಿದ ಜೀಪಿನ ಹತ್ತಿರ ಬಂದು, ನೋಡಿ! ನೋಡಿ! ಇಲ್ಲಿದೆ ಜೀಪು ಎಂದು ಟಾರ್ಚನ್ನ ನಮ್ಮತ್ತ ಮೇಲಿಂದ ಕೆಳಕ್ಕೆ ತಿರುಗಿಸುತ್ತ ಸೂಚನೆಗಳನ್ನ ಕೊಡುತ್ತಿದ್ದ ಹಾಗೆ ನಾವೆಲ್ಲ ವಾಹನ ಚಾಲಕ ಇರುವಂತಹ ಜಾಗದಲ್ಲಿ ದೊಯಡಾಯಿಸಿದೇವು. ಸುಗ್ರಿವ ಸೈನ್ಯದ ಸೇನಾಪತಿಯಾದಂತಹ ಹನುಮಂತನ ಹಾಗೆ ಕಂಡ ವಾಹನ ಚಾಲಕನ ಆಜ್ಞೆಯನ್ನ ನಾವೆಲ್ಲರೂ ತಪ್ಪದೆ ಪಾಲಿಸುತ್ತ, ಒಂದೇ ಸಮನೆ ಗೊಗೊರೆಯುತ್ತಿದ್ದ ಚಾಲಕ ಬೇಗ ಬೇಗ ಜೀಪನ್ನ ಹತ್ತಿ ಇವತ್ತು ಬಹಳ ದೂರ ಹೋಗಬೇಕೆಂದು ಆತನ ಆತುರತೆಯ ಮಧ್ಯೆಯು ಎಲ್ಲರೂ ತಮ್ಮ ತಮ್ಮ ವಸ್ತುಗಳತ್ತ ಒಮ್ಮೆ ಕಣ್ಣುಗಳನ್ನ ಹಾಯಿಸಿ ಬ್ಯಾಗಿನಲ್ಲಿ ಕೈ ಹಾಕಿ ಕುಲುಕಿ ಎಲ್ಲವೂ ಇದೆ ಎಂದು ಖಾತ್ರಿ ಮಾಡಿಕೊಂಡ ನಂತರವೇ ಸೇನಾದಿಪತಿಯ ಆದೇಶದಂತೆ ಜೀಪಿನ ಒಳಗಡೆ ಚಂಗನೆ ಹತ್ತಿ ಕುಳಿತು ಕಾಡಿನತ್ತ ಹೊರಡಲು ಸನ್ನದ್ಧರಾದೇವು.
ಕನಿಷ್ಠವೆಂದರೂ ಆ ದಿನ ನಾಲ್ಕರಿಂದ ಐದು ಜೀಪುಗಳು ಬೇರೆ ಬೇರೆ ಕಡೆ ಹೋಗಬೇಕಾಗಿತ್ತು. ಸ್ವಯಂ ಸೇವಕರಲ್ಲಿ ಒಬ್ಬಾತನು ಎಪ್ಪೂ! ಏನ್ರಿ ಈ ಜೀಪಿಗೆ ಬಾಗಿಲುಗಳೆ ಇಲ್ಲವಲ್ಲ ಅಂತ ಗೊಣಗುತ್ತಿರಬೇಕಾದ್ರೆ ಪಕ್ಕದಲ್ಲಿದ್ದ ನಾನು ಗಹಗಹಿಸಿ ನಗುತ್ತ ಇವು ಒಂಥರಹ ಏರ ಕಂಡಿಶನರ್ ಜೀಪುಗಳು ಇವಕ್ಕೆಲ್ಲ ಬಾಗಿಲುಗಳಿರಲ್ಲ ಈ ಪರಿಸರಕ್ಕೆ ಹೇಳಿ ಮಾಡಿಸಿದಂತಹ ಜೀಪುಗಳಿವು. ವರ್ಷವೆಲ್ಲ ಕಳೆದರು ಈ ಜೀಪುಗಳು ನಿಮಗೆಲ್ಲ ತಂಪಾದ ಗಾಳಿಯ ಅನುಭವವನ್ನು ಕೊಡುತ್ತವೆ. ಈ ಕಾಡುಗಳಲ್ಲಿ ಇವುಗಳದ್ದೆ ಕಾರುಬಾರು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ನಮ್ಮ ಕೈಬಿಡುವುದಿಲ್ಲ ಇವುಗಳು ಒಳ್ಳೆ ಗಟ್ಟಿಮುಟ್ಟಾದ ಜೀಪುಗಳಿವು ಮುಂದೆ ಅಂಕುಡೊಂಕಾದ ದಾರಿಯಲ್ಲಿ ಹೋಗಬೇಕಾದ್ರೆ ನಿಮಗೆ ಗೊತ್ತಾಗುತ್ತೆ ಈ ಜೀಪುಗಳ ಕರಾಮತ್ತು ಹೇಗಿರುತ್ತದೆಂದು, ಈಗ ಹೊಗೋಣವೆ ಎಂದು ಎಲ್ಲರತ್ತ ಕೈ ಮಾಡಿ ಪಿಸುಮಾತಿನಲ್ಲಿ ಹೇಳುತ್ತಿದ್ದ ನನ್ನ ಗುಣಗಾನವನ್ನ ಆಲಿಸಿದ ಎಲ್ಲರೂ ಸರಿ ಓಕೆ! ಹೊಗೋಣ.. ಹೊಗೋಣ.. ಅಂತ ಸಮ್ಮತಿಸಿದರು.
ಎಲ್ಲ ಜೀಪುಗಳು ಒಂದರ ಹಿಂದೆ ಒಂದು ಬರುತ್ತ ತಮ್ಮ ತಮ್ಮ ಸ್ಥಾನಗಳತ್ತ ಹೊರಟು ನಿಂತವು. ಎಲ್ಲ ಜೀಪಿನಲ್ಲಿ ಪ್ರತಿ ಪ್ರತಿಯಾಗಿ ಮೂರು ಮೂರು ಗುಂಪುಗಳಿದ್ದವು ಒಂದು ಗುಂಪಿನಲ್ಲಿ ಇಬ್ಬರು ಇದ್ದರೆ ಅದು ಒಂದು ಗುಂಪು ಅಂತ ಕರೆಯಿಸಿಕೊಳ್ಳುತ್ತಿತ್ತು ಹೀಗೆ ವಾಹನ ಚಾಲಕರನ್ನು ಸೇರಿಸಿ ಒಟ್ಟು ಆರು ಜನರ ಮೂರು ಗುಂಪು ಕಾಡಿನತ್ತ ಬಿಟ್ಟುಬಿಡದೆ ಪ್ರಯಾಣ ಬೆಳೆಸಿದವು. ಮೊದಲಿಗೆ ನಮಗೆ ಸಿಕ್ಕಿದ್ದು ತೋಲಪಟ್ಟಿ ವ್ಯಾಪ್ತಿಗೆ ಸಂಬಂಧಿಸಿದ ವೆಯನಾಡು ಅಭಯಾರಣ್ಯದ ಮುಂಬಾಗಿಲನ್ನ ದಾಟಿ ನಾವು ಮುಂದೆ ಸಾಗಬೇಕಾಗಿತ್ತು. ಜೀಪಿನಲ್ಲಿದ್ದ ನಾನು ಕೆಳಗಿಳಿದು ಇಲಾಖೆಯ ಸಿಬ್ಬಂದಿಯ ಜೊತೆ ಮಾತನ್ನಾಡಿ ಈಗಾಗಲೇ ನಿಮಗೆ ವಿಷಯ ತಿಳಿಸಿದಂತೆ ನಾವು ‘ಲೈನವಾಕ’ ಕೆಲಸದ ನಿಮಿತ್ತ ಒಳಗೆ ಹೋಗುತ್ತಿದ್ದೆವೆ ಹಾಗಾಗಿ ತಾವು ಈ ಗೇಟನ್ನ ತೆರೆಯಿರಿ ಎಂದು ಅವರಿಗೆ ತಿಳಿಸಿ ಅವರ ಅಪ್ಪಣೆಯಂತೆ ಮುಂದೆ ಸಾಗಿದೇವು.
ಪಶ್ಚಿಮ ಘಟ್ಟ, ಕೇರಳ. ಚಿತ್ರ: ವಿಕಿಮೀಡಿಯ ಕಾಮನ್ಸ್
ನಿಧಾನವಾಗಿ ಜೀಪು ಗೇಟಿನ ಒಳಗೆ ಪ್ರವೇಶಿಸುತ್ತ ಕೆಲ ದೂರದವರೆಗೆ ಸಾಗುತ್ತಿರಬೇಕಾದರೆ ಅನತಿ ದೂರದಲ್ಲಿ ಏನೋ ಲಟಪಟ ಅಂತ ಸದ್ದು ಕೇಳಿಸಲು ಶುರುವಾಯಿತು. ಎಲ್ಲರ ಗಮನ ಆ ಸದ್ದಿನ ಕಡೆ ಕೇಂದ್ರಿಕೃತವಾಗಿತ್ತು. ಏನಿರಬಹುದು? ಎಲ್ಲರ ಮನದಲ್ಲಿ ಕುತೂಹಲಕಾರಿ ಪತ್ತೆದಾರಿಯ ಒಂದೊಂದು ತೆರನಾದ ಸಂದೇಹಗಳು ಜೀಪಿನ ತುಂಬೆಲ್ಲ ಹರಿದಾಡಲು ಶುರುವಾದವು. ಓಹ್! ಹೋ ಅದಾ ಜೋರಾಗಿ ಗಾಳಿ ಬಿಸುತ್ತಿದೆ ನೋಡಿ ಅದಕ್ಕೆ ಲಟಪಟ ಅಂತ ಸದ್ದು ಕೇಳಿಸುತ್ತಿದೆ ಬಹುಶಃ ಗಿಡ ಮರಗಳ ಘರ್ಷಣೆಯಿಂದ ಈ ಸದ್ದು ಜೋರಾಗಿ ಬರುತ್ತಿದೆ ಹೊರತು ಮತ್ತೆನಿಲ್ಲ ಅಂತ ಒಬ್ಬನ ಮಾತು. ಜೀಪಿನ ಹಿಂಬದಿಯ ಕೊನೆಯಲ್ಲಿ ಕುಳಿತ ಇನ್ನೊಬ್ಬಾತ ಪಕ್ಕಾ ಆನೆನೆ ಇರಬಹುದು ಅದಕ್ಕೆ ಈ ರೀತಿ ಸದ್ದು ಕೇಳಿಸುತ್ತಿದೆ ಹೊರತು ಮತ್ತೆನಿಲ್ಲ ಅಂತ ಅವನ ಜಟಾಪಟಿಯ ಮಾತುಗಳನ್ನ ಕೇಳಿ ನಾನು ಶಾಂತತೆಯಿಂದ ಹುಂ! ಹುಂ! ಹೌದು ಹೌದು ಅಲ್ಲಿ ಯಾವುದೋ ಪ್ರಾಣಿ ಇದ್ದರು ಇರಬಹುದು ಅಥವಾ ಮರದ ಕೊಂಬೆಗಳ ಘರ್ಷಣೆಯಿಂದ ಬಂದಂತಹ ಶಬ್ಧವೂ ಕೂಡ ಆಗಿರಬಹುದು. ಒಂದುವೇಳೆ ಆನೆ-ಗಿನೆ ಕೂಡ ಇದ್ದರು ಅದು ನಮ್ಮೆಲ್ಲರ ಅದೃಷ್ಟವೇ ಸರಿ ಒಟ್ಟಿನಲ್ಲಿ, ಈ ಕಗ್ಗತ್ತಲೆಯಲ್ಲಿ ಏನನ್ನು ನೋಡಲು ಸಾಧ್ಯಿವಿಲ್ಲ ಹೊರತು ಸದ್ದು ಗದ್ದಲಗಳನ್ನ ಅರಿತು ಚೆನ್ನಾಗಿ ಆಲಿಸಬಹುದು. ನೀವೆಲ್ಲ ನಿಮ್ಮ ಕಿವಿಗಳಿಗೆ ಕೆಲಸ ಕೊಟ್ಟಿದ್ದಿರಿ ಒಳ್ಳೆಯ ಕೆಲಸ ಹುಂ..ಇರಲಿ, ಪ್ರೀಯ ಸದಸ್ಯರೆ ಪಾಯಿಂಟ್ ಬಿ ನೋಟೆಡ್ ಈ ತರಹದ ಶಬ್ಧಗಳನ್ನು ನೀವು ಸಹ ಲೈನವಾಕ ನಡೆಯುವಾಗ ಪಾಲಿಸಬೇಕಾಗುವಂತಹ ಸಂದರ್ಭ ಒದಗಿ ಬಂದರು ಬರಬಹುದು ಇದರಲ್ಲಿ ಒಂದೊಳ್ಳೆ ವಿಷಯವಿದೆ ಅಂತ ಹೇಳುತ್ತಿರಬೇಕಾದರೆ ಜೀಪು ಬಲ ಭಾಗದ ತಿರುವಿನ ಕಡೆಯತ್ತ ಮುಖ ಮಾಡಿ ಭರ್ರನೆ ಹೊರಟಿತು.
ಆ ದಿನ ಎರಡು ಲೈನವಾಕ್ ಮಾಡಬೇಕಾಗಿತ್ತು ಒಂದು ಗುಂಪಿಗೆ ಮಾತ್ರ ವಿಶ್ರಾಂತಿ ಇದ್ದ ಕಾರಣ ಉಳಿದ ಎರಡು ತಂಡಗಳಿಗೆ ದಾರಿ ತೋರಿಸುವ ಕಾರ್ಯ ವಿಶ್ರಾಂತಿ ಪಡೆದ ತಂಡದ ಸದಸ್ಯರುಗಳ ಕೆಲಸವಾಗಿತ್ತು. ಮೊದಲನೆಯ ತಂಡದ ಇಬ್ಬರು ಸದಸ್ಯರುಗಳಿಗೆ ಅವರು ಸಾಗುವ ದಾರಿಯನ್ನು ತೋರಿಸಿ ಅದೋ ಅಲ್ಲಿ ನೋಡಿ ಇದೇ ದಾರಿಯಲ್ಲಿ ನೇರವಾಗಿ ಒಂದು ದೊಡ್ಡದಾಗಿ ಇರುವಂತಹ ಮರದ ಪಕ್ಕದಲ್ಲಿ ಒಂದು ಚಿಕ್ಕದಾದ ಬಿದುರಿನ ಮರಕ್ಕೆ ಒಂದು ಆಯತಾಕಾರದ ಬೋರ್ಡಿದೆ ಅದರಲ್ಲಿ ಸ್ಟಾರ್ಟ್ ಅಂತ ಬರೆದಿದೆ ಅಲ್ಲಿಂದಲೆ ನೀವು ನಿಧಾನವಾಗಿ ಸಮಯವನ್ನು ನೋಡಿಕೊಂಡು ಸಾಗಬೇಕು. ನಿಮ್ಮ ಬ್ಯಾಗಿನಲ್ಲಿ ಈ ಲೈನಿಗೆ ಸಂಬಂಧಿಸಿದ ನಕ್ಷೆ ಮತ್ತು ದಿಕ್ಸೂಚಿ ಹಾಗೂ ಡೇಟಾ ಶಿಟಗಳು ಎಲ್ಲವೂ ಇದೆ ಜೋಪಾನ. ಈ ಸ್ಥಳದಿಂದಲೆ ತಾವು ಬೆಳಕು ಭೂಮಿಯನ್ನ ಸ್ಪರ್ಷಿಸಿದ ಕೂಡಲೆ ಸರಿಯಾದ ಸಮಯಕ್ಕೆ ನಡೆಯಲು ಶುರುಮಾಡಬೇಕು ಹಾಗೆ ಲೈನವಾಕ ಮುಗಿದಾದನಂತರ ಮತ್ತೆ ಇಲ್ಲೆ ಬಂದು ಕಾಯಬೇಕು ಹೊರತು ಬೇರೆ ಕಡೆ ಎಲ್ಲಿಯೂ ಹೋಗಬಾರದು. ಪುನಃ ಎಲ್ಲ ತಂಡದ ಸದಸ್ಯರುಗಳ ಲೈನವಾಕ ಮುಗಿದಾದ ಮೇಲೆ ನಿಮ್ಮನ್ನ ಕರೆದುಕೊಂಡು ಹೋಗಲು ಇದೆ ಜೀಪು ಇದೆ ಜಾಗದಲ್ಲಿ ಬಂದು ನಿಮ್ಮನ್ನ ವಾಪಸ್ ಕರೆದುಕೊಂಡು ಹೋಗುತ್ತೆ ಅಲ್ಲಿಯವರೆಗೆ ನೀವು ಕಾಯಬೇಕಾಗಬಹುದು ಅಂತ ಹೇಳಿ ಒಂದು ತಂಡದವರನ್ನ ಅಲ್ಲಿಯೇ ಇಳಿಸಿ ಜೀಪು ಮತ್ತೆ ಕಗ್ಗತ್ತಲೆ ಆವರಿಸಿದ ಕೋಟೆಯೊಳಗೆ ನುಗ್ಗಿ ಮಂಗ ಮಾಯವಾಯಿತು.
ಎರಡನೆಯ ತಂಡದ ಸದಸ್ಯರನ್ನ ಸುಮಾರು ನಾಲ್ಕು ಕಿಲೋಮೀಟರ್ ನಂತರ ಅವರನ್ನು ಸಹ ಈ ಮೇಲಿನಂತೆ ಎಲ್ಲ ಕ್ರಮಗಳನ್ನು ತಿಳಿ ಹೇಳಿ ನಾವು ಇಲ್ಲಿಯೇ ನಿಮಗಾಗಿ ಕಾಯುತ್ತ ಜೀಪಿನಲ್ಲಿ ಕುಳಿತಿರುತ್ತೇವೆ. ಅದೋ! ಅಲ್ಲಿ, ಮರದ ಒಂದು ಬದಿಗೆ ಬೋರ್ಡಿದೆ ಕಾಣಸ್ತಿದೇಯಾ? ಗುಂಪಿನ ಸದಸ್ಯರು ಕತ್ತನ್ನು ಮೇಲೆ ಕೆಳಗೆ ಮಾಡುತ್ತ ಕಾಣಸ್ತಿದೆ! ಕಾಣಸ್ತಿದೆ! ಓಯ್ ಅಲ್ಲಿ.. ಅಲ್ಲಿದೆ ಹೌದೌದು ಸಿಕ್ತು ಬಿಡಿ ಹಾಗಾದರೆ, ನೀವು ಅಲ್ಲಿಂದಲೆ ನಡೆಯಬೇಕು ಇನ್ನು ಸಮಯವಿದೆ ಜೀಪಿನಲ್ಲಿ ಸ್ವಲ್ಪ ಕುಳಿತುಕೊಳ್ಳಿ ನಂತರ ಬೆಳಕು ಸಮೀಪಿಸುತ್ತಿದ್ದಂತೆ ನೀವು ನಡೆಯಲು ಶುರು ಮಾಡವಿರಂತೆ ಎಂದು ಸಮಾಧಾನದಿಂದ ಹೇಳಿ ಶಾಂತವಾಗಿ ಕುಳಿತುಕೊಂಡೆವು.
ಆಗ ಸಮಯ ಐದು ಗಂಟೆ ನಲ್ವತೈದು ನಿಮಿಷಗಳಾಗಿತ್ತು. ಮಂಜಿನ ಕಿಟಕಿಯಿಂದ ಆಗಾಗ ಇಣುಕಿ ಇಣುಕಿ ನೋಡುತ್ತಿದ್ದ ಸೂರ್ಯನು ಕಾಡಿನ ತುಂಬೆಲ್ಲ ಅಗಾದವಾದಂತಹ ಬೆಳಕನ್ನು ಕಾಡ್ಗಿಚ್ಚಿನಂತೆ ಬೃಹದಾಕಾರವಾಗಿ ಹಬ್ಬಿಸಲು ಶುರುಮಾಡಿದ. ಇನ್ನೇನು ತಡಮಾಡ ಬೇಡಿ ಹೊರಡಿ! ಹೊರಡಿ! ಆ ಮರದ ಹತ್ತಿರ ಮರೆಯಾಗಿ ನಿಂತುಕೊಳ್ಳಿ ಸರಿ ನಾ ಅಂತ ಹೇಳಿದೆ. ಈ ವಾಕ್ ಮುಗಿಸಿಕೊಂಡು ಬನ್ನಿ ನಾವಿಲ್ಲೆ ನಿಮ್ಮ ಆಗಮನಕ್ಕಾಗಿ ಇದೆ ಜಾಗದಲ್ಲಿ ಕಾಯುತ್ತಿರುತ್ತೇವೆ ಹುಷಾರು! ಈಗ ಹೋಗಿ ಎಂದು ಹೇಳುತ್ತ ಅವರನ್ನ ಕಳುಹಿಸಿಕೊಟ್ಟೆವು.
ನನ್ನ ಪಕ್ಕದಲ್ಲಿ ಕುಳಿತಿದ್ದ ಸ್ವಯಂಸೇವಕರ ಗುಂಪಿನ ಸದಸ್ಯ ಸೈಮನ್ ಬ್ಯಾಗಿನಲ್ಲಿ ಒಂದು ದೂರದರ್ಶಕವಿತ್ತು. (ಬೈನಾಕ್ಯೂಲರ್, ದುರ್ಬೀನ) ವಾಹ್, ಅದ್ಭುತ! ರೀ ಒಳ್ಳೆ ಸೈಟಿಂಗ ಮಾಡಬಹುದು. ನೋಡೊಣ! ಈ ದಿನ ನಮ್ಮ ಅದೃಷ್ಟ ಚೆನ್ನಾಗಿದ್ದರೆ ಏನಾದರೂ ಸಿಗಬಹುದು ಎಂದು ಧೀರ್ಘವಾಗಿ ಉಸಿರನ್ನು ಎಳೆದು ನಿಧಾನವಾಗಿ ಬಿಡುತ್ತ ಕಣ್ಣುಗಳನ್ನ ಅಗಲಸಿಕೊಂಡು ಆಜುಬಾಜು(ಅಕ್ಕ-ಪಕ್ಕ) ಮೇಲೆ-ಕೆಳಗೆ ನೋಡುತ್ತಿರಬೇಕಾದರೆ ರಸ್ತೆಯ ಒಂದು ಬದಿಯ ದೂರದಲ್ಲಿ ಗಜರಾ(ಜ)ಣಿಯರ ಒಂದು ದೊಡ್ಡ ಗುಂಪು ನಮ್ಮ ಜೀಪಿನ ಹತ್ತಿರ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದವು. ಭಲೇ ಭಲೇ ಎಂತಹ ಸುರಿಮಳೆ ಸೈಟಿಂಗ ಅಂತ ಅಂದರೆ ಹೀಗಿರಬೇಕು ನೋಡಿ ಅಂತ ಅನ್ನುತ್ತಿರಲು ನಮ್ಮ ಇರುವಿಕೆ ಅವುಗಳಿಗೆ ಗೊತ್ತಾಗಿ ಆನೆಗಳು ತಮ್ಮ ಪಥವನ್ನು ಬದಲಾಯಿಸಿ ನಮ್ಮತ್ತ ಸೊಂಡಿಲ್ಲನು ತೋರಿಸುತ್ತ ಒಂದೆ ಸಮನೆ ಘಿಳುಡುತ್ತ ಬೇರೆ ದಾರಿಯಲ್ಲಿ ನಡೆದು ಮುಂದೆ ಸಾಗಿದವು. ಪಾಪ್! ಅವುಗಳ ಆನಂದಕ್ಕೆ ಮಣ್ಣೆರಚದಂತಾಯಿತೇನು ಅಂತ ಆತಂಕ ಪಟ್ಟೇವು.
ಅಬ್ಬಬ್ಬ! ಸಖತ್, ಹೊಡಿರಿ ಹಲಗಿ ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಆನೆಗಳು ಬಂಪರ್ ಡ್ರಾ ಹೊಡದಂಗಾಯಿತು ಮತ್ತೆ ಮರದಲ್ಲಿ ಏನಾದರೂ ಪಕ್ಷಿ-ಗಿಕ್ಷಿ ಸಿಕ್ಕರು ಸಿಗಬಹುದು ನೋಡೊಣವೆಂದು ಅತ್ತಿತ್ತ ಕಣ್ಣು ಹಾಯಿಸುತ್ತ ನೋಡಿದ್ರೆ ಅರೇರೆ ಇದೇನಿದು ಮರದ ಮೇಲೆಲ್ಲ ವಾನರಗಳದ್ದೆ ಸಾಮ್ರಾಜ್ಯ, ಸೈಮನ್, ಸೈಮನ್ ಅಯ್ಯಯ್ಯೊ! ಅಲ್ಲಿ ನೋಡಿ, ಕೈ ಸನ್ನೆಯನ್ನು ಸೂಚಿಸಿ ತೋರಿಸುತ್ತ ಅಬ್ಬಬ್ಬಾ ಎಷ್ಟೊಂದು ಜಿಂಕೆಗಳಿವೆ ಮರದ ಕೊನೆಯ ತುದಿಯಲ್ಲಿ ಕೆಂಬೂತಗಳು ಅತ್ತಂದಿತ್ತ ನೆಗೆಯುತ್ತ ತಮ್ಮದೆ ಲೋಕದಲ್ಲಿ ಮುಳಗಿದ್ದವು ಇವತ್ತು ನಮ್ಮ ನಸೀಬ ಖುಲಾಯಿಸ್ತು ನೋಡಿ ಸೈಮನ್.
ನೀಲಗಿರಿ ವುಡ್ ಪಿಜನ್. ಚಿತ್ರ: ಮಲ್ಲಿಕ ರಾಜಸೇಖರನ್ (ಈ-ಬರ್ಡ್)
ಹೌದೌದು ಒಳ್ಳೆ ಸೈಟಿಂಗ ಸರ್.. ಸೈಮನ್ ಮುಖದಲ್ಲಿ ನಗುವಿನ ಹೊಳೆಯನ್ನು ಕಂಡು ನನಗೆ ತುಂಬಾ ಅಚ್ಚರಿಯಾಯಿತು. ಆಗ, ಸೈಮನ್ ದೂರದರ್ಶಕವನ್ನ ಒಂದು ದೊಡ್ಡದಾದ ಮರದ ಹತ್ತಿರ ಮುಖ ಮಾಡಿ ಮೇಲೆ ನೋಡುತ್ತ ಮರದ ಒಂದು ತುದಿಯಲ್ಲಿ ಪಕ್ಷಿ ಕುಳಿತಿದೆ ಅದು ಯಾವ ಪಕ್ಷಿ? ನನಗೆ ಗೊತ್ತಾಗುತ್ತಿಲ್ಲ ಎಂದ ಸೈಮನ್ ತಕ್ಷಣವೇ ದೂರದರ್ಶಕವನ್ನು ನನ್ನ ಕೈಯಲ್ಲಿ ಕೊಟ್ಟು ನೋಡಲು ನನಗೆ ಹೇಳಿದ. ಪಕ್ಷಿ ನಾ ಒಂದು ನಿಮೀಷ ನೋಡಿ ನಿಮಗೆ ಕರಾರುವಕ್ಕಾಗಿ ಹೇಳುವೆ ಯಾವ ಪಕ್ಕಿ ಇರಬಹುದೆಂದು, ಛೇ ಹಾಳದ್ದು ಈ ದೂರದರ್ಶಕ ಸ್ವಲ್ಪ ಮಂಜು ಮಂಜಾಗಿ ಕಾಣಸ್ತಿದೆ ಸ್ವಲ್ಪ ಸರಪಡಿಸಿಕೊಳ್ಳುತ್ತ ಅರೇರೆ ಒಳ್ಳೆ ಸೈಟಿಂಗ್ ಕಣ್ರಿ ಈ ಪಕ್ಷಿಯನ್ನ ಹುಂ! ನೀಲಗಿರಿ ವುಡ್ ಪಿಜನ್ (Nilgiri wood pigeon) ಕನ್ನಡದಲ್ಲಿ ನೀಲಗಿರಿ ಕಾಡು ಪಾರಿವಾಳ ಅಂತ ಕರೆಯುತ್ತಾರೆ ಇದರ ಕುತ್ತಿಗೆಯ ಹಿಂಬಾಗದಲ್ಲಿ ಚೆಕ್ಕರ ಬೋರ್ಡ್ ಹೋಲುವಂತಹ ಪಟ್ಟೆಗಳಿರುತ್ತವೆ ಹಾಗಾಗಿ ಇವುಗಳನ್ನ ನಾವು ಈ ಗುರುತುಗಳಿಂದ ಸಲಿಸಾಗಿ ಕಂಡು ಹಿಡಿಯಬಹುದು ಸೈಮನ್ ಅಂದ ಹಾಗೆ ಈ ಪಕ್ಷಿಯನ್ನ ಈ ಮೊದ್ಲು ನೀವು ಎಲ್ಲಿಯಾದ್ರು ನೋಡಿದ್ದಿರೇನು ಎಂದಾಗ ಇಲ್ಲ ಇಲ್ಲ ಇದೆ ಮೊದಲಾಗಿ ನೋಡಿದ್ದು ಸರ್.
ಪರವಾಗಿಲ್ಲ ಸೈಮನ್, ಈ ಪ್ರಭೇದದ ಪಕ್ಷಿಗಳು ಹೆಚ್ಚಾಗಿ ದಟ್ಟವಾಗಿ ಹರಡಿರತಕ್ಕಂತಹ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಹಾಗೂ ಶೋಲಾ ಕಾಡುಗಳಲ್ಲಿ ವ್ಯಾಪಕವಾಗಿ ಕಾಣಬಹುದು ಸೈಮನ್. ನನ್ನತ್ತ ಮುಖ ಮಾಡಿ ಬಹಳ ಸಂತೋಷವಾಯಿತು ಸರ್ ಈ ಪಕ್ಷಿಯ ಬಗ್ಗೆ ನನಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಂತ ತಿಳಿಸಿ ಮತ್ತೆ ನಾವು ಕಾಡನ್ನ ಶೋಧಿಸುವ ಕಾರ್ಯದಲ್ಲಿ ತೊಡಗಿದೇವು.
ಕೈ ಗಡಿಯಾರದತ್ತ ಸಮಯವನ್ನು ನೋಡುತ್ತ, ದೊಡ್ಡದಾಗಿ ಆಕಳಿಸುತ್ತ ಜೀಪಿನ ಕೆಳಗಿಳಿದು ಎರಡು ಕೈಗಳನ್ನ ಆಕಾಶದ ಮೇಲೆತ್ತರಕ್ಕೆ ಮಾಡಿ ತಂಪಾದ ಗಾಳಿಯನ್ನು ಅಹ್ಲಾದಿಸುತ್ತ ಟೊಂಕದ ಮೇಲೆ ಕೈಯನ್ನಿಟ್ಟು ನಿಂತಿರಬೇಕಾದ್ರೆ ಸೈಮನ್ ಮಾತ್ರ ದೂರದರ್ಶಕದಲ್ಲಿ ಏನ್ನನೋ ಹುಡುಕುತ್ತಿದ್ದ ಸುಮಾರು ಮೂವತ್ತರಿಂದ ನಲವತ್ತು ಮೀಟರುಗಳಲ್ಲಿ ಜಿಂಕೆಗಳು ಬಹಳಷ್ಟು ಜೋರಾಗಿ ರಸ್ತೆಯನ್ನು ನೆಗೆಯುತ್ತ ಓಡುತಲಿದ್ದವು.
ಹುಲ್ಲು ಪೊದೆಯಲ್ಲಿ ಕುಳಿತ ಸುಂದರವಾದ ಚಿರತೆಯ ಆಗಮನವನ್ನು ನೇರವಾಗಿ ಕಣ್ಣನ್ನು ಮೀಟುಕಿಸದೆ ನೋಡುತ್ತಲ್ಲಿರುವ ತುಣಕಿನ ದೃಶ್ಯ. ತೋಲಪಟ್ಟಿ ವ್ಯಾಪ್ತಿ, ವೆಯನಾಡು - ಕೇರಳ. ಚಿತ್ರ ರಚಿಸಿದವರು - ಕೃಷ್ಣಾ ಸಾತಪೂರೆ.
ಜಿಂಕೆಗಳು ಆಕಾಶದೆತ್ತರಕ್ಕೆ ಹಾರುವ ಹಾಗೆ ಭಯಬೀತಿಯಿಂದ ಪಕ್ಕದಲ್ಲಿದ್ದ ಮಣ್ಣಿನ ರಸ್ತೆಯನ್ನ ಒಂದೆ ನಗೆತಕ್ಕೆ ಹಾರಿ ಓಡುತ್ತಿದ್ದವು. ಅಬ್ಬಬ್ಬಾ! ಎಂತಹ ಅದ್ಭುತ ನೆಗೆತ ಈ ಜಿಂಕೆಗಳದ್ದು ನೋಡಲು ಎರಡು ಕಣ್ಣುಗಳು ಸಾಲದು, ಮಂಗಗಳು ಮರದಿಂದ ಮರಕ್ಕೆ ಜಿಗಿಯುತ್ತ ರೆಂಬೆ-ಕೊಂಬೆಗಳನ್ನ ಅಲುಗಾಡಿಸುತ್ತ ಜೋರಾಗಿ ಕಿರುಚುತ್ತ ಶಬ್ಬ ಮಾಡುತ್ತಲಿದ್ದವು. ಜಿಂಕೆಗಳು ಒಂದು ಬದಿಯಲ್ಲಿ ಓಡಿಹೋಗಿ ನಿಂತು ಒಂದು ಕಾಲಿನಿಂದ ನೆಲಕ್ಕೆ ಒದೆಯುತ್ತ ಜೋರಾಗಿ ಕೂಗುತ್ತಿದ್ದವು ಈ ಎಲ್ಲ ಧ್ವನಿ, ಸಂಜ್ಞೆಗಳನ್ನ ಆಲಿಸುತ್ತ ನಿಂತಿದ್ದ ನಾನು ನಿಧಾನವಾಗಿ ಜೀಪಿನ ಒಳಗೆ ಮುಖಮಾಡಿ ಬಂದು ಕುಳಿತುಕೊಂಡೆ. ಸೈಮನ್ ಮಾತ್ರ ಬಿಟ್ಟು ಬಿಡದೆ ದೂರದರ್ಶಕವನ್ನ ನೋಡುತ್ತ ಕುಳಿತಿದ್ದ ನನಗೇನು ಆ ದೂರದರ್ಶಕ ಕಡೆಗೆ ಅಷ್ಟೇನು ಒಲವಿರಲಿಲ್ಲ ಆದ್ರೆ ಈ ಜಿಂಕೆಗಳೆಲ್ಲ ಹೀಗೆಕೆ ದಿಕ್ಕಾಪಾಲಾಗಿ ಯಾಕೆ? ಓಡುತ್ತಲಿವೆ ಎಂಬ ಗುಮಾನಿ ಶುರುವಾಯಿತು. ಪ್ರಶಾಂತವಾಗಿದ್ದ ಈ ವಾತಾವರಣ ಒಮ್ಮಿದೊಮ್ಮೆಲೆ ಹೀಗ್ಯಾಕೆ ಬದಲಿಸಿತು ಎಂದು ಯೋಚಿಸುತ್ತ ಕುಳಿತಿರುವಾಗ ಬಹುಶಃ ಇವತ್ತು ಹುಲಿಗಿಲಿ ಅಥವಾ ಚಿರತೆಗಿರತೆ ಏನಾದ್ರು ನೋಡಲು ಸಿಗಬಹುದಾ? ಎಂಬ ಆಶ್ಚರ್ಯದಿಂದ ಕಣ್ಣಗಳನ್ನ ಜೀಪಿನ ಗಾಜಿನ ಮುಂಭಾಗದಲ್ಲಿ ನೇರವಾಗಿ ದಿಟ್ಟಿಸಿ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಸೈಮನ ತನ್ನ ಕೈಬೆರಳನ್ನ ನನ್ನ ಮೊಣಕೈ ಗೆ ತಾಗಿಸುತ್ತ ತನ್ನಲ್ಲಿದ್ದ ದೂರದರ್ಶಕವನ್ನ ನನಗೆ ಕೊಟ್ಟು ಒಂದಿಂಚ್ಚು ಅಲುಗಾಡದೆ ಆ ಹುಲ್ಲುಗಾವಲಿನಲ್ಲಿ ಚಿರತೆ ಕುಳಿತಿದೆ ತಡಮಾಡಬೇಡಿ ಒಳ್ಳೆಯ ಸಮಯ ನೋಡಿ ಸರ್ ನೋಡಿ ಈ ಸೈಟಿಂಗ ಮಿಸ್ ಮಾಡಬೇಡಿ ಎಂದು ಹೇಳುತ್ತಿದ್ದ ಹಾಗೆ ತಡಮಾಡದೆ ದೂರದರ್ಶಕವನ್ನ ಕಣ್ಣುಗಳಿಗೆ ಅಂಟಿಸಿಕೊಂಡು ನೋಡುತ್ತಿದ್ದೆನೆ ಆಗ ಸೈಮನ್ ಪಿಸುಮಾತಿನಲ್ಲಿ ಕಾಣಸ್ತಿದೆಯಾ ಅಲ್ಲಿ ಆ.. ಗಾಢವಾಗಿ ಹಬ್ಬಿರುವ ಹುಲ್ಲಿನಲ್ಲಿ ಕುಳಿತಿದೆ ಆ ಚಿರತೆ ಹೌದೌದು ಅಲ್ಲಿದೆ ಅಲ್ಲಿದೆ ಚಿರತೆ! ಚಿರತೆ! ಎಂದು ಮನದಲ್ಲಿ ಸಂತೋಷ ಹರದಾಡುತ್ತಲಿದ್ದಾಗ ನನಗೆ ನೆನಪಿಗೆ ಬಂದದ್ದು ಯುರೇಕಾ! ಯುರೇಕಾ! ಸಿಕ್ತು.. ಸಿಕ್ತು.. ಅಂತ ಊರೂರು ಚಿರುತ್ತ ಓಡಿದ್ದ ಆರ್ಕಿಮಿಡೀಸ ಎಂಬ ಕುತೂಹಲಕಾರಿ ವಿಜ್ಞಾನಿ ಕಂಡು ಹಿಡಿದ ಆವಿಷ್ಕಾರ ನೆನಪಿಗೆ ಬಂದಂತಾಯಿತು.
ಸೈಮನ್, ಅದ್ಭುತವಾಗಿ ಕಂಡು ಹಿಡಿದು ಬಿಟ್ರಿ ಬಿಡಿ ಆ ಹುಲ್ಲು ಪೊದೆಗಳಲ್ಲಿ ಅಡಗಿ ಕುಳಿತ ಆ ಆಗಂತುಕನ ಭಲೆ ಭಲೆ ಈ ನಿಮ್ಮ ಸಾಹಸಕ್ಕೆ ಮೆಚ್ಚಲೆ ಬೇಕು ನೋಡಿ ಎಂದು ಪ್ರಶಂಸೆಯ ಮಾತುಗಳನ್ನ ಆಡುತ್ತಲಿದ್ದಾಗ ಚಿರತೆ ಹುಲ್ಲು ಪೊದೆಗಳಿಂದ ತೆವಳುತ್ತ ತೆವಳುತ್ತ ಹೊರಗೆ ಬಂದು ನಮ್ಮತ್ತ ನೋಡುತ್ತ ಅಲ್ಲೆ ಸ್ವಲ್ಪ ಕುಳಿತ ಹಾಗೆ ನಟಿಸಿ ಚಂಗನೆ ಒಂದೆ ನೆಗೆತಕ್ಕೆ ಜಿಗಿದು ಜಿಂಕೆಗಳು ಓಡಿ ಹೋದ ದಾರಿಯಲ್ಲಿಯೇ ಓಡಿಹೋಯಿತು.
ಈ ಎಲ್ಲ ದೃಶ್ಯಗಳನ್ನ ಕಣ್ತುಂಬ ನೋಡುತ್ತ ಕುಳಿತಾಗ ಆಗ ತಾನೆ ಲೈನವಾಕ ಮುಗಿಸಿಬಂದ ಸದಸ್ಯರುಗಳನ್ನು ಜೀಪಿನಲ್ಲಿ ಹತ್ತಿಸಿಕೊಂಡು ಖುಷಿಯಿಂದ ಇವತ್ತಿನ ದಿನದ ಸೈಟಿಂಗಳ ಬಗ್ಗೆ ಮಾತನಾಡುತ್ತ ಬೇರೊಂದು ದಿಶೆಯಲ್ಲಿ ಇಳಿದಿದ್ದ ಸದಸ್ಯರ ಗುಂಪನ್ನು ಸೇರಲು ತಡಮಾಡದೆ ಜೀಪು ಕಾನನದಲ್ಲಿ ಒಂದಾಗಲು ಹೊರಟು ನಿಂತಿತು.
ಮುಂದುವರೆಯುವುದು..
ಮೊದಲನೆ ಭಾಗವನ್ನು ಇಲ್ಲಿ ಓದಿ.