ಲೇಖಕರು: ಸತೀಶ ಗಣೇಶ ನಾಗಠಾಣ
ಇಬ್ಬನಿಯಿಂದ ಕೂಡಿದ ನಸು ಮುಂಜಾವಿನ ವಾತಾವರಣ, ಎತ್ತ ನೋಡಿದರತ್ತ ಅಗಾಧವಾದ ಮರಗಳ ಶ್ರೇಣಿ, ಅಲ್ಲಲ್ಲಿ ಕಾಣಸಿಗುವ ಚಿಕ್ಕ ಚಿಕ್ಕ ನೀರಿನ ಜರಿಗಳಿಂದ ಹೊರ ಹೊಮ್ಮುವ ನೀರು ಬಿಟ್ಟು ಬಿಡದೆ ಸತತವಾಗಿ ಹರಿಯುತ್ತಿತ್ತು. ಕಡಿದಾದ ಗುಡ್ಡವನ್ನು ಸೀಳಿ ಮಾಡಿದ ದಾರಿ ಕಾಡಿನ ಒಳಹೊಕ್ಕು ದೂರವಾಗಿ ಸಾಗುತ್ತಿತ್ತು. ಮೌನ ತಾಳಿದ ಪ್ರಕೃತಿಯ ಸೌಂದರ್ಯವನ್ನು ಒಳಹೊಕ್ಕು ಹುಡಕಾಟ ಇನ್ನೇನು ಪ್ರಾರಂಭ ಮಾಡುವ ಹಂತದಲ್ಲಿದ್ದಾಗ, ರೂಮಿನ ಕೀಟಕಿಯಿಂದ ಇಣುಕಿ ಇಣುಕಿ ನೋಡುತ್ತಿದ್ದ ಮೋನಿಷ... ಸಾರ್! ಸಾರ್! ನಾನು ಕೂಡ ನಿಮ್ಮ ಜೊತೆಯಲ್ಲಿಯೇ ಬರಬಹುದೆ ಎಂದು ಕೂಗಿ ಕೂಗಿ ಹೇಳುತ್ತಿದ್ದ ಧ್ವನಿ ಕಾನನ ತುಂಬೆಲ್ಲ ಜೋರಾಗಿ ಕೇಳಿಸುತ್ತಿತ್ತು.
ನಾನು ಇಲ್ಲೇ ಮರದ ಕೆಳಗೆ ನಿಂತಿರುವೆ ಬೇಗ ಬನ್ನಿ ಹೊರಡುವ ಹೊತ್ತಾಗಿದೆ, ಇವತ್ತು ನಾವು ಡ್ರೊನ್ಗೊ ಟ್ರೇಲ್ಸನಲ್ಲಿ ಪಕ್ಷಿ ವೀಕ್ಷಣೆ ಮಾಡಲು ಹೋಗಬೇಕಾಗಿದೆ ಎಂದಾಗ ಆಯಿತು ಸರ್ ಬಂದೆ ಎಂಬ ಧ್ವನಿ ಕೇಳಿತು. ಸರ್.. ಇದೇನು ಕೈಯಲ್ಲಿ ಕೋಲು, ತಲೆಯ ಮೇಲೆ ಹಾಕಿಕೊಂಡಿರುವ ದುಂಡಗೆ ಇರುವ ಟೊಪ್ಪಿಗೆ, ಕೊರಳಲ್ಲಿ ದುರ್ಬಿನ, ಕಾಲಲ್ಲಿ ಗಮ್ ಬೂಟು, ಹೆಡ್ ಟಾರ್ಚ ನಿಮ್ಮನ್ನ ನೋಡುತ್ತಿದ್ದರೆ ಆ ಅಂಗುಲಿಮಾಲಾ ನೆನೆಪಿಗೆ ಬಂದಂತಾಯಿತು. ಏನು? ಏನಂದ್ರಿ ಮೋನಿಷ! ಅಂಗುಲಿಮಾಲಾ ಎಂದು ಕೇಳುತ್ತಲಿದ್ದಾಗ ಅಲ್ಲಲ್ಲಾ ಅದು ಕೊಲಂಬಸ! ಕೊಲಂಬಸ! ಅಂತ ಅಂದೆ ಸರ್ ಅಷ್ಟೇ.
ನನಗೆ ಆಗಾಗ ಸ್ವಲ್ಪ ನಾಲಿಗೆ ಸರಿಯಾಗಿ ಹೊರಳೋದಿಲ್ಲ ಒಂದೊಂದು ಸಲ ಲೆಕ್ಕಾಚಾರವಿಲ್ಲದೆ ಮಾತಾಡ ಬಿಡ್ತಿನಿ, ಅದಕ್ಕೆ ದಯವಿಟ್ಟು ಕ್ಷಮಿಸಿ ಸರ್... ಅಲ್ಲಾ ಮೋನಿಷ, ಭಲೇ ಕಿಲಾಡಿ ಕಂಡ್ರಿ ನೀವು ನಿಮ್ಮನ್ನ ಹೀಗೆ ಬಿಟ್ಟರೆ ನನ್ನ ಕಥೆನಾ ಇಲ್ಲೆ ತಾಳೆಗರಿಯಲ್ಲಿ ಬರಿದು ಮರಕ್ಕೆ ಅಂಟಿಸಿ ಬಿಡ್ತಿರಾ ನೀವು. ಅಲ್ಲಾ ರೀ, ಪಕ್ಷಿ ವೀಕ್ಷಣೆ ಮಾಡಲು ಇವೆಲ್ಲ ಸಾಧನಗಳು ಬೇಕಾಗುತ್ತವೆ. ನೀವು ನೋಡಿದ್ರೆ ಹಾಸಿಗೆಯಿಂದ ಎದ್ದು ಬಂದಿದ್ದರಲ್ಲಾ ಗೂಬೆ ಥರಹ, ನಿಮಗೆಲ್ಲ ಇದೆಲ್ಲ ಹೇಳಬೇಕೇನ್ರಿ ಮೊದಲು ಹೋಗಿ ಬಟ್ಟೆ ಬದಲಾಯಿಸಿ ಕೊಂಡು ಬನ್ನಿ. ನನ್ನ ಹಾಗೆ ಎಲ್ಲ ಸಾಧನಗಳನ್ನು ಧರಿಸಿಕೊಂಡು ಬನ್ನಿ ಹೋಗಿ ಎಂದು ಖಡಕ್ ಆಗಿ ಹೇಳಿದೆ. ಅದಕ್ಕೆ, ಪ್ರತ್ಯುತ್ತರ ಕೊಡುತ್ತ, ಸರ್ ಇವತ್ತು ಹಿಮಾಲಯ ಪರ್ವತ ಹತ್ತೊ ಪ್ಲ್ಯಾನ ಏನಾದರೂ ಮಾಡಿದ್ರಾ ಏನ ಕಥೆ ನಿಮ್ಮನ್ನ ನೋಡುತ್ತಿದ್ದರೆ ನನಗೆ ಹಾಗೇ ಅನುಮಾನ ಶುರುವಾಗ್ತಿದೆ. ಹಿಮಾಲಯನು ಇಲ್ಲ ಗಿಮಾಲಯನು ಇಲ್ಲ, ನೀವು ಹೀಗೆ ವಟವಟಾಂತ ಕಪ್ಪೆ ಥರಹ, ಮಾತನಾಡುತ್ತಿದ್ದರೆ ಪಕ್ಕಾ ನನ್ನನಂತು ಇಲ್ಲೆ ಮಣ್ಣು ಮುಕ್ಕಿಸಿ ಬಿಡ್ತಿರಾ. ಬೇಗ ಬೇಗ ಹೊರಡೋಣ ಮೋನಿಷ ಇಲ್ಲಾಂದ್ರೆ ಸಮಯ ಮೀರಿದ್ರೆ ನಮಗೆ ಏನು ನೋಡಲು ಸಿಗುವುದಿಲ್ಲ.
ಸರ್! ಈಗ ನೋಡಿ ನೀವು ಒಂದು ಹತ್ತು ಸಂಖ್ಯೆ ಎಣಿಸುವಷ್ಟರಲ್ಲಿ, ನಿಮ್ಮ ಮುಂದೆ ಬಂದು ಹಾಜರಾಗತೀನಿ. ಅಲ್ಲಿಯವರಗೆ ಕಾಯಿರಿ ಎಂದು ರೂಮಿನ ಒಳ ಹೊಕ್ಕಿದರು ಮೋನಿಷ. ನೋಡನೋಡುತ್ತ ಗಡಿಯಾರದ ಸಮಯ ಸರಾಸರಾ ಅಂತ ಓಡುತ್ತಲಿದೆ ಇನ್ನೇನು ಮಾಡುವುದು ಅಂತ ಬಕ ಪಕ್ಷಿಯ ಹಾಗೇ ಬೆಪ್ಪಗೆ ಕಾದು ಕುಳಿತೆ. ಈಗ ಬರ್ತಾರೆ ಆಗ ಬರ್ತಾರೆಂತ ಆದರೆ ಆ ವಯ್ಯನ ಸುಳಿವೆ ಇಲ್ಲ ಅಂತಿನಿ.
ಒಂದು ಹತ್ತು ಸಂಖ್ಯೆ ಎಣಿಕೆ ಮಾಡಿದ್ದಾಯಿತು ವಿನಹಃ ಈ ಮನುಷ್ಯನ ಪತ್ತೆನೆ ಇಲ್ಲವಲ್ಲಪ್ಪ ಅಥವಾ ಮತ್ತೆ ಹೋಗಿ ಮಲಗಿಬಿಟ್ಟರೋ ಏನ್ ಕಥೆ ಒಂದು ಅರ್ಥವಾಗುತ್ತಿಲ್ಲವಲ್ಲ. ಒಟ್ಟಿನಲ್ಲಿ, ಈ ವಯ್ಯನ ಬಗ್ಗೆ ಹೇಳೋದಾದರೆ ಸ್ವಲ್ಪ ಮುಂಗೋಪಿಯಾದರು ಕಾಡಿನ ಬಗ್ಗೆ ಅತಿ ಆಸಕ್ತಿ ಮತ್ತು ಅಭಿರುಚಿ. ಇವೆರಡರ ಮಿಶ್ರಣಕ್ಕೆ ಅಂಟಿದ ವ್ಯಕ್ತಿ ಅಂತ ಹೇಳಬಹುದು ನೋಡಿ ಇನ್ನು ಕಾಯುವುದು ಸರಿ ಅಲ್ಲ ಅಂತ, ರೀ.. ಮೋನಿಷ! ಬರ್ತಿರಾ ಅಥವಾ ಇಲ್ಲಾಂತನಾದ್ರು ಹೇಳ್ರಿ, ಆ ರಾಧೆನು ಕೂಡ ನಿಮ್ಮ ಹಾಗೇ ಕಾದಿರಲಿಕ್ಕಿಲ್ಲ. ಆ ಶ್ರೀಕೃಷ್ಣನ ಬರುವಿಕೆಗಾಗಿ, ನೀವು ನೋಡಿದ್ರೆ ಆನೆಗಳ ಹಿಂಡಿನಿಂದ ಹೊರ ದಬ್ಬಲ್ಪಟ್ಟ ಒಂಟಿ ಸಲಗದ ಹಾಗೆ ಬಂದ್ರೆ ಏನ್ ಮಾಡೋದು ಅಂತ ಗೋಗರೆಯುತ್ತಿರುವಾಗ, ಸರ್... ಈಗೋ, ಬಂದೆ ಎಂದು ದೌಡಾಯಿಸಿ ಓಡುತಿದ್ದ ಮೋನಿಷರನ್ನು ಕಂಡ ಪಕ್ಕದ ಕೋಣೆಯಲ್ಲಿ ಮಲಗಿದ್ದವರೆಲ್ಲ ಏನಾಯಿತು ಏನಾಯಿತು ಅಂತ ಹೌಹಾರಿ ಗಾಬರಿಯಿಂದ ಹೊರ ಓಡಿ ಬಂದರು.
ರೀ.. ನಿಧಾನ! ನಿಧಾನ! ನಿಮ್ಮ ಈ ನಡವಳಿಕೆಯಿಂದ ಪಕ್ಕದ ಕೋಣೆಯಲ್ಲಿರುವವರು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಅವರನ್ನ ಏನಾದರೂ ಹೇಳಿ ಸಮಾಧಾನ ಪಡಿಸಿ ಬನ್ನಿ ನಂತರ, ನಾವು ಇಲ್ಲಿಂದ ಜಾಗ ಖಾಲಿ ಮಾಡೋಣ ಅಂತ ಹೇಳಿ ಕಳುಹಿಸಿದೆ. ಈಗ ಮೋನಿಷ, ಬರುವುದು ಸ್ವಲ್ಪ ತಡವಾಗಬಹುದು ಅಂತ ಹಾಗೇ ಸುಮ್ಮನೆ ಮನದಲ್ಲಿ ವಿಚಾರಗಳ ಸರಣಿಯನ್ನು ಹೊತ್ತು ನಿಂತಾಗ, ಒಂದು ಮಾತು ಥಟ್ಟನೆ ನೆನಪಿಗೆ ಬಂದಂತಾಯಿತು. “ಈ ಸಮಯ ಕಳೆದು ಹೋಗುತ್ತದೆ” ಎಂದು ಅಂದುಕೊಳ್ಳುತ್ತಿರುವಾಗ ಸಿಂಗಳೀಕನ ಹಾಗೇ ನೆಗೆಯುತ್ತ ಬಂದ ಮೋನಿಷ, ಸರ್.. ಹೋಗೊಣ ಬನ್ನಿ! ಹೋಗೊಣ ಬನ್ನಿ! ಎಂದು ಕೈ ಎಳೆಯುತ್ತಿರಲು ರೀ.. ಮೋನಿಷ ಈ ಸಮಯ ಕಳೆದು ಹೋಗುತ್ತದೆ ಹೌದಲ್ಲವೇ ಎಂದಾಗ, ಹೌದು! ಸರ್ ಈ ಸಮಯ ಕಳೆದು ಹೋಗುತ್ತದೆ.. ಹೋಗಲೆಬೇಕು, ಹಾಗಂತ ಅದೇನು ನಿಮ್ಮ ಥರಹ ಇಲ್ಲೆ ಕೈಕಟ್ಟಿ ನಿಂತುಕೊಂಡಿರುತ್ತೆನ್ರಿ ಸ್ವಾಮಿ! ಸಮಯ ಯಾರ ಹಿಡಿತದಲ್ಲಿಯು ಇಲ್ಲ ಅದು ಸಾಗುತ್ತಲೆ ಇರುತ್ತದೆ. ನೀವೊಂದು, ಆ ಶ್ರೀ ಕೃಷ್ಣ ಹೇಳಿದ್ದನ್ನ ಮತ್ತೆ ಮತ್ತೆ ಪುನರಾವರ್ತಿಸುತ್ತಿದ್ದರಲ್ಲ ಅಂದಹಾಗೆ ಆ ದ್ವಾಪರಯುಗದವರು ಈಗ್ಯಾಕೆ ನಿಮಗೆ ನೆನಪಿಗೆ ಬಂದ್ರು ಈ ಕಾಡಲ್ಲಿ.
ಇಲ್ಲಿ ನಾನೇ ಕೃಷ್ಣ ನೀವೆ ರಾಮ ನಮ್ಮಿಬ್ಬರನ್ನು ಬಿಟ್ಟರೆ ಒಂದಿಷ್ಟು ಜನ ಅಕ್ಕ-ಪಕ್ಕದಲ್ಲಿ ಓಡಾಡುತ್ತಿರುವುದನ್ನು ಬಿಟ್ಟರೆ ಮತ್ತಾರು ಇಲ್ಲಿ ಇಲ್ಲ ಸರ್. ಹೌದೌದು, ಅದು ಸರಿನೇ ಬಿಡಿ ಕುಳ್ಳಗೆ ದುಂಡು ಮುಖದ ನೀವು ಶ್ರೀಕೃಷ್ಣ ಮತ್ತೆ ಎತ್ತರವಾಗಿ ಆಕಾಶಕ್ಕೆ ಏಣಿಹಾಕಿದ ಮರದಂತಿರುವ ನಾನು ಶ್ರೀರಾಮ ಸರಿಹೋಯ್ತು ಬಿಡಿ, ನೀವು ಇಲ್ಲಿ ಇರಬಾರದಾಗಿತ್ತು ಬೇರೆಲ್ಲೊ ಇರಬೇಕಾಗಿತ್ತು. ನಿಮ್ಮ ಪಾದದ ಪ್ರತಿ ಇದ್ದರೆ ಕೊಡಿ ನೆರಳಚ್ಚು ಮಾಡಿಸಿ ನನ್ನ ಕಿಸೆಯಲ್ಲಿ ಇಟ್ಟುಕೊಳ್ಳುತ್ತೇನೆ. ಆಗಾಗ, ಕಾಡಿನ ಮಧ್ಯೆ ಯಾರಾದರು ಸಿಕ್ಕರೆ ಅವರಿಗೆ ಕೊಡುತ್ತೇನೆ ಎಂದಾಗ, ಹೋಗ್ಲಿ ಬಿಡಿ ಸರ್ ಸುಮ್ಮನೆ ತಮಾಷೆ ಮಾಡಬೇಡಿ ನನಗೆ ಜೋರಾಗಿ ನಗು ಬರುತ್ತಿದೆ ನಕ್ಕು ಬಿಡಲೇನ್ರಿ ಸಾರ್... ಅಯ್ಯಯ್ಯೋ, ನೀವೇನಾದ್ರು ಹಾಗ ಮಾಡಿದ್ರೆ ಕಥೆ ಮುಗೀತು ಅಷ್ಟೇ ಇಲ್ಲಿ ಇರೋ ಬರೋ ಪಕ್ಷಿಗಳಲ್ಲೆ ಹಾರಿಹೋಗಿ ಬಿಡುತ್ತವೆ. ಅದಕ್ಕೆ, ಸ್ವಲ್ಪ ನಿಮ್ಮ ನಗುವಿನ ಕಪಾಟಿಗೆ ಬೀಗ ಹಾಕಿ. ಕಟ್ಟ ಕಡೆಯದಾಗಿ ಹೇಳ್ತಿನಿ, ನೀವು ನಡೆಯುವುದು ನಿಧಾನವಾದರು ಪರವಾಗಿಲ್ಲ, ಈ ಯುಕ್ತಿಯನ್ನು ತಲೆಯಲ್ಲಿ ಇಟ್ಟುಕೊಂಡು ನನ್ನ ಜೊತೆ ಜೊತೆಯಾಗಿ ಸಾಗಿ ಬನ್ನಿ. ನೀವೆನಾದ್ರು, ಇದೇ ಥರಹ ಮಂಗ್ಯಾನಂಗ ಮಾಡಿದ್ರ ಇಲ್ಲೆ ರೂಮಿನಲ್ಲಿಯೇ ಬಿಟ್ಟು ನಾನೊಬ್ಬನೆ ಸುತ್ತಾಡಲು ಹೋಗಬೇಕಾಗುತ್ತೆ ಅರ್ಥ ಆಯಿತಾ ಹೇಳಿದ್ದು ಎಂದೆ. ಅದಕ್ಕೆ, ಓಕೆ ಸರ್.... ಶ್ರೀರಾಮನ ಆಜ್ಞೆಯನ್ನು ಎಂದಾದರೂ ಮೀರಲು ಸಾಧ್ಯವೇ, ನಿಮ್ಮ ಅನತಿಯಂತೆ ಆಗಲಿ ಮಹಾ ಪ್ರಭುವೆ ಎಂದು ಉದ್ಗಾರ ಮೋನಿಷರ ಬಾಯಿಯಿಂದ ಹೊರಹೊಮ್ಮಿತು.
ನೋಡಿ, ಈ ಎಲ್ಲ ಸಾಧನಗಳು ನಮಗೆಲ್ಲ ಬಹಳ ಅಮೂಲ್ಯವಾದಂತಹವುಗಳು ಜೊತಗೆ ಒಂದು ಚಿಕ್ಕ ಪುಸ್ತಕದ ಪ್ರತಿಯನ್ನು ಇಟ್ಟುಕೊಳ್ಳಿ. ಆಗಾಗ, ನಮಗೆ ಸಿಕ್ಕ ಪಕ್ಷಿಗಳ, ಸರೀಸೃಪಗಳ, ಚಿಟ್ಟೆಗಳ ಪಟ್ಟಿಯನ್ನು ಮಾಡಿಕೊಳ್ಳಲು ಅನುಕೂಲವಾಗುವುದು. ಈಗ ಮಂದಹಾಸದಿ ಮೊಗವನ್ನು ಅರಳಿಸುತ್ತ ನಸು ನಕ್ಕು ಹೊರಡೋಣವೆ ಮೋನಿಷ, ಅಂದ ಹಾಗೇ ಒಂದು ಚಿಕ್ಕ ನೀರಿನ ಬಾಟಲಿಯನ್ನು ಹಾಕಿಕೊಂಡಿದ್ದಿರಾ ಬ್ಯಾಗಿನಲ್ಲಿ ಮರೆತಿಲ್ಲ ತಾನೇ ಎಂದಾಗ, ಆ ಯಪ್ಪನಿಗೆ ಬಂತು ನೋಡಿ ಬರಸಿಡಿಲು ಬಡಿದಂತೆ, ಕೋತ ಕೋತ ಕುದಿಯುವ ಜ್ವಾಲಾಮುಖಿಯು ಒಮ್ಮೆಲೆ ಸ್ಪೋಟಗೊಂಡಂತೆ, ಆಕಾಶ-ಭೂಮಿ ಇನ್ನೇನು ಕ್ಣಣಾರ್ಧದಲ್ಲಿಯೇ ಅಪ್ಪಳಿಸಿ ಬಿಡುತ್ತೇನೊ ಅನ್ನೊಹಾಗೆ ಸಿಟ್ಟಿನಿಂದ ಸರ್... ಈ ತುಂತುರು ಮಳೆಯಲ್ಲಿ ನನಗೆ ಈ ನೀರಿನ ಬಾಟಲಿನ ಅವಶ್ಯಕತೆ ಏನಾದ್ರು ಇದೆಯೇ , ಬೇಕಾದ್ರೆ ಅಲ್ಲೋ ಇಲ್ಲೋ ಸಿಗುವ ನೀರನ್ನು ಕುಡಿದು ಜೀವಿಸಿ ಬಿಡ್ತಿನಿ ಇಲ್ಲಾಂದ್ರೆ ಇದೇ ಸ್ಥಳದಲ್ಲಿ ಒಂದೇ ಕಾಲಿನ ಮೇಲೆ ನಿಂತು ಆ ವರುಣನ, ಸಲುವಾಗಿ ತಪಸ್ಸು ಮಾಡುವೆ. ಹೌದಪ್ಪಾ ಹೌದು ಇದು ಕೆಚ್ಚೆದೆ ಅಂದ್ರೆ, ಹೌದು! ಒಂದೆ ಕಾಲ ಮೇಲೆ ನಿಂತು ತಪಸ್ಸು ಮಾಡತಿರಂತಿರಲ್ಲಾ ಒಂದು ವೇಳೆ ಕಾಲು ನೋಯಲು ಶುರುವಾದ್ರೆ ಆಗೇನ್ಮಾಡ್ತಿರಾ, ಅಯ್ಯೋ ಸರ್ ಇದು ಕಲಿಯುಗ, ಲಬಕ ಅಂತ ಇನ್ನೊಂದು ಕಾಲ್ಮೇಲೆ ನಿಲ್ಲತಿನ್ರಿ ಅಷ್ಟೇ ಮತ್ತೆ ಅಂತಹದೇನಿದೆ ಇದರಲ್ಲಿ. ಓಹೋ! ಒಂದು ವೇಳೆ ಎರಡು ಕಾಲು ನೋಯಲು ಶುರುವಾದ್ರೆ ಏನ ಮಾಡ್ತಿರಾ ಇನ್ನೇನು ಮಾಡೋದು, ಕುಳಿತು ತಪಸ್ಸು ಮಾಡ್ತಿನಿ ಅಷ್ಟೇ. ಮಾಡ್ತಿರಾ... ಮಾಡ್ತಿರಾ... ನಿಮ್ಮನ್ನ ಹಿಂಗೆ ಬಿಟ್ರೆ ನನ್ನನಂತು ಬಕ್ರಾನು ಮಾಡ್ತಿರಾ, ಚೂ ಮಂಥರ ಹಾಕಿ ಕಬ್ಜಾನು ಮಾಡ್ತಿರಾ ಅಷ್ಟೇ.
ನಡಿರಿ! ನಡಿರಿ! ಈಗ ಹೊರಡೋಣ ನೀವು ಹಿಂಗೆ ಮಾಡ್ತಿದ್ದರೆ ಇವತ್ತು ನಾವು ಇಲ್ಲೆ ರಾತ್ರಿ ಕಳೆಯ ಬೇಕಾಗುತ್ತೆ ಅಷ್ಟೇ. ಅಗೋ, ಅಲ್ಲಿ ಆ ಮರದ ಮೇಲೆ ಏನ್ ಕುಳಿತಿದೆ ಅಂತ ಕಾಣಸ್ತಿದೆಯಾ ಮೋನಿಷ ಎಂದಾಗ ಅಲ್ಲೇನಿದೆ ಸರ್ ಬರಿ ಮರದ ರೆಂಬೆ ಕೊಂಬೆಗಳು ಬಿಟ್ಟರೆ ಮರದ ಎಲೆಗಳು ಕಾಣಸ್ತಿದೆ ಅಷ್ಟೇ, ಮತ್ತೇನು ಕಾಣಸ್ತಿಲ್ಲ. ಹೌದಾ, ಹಂಗಾದ್ರೆ ನಿಮ್ಮ ಕೊರಳಲ್ಲಿ ಹಾಕಿರುವ ದುರ್ಬಿನ ಏನ ಗುಜರಿಗೆ ಹಾಕಲಿಕ್ಕೆ ಇಟ್ಟಿರೇನು ರೀ… ಕೊರಳಿಗೆ ಹಾಕಿರುವ ಈ ದುರ್ಬಿನನ್ನ, ಇದೇ ಸಮಯದಲ್ಲಿ ಉಪಯೋಗ ಮಾಡಲಿಲ್ಲಾಂದ್ರೆ ಮತ್ತೆ ಯಾವಾಗ ಉಪಯೋಗ ಮಾಡ್ತಿರಾ ಸರಿಯಾಗಿ ನೋಡಿ ಏನಿದೆ ಅಂತ ತಿಳಕೊಳ್ಳಿ. ಸರ್... ನನಗೆ ಏನು ಕಾಣ್ತಿಲ್ಲ. ಯಪ್ಪಾ ರೀ ಮೋನಿಷ, ಒಂದು ಚಿಕ್ಕ ಕಲ್ಲಾದ್ರು ಕೊಡ್ರಿ ನನಗ ಇಲ್ಲೆ ನನ್ನ ತಲೆ ಜಜ್ಜಿ ಕೊಳ್ಳುತ್ತೇನೆ. ಯಾಕೆ ಸರ್... ಏನಾಯ್ತು ಈ ಚಿಕ್ಕ ಕಲ್ಲಿನಿಂದ ತಲೆ ಒಡೆದು ಕೊಂಡ್ರೆ ಏನಾಗುತ್ತೆ ಒಂದು ಹನಿ ರಕ್ತಾನು ಬರೋದಿಲ್ಲ. ನೋಡಿ ಸರ್, ಅಲ್ಲಿ ಮರದ ಹತ್ತಿರ ಒಂದು ದೊಡ್ಡ ಬಂಡೆ ಇದೆ ಅದಕ್ಕೆ ಹೋಗಿ ಜೋರಾಗಿ ತಲೆ ಬಡಿದುಕೊಳ್ಳಿ ಆಗ ಏನಾದ್ರು ಆಗಬಹುದು. ಹ್ಹಹ್ಹಹ್ಹ ಎಂದು ನಗುತ್ತ ಸುಮ್ಮನೆ ತಮಾಷೆ ಮಾಡ್ತಿದ್ದೇನೆ ಸರ್, ಹಾಗಂತ ನೀವೆನಾದ್ರು ನಿಜವಾಗಿಯು ಹೋಗಿ ತಲೆ ಒಡೆದುಕೊಂಡು ಬಿಟ್ಟಿರಾ.
ರೀ ನಾನೇನು ಅಷ್ಟು ಮುಟ್ಟಾಳನು ಅಲ್ಲ ತಲೆ ಗಟ್ಟಿ ಇದೆ ಅಂತ ಹೋಗಿ ಬಂಡೆಗೆ ಚಚ್ಚಿಕೊಳ್ಳೊದಕ್ಕೆ, ನನಗು ಅರ್ಥಾ ಆಗುತ್ತೆ. ಅದೋಗ್ಲಿ, ನಿಮಗೆ ನಿಜವಾಗಲೂ ಏನು ಕಾಣಿಸುತ್ತಿಲ್ಲವೆನ್ರಿ ಆ ಟೊಂಗೆಯ ಮೇಲೆ ಏನಿದೆ ಅಂತ. ನಮ್ಮ ಹುಲಿಗೆಪ್ಪನ ಆಣಿ ಮಾಡಿ ಹೇಳ್ತೀನ್ರಿ ನನಗಂತು ಏನು ಕಾಣವಲ್ತರೀ ಸರ್. ಏನು ಹುಲಿಗೆಪ್ಪ... ಅದಾವ ಹುಲಿಗೆಪ್ಪ ನಿಮ್ಮ ದೋಸ್ತಗಿಸ್ತ ಏನ್ರಿ ಅವರು. ರೀ… ಸರ್, ಹಂಗೆಲ್ಲ ಅನಬ್ಯಾಡ್ರಿ ಹುಲಿಗೆಪ್ಪ ಅಂದ್ರೆ ನಮ್ಮ ಮನೆ ಕಾಯೋ ದೇವ್ರು, ‘ಒಳತ’ ಅಥವಾ ‘ಬಿಡ್ತು’ ಅನ್ನಿ ಇಲ್ಲಾಂದ್ರ ನಮ್ಮ ಹುಲಿಗೆಪ್ಪ ನಿಮ್ಮನ್ನ ಸುಮ್ಮಕೆ ಬಿಡಾಕಿಲ್ಲ ನೋಡ್ರಿ. ಒಮ್ಮೆ, ನಿಮ್ಮ ದೇಹದಾಗ ಹೊಕ್ಕಿ ಬಿಟ್ಟ್ರೆ ನೀವು ಇಲ್ಲೆ ‘ಖೇಲ ಖತಮ್ ನಾಟಕ ಬಂದ’ ಅನ್ನೋವಂಗ ಮೂರ್ಚೆ ಬಂದು ಬಿದ್ದೋಗಿ ಬಿಡ್ತಿರಾ ಅಷ್ಟೇ.
ಥತ ತೇರಿ, ನಾನಿಲ್ಲ ಚಡಪಡಿಸಲಿಕತ್ತಿನಿ ಟೊಂಗೆ ಮೇಲೆ ಏನೋ ಕೂತದ ಅಂತ ನೀವು ನೋಡಿದ್ರ ಹುಲಿಗೆಪ್ಪ, ನಿಮ್ಮನ್ನ ಸುಮ್ಮನೆ ಬಿಡಾಕಿಲ್ಲ ಹಂಗ ಮಾಡ್ತಾನೆ ಹಿಂಗ ಮಾಡ್ತಾನೆ ಅಂತ ಹೆದರಿಸ್ತಿರಪ್ಪಾ ನೀವು. ಓಹೋ! ಈಗ ಅರ್ಥ ಆಯಿತು ಬಿಡಿ ರೀ.. ಮೋನಿಷ, ಈ ಎಲ್ಲ ಅಂತೆ ಕಂತೆ ಕಥೆಗಳನ್ನ ಹೇಳಿ ನನ್ನನ್ನ ಪುಸಲಾಯಿಸಿ ಇಲ್ಲಿಂದ ಓಡಿ ಹೋಗೊ ಪ್ಲ್ಯಾನ ಏನಾದ್ರು ಮಾಡಿರೇನ್ರಿ ನೀವು.
ಮೋನಿಷ, ಜಪ್ತಿ ಮಡಿಕೊಳ್ಳಿ ಒಂದಸಲ ನನ್ನ ಜೊತೆಗೆ ಬಂದವರು ಮರಳಿ ಹೋಗೊದಕ್ಕೆ ಸಾಧ್ಯಾನೆ ಇಲ್ಲ. ಈಗ ನನ್ನ ಜೊತೆ ನೀವು ಸುಮಾರು ದೂರ ನಡೆದುಕೊಂಡು ಬಂದಿದ್ದೀರಿ. ಈ ಕಾಡಿನ ತುಂಬೆಲ್ಲ ನೂರಾರು ಜೀವಿಗಳಿವೆ ಗೊತ್ತಾಯಿತಾ, ಬೇಕಾದ್ರೆ ನಿಮಗೆನಾದ್ರು ಮರಳಿ ಹೋಗೊ ಪ್ಲ್ಯಾನ ವಿಚಾರ ತಲೆಯಲ್ಲಿ ಇದ್ದರೆ ಹೋಗಿ, ನಾನಂತು ನಿಮ್ಮ ಕಾಲು ಹಿಡಿದಿಲ್ಲ. ಹೋಗಿ ಹೋಗಿ ಅಂತ ಗೋಗರೆದೆ ಅದಕ್ಕೆ ಪ್ರತಿಯಾಗಿ ಮೋನಿಷ ಮೀನು ತಿಂದ ಬೆಕ್ಕು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಮುಳ್ಳಿನ ಹಾಗೆ ಒದ್ದಾಡಲು ಶುರು ಮಾಡಿದ್ರು.
ಅಯ್ಯಯ್ಯಪ್ಪಾ! ಅಯ್ಯಯ್ಯಪ್ಪಾ! ಒದ್ದಾಡುತ್ತಿದ್ದ ಈ ವಯ್ಯನ ಕಂಡು ಏನಾಯಿತು? ಏನಾಯಿತು? ರೀ, ಹೀಗೆಕೆ ಒದ್ದಾಡುತ್ತಿದ್ದಿರಿ ಅಂತ ಕೇಳಲು ಆಗ್ಲೆ ಹೇಳಿಲ್ವೆ ಸರ್ ಹುಲಿಗೆಪ್ಪ ಬಂದ ಬಿಟ್ಟ, ಹುಲಿಗೆಪ್ಪ ಬಂದ ಬಿಟ್ಟ. ಎಲ್ಲಿ? ಎಲ್ಲಿ? ಆ ಹುಲಿಗೆಪ್ಪ ಎಂದು ಚಂಗನೆ ಜಿಗಿದು ಆಕಡೆ ಈ ಕಡೆ ಅವಕ್ಕಾಗಿ ನೋಡ್ತಿನಿ, ೩೬೦ ಡಿಗ್ರಿ ಸುತ್ತಲು ಮರಗಳೆ ಎಲ್ಲಿ ನಿಜವಾದ ಹುಲಿ-ಗಿಲಿ ಬಂದು ಬಿಡ್ತೇನೊ ಅಂತ ಅನ್ನ್ಕೊಂಡೆ. ಆದರೆ ಅಲ್ಲಿ ಯಾವ ಹುಲಿನು ಇರಲಿಲ್ಲ ಬದುಕಿತು ಜೀವ ಅಂತ ನಿಟ್ಟುಸಿರು ಬಿಡುತ್ತಿದ್ದಾಗ ಆ ವಯ್ಯ ನನ್ನನ್ನೆ ಧಿಕ್ಕರಿಸಿ ನೋಡುತ್ತ, ಏನು ಪಾರ್ಥ, ಹ್ಹಹ್ಹಹ್ಹ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲಿಲ್ಲ. ಹಾಂ! ಇದೇನ್ರಿ ನಿಮ್ಮ ಮಾತಿಗೆ ನಗಬೇಕೊ, ಅಳಬೇಕೊ, ಒಂದು ಗೊತ್ತಾಗುವಲ್ತಲಪ್ಪ ನಿಜಾವಾಗಿಯು ನಿಮ್ಮ ದೇಹದಲ್ಲಿ ಪ್ರವೇಶ ಮಾಡಿದ್ದು ಹುಲಿಗೆಪ್ಪ ಏನ್ರಿ. ಮತ್ತೆ ಆ ಅರ್ಜುನನ ಡೈಲಾಗ್ ಹೊಡಿತ್ತಿದಿರಲ್ಲ ಹಂಗಾದ್ರೆ, ಆ ಹುಲಿಗೆಪ್ಪ ಎಲ್ಲಾ ಡ್ರಾಮಾ ನಾ, ನಾ ನೋಡಿದ್ರೆ ನಿಜ ಅಂದುಕೊಂಡು ಬಿಟ್ಟೆ ಅಲ್ಲಾ ರೀ ಇದನ್ನ. ಛೇ, ಕಪಟ ನಾಟಕಧಾರಿ ನಿಮ್ಮಂತಹವರನ್ನ ಈ ಜಗತ್ತಿನಲ್ಲಿ ಭೂತಗನ್ನಡಿ ಹಿಡಿದು ಹುಡಿಕಿದರು ಎಲ್ಲೂ ಸಿಗಲ್ಲ. ಅಂಥಹದ್ರಲ್ಲಿ ಏಕಪಾತ್ರಾಭಿನಯ, ಮಾಡೊಕ್ಕೆ ನೀವು ಲಾಯಕ್ಕು ಬಿಡ್ರಿ.
ಕತ್ತರಿಸಿದ ಮರದ ಟೊಂಗೆಯ ತುದಿಯಲ್ಲಿ ಕಂಡ ರೌಕ್ಸಿ ಫಾರೆಸ್ಟ್ ಲಿಜಾರ್ಡ. (Roux’s forest lizard) | ಚಿತ್ರ - ಬೊಂಡ್ಲಾ ವನ್ಯಜೀವಿ ಅಭಯಾರಣ್ಯ, ಗೋವಾ - ಸತೀಶ ಗಣೇಶ ನಾಗಠಾಣ.
ಹಾಳಾಗಿ ಹೋಗ್ಲಿ, ಈಗ ಆ ಮರದ ಮೇಲೆ ಏನಿದೆ ಗೊತ್ತೆ? ಸೂಕ್ಮವಾಗಿ ಗಮನಿಸಿ ಮರದ ಕೊಂಬೆಯನ್ನು ಕತ್ತಿರಿಸಿದ ತುತ್ತ ತುದಿಯಲ್ಲಿ ಒಂದು ಓತಿ (Lizard) ಇದೆ. ಕಾಣಸ್ತಾ ಇದೆಯಾ, ಹೌದೌದು! ಸರ್ ಕಾಣಸ್ತಿದೆ ಈ ಓತಿಯನ್ನು “ರೌಕ್ಸಿ ಫಾರೆಸ್ಟ್ ಲಿಜಾರ್ಡ” (ಮೊನಿಲೆಸಾರಸ ರೌಕ್ಸಿ) ಅಂತ ಕರೆಯುತ್ತಾರೆ. ನೋಡಿ, ಎಷ್ಟು ಸುಂದರವಾಗಿದೆ ನೋಡಲು ಸಾಮಾನ್ಯವಾಗಿ ಇದರ ದೇಹವು ಆಲಿವ ಕಂದು ಬಣ್ಣವನ್ನು ಹೊಂದಿರುತ್ತದೆ. ಹಗುರವಾದ ಹೊಟ್ಟೆ, ಕುತ್ತಿಗೆಯ ಮೇಲೆ ಕಪ್ಪು ಪಟ್ಟಿ ಮತ್ತು ಕಣ್ಣಿನಿಂದ ಹೊರಸೂಸುವ ಕಪ್ಪು ರೇಖೆಗಳು, ಉದ್ದವಾದ ಕಾಲ್ಬೆರಳುಗಳನ್ನು ಹೊಂದಿರುತ್ತವೆ. ನೋಡಿದ್ರಾ, ಹೇಗಿದೆ ಅಂತ ವಿಸ್ಮಯ ಪ್ರಪಂಚದ ಓತಿಗಳವು. ರೀ.. ಅದನ್ನ ಬಿಟ್ಟು ನೀವ ನೋಡಿದ್ರ, ಬಾಯಿಗಿ ಬಂದದನ್ನ ಒಂದೇ ಸಮನೆ ಚುರಿ ಚಿಕ್ಕಣನ ಥರಹ ಡೈಲಾಗ ಹೊಡದದ್ದೆ ಹೊಡದದ್ದು.
ಈಗ ಒಂದ ಕೆಲ್ಸಾ ಮಾಡೋಣ, ಇದು ನನ್ನ ತಲೆಯ ಮೇಲಿಂದ ಒಂದೆರಡು ಅಡಿ ಎತ್ತರದಲ್ಲಿದೆ ಹಾಗಾಗಿ ಇದರ ಫೋಟೋ ಸೆರೆ ಹಿಡಿಯೋಣ ಅಥವಾ ಸಾಧ್ಯವಾದರೆ ವ್ಹಿಡಿಯೋ ಮಾಡಿ ಕೊಳ್ಳೋಣ. ಓಕೆ ಏನ್ರಿ, ಮೋನಿಷ! ಈ ಮಾತಿಗೆ ನಿಮ್ಮ ಸಮ್ಮತಿ ಇದೆಯೇ ಎಂದು ಪ್ರಶ್ನಿಸಲು ಹುಂ! ಸರ್.. ಓಕೆ ಎಂದು ತಲೆ ಅಲ್ಲಾಡಿಸುತ್ತ, ನಿಧಾನ ಸರ್ ಎಲ್ಲಿಯಾದ್ರು ಓಡಿಗಿಡಿ ಹೋಗಿ ಬಿಟ್ಟಿತು. ರೀ.. ಅಡ್ಡಡ್ಡ ಬಾಯಿ ಹಾಕಿ ನೀವೆ ಓಡಿಸಿ ಬಿಡ್ತಿರೋ ಏನೋ, ಸಿಕ್ಕಿದ್ದೆ ಒಂದು ಅಂತದ್ರಾಗೆ ಏನ ಅಪಶಕುನ ನುಡಿತಿರೋ ನೀವು. ನಿಮ್ಮ ಬಾಯಿಂದ ಈ ಮಾತು ಬಂದಿದೆ ಅಂದ್ರ ಏನೋ ಗಂಡಾಂತರ ಕಾದಿದೆ ಅಂತ ಆಯಿತು.
ಸರ್! ಸರ್! ಯಾವ ಗಂಡಾಂತರನು ಇಲ್ಲ ಹೆಣ್ಣಾಂತರನು ಇಲ್ಲ. ಸುಮ್ಮನೆ, ನೀವು ವಸಿ ಆ ಓತಿ ಕಡೆ ಫೋಕಸ್ ಮಾಡಿ. ಮೊದ್ಲೆ, ನಾಜೂಕಿನ ಓತಿಗಳಿವು. ಹಂಗ್ಯಾಕ ಅಂತಿರಾ ರೀ.. ಸರ್, ಇವುಗಳ ಬಗ್ಗೆ ನಿಮಗೆ ಗೊತ್ತಿಲ್ಲ ಬಿಡಿ ನಮ್ಮ ಕೈಗಳನ್ನ ಅದರ ಹತ್ತಿರ ತೊಗೊಂಡ ಹೊಗ್ತಿದ್ದಾಗೆ, ಅದು ತನ್ನ ಕಣ್ಣುಗಳನ್ನ ಮೇಲೆ ಕೆಳಗೆ ವೃತ್ತಾಕಾರವಾಗಿ ತಿರುಗಿಸುತ್ತ ನಮ್ಮನೆ ನುಂಗೋ ಹಾಗೇ ಒಂದೆ ಕಡೆ ನೋಡುತ್ತ ಇನ್ನೇನು, ಸ್ವಲ್ಪ ಹತ್ತಿರ ಮೊಬೈಲ್ ಅದರ ಮುಂದೆ ಜಾರಿಸಿದ್ರೆ ಸಾಕು. ಅವುಗಳಿಗೆ, ನಮ್ಮಗಳ ಸ್ಪರ್ಶ ಗೊತ್ತಾಗಿ ಬಿಡ್ತು ಅಂದ್ರೆ ಬರೆದಿಟ್ಟುಕೊಳ್ಳಿ ಬಿಳಿ ಚೀಟಿಯಾಗೆ ಆ ಹುಲಿಗೆಪ್ಪನ ಆಣೆಗು ಹೇಳ್ತಿವ್ನಿ ನಿಮ್ಮ ಕೈಯಾಗ ಸಿಕ್ಕಲ್ಲ ಬಿಡ್ರಿ ಅದು. ಅಷ್ಟೆ, ಕಥೆ ಮುಗೀತು ದಿಕ್ಕಾಪಾಲಾಗಿ ಎಲ್ಲೆಲ್ಲೋ ಓಡೋಡಿ ಹೋಗಿ ಬಿಡ್ತವೆ. ಅದೇನೊ, ಅಂತಾರಲ್ಲ ಸರ್ ಇವುಗಳ ಬಾಲಕ್ಕೆ ನಾವೇ ಬೆಂಕಿ ಇಟ್ಟೊರಂಗೆ, ಆ ಲಂಕಾಧಿಪತಿ ರಾವಣಾ ಗೊತ್ತಲ್ಲ ನಿಮಗೆ, ಹೌದೌದು ಮೊನ್ನೆ ತರಕಾರಿ ಅಂಗಡಿಯಲ್ಲಿ ಸಿಕ್ಕಿದ್ರು.
ಹಾಂ! ಏನು ಆ ರಾವಣಾ ಸಿಕ್ಕಿದ್ನಾ ಸರ್ ನಿಮಗೆ, ಏನ ಮಾತು ಅಂತ ಆಡ್ತಿರಾ ಆ ಲಂಕಾಧಿಪತಿ ರಾವಣಾ ಸತ್ತೆ ಎಷ್ಟೋ ಜನ್ಮಗಳಾದವು. ಅಂತದರಲ್ಲಿ, ತಮಾಷೆ ಮಾಡಕ್ಕು ಇತಿ-ಮಿತಿ ಬೇಕು ನನ್ನ ಮಾತಿಗೆ ಬೆಲೆನೆ ಇಲ್ಲ ರೀ ಸರ್ ನಿಮಗೆ. ಈಗ, ಮುಂದೆ ಹೇಳಲೋ ಅಥವಾ ಬೇಡವೋ ಎಂದು ಮುಂದುವರೆಸಲು ಮತ್ತೆ ಮಾತಿಗೆ ಇಳಿದ ಮೋನಿಷ ಆ ರಾವಣಾ, ಹನುಮಂತನ ಬಾಲಕ್ಕೆ ಬೆಂಕಿ ಇಟ್ಟಂಗೆ ದಡಬಡಿಸುತ್ತ ಪರಾಕ್ರಮ ತೋರಿಸುತ್ತ, ಓಡುತ್ತ ಇಡೀ ಲಂಕೆಯನ್ನೆ ಸುಟ್ಟ ಅನ್ನೊಹಾಗೆ ಮರದ ಎಲೆ, ರೆಂಬೆ-ಕೊಂಬೆ, ಪೊಟರೆಗಳ ಒಳ-ಹೊರ, ಆ ಕಡೆ ಈ ಕಡೆ ಸಂದಿ-ಗೊಂದಿಗಳಲ್ಲಿ ಎಲ್ಲೆಂದರಲ್ಲಿ ಓಡಿ ಬಿಡ್ತಾವೆ ಒಂಥರಾ ನಾಚಿಕೆ ಸ್ವಭಾವದ ಜಂತುಗಳು ರೀ ಇವು ಸರ್...
ಅಮಟೆ ಮರ | ಚಿತ್ರ: ವಿಕಿಮೀಡಿಯ ಕಾಮನ್ಸ್
ಮೋನಿಷ, ಅದೇನೋ ಅಂತರಾಲ್ಲ “ಅಮಟೆ ಮರ ಅಪ್ಪನ ಮನೆಗೆ ಹೋದಂತೆ” (Spondias mombin - ಅಮಟೆ ಮರ) ಹಂಗಾಯಿತು ನಿಮ್ಮ ಕಥೆ. ಸ್ವಲ್ಪ ಸುಮ್ಮಕಿರಿ ಮಾರಾಯ್ರೆ, ಮತ್ತೆ ಓತಿಯತ್ತ ನಿಗಾ ಇಡುತ್ತ ನಿಧಾನವಾಗಿ ಒಂದಿಂಚ್ಚು ಅಲುಗಾಡದೆ, ನನ್ನ ಕಿಸೆಯಿಂದ ಮೊಬೈಲ್ ಹೊರತೆಗೆದು ಆ ಓತಿಯ ಹತ್ತಿರ ನಿಧಾನವಾಗಿ ಮೊಬೈಲ್ ತೆಗೆದುಕೊಂಡು ಹೋಗಿ ಓತಿಯ ಬಲ ಭಾಗದ ದೇಹದ, ಕೆಲ ದೃಶ್ಯಾವಳಿಗಳನ್ನು ಚಿತ್ರೀಕರಿಸಿದೆ. ನಂತರದಲ್ಲಿ ಅದರ ಬಲಭಾಗದ ಕೆಲ ಫೋಟೋಗಳನ್ನು ಮೊಬೈಲನಲ್ಲಿ ಸೆರೆಹಿಡಿದೆ. ಅಬ್ಬಾ! ರೀ ಅಂತು ಇವತ್ತು ನಮಗೆ ಒಂದು ಅದ್ಭುತ ಓತಿಯ ಕೆಲ ಫೋಟೋಗಳು ಸಿಕ್ಕಂತಾದವು. ಇದುವೆ, ನಮ್ಮ ಮೊದಲ ಸೈಟಿಂಗ್, ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ ರೀ ಎಂದು ಈ ವಯ್ಯನಿಗೆ ಹೇಳಿದೆ.
ನಾವಿಬ್ಬರು, ಈ ಓತಿಯ ಚರ್ಚೆಯಲ್ಲಿ ತೊಡಗಿದ್ದಾಗ ನಮ್ಮೊಳಗೆ ಗುಸುಗುಸು-ಪಿಸುಪಿಸು ಸದ್ದು ಜೋರಾಯಿತು. ಇಂತಹ ಸಮಯದಲ್ಲಿ ನಾನು ಕ್ಯಾಮರಾ ತರುವುದನ್ನೆ ಮರೆತು ಬಿಟ್ಟೆ ಎಂದು ಅಳಲು ತೋಡಿಕೊಳ್ಳುತ್ತಿರುವಾಗ, ಬರೀ ಇದೆ ಆಯ್ತು ಸರ್ ನಿಮ್ಮದು ಆ ಅಂಗುಲಿಮಾಲಾನ ಥರಹ ರೆಡಿ ಆಗಿ ಬಂದಿರೋದು ನೋಡಿದ್ರೆ. ಎಲ್ಲಾ ಉಪಕರಣಗಳು, ಇರಬಹುದಂತ ನಾ ಅನ್ಕೊಂಡ್ರೆ, ಮುಖ್ಯವಾಗಿದ್ದನ್ನೆ ಮರೆತು ಬಿಟ್ಟು ಬಂದು ಮತ್ತೆ ನನಗೆ ಹೇಳ್ತಿರಾ, ಅದಿಲ್ಲಾ ಇದಿಲ್ಲಾ ಅಂತ. ಒಂದು ವೇಳೆ ಕ್ಯಾಮರಾ ಇದ್ದಿದ್ರೆ ಲೆನ್ಸ ಜೂಮ ಮಾಡಿ ಮಾಡಿ ತೆಗಿ ಬಹುದಾಗಿತ್ತು ಫೋಟೋಗಳನ್ನ. ಈಗ ಅತ್ತರೆ ಏನು ಪ್ರಯೋಜನವಿಲ್ಲ ಬಿಡಿ “ಬಸ್ಸು ಹೋದ ಮೇಲೆ ಟಿಕೆಟ್ ತೊಗೊಂಡಂಗೆ ಆಯಿತು” ನಿಮ್ಮ ಕಥೆ ಸರ್.
ಹೌದು, ನೀವು ಹೇಳೊದ್ರಲ್ಲಿ ಏನು ತಪ್ಪಿಲ್ಲ ಬಿಡ್ರಿ ಮೋನಿಷ, ಎಂದು ಹೇಳುತ್ತಿರುವಾಗ ಆ ಓತಿಯು ದಿಢೀರನೆ ತನ್ನ ಸ್ಥಾನವನ್ನ ಬದಲಿಸಿ ಬಲ ಭಾಗದಿಂದ ಎಡ ಭಾಗಕ್ಕೆ ಮುಖ ಮಾಡಿ ನಿಂತಿತು. ಅಬ್ಬಬ್ಬಾ! ಅಚ್ಚರಿಯಿಂದ ನೋಡುತ್ತ, ರೀ.. ಇವತ್ತು ನಮ್ಮ ನಸೀಬು ಖುಲಾಯಿಸ್ತು ನೋಡ್ರಿ. ಬೇಗೆ, ಬೇಗ, ಫೋಟೋ ತೆಗೆದುಕೊಳ್ಳೋಣ ಎಂಬ ಆತುರತೆಯಲ್ಲಿದ್ದಾಗ ಅದರ ಹಿಂಬದಿಯ ಕಾಲ್ಬೆರಳುಗಳ ಮೇಲೆ ಏನೋ ಒಂದು ಚಿಕ್ಕ ಸಸಿ ಚಿಗುರೊಡೆದದ್ದನ್ನು ಕಂಡೆ. ಇದೇನಿದು, ಫಂಗಸ್ ಥರಹ ಇದೆಯಲ್ಲ , ಮತ್ತೆ ಸೂಕ್ಷ್ಮವಾಗಿ ಗಮನಿಸಿದಾಗ ಫಂಗಸ್ ಅಂತು ಅಲ್ಲ. ರೀ ಮೋನಿಷ, ನೋಡಿ! ಅದರ ಹಿಂಬದಿ ಬೆರಳಿನಲ್ಲಿ ಒಂದು ಚಿಕ್ಕ ಸಸಿ ಚಿಗುರೊಡೆದದ್ದು ಕಾಣಸ್ತಿದೆಯಾ ನಿಮಗೆ, ಹೌದೌದು ಸರ್ ಇದಂತು ವಿಸ್ಮಯವೆ ಸರಿ. ಇನ್ನೇನು, ಎರಡು ವಿಧಾನಗಳಲ್ಲಿ ಫೋಟೋ ತೆಗೆದುಕೊಂಡಿದ್ದೆ ತಡ ಅದಕ್ಕೆ ನಮ್ಮ ಅರಿವು ಗೊತ್ತಾಗಿ ಓಡಿಹೋಗಿ ಬಿಡ್ತು.
ಛೇ! ಎಂತ ಕೆಲಸ ಆಗಿ ಬಿಡ್ತು ಸ್ವಲ್ಪದ್ರಲ್ಲೆ ಜಸ್ಟ ಎಸ್ಕೇಪ್ ಆಯಿತಲ್ಲ ಮೋನಿಷ. ಇನ್ನು ಹಲವಾರು ವಿಧಾನಗಳಲ್ಲಿ ಫೋಟೋ ತೆಗೆದುಕೊಂಡಿದ್ದರೆ, ಅದರ ಬಗ್ಗೆ ಇನ್ನು ತಿಳಿದುಕೊಳ್ಳಬಹುದಾಗಿತ್ತಲ್ಲ. ಕೂತೂಹಲದ ವಿಷಯ ರೀ ಏನ್ಮಾಡೋದು ಸಿಕ್ಕಿದೆ ಒಂದು, ಅದು ಸಹ ಹೀಗಾಯಿತಲ್ಲ ಎಂದು ಗೋಳಿಡುತ್ತಿರುವಾಗ, ಸರ್... ವಿಚಾರ ಮಾಡಬೇಡಿ ಒಂದು ಕೆಲಸ ಮಾಡೋಣ ನಾನು ಹೋಗಿ ಜೋರಾಗಿ ಮರ ಅಲುಗಾಡಿಸುತ್ತೇನೆ ಆಗ ಆ ಓತಿ ಕೆಳಗೆ ಬಿದ್ದರು ಬೀಳಬಹುದು. ಏನಂತಿರಾ, ಹೋಗಿ ಮರವನ್ನು ಅಲುಗಾಡಿಸಲೆ ಸರ್... ಏನು ಮರಾನಾ ಅಲುಗಾಡಸ್ತಿರಾ ಮೊದ್ಲೆ ತುಂತುರು ಮಳೆ, ಅಂಥಹದರಲ್ಲಿ, ಅಪ್ಪಿ ತಪ್ಪಿ ಮರದ ಮೇಲಿಂದ ಟೊಂಗೆ ಏನಾದ್ರು ಕತ್ತರಿಸಿಕೊಂಡು ನೇರವಾಗಿ ನಿಮ್ಮ ತಲೆ ಮೇಲೆ ಬಿದ್ರೆ ಮುಗೀತು. ದುಂಡಗೆ ಇರುವ ನಿಮ್ಮ ತಲೆ ತೆಂಗಿನಕಾಯಿ ಒಡದಂಗೆ ಫಟಂತ್ ಒಡೆದು ಎರಡು ಹೋಳಾಗುತ್ತೆ ಅಷ್ಟೇ. ಅಲ್ಲಿಗೆ ನಿಮ್ಮ ಕಥೆ ಹರೋಹರ, ಪಕ್ಕಾ ನೀವಂತು ಶಿವನ ಪಾದಕ್ಕೆ ಸೇರೋದಂತು ಗ್ಯಾರಂಟಿ , ಬಿಳಿ ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ. ರೀ, ಸುಮ್ಮನೆ ಈ ಕಡೆ ಬನ್ರಿ ಮರ ಅಲುಗಾಡಸ್ತಾರಂತೆ ಮರ ಅದೇನು ಅಲುಗಾಡಿಸೊದಕ್ಕೆ ಚಿಕ್ಕ ಅಡಿಕೆ ಮರಾನಾ. ನೋಡಿ, ಅದರ ದಿಮ್ಮು ಎಷ್ಟು ಗಟ್ಟಿಯಾಗಿದೆ ಅಂತ ಸುಮ್ಮಸುಮ್ಮನೆ ಏನೇನೋ ಮಾಡೊದಕ್ಕೆ ಹೋಗಿ ಏನೇನೂ ಆದ್ರೆ ಕಷ್ಟ ರೀ.
ಕತ್ತರಿಸಿದ ಮರದ ಟೊಂಗೆಯ ತುದಿಯಲ್ಲಿ ಕಂಡ ರೌಕ್ಸಿ ಫಾರೆಸ್ಟ್ ಲಿಜಾರ್ಡ. (Roux’s forest lizard) | ಚಿತ್ರ - ಬೊಂಡ್ಲಾ ವನ್ಯಜೀವಿ ಅಭಯಾರಣ್ಯ, ಗೋವಾ - ಸತೀಶ ಗಣೇಶ ನಾಗಠಾಣ.
ನೋಡಿ, ಮೋನಿಷ ಈ ಜಂತುಗಳ ಆವಾಸಸ್ಥಾನಕ್ಕೆ ನಾವು ಎಂದಿಗೂ ಧಕ್ಕೆ ತರಬಾರದು. ಅವು ಇರುವಲ್ಲಿಯೇ ಅವುಗಳನ್ನು ಬಿಟ್ಟು ಬಿಡಬೇಕು ಹೊರತು ಮತ್ತಷ್ಟು ತೊಂದರೆ ನಮ್ಮಿಂದ ಅವುಗಳಿಗೆ ಆಗಬಾರದು, ತಿಳಿತೇನ್ರಿ. ಸರ್ ಮತ್ತೆ ಆ ಓತಿಯ ಕಾಲ್ಬೆರಳುಗಳ ಮೇಲೆ ಬೆಳೆದ ಆ ಚಿಕ್ಕ ಸಸಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಇದರ ಬಗ್ಗೆ ಸ್ವಲ್ಪ ಹೇಳಿ? ಜರೂರ! ಜರೂರ! ನೋಡಿ, ರೀ.. ಸರ್ ಏನ ನೋಡದು ಅವಾಗಿಂದ ನೋಡ್ತಾನೆ ಇವ್ನಿ ನಿಮ್ಮನ್ನ. ರೀ!.. ಅಲ್ಲಲ್ಲಾ ಹಾಗಲ್ಲಾ ನನ್ನ ಅಭಿಪ್ರಾಯದ ತಾತ್ಪರ್ಯ ಏನಂದ್ರೆ , ಅದರ ಕಾಲ್ಬೆರಳುಗಳ ಮೇಲೆ ಬೆಳೆದಿರುವ ಚಿಕ್ಕದಾದ, ಸಸಿಯನ್ನ ಸುಮಾರು ಮೂವತ್ತು ನಿಮಿಷಗಳಿಂದ ಬೆನ್ನು ಹತ್ತಿದ ಮೇಲೆಯೂ ಸಹ ಆ ಓತಿಯ ಮೇಲೆ ಬೆಳೆದಿರುವ ಹುಲ್ಲು ಒಂದಿಷ್ಟು ಅಲುಗಾಡದೆ ಇದ್ದದ್ದು ವಿಸ್ಮಯವೇ ಸರಿ.
ನಾವು, ಕಣ್ಣಾರೆ ಕಂಡದ್ದು ನಿಜವಿದ್ದರು ಸಹ ವೈಜ್ಞಾನಿಕ ದೃಷ್ಟಿಕೋನದಿಂದ ನೋಡೋ ದಾದ್ರೆ ಹಲವರ ತಜ್ಞರ ಅಭಿಪ್ರಾಯಗಳು ಬೇರೆ ಬೇರೆನೇ. ಹಾಗಾಗಿ, ಕೆಲ ತಜ್ಞರು ಊಹಾಪೋಹಗಳಿಗೆ ಹೆಚ್ಚಾಗಿ ಪ್ರಾಮುಖ್ಯತೆ ಕೊಡುವುದಿಲ್ಲ, ಬದಲಾಗಿ ವೈಜ್ಞಾನಿಕ ಕುರುಹುಗಳ ಆಧಾರದ ಮುಖಾಂತರವೇ ಪತ್ತೆ ಹಚ್ಚಬೇಕಾಗುತ್ತದೆ. ಅಂದ ಹಾಗೆ, ಅದಕ್ಕೆಲ್ಲ ನಾವು ಹಲವಾರು ರೀತಿಯಲ್ಲಿ ಮತ್ತು ವಿಭಿನ್ನ ವಿಧಾನದ ಮಾದರಿಗಳಲ್ಲಿ ಫೋಟೋ ಮತ್ತು ದೃಶ್ಯಾವಳಿಯನ್ನು ಸಂಗ್ರಹಿಸಬೇಕಾಗುತ್ತೆ. ಕೆಲವೊಂದು ತಜ್ಞರ ಸಿದ್ಧಾಂತ, ದೃಷ್ಟಿಕೋನ, ವಿಶ್ಲೇಷಣೆ, ಸಮರ್ಪಕವಾಗಿದ್ದರು ಸಹ ಒಂದೊಂದು ಅಂಶವನ್ನು ಸಹ ತಾಳೆ ಹಾಕಿ ವಿಚಾರ ಮಾಡ್ತಾರೆ ಹೀಗೆ ಬೆಳೆಯಲು ಕಾರಣ? ಏನಿರಬಹುದು. ಅಥವಾ, ಗಮನಿಸಿದಂತಹ ವ್ಯಕ್ತಿಗಳ ಮಾಹಿತಿಯು ಕೂಡ ತಪ್ಪಾಗಿರಬಹುದು. ಅಥವಾ, ಅದರ ದೇಹದ ಮೇಲೆ ಯಾವುದೋ ಹೂವು ಅಂಟಿಕೊಂಡಿರಬಹುದು. ಅಥವಾ, ಅದರ ಚರ್ಮದ ಅಡಿಯಲ್ಲಿ ಯಾವುದೇ ಹುಲ್ಲು ಸಿಕ್ಕಿ ಹಾಕಿ ಕೊಂಡಿರಬಹುದೆ? ಅಥವಾ, ಹವಾಮಾನದ ವೈಪರೀತ್ಯದ ಏರುಪೇರಿನಿಂದ ಏನಾದ್ರು ವ್ಯತ್ಯಾಸ ಆಗಿರಬಹುದೇನೆಂದು, ಹಲವು ರೀತಿಯಲ್ಲಿ ಶೋಧಿಸುತ್ತಾರೆ. ವೈಜ್ಞಾನಿಕವಾಗಿ ಬರೆದಿರ ತಕ್ಕಂತಹ ಸಂಶೋಧನಾ ಲೇಖನಗಳಲ್ಲಿ ಈ ಮೊದಲು, ಈ ರೀತಿಯ ಯಾವುದಾದರೂ ವಿಷಯದ ಕುರಿತಾಗಿ ಎಲ್ಲಿಯಾದರೂ ಪ್ರಕಟವಾಗಿದೆಯಾ ಎಂದು ಹುಡುಕುತ್ತಾರೆ.
ಹೀಗೆ ಈ ಎಲ್ಲಾ ತುಲನಾತ್ಮಕ ವೈಜ್ಞಾನಿಕ ತಳಹದಿಯ ಮೇಲೆ ತಜ್ಞರು ಹೆಚ್ಚು ಹೆಚ್ಚಾಗಿ ಗಮನ ಹರಿಸುವರು. ಹಂಗಾದ್ರೆ ಸರ್.. ‘’ಕಣ್ಣಾರೆ ಕಂಡ್ರು ಪ್ರಮಾಣಿಸಿ ನೋಡು’’ ಅಂತಾರಲ್ಲ ಇದೆ ಅನ್ರಿ. ನೋಡಿ ಮೋನಿಷ, ನಾವೆಲ್ಲ ನೋಡಿದ್ದು ನಿಜವಿದ್ದರು, ಸಹ ಈ ಎಲ್ಲಾ ಅಂಶಗಳು ಒಂದಕ್ಕೊಂದು ಪರಸ್ಪರ ಸರಿಯಾಗಿ ಜೋಡಣೆ ಆದ್ರೆ ಮಾತ್ರ ಈ ನಮ್ಮ ಸೈಟಿಂಗಿಗೆ ಬೆಲೆ ಬರೋದು.
ಒಟ್ಟಿನಲ್ಲಿ, ನನ್ನ ಪ್ರಕಾರ ಪ್ರಕೃತಿಯಲ್ಲಿ ಹಲವಾರು ಬಗೆಯ ನಿಗೂಢತೆ, ವಿಸ್ಮಯಗಳು, ಪ್ರತಿದಿನವು ಹೊರ ಬರುತ್ತಲೇ ಇರುತ್ತವೆ. ನಾವು ಯಾವಾಗಲು ಸಂಯಮದಿಂದ ವಿಸ್ಮಯಗಳನ್ನು ಕಣ್ತುಂಬ ನೋಡಿ, ಆನಂದ ಪಡಬೇಕಷ್ಟೆ. ಗೊತ್ತಾಯಿತೇನ್ರಿ ಮೋನಿಷ, ಈಗ ನಾವು ಮುಂದೆ ಸಾಗೋಣವೆ ಎಂದು ಹೇಳುತ್ತ ನಮ್ಮ ಪ್ರಯಾಣವನ್ನು ಮಂದಹಾಸದ ಜಯಭೇರಿ ಮೊಳಗಿಸುತ್ತ ಹೊರಟು ನಿಂತೆವು.
ಮುಕ್ತಾಯ...