ಲೇಖನ: ಆರ್. ರಘುರಾಮ್
ನವೆಂಬರ್ ಮಾಹೆಯ ಮಧ್ಯೆಭಾಗದ ಒಂದು ದಿನ ಬಂಡೀಪುರದಿಂದ ಎಲಚೆಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ನನಗೆ ಯೋಚನೆಗೆ ಬಂದಿದ್ದು ಒಂದು ಮುದ್ದಾದ ಆನೆಮರಿ ಮತ್ತು ಅದರ ತಾಯಿ. ಸಾಮಾನ್ಯವಾಗಿ ಎಲಚೆಟ್ಟಿ ಗ್ರಾಮ ರಸ್ತೆಯ ಇಕ್ಕೆಲಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ದೈತ್ಯ ಪ್ರಾಣಿಗಳು ಅಂದೇಕೋ ಕಾಣಲೇ ಇಲ್ಲ. ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ ನನ್ನ ಕಣ್ಣುಗಳು ಆ ಪ್ರಾಣಿಗಳನ್ನೇ ಹುಡುಕುತ್ತಿದ್ದವು. ಆಗ ಆನೆಗಳ ಬದಲಿಗೆ ನನ್ನ ಗಮನಕ್ಕೆ ಬಂದಿದ್ದು ಮುತ್ತುಗದ ಹೂವುಗಳು. ಹಳದಿ ಮಿಶ್ರಿತ ಕೆಂಪು ವರ್ಣದ ಹೂವುಗಳು ರಸ್ತೆಯ ಅಕ್ಕ-ಪಕ್ಕದ ಮರಗಳಲ್ಲಿ ಅರಳಿ ಕಂಗೊಳಿಸುತ್ತಿದ್ದವು.
ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ ಹೂಬಿಡುವ ಈ ಮರಗಳು ಅವಧಿಗೆ ಮುನ್ನವೇ ನವೆಂಬರನಲ್ಲೇ ಹೂಬಿಟ್ಟಿದ್ದವು. ಇದರ ಕಾರಣಕ್ಕಾಗಿ ತವಕಿಸುತ್ತಿದ್ದ ನಾನು ಬಂಡೀಪುರ ಅರಣ್ಯ ಪ್ರದೇಶ ಮುಗಿದ ಮೇಲೆ ಸಿಗುವ ವಿಂಡ್ ಫ್ಲವರ್ ರೆಸಾರ್ಟ್ ಬಳಿ ಇರುವ ಕುಮಾರನ ಟೀ ಅಂಗಡಿಯಲ್ಲಿ ಕುಳಿತು ಯೋಚಿಸತೊಡಗಿದೆ. ಈ ವರ್ಷದ ಮುಂಗಾರು ಮಳೆ ಕೊರತೆ, ಅಕ್ಟೋಬರನಲ್ಲಿನ ಸ್ವಲ್ಪ ಅಧಿಕ ಹಿಂಗಾರು ಮಳೆ ಅಥವಾ ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳು ಇದಕ್ಕೆ ಕಾರಣ ಇರಬಹುದೆಂದು ಯೋಚಿಸುತ್ತಿರುವಾಗಲೇ ಹಿರಿಯರಾದ ಮತ್ತು ಮಂಗಲ ಗ್ರಾಮದವರಾದ ಶ್ರೀ ಮಹದೇವಪ್ಪನವರ ಆಗಮನವಾಯಿತು.
ಹಾಗೆಯೇ ರೂಢಿಯಂತೆ ಲೋಕಾಭಿರಾಮ ಮುಗಿದ ನಂತರ ಮುತ್ತುಗ ಅವಧಿಗೆ ಮುನ್ನವೇ ಹೂವು ಬಿಡಲು ಕಾರಣವೇನೆಂದು ಅವರನ್ನು ಕೇಳಿದೆ. ಈ ಪ್ರಶ್ನೆಗೆ ಕೊಟ್ಟಂತಹ ಅವರ ಉತ್ತರ ಆಶ್ಚರ್ಯ ತಂದಿತು. ಅದೇನೆಂದರೆ “ ಬಿಸಿಲ ಕರೆಯುತ್ತಿದೆ ಮುತ್ತುಗ”. ಈ ಒಗಟಾದ ಮಾತುಗಳನ್ನು ವಿವರಿಸಲು ಕೋರಿದ ನಂತರ ಅವರು, “ಗ್ರಾಮೀಣ ಭಾಗದ ಜನರ ನಂಬಿಕೆಯಂತೆ ಮುತ್ತುಗದ ಮರಗಳು ಅಕಾಲಿಕವಾಗಿ ಹೂವು ಬಿಟ್ಟರೆ ಮುಂಬರುವ ಬೇಸಿಗೆಯಲ್ಲಿ ಬಿರು ಬಿಸಿಲು ಕಾಡುತ್ತದೆ. ಈ ಮಾತು ಸತ್ಯ ಸಾರ್, ಹಿಂದೆಯೂ ಒಂದೆರಡು ಬಾರಿ ಹೀಗಾದದ್ದನ್ನು ನಾವು ಕಂಡಿದ್ದೇವೆ, ಈ ಬಾರಿಯೂ ಖಂಡಿತ ಅಧಿಕ ಬಿಸಿಲಿನ ತಾಪ ಇರುತ್ತದೆ ನೋಡುತ್ತಿರಿ ಎಂದು ವಿವರಿಸಿದರು.
ಈ ರೀತಿಯ ಗ್ರಾಮೀಣ ಭಾಗದ ಜನರ ನಂಬಿಕೆಗಳು ಕೆಲವು ಸಂದರ್ಭಗಳಲ್ಲಿ ನಿಜ ಎನಿಸುತ್ತವೆ. ಕಪ್ಪೆಗಳ ಕೂಗು ಮಳೆ ಕರೆಯುತ್ತದೆ, ಗೂಬೆಗಳ ಕೂಗು ಸಾವಿನ ಸೂಚನೆ ಹೀಗೆ ಹಲವಾರು ನಂಬಿಕೆಗಳು. ಅದೇನೇ ಇದ್ದರೂ “ ಬಿಸಿಲ ಕರೆಯುತ್ತಿದೆ ಮುತ್ತುಗ” ಎಂಬ ಹೊಸ ವಿಚಾರ ತಿಳಿದು ನಂಬಿಕೆಗಳು ನಿಜವಾಗುತ್ತವೆಯೇ? ಎಂಬ ಪ್ರಶ್ನೆಯೊಂದಿಗೆ ಹಿಂದಿರುಗಿದೆ.
Photo credits: Rujan Sarkar (Cover)