(ಭಯ, ಕುತೂಹಲ, ಹಾಸ್ಯ)
ಲೇಖಕರು: ಸತೀಶ ಗಣೇಶ ನಾಗಠಾಣ
ಅಬ್ಬಬ್ಬ... ವಾಹ್! ಅದ್ಭುತ ಸೌಂದರ್ಯಯದ ಕೌತುಕ ಖಜಾನೆಯನ್ನ ತನ್ನೊಳಗೆ ಭದ್ರವಾಗಿ ಅಡಗಿಸಿಕೊಂಡಿರುವ ದಟ್ಟಮರಗಳ ದಂಡಕಾರಣ್ಯದ ಸುತ್ತ ಒಂದು ಮಣ್ಣಿನ ರಸ್ತೆಯ ಮಧ್ಯೆ ಸಲೀಸಾಗಿ ಜೀಪನ್ನ ಚಲಾಯಿಸಿಕೊಂಡು ಸಾಗುತ್ತಿದ್ದೆವು.
ಆಹಾ! ಇಂತಹ ದೃಶ್ಯವನ್ನ ನಾನೆಲ್ಲೂ ಕಂಡೇ ಇಲ್ಲ. ವಿಸ್ಮಯ ಜಗತ್ತಿನ ಪರಕಾಯ ಪ್ರವೇಶವೆಂದರೆ ಇದೇ ಎಂದೆನಿಸುತ್ತಿತ್ತು.
ನೋಡನೋಡುತ್ತ ಕಾನನ ಲೋಕದ ಪ್ರಪಂಚದ ಕೋಟೆಯೊಳಗೆ ಸಾಗುತ್ತಿದ್ದೆವು. ಮೈಮನ ರೋಮಾಂಚನಗೊಳಿಸುವಂತಹ ಜಾಗವಿದು. ‘ಭಲೇ ಭಲೇ ಚಾಂಗಭಲೇ’ ಎಂದು ಉದ್ಗರಿಸುತ್ತಿರಬೇಕಾದ್ರೆ ಪಕ್ಕದಲ್ಲಿದ್ದ ಅಶ್ವಿನ ಇದ್ದಕಿದ್ದಂತೆ ಬ್ರೇಕ್ ಒತ್ತಿದ್ದ ರಭಸಕ್ಕೆ ನನ್ನ ಮುಖ ಹೋಗಿ ಜೀಪಿನ ಗ್ಲಾಸಿಗೆ ಲಬಕ್ಕಂತ ಹೋಗಿ ಅಂಟಿಕೊಂಡಿತು!
‘ಎಪ್ಪೋ! ಸದ್ಯ ಹಲ್ಲು ಮುರಿಯಲಿಲ್ಲ, ದೇವರು ದೊಡ್ಡವನು!’ ಎನ್ನುತ್ತ, “ನಿಧಾನ ರೀ!” ಎಂದು ಕಿರುಧ್ವನಿಯಲ್ಲಿ ಒದರುತ್ತ ಕಂಬ್ಳಿಹುಳದ ಹಾಗೇ ಒದ್ದಾಡುತ್ತಿರಬೇಕಾದ್ರೆ, ಅಶ್ವಿನ ಮುಖದಲ್ಲಿದ್ದ ಮಂದಹಾಸದ ನಗು ಮಾಯವಾಗಿ ಆತಂಕದ ಛಾಯೆ ಎದ್ದು ಕಾಣುತ್ತಿತ್ತು. ಪಕ್ಕದಲ್ಲಿದ್ದ ನಾನು, ‘ಸಾವಕಾಶಪ್ಪಾ, ಶಿವಾ! ಇದು ಮೊದಲೇ ಕಾಡು. ಅದರಾಗ ನೀವು ಹಿಂಗ ಗಾಡಿ ಓಡಿಸಿದ್ರ ನಿಮ್ಮ ಬಾಜುಕ ಕುಂತವ್ರ ಕಥಿ ಏನಾಗಿರ ಬ್ಯಾಡಾ ಹೇಳ್ರಿ ನೋಡೋಣ! ಸ್ವಲ್ಪಾರ ಯೋಚನೆ ಗೀಚನೆ ಇರ್ಲಿಪಾ ಅಣ್ಣಾ! ನಿಮ್ಮ ಊರಾಗಿನ ಟಾರು ರಸ್ತೆ ಅಲ್ರಿಪಾ, ನಿಧಾನವಾಗಿ ಓಡಿಸಬೇಕಪ್ಪ’ ಎಂದು ಕೈಸನ್ನೆಯಿಂದ ತೋರಿಸುತ್ತಿರುವಾಗ ಒಂದು ಪುಟ್ಟ ಆನೆ ಮರಿಯು ರಸ್ತೆ ಮಧ್ಯೆ ಆಟವಾಡುತ್ತ ನಿಂತಿದೆ!
ಸಂತೋಷದ ಸುರಿಮಳೆ ಒಮ್ಮಲೆ ನೆತ್ತಿಯ ಮೇಲೆ ಭೋರ್ಗರೆದಂತಾಯಿತು! ಅಲೆಲೆ.. ಆನೆ ಮರಿ! ಆಗ, ನನಗೆ…
‘ಆನೆ ಬಂತೊಂದಾನೆ
ಯಾವೂರ್ ಆನೆ?
ಬಿಜಾಪುರದಾನೆ
ಇಲ್ಲಿಗ್ಯಾಕೆ ಬಂತು?
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು
ಚಿಕ್ಕಾನೆ ಬೇಕಾ?
ದೊಡ್ಡಾನೆ ಬೇಕಾ?’
ಎಂಬ ಹಾಡನ್ನ ನಾನು ಚಿಕ್ಕವನಿದ್ದಾಗ ನನ್ನ ಅವ್ವ ಮೊಳಕಾಲ ಮೇಲೆ ನನ್ನನ್ನ ಕೂಡಿಸಿಕೊಂಡು ಹಾಡುತ್ತಿದ್ದ ಗೀತೆ ನೆನಪಿಗೆ ಬಂತು.
ದೈತ್ಯಕಾರದ ಹೆಣ್ಣಾನೆಯ ಮತ್ತು ಅದರ ಪುಟ್ಟ ಮರಿ ಆನೆಯ ತುಂಟಾಟಗಳನ್ನು ತದೇಕ ಚಿತ್ತದಿಂದ ಗಮನಿಸುತ್ತಿರುವ ದೃಶ್ಯ, ಭದ್ರಾ ಅಭಯಾರಣ್ಯ | ಚಿತ್ರ ರಚಿಸಿದವರು - ಕೃಷ್ಣಾ, ಸಾತಪೂರ.
“ಒಂದೇ ಆನೆ ಇರಬಹುದಂತ ಅನ್ನಿಸುತ್ತಿದೆ ಅಲ್ಲವೆ ಅಶ್ವಿನ?” ಎಂದು ನಿಧಾನವಾಗಿ ಹೇಳುತ್ತಿರಲು ಆ ಆನೆಮರಿಯು ಪುಟ್ಟದಾದ ತನ್ನ ತೆಲೆಯನ್ನು ಎತ್ತಿ ಅಲ್ಲಾಡಿಸುತ್ತ ರಭಸದಿಂದ ಅತ್ತಂದಿತ್ತ ಓಡಾಡುತ್ತಿದೆ. ಪುಟ್ಟಪುಟ್ಟ ಹೆಜ್ಜೆ ಹಾಕುತ್ತ ಓಡೋಡಿ ಬಂದು ತನ್ನ ಸೊಂಡಿಲ್ಲನ್ನು ಮೇಲಕ್ಕೆ ಕೆಳಕ್ಕೆ ಮಾಡುತ್ತ ಜೀಪನ್ನು ತನ್ನ ಪುಟ್ಟ ಪುಟ್ಟ ಸೊಂಡಿಲಿನಿಂದ ಮೂಸಿ ಮೂಸಿ ಮುಟ್ಟಿ ಮುಟ್ಟಿ ನೋಡುತ್ತಿದೆ. ನಾವೆಲ್ಲ ಅವಾಕ್ಕಾಗಿ ಜೀಪಿನಲ್ಲಿ ಕುಳಿತು ನೋಡುತ್ತಿರಬೇಕಾದ್ರೆ ಅದರ ಪುಟ್ಟಪುಟ್ಟ ಕಾಲುಗಳ ಮುದ್ದಾದ ಓಟ ಮನಸ್ಸಿಗೆ ಬಹಳ ಹರುಷ ತಂದುಕೊಡುತ್ತಿತ್ತು.
“ಇಲ್ಲೇ ಸ್ವಲ್ಪ ಕಾಯೋಣ ರೀ, ನೋಡೋಣ, ತಾಯಿ ಆನೆ ಇಲ್ಲೇ ಎಲ್ಲೋ ಇರಬಹುದು,” ಎಂದು ಗೊಣಗುತ್ತಿರಬೇಕಾದ ಸಂದರ್ಭದಲ್ಲಿ, “ಅಲ್ಲಾ ಆ ತಾಯಿ ಆನೆಗೆ ಬುದ್ಧಿ ಬೇಡವೇನ್ರೀ ಪಾಪ! ಮಗೂನ ಬಿಟ್ಟು ಎಲ್ಲೋ ಊರು ಸುತ್ತಕ್ಕೆ ಹೋಗಿದೆ ನೋಡ್ರಿ ಸರ್,” ಅಂತ ಅಶ್ವಿನ ಮೆಲುಧ್ವನಿಯಲ್ಲಿ ಗೋಗೊರೆಯುತ್ತಿದ್ದಾಗ ಪಕ್ಕದಲ್ಲಿದ್ದ ನಾನು, “ಹಾಗೇನೂ ಇಲ್ಲ ಅಂತ ಅನ್ನಿಸುತ್ತೆ, ಇಲ್ಲೇ ಎಲ್ಲೋ ಹುಲ್ಲು ಮೇಯ್ತಾ ಇರುತ್ತೆ. ಅಷ್ಟಕ್ಕು ನಾವು ಈ ವಿಷಯದಲ್ಲಿ ಭಾಳ ಜಾಗರೂಕರಾಗಿರಬೇಕು ರೀ. ಹೇಳಲಿಕ್ಕಾಗುವುದಿಲ್ಲ, ಪುಸಕ್ ಅಂತ ಬಂದು ದಾಳಿ ಮಾಡಿಬಿಡ್ತವೆ, ಇಲ್ಲೇ ಎಲ್ಲೋ ಸುತ್ತಾಡುತ್ತಿರುತ್ತವೆ. ಸಾಧ್ಯವಾದಷ್ಟೂ ನಾವು ನಮ್ಮ ಕಣ್ಣುಗಳನ್ನ ಹದ್ದಿನ ಕಣ್ಣುಗಳಂತೆ ಸೂಕ್ಷ್ಮವಾಗಿ ನಿಗಾ ಇಡುತ್ತ ಹುಷಾರಾಗಿರೋಣ,” ಎಂದು ನಿಧಾನವಾಗಿ ನಮ್ಮ ಜೀಪನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಪಕ್ಕದಲ್ಲಿದ್ದ ಅಶ್ವಿನ ಜೀಪಿನ ಬಾಗಿಲಿನಿಂದ ಹೊರಗೆ ಇಣುಕಿ ಇಣುಕಿ ನೋಡುತಿರಲು ಮರಿ ಆನೆಯ ತಾಯಿಗೆ ನಮ್ಮ ಇರುವಿಕೆಯ ಸುಳಿವು ಗೊತ್ತಾಗಿ ಜೋರಾಗಿ ಘೀಳುಡುತ್ತ ಕಿರುಚಿಯೇ ಬಿಟ್ಟಿತು!
ಕಿರುಚಿದ ರಭಸಕ್ಕೆ ಎದೆ ಝಲ್ ಎಂದು ಕಿತ್ತುಕೊಂಡು ಬಂದಂತಾಯಿತು. ಕೈಕಾಲುಗಳಲ್ಲಿ ತರಂಗಗಳ ಕಂಪನ ಉಂಟಾಗಿ ಇನ್ನೇನು ಹೃದಯಾಘಾತವಾಗಿ ಕುಳಿತಲ್ಲಿಯೇ ಗೊಟಕ್ ಅಂದುಬಿಡುತ್ತೇವೆನೋ ಅನ್ನೋ ತರಹ ನಡುಕ ಶುರುವಾಯಿತು. ಒಣಗಿಹೋದ ಶುಂಠಿಕಾಯಿಯಂತಾದ ನಮ್ಮಿಬ್ಬರ ಮುಖಗಳನ್ನು ಒಬ್ಬರಿಗೊಬ್ಬರು ನೋಡಿಕೊಳ್ಳುತ್ತ ಗಾಬರಿಯಿಂದ ತುಸು ಹಿಂದೆ ಜೀಪನ್ನು ತೆಗೆದುಕೊಂಡು ಬಂದೆವು.
ಅಷ್ಟರಲ್ಲಿ, ಮರಿ ಆನೆಗೆ ತಾಯಿ ಆನೆ ಸೊಂಡಿಲಿನಿಂದ ಏನೋ ಸಂಜ್ಞೆ ಮಾಡಿತು. ಮರಿ ಆನೆಯು ಪುಟ್ಟಪುಟ್ಟ ಹೆಜ್ಜೆಗಳನ್ನು ಇಡುತ್ತ ಅಮ್ಮನ ಕಾಲುಗಳ ಹತ್ತಿರ ಹೋಗಿ ನಿಂತುಕೊಂಡು ನಮ್ಮತ್ತ ಸೊಂಡಿಲನ್ನು ತೋರಿಸುತ್ತ, ‘ಈ ಮಾನವರೇ ನೋಡಮ್ಮ ನನ್ನನ್ನು ಅಂಜಿಸಿದವರು’ ಅಂತ ಹೇಳಿದಂತೆ ಭಾಸವಾಯಿತು.
ನನಗಂತೂ ಎಷ್ಟು ಗಾಬರಿಯಾಯಿತೆಂದರೆ, ಆ ಪುಟ್ಟ ಚಾಲಾಕಿ ಆನೆಮರಿ ತನ್ನ ಅಮ್ಮನ್ನ ಹತ್ತಿರ ಹೋಗಿ ನಮ್ಮ ಜೀಪಿನ ಪರವಾಗಿ ಕಂಪ್ಲೇಂಟ್ ಮಾಡಿದಂತೆ ಅನ್ನಿಸಿತು. ಆ ತಾಯಿ ಆನೆ ತನ್ನ ಕಂದಮ್ಮನ ಅನುಕರಣೆಗಳನ್ನ ನೋಡುತ್ತ, ತಲೆಯಾಡಿಸುತ್ತ ತನ್ನ ಕಾಲಿನಿಂದ ನೆಲವನ್ನು ಜೋರಾಗಿ ಒದೆಯುತ್ತ ತನ್ನ ಆಕ್ರೋಶವನ್ನ ಹೊರಗೆ ಹಾಕುತ್ತಿತ್ತು.
‘ನೀ ಅಂಜದಿರು ನನ್ನ ಕಂದಮ್ಮ, ಮಾನವರಿಂದ ತುಂಬಿದ ಈ ಜೀಪಿಗೆ ನಾನು ಉತ್ತರ ಕೊಡುತ್ತೇನೆ’ ಎಂದು ತಾಯಿ ಆನೆ ತನ್ನ ಸೊಂಡಿಲಿನಿಂದ ಮರಿ ಆನೆಯ ಬೆನ್ನನ್ನು ನೇವರಿಸುತ್ತ ಸಮಾಧಾನ ಪಡಿಸುತ್ತಿತ್ತು.
ದೇವ್ರೇ! ಎಂತಹ ಅಜಾನುಬಾಹು ದೊಡ್ಡಾನೆ. ಈ ತರಹ ದೊಡ್ಡ ಹೆಣ್ಣಾನೆಯನ್ನು ನೋಡಿದ್ದು ಇದೇ ಮೊದಲು. ದೊಡ್ಡದಾದ ದೇಹ, ಕಾಲುಗಳು, ಬಾಲ, ದೊಡ್ಡದಾದ ಸೊಂಡಿಲು, ಕಣ್ಣುಗಳು, ಕಿವಿಯನ್ನ ನೋಡಿ, ೫,೦೦೦ ಮೀಲಿಯನ ವರ್ಷಗಳ ಹಿಂದೆ ಗತಿಸಿಹೋದ ದೈತ್ಯಗಜ (Mammoth – ಮ್ಯಾಮಥ್) ನೆನಪಿಗೆ ಬಂದಂತಾಯಿತು.
ಅಷ್ಟರಲ್ಲಿ, ಆ ತಾಯಿ ಆನೆ ಜೋರಾಗಿ ಇಡೀ ಕಾಡಿಗೆ ಕೇಳಿಸುವಂತೆ ಘೀಳಿಡುತ್ತಿತ್ತು. ಬಹುಶಃ ತನ್ನ ಬಳಗದವರನ್ನ ಒಂದುಗೂಡಿಸಿ ನಮ್ಮತ್ತ ಆಕ್ರಮಣ ಮಾಡಬೇಕೆಂಬ ಹಂಬಲದಿಂದಲೋ ಅಥವಾ ತನ್ನ ಕಂದಮ್ಮನ ರಕ್ಷಣೆಗೋಸ್ಕರ ದೂರವಿರಲು ಹೇಳಿದಂತೆ ನಮಗೆ ಸೂಚಿಸುತ್ತಿತ್ತು.
ಸ್ವಲ್ಪಸ್ವಲ್ಪವೇ ಜೀಪನ್ನು ಹಿಂದೆ ಸರಿಸುತ್ತ ಒಂದು ಅಂತರದಲ್ಲಿ ಬಂದು ಜೀಪಿನ ಒಳಗಿಂದ ಕುಳಿತಲ್ಲೇ ಆ ಆನೆಯ ಹಾವಭಾವಗಳನ್ನು ಗಮನಿಸುತ್ತ ನಮ್ಮ ಕಣ್ಣಗಳನ್ನು ಸ್ವಲ್ಪವೂ ಮಿಣುಕಿಸದೇ ನೋಡುತ್ತಿದ್ದೆವು. ಒಂದು ಜರೂರೂರೀ ಕೆಲಸದ ನಿಮಿತ್ತ ಬೇರೆ ಕಡೆ ಹೋಗಬೇಕಾಗಿದ್ದ ಸಮಯದಲ್ಲಿ ಸುದೈವವಶಾತ್ ಆ ದಿನ ಗಜರಾಣಿ ತನ್ನ ಮರಿ ಗಜರಾಜನೊಂದಿಗೆ ದರ್ಶನ ಕೊಟ್ಟುಬಿಟ್ಟಿತು.
“ಇನ್ನೇನು ಬಚಾವ್ ಆದ್ವಿ ರೀ ಅಶ್ವಿನ. ಆನೆ ದಾಳಿ ಮಾಡುವಂತಹ ಯಾವುದೇ ಸಾಧ್ಯತೆಗಳು ನನಗಂತೂ ಕಾಣಿಸುತ್ತಿಲ್ಲ. ಇನ್ನು ಸ್ವಲ್ಪ ಹಿಂದೆ ಹೋಗೋಣ, ನಂತರ ಆನೆ ಹೋದ್ಮೇಲೆ ಇಲ್ಲಿಂದ ಆದಷ್ಟು ಬೇಗ ಸರಸರ ಅಂತ ಹೊರಟುಬಿಡೋಣ,” ಎಂದೆ.
ಗಾಂಭೀರ್ಯದಿಂದ ಅಶ್ವಿನ, “ಓಕೆ ಸರ್, ನೀವು ಹೇಳಿದಂತಾಗಲಿ ಎನ್ನುವ ಅವರ ಮಾತು ಕೇಳಿದೊಡನೆ ಯುದ್ಧದಲ್ಲಿ ತಲ್ಲೀನನಾದ ಸೈನಿಕ ಕಮಾಂಡರಿನ ಮಾತಿಗೆ ಶರಣಾದಂತಿತ್ತು.
‘ಅಂತೂ ಇಂತೂ ಬಚಾವ್ ಆದ್ವಿ ನೋಡ್ರಿ, ಆದ್ರ ಈ ಆನೆ ಮಾತ್ರ ಈ ರಸ್ತೆ ಬಿಟ್ಟು ಹೋಗ್ತಾ ಇಲ್ವಲ್ಲ, ಸ್ವಲ್ಪ ಕಾಯೋಣ. ಅದಕ್ಕೂ ಸ್ವಲ್ಪ ಸಮಯ ಕೊಡೋಣ’ ಅಂತ ನಿರ್ಧರಿಸಿದೆವು.
ಕೈಗಡಿಯಾರದತ್ತ ಪ್ರತಿಕ್ಷಣವೂ ಕಣ್ಣು ಹಾಯಿಸುತ್ತ ನೋಡುತ್ತಿದ್ದರೂ ಆನೆ ಮಾತ್ರ ತನ್ನ ಜಾಗದಿಂದ ಸ್ವಲ್ಪವೂ ಹಿಂದೆಮುಂದೆ ಸರಿಯುತ್ತಿಲ್ಲ. ನಿಂತಲ್ಲೇ ನಿಂತುಬಿಟ್ಟಿದೆ. ಬರೋಬ್ಬರಿ ಮೂವತ್ತು ನಿಮಿಷ ಕಳೆದ ಮೇಲೆ ಆನೆಗೆ ಏನು ಯೋಚನೆ ಬಂತೋ, ತನ್ನ ಮರಿಯನ್ನ ಕರೆದುಕೊಂಡು ಕಾಡಿನೊಳಗೆ ಹೊರಡಲು ಸಿದ್ಧವಾಯಿತು. ನಾವೂ ಸಹ ರಸ್ತೆ ದಾಟಲು ಸಿದ್ಧರಾದೆವು.
ಇನ್ನೇನು ಕಾಡಿನೊಳಗೆ ಹೋದ ಹಾಗೆ ನಟಿಸಿದ ಆನೆ ಮತ್ತೆ ಅದೇ ಜಾಗದಲ್ಲಿ ಬಂದು ನಿಂತುಬಿಟ್ಟಿತು. ಆಗ ನಮ್ಮ ಪರಿಸ್ಥಿತಿ ಇಂಗು ತಿಂದ ಮಂಗನ ಹಾಗೆ ವಿಲವಿಲ ಅಂತ ಒದ್ದಾಡುತ್ತಿತ್ತು. ‘ಥತ್ ತೆರಿ ಕೇ, ಯಾವ ಬೂದಕುಂಬಳಕಾಯಿ ಆನೆ ರೀ ಇದು! ಮುಂದೆನೂ ಹೋಗಲ್ಲ, ಹಿಂದೆನೂ ಬರಲ್ಲ ಅಂತದೆ, ಏನ್ಮಾಡೋದು? ವಸಿ ಏನಾದ್ರೂ ಇಚಾರ ಗಿಚಾರ ಮಾಡಿ ನೋಡಿ ಈ ಆನೆನ ಹೆಂಗಪ್ಪ ಕಾಡಿನೊಳಕ್ಕೆ ಕಳ್ಸೋದು?’ ಅಂತ ಅಶ್ವಿನರವರ ನಾಟಿ ಭಾಷೆಯನ್ನ ಒಂಥರ ಕೇಳೊದರಲ್ಲಿ ಮಜಾ ಕೊಡುತಿತ್ತು.
“ಬೇರೆ ಯಾವುದಾದರೂ ದಾರಿ ಇದೆಯೇ ಇಲ್ಲಿಂದ ಹೋಗಲು ಅಶ್ವಿನ?”
“ಇದೆ, ಆದ್ರೆ ಆ ದಾರಿಗೆ ಹೋಗಬೇಕಂದ್ರೆ ಸಿಕ್ಕಾಪಟ್ಟೆ ಕಡಿದಾದ ದಾರಿ, ಹೋಗಲು ಖಂಡಿತ ಸುಲಭವಲ್ಲ.”
“ಹೌದಾ, ಹುಂ! ಒಂದ ಕೆಲಸ ಮಾಡೋಣ ಅಶ್ವಿನ. ಏನ್ ಕೆಲಸಾ ರೀ ಸರ್? ಆನೆ ಕಾಡಿನೊಳಗೆ ಹೋಗುವಷ್ಟರಲ್ಲಿ ನಾವು ಸಮಯ ಸಾಧಕರಂತೆ ಚಾಣಾಕ್ಷತನದಿಂದ ಇಲ್ಲಿಂದ ತಪ್ಪಿಸಿಕೊಳ್ಳಬೇಕು. ರೆಡಿನಾ ಹಾಗಾದ್ರೆ?”
“ರೆಡಿ ಸರ್!”
“ನೋಡಿ ಒಂದು ವಿಷಯ ನೆನಪಿನಲ್ಲಿಡಬೇಕು. ನಿಧಾನವಾಗಿ ಗಾಡಿ ಓಡಿಸಿ ಹತ್ತಿರ ಹೋದಂತೆ ಆನೆಯ ಮತ್ತು ನಮ್ಮ ಅಂತರವನ್ನು ಕಾಪಾಡಿಕೊಂಡು ಅದಕ್ಕೆ ಧಕ್ಕೆ ಆಗದಂತೆ ಇಲ್ಲಿಂದ ಪಲಾಯನ ಮಾಡುವುದೇ ನಮ್ಮ ಗುರಿ, ಓಕೆನಾ? ನೋಡಿ! ನೋಡಿ! ಆನೆ ಕಾಡಿನೊಳಗೆ ಹೋಗುತ್ತಿದೆ. ತಡ ಮಾಡಬೇಡಿ ಎಕ್ಸಲೇಟರ್ ಮೇಲೆ ಇಟ್ಟ ಕಾಲನ್ನು ಸ್ವಲ್ಪವೂ ಅಲುಗಾಡಿಸಬೇಡಿ! ಹೋಗ್ತಿದೆ, ಹೋಗ್ತಿದೆ! ಆನೆ ಒಳಗೆ ಒಳಗೆ… ಇನ್ನೇನು ಬಿಡಿ ಬಿಡಿ ಗಾಡಿ!” ಎಂದು ಹೇಳುತ್ತ ಹಂಗೂ ಹಿಂಗೂ ಮಾಡಿ ತಪ್ಪಿಸಿಕೊಂಡು ಹೊರಟಾಯಿತು.
‘ಅಬ್ಬಾ! ಬಚಾವ್’ ನಿಟ್ಟುಸಿರನ್ನು ಬಿಡುತ್ತ ಹೊರಡುತ್ತಿರಬೇಕಾದ್ರೆ ಅಶ್ವಿನ ಪಿಸುಗುಟ್ಟುತ್ತ, ಗುಮ್ಮನಗುಸುಕು ಥರ ಫಳ್ಳನೆ ಒಳಗೊಳಗೇ ನಗುತ್ತ, “ಅದ್ ಹೇಗ್ರೀ ಸರ್ ಅವಾಗ ಯಾವುದೊ ಹಾಡು ಹಾಡ್ತಿದ್ರಿ? ನಿಮ್ಮ ಊರಲ್ಲಿ ಆನೆಗಳಾ? ಎಲ್ಲಿಂದ ಬಂದವು? ನಿಮ್ಮ ಊರು ಸಂಪದ್ಭರಿತ ಕಾಡೇನು?” ಎಂದು ಕೇಳುತಿರಲು ಪಕ್ಕದಲ್ಲಿದ ನಾನು ಸೋಜಿಗವಾಗಿ ಉತ್ತರಿಸುತ್ತ ದಣಿವಾರಿಸಿಕೊಳ್ಳುತ್ತ ಹೇಳಿದೆ. “ನೋಡಿ! ನಮ್ಮ ಊರು ಪಕ್ಕಾ ಬಯಲುಸೀಮೆಯ ಪ್ರದೇಶ. ಆನೆ-ಗೀನೆ ಕಂಡು ಬರುವಂತಹ ಸಂಪದ್ಭರಿತ ಕಾಡುಗಳೇನೂ ಇಲ್ಲ. ಈ ಹಾಡಿನ ಇತಿಹಾಸ ನಿಮಗೆ ಗೊತ್ತೇ?” ಎಂದು ಪ್ರಶ್ನಿಸಿದೆ.
ಅಶ್ವಿನ “ನನಗೆ ಗೊತ್ತಿಲ್ಲ,” ಅನ್ನುತ್ತಿರುವಾಗ, “ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಇದು ರೀ. ಈಗ ಹೇಳ್ತಿನಿ ಕೇಳಿ. ಈ ಗೀತೆಯನ್ನ ಜಾನಪದ ಗೀತೆ ಅಥವಾ ಕಾಲ್ಪನಿಕ ಗೀತೆ ಅಂತಲೂ ನೀವೂ ಮತ್ತು ಬಹುತೇಕರೆಲ್ಲರೂ ಅಂದುಕೊಂಡಿರುತ್ತಾರೆ. ಆದ್ರೆ ಹಾಗೇನೂ ಇಲ್ಲ. ಈ ಹಾಡಿನ ಸಾರಾಂಶ ಬಹಳ ಸರಳವಾದದ್ದು. ಗಮನವಿಟ್ಟು ಕೇಳಿ ಹೇಳ್ತೀನಿ,” ಎಂದೆ.
“ಕ್ರಿ.ಶ. ೧೬ನೇ ಶತಮಾನದಲ್ಲಿ ಬಿಜಾಪುರ, ಬೀದರ, ಗೋಲ್ಕೊಂಡದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯ ಕಾಲವಾಗಿತ್ತು. ಆಗ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣ ದೇವರಾಯರ ಸಾಮ್ರಾಜ್ಯ ಭಾರತದಲ್ಲಿಯೇ ಅತ್ಯಂತ ಸಂಪದ್ಭರಿತ ರಾಜ್ಯವಾಗಿತ್ತು. ಶ್ರೀಕೃಷ್ಣ ದೇವರಾಯರ (೧೫೦೯-೨೯) ಕಾಲಾನಂತರ, ಅಳಿಯ ರಾಮರಾಯರ ಸಮಯದಲ್ಲೂ ರಾಜ್ಯ ವೈಭವದಿಂದ ಕೂಡಿತ್ತು. ಆಗ, ಬಹುಮನಿ ಸುಲ್ತಾನರ ಕೆಂಪಾದ ಕಣ್ಣು ಆಗರ್ಭ ಸಂಪದ್ಭರಿತ, ವೈಭವದಿಂದ ಕೂಡಿದ ವಿಜಯನಗರ ಸಾಮ್ರಾಜ್ಯದ ಮೇಲೆ ಬೀಳುತ್ತೆ.”
“ಈ ಸಂಪತನ್ನ ಹೇಗಾದ್ರೂ ಲೂಟಿ ಮಾಡಬೇಕಲ್ಲ ಎಂಬ ಹೊಂಚು ಹಾಕುತ್ತಿರಬೇಕಾದ್ರೆ, ಬಹುಮನಿ ಸುಲ್ತಾನರ ಒಕ್ಕೂಟ ೧೫೬೫ರಲ್ಲಿ ಬಿಜಾಪುರದಿಂದ (ಈಗಿರುವ ವಿಜಯಪುರ) ಸುಮಾರು ೮೦ ಕಿ.ಮೀ. ದೂರದ ಕೃಷ್ಣಾ ನದಿಯ ಬಳಿಯಲ್ಲಿರುವ ರಕ್ಕಸತಂಗಡಿಯಲ್ಲಿ ಜನವರಿ ೨೩ರಂದು ಅಳಿಯ ರಾಮರಾಯ ಮತ್ತು ಬಹುಮನಿ ಸುಲ್ತಾನರ ಮಧ್ಯೆ ತಾಳಿಕೋಟೆ ಎಂಬಲ್ಲಿ ಭಯಂಕರ ಕದನವಾಗುತ್ತದೆ. ಈ ಕದನದಲ್ಲಿ ರಾಮರಾಯರು ಮೃತರಾಗುತ್ತಾರೆ ಮತ್ತು ಬಹುಮನಿ ಸುಲ್ತಾನರ ಮುಂದೆ ವಿಜಯನಗರ ಸೈನ್ಯ ಕಂಗಾಲಾಗಿ ಸೋತು ಓಡಿ ಹೋಗುತ್ತದೆ.”
“ವಿಜಯನಗರ ಸಾಮ್ರಾಜ್ಯವನ್ನು ಗೆದ್ದ ಬಹಮನಿ ಸುಲ್ತಾನರು ಬೀಗುತ್ತಾರೆ ಮತ್ತು ಅಲ್ಲಿನ ಪ್ರಜೆಗಳನ್ನ ಹಿಂಸಿಸಿ ಕೊಲ್ಲುತ್ತಾರೆ. ಅಲ್ಲಿರುವ ಸಂಪತ್ತನ್ನ ಆನೆಗಳ ಮೇಲೆ ಹೊರಿಸಿ ಬಿಜಾಪುರಕ್ಕೆ ಸಾಗಿಸುತ್ತಾರೆ. ಅಪಾರ ಪ್ರಮಾಣದ ಸಂಪತ್ತನ್ನು ಸಾಗಿಸುತ್ತಿರಬೇಕಾದ್ರೆ ಆನೆಗಳು ಹೋದಂತಹ ದಾರಿಯುದ್ದಕ್ಕೂ ಮುತ್ತು-ರತ್ನ, ವಜ್ರ-ಹವಳ-ನಾಣ್ಯಗಳು ಬೀಳುತ್ತ ಹೋಗುತ್ತವೆ. ವಿಜಯನಗರ ಸಾಮ್ರಾಜ್ಯದ ಅವನತಿ ಹೇಗಾಯಿತೆಂದು ಅಲ್ಲಿನ ಪ್ರಜೆಗಳು ತಮ್ಮ ಮಕ್ಕಳಿಗೆ ಈ ಹಾಡಿನ ಮೂಲಕ ಹೇಳುತ್ತಿದ್ದರು. ಇದೇ ಈ ಗೀತೆಯ ತಾತ್ಪರ್ಯ, ಅರ್ಥವಾಗಿರಬೇಕಲ್ಲ ಅಶ್ವಿನ?” ಅಂತ ನಸುನಕ್ಕೆ. ಮುಂದೆ ಸಾಗಿದೆವು.
(ಮುಂದುವರೆಯುವುದು…)