ಕನ್ನಡಾನುವಾದ: ಸೌರಭಾ ರಾವ್
ಜಗತ್ತಿನೆಲ್ಲೆಡೆ ಮನುಷ್ಯ ಮತ್ತು ವನ್ಯಜೀವಿಗಳು ಸ್ಥಳ ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳುವ ವಿವಿಧ ರೀತಿಗಳು ಇಬ್ಬರ ನಡುವಿನ ಸಂಕೀರ್ಣವಾದ, ಬಲವಾದ ಸಂಬಂಧವನ್ನು ಮತ್ತು ಅದರ ನಿರಂತರತೆಯನ್ನು ಇತಿಹಾಸದುದ್ದಕ್ಕೂ ದೃಢಪಡಿಸುತ್ತಾ ಬಂದಿವೆ. ಮಹಾರಾಷ್ಟ್ರದ ವಾರ್ಲಿ ಬುಡಕಟ್ಟು ಜನರಲ್ಲಿ ಇಂತಹ ಸಂಬಂಧವು ದೊಡ್ಡ ಮಾರ್ಜಾಲದ ರೂಪದಲ್ಲಿರುವ ವಾಘೋಬಾ ಎಂಬ ದೈವವಾಗಿ ಪ್ರಕಟವಾಗುತ್ತದೆ. ಹುಲಿ ಮತ್ತು ಚಿರತೆ ಎರಡೂ ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ವಾಘೋಬಾ ಇವೇ ಮಾರ್ಜಾಲಗಳಿಂದ ರಕ್ಷಣೆ ನೀಡುವ ಶಕ್ತಿ ಎಂದು ವಾರ್ಲಿ ಜನ ಪೂಜಿಸುತ್ತಾರೆ. 'ಶೇರಿಂಗ್ ಸ್ಪೇಸಸ್ ಅಂಡ್ ಎಂಟ್ಯಾನ್ಗಲ್ಮೆಂಟ್ಸ್ ವಿಥ್ ಬಿಗ್ ಕ್ಯಾಟ್ಸ್ : ದ ವಾರ್ಲಿ ಅಂಡ್ ದೇರ್ ವಾಘೋಬಾ ಇನ್ ಮಹಾರಾಷ್ಟ್ರ, ಇಂಡಿಯಾ' ಎಂಬ ಶೀರ್ಷಿಕೆಯ ಅಧ್ಯಯನದಲ್ಲಿ ಸಂಶೋಧಕರು ವಾಘೋಬಾಗೆಂದೇ ಮೀಸಲಾಗಿರುವ 150 ಗುಡಿಗಳನ್ನು ದಾಖಲು ಮಾಡಿದ್ದಾರೆ. ರಮ್ಯಾ ನಾಯರ್, ಧೀ, ಓಂಕಾರ್ ಪಾಟೀಲ್, ನಿಖಿತ್ ಸುರ್ವೇ, ಅನೀಶ್ ಅಂಧೇರಿಯಾ, ಜಾನ್ ಡಿ. ಸಿ. ಲಿನ್ನೆಲ್ಲ್ ಮತ್ತು ವಿದ್ಯಾ ಆತ್ರೇಯಾ ಈ ಅಧ್ಯಯನ ನಡೆಸಿದ್ದು ಅದು ಫ್ರಾಂಟಿಯರ್ಸ್ ಆಫ್ ಕಾನ್ಸರ್ವೇಷನ್ ಸೈನ್ಸ್ ನಿಯತಕಾಲಿಕೆಯ ಹ್ಯೂಮನ್-ವೈಲ್ಡ್ ಲೈಫ್ ಡೈನ್ಯಾಮಿಕ್ಸ್ ವಿಶೇಷ ಸಂಚಿಕೆಯಾದ 'ಅಂಡರ್ಸ್ಟ್ಯಾಂಡಿಂಗ್ ಕೋಎಕ್ಸಿಸ್ಟೆನ್ಸ್ ವಿಥ್ ವೈಲ್ಡ್ ಲೈಫ್'ನಲ್ಲಿ ಇತ್ತೀಚಿಗೆ ಪ್ರಕಟವಾಗಿದೆ.
ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿ-ಇಂಡಿಯಾ (ಡಬ್ಲ್ಯೂಸಿಎಸ್-ಇಂಡಿಯಾ), ದ ನಾರ್ವೇಜಿಯನ್ ಇನ್ಸ್ಟಿಟ್ಯೂಟ್ ಫಾರ್ ನೇಚರ್ ರೀಸರ್ಚ್, ಇನ್ಲ್ಯಾಂಡ್ ನಾರ್ವೇ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ವಿಜ್ಞಾನಿಗಳು, ವೈಲ್ಡ್ ಲೈಫ್ ಕಾನ್ಸರ್ವೇಷನ್ ಟ್ರಸ್ಟ್-ನ ಬೆಂಬಲದಿಂದ ಈ ಅಧ್ಯಯನವನ್ನು ನಡೆಸಿದ್ದಾರೆ. 2018-19ರಲ್ಲಿ ಮಹಾರಾಷ್ಟ್ರದ ಮುಂಬೈ ಉಪನಗರ, ಪಾಲ್ಗಢ ಮತ್ತು ಥಾಣೆ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ನಡೆಸಲಾಯಿತು. ಜನಾಂಗ ವಿವರಣೆಯ (ಎಥ್ನೋಗ್ರಾಫಿಕ್) ವಿಧಾನದ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಯಿತು – ವಾಘೋಬಾ ಗುಡಿಗಳನ್ನು ದಾಖಲಿಸುವ ಕೆಲಸದ ಜೊತೆಗೆ ಸಂಶೋಧಕರು ಅರೆ-ವಿನ್ಯಾಸ ಸಂದರ್ಶನಗಳನ್ನು ನಡೆಸಿ ಪೂಜಾ ಸಮಾರಂಭಗಳಲ್ಲಿ ಜನರು ಭಾಗವಹಿಸುವುದನ್ನು ಗಮನಿಸಿದರು. ವಾಘೋಬಾ ಇತಿಹಾಸ, ಅದಕ್ಕೆ ಸಂಬಂಧಪಟ್ಟ ಹಬ್ಬಗಳು, ಆಚರಣೆಗಳು ಮತ್ತು ಸಂಪ್ರದಾಯಗಳು, ಮತ್ತು ವಾಘೋಬಾ ಮತ್ತು ಮನುಷ್ಯ-ಚಿರತೆಗಳ ನಡುವಿನ ಸಂಬಂಧ ಅಥವಾ ಹೊಂದಾಣಿಕೆಗಳ ಬಗ್ಗೆ, ವಾರ್ಲಿ ಜನರ ಜೀವನದಲ್ಲಿ ವಾಘೋಬಾದ ಪಾತ್ರವನ್ನು ಅನ್ವೇಷಿಸಲು ಪ್ರಶ್ನೆಗಳನ್ನು ಕೇಳಲಾಯಿತು.
ಒಂದು ವಾಘೋಬಾ ಕಲ್ಲಿನ ಗುಡಿ (ಚಿತ್ರಕೃಪೆ: ರಮ್ಯಾ ನಾಯರ್)
ವಾಘೋಬಾ ದೇವರನ್ನು ಪೂಜಿಸಿ ಅಗತ್ಯವಿರುವ ಆಚರಣೆಗಳನ್ನು ನಡೆಸಿದರೆ, ಅದರಲ್ಲೂ ವಾಘ್ಬರಸ್ ಎಂಬ ವಾರ್ಷಿಕ ಹಬ್ಬ ಮಾಡಿದರೆ, ಅದಕ್ಕೆ ಪ್ರತಿಯಾಗಿ ವಾಘೋಬಾ ನಂಬಿರುವ ಜನರನ್ನು ದೊಡ್ಡ ಮಾರ್ಜಾಲಗಳ ಜೊತೆ ಸ್ಥಳ ಹಂಚಿಕೊಳ್ಳುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆ ವಾರ್ಲಿ ಜನರಲ್ಲಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇಂತಹ ಸಂಬಂಧಗಳು ಮನುಷ್ಯರು ಮತ್ತು ಚಿರತೆಗಳಂತಹ ದೊಡ್ಡ ಮಾರ್ಜಾಲಗಳ ನಡುವೆ ಒಂದೇ ಭೂಪ್ರದೇಶದಲ್ಲಿ ಸ್ಥಳ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತವೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಈ ಪ್ರದೇಶದಲ್ಲಿರುವ ಸಂಸ್ಥೆಗಳ ಹರಹು ಮತ್ತು ಮಧ್ಯವರ್ತಿಗಳು ವಾಘೋಬಾ ಎಂಬ ಸಾಮಾಜಿಕ ಸಂಸ್ಥೆ ಮಾನವ-ಚಿರತೆ ಸಂಬಂಧಕ್ಕೆ ಯಾವ ರೀತಿಗಳಲ್ಲಿ ಪೂರಕವಾಗಿದೆ ಎಂದೂ ಈ ಅಧ್ಯಯನ ಅವಲೋಕಿಸಿದೆ.
ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ವಾಘೋಬಾ ಪೂಜಾ ಸಮಾರಂಭ ನಡೆಯುತ್ತಿರುವುದು (ಚಿತ್ರಕೃಪೆ: ರಮ್ಯಾ ನಾಯರ್)
ಸ್ಥಳೀಯ ಜನರ ನಂಬಿಕೆಯಲ್ಲಿ ಇಂತಹ ಸಹಿಷ್ಣುತೆ ಹೊಂದಿರುವ ಪಾರಂಪರಿಕ ಆಚರಣೆಗಳು ಇಂದಿನ ವನ್ಯಜೀವಿ ಸಂರಕ್ಷಣೆಯ ಪರಿಸ್ಥಿತಿಗೆ ಅಮೂಲ್ಯವಾದದ್ದು ಎಂದು ಅಧ್ಯಯನದ ಲೇಖಕರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ, ಅರಣ್ಯ ಇಲಾಖೆಯವರಲ್ಲಿ, ವನ್ಯಜೀವಿಶಾಸ್ತ್ರಜ್ಞರಲ್ಲಿ, ಮತ್ತು ವಾರ್ಲಿ ಸಮುದಾಯದ ಹೊರಗಿನ ಸ್ಥಳೀಯರು ಸೇರಿದಂತೆ ಈ ಪ್ರದೇಶದಲ್ಲಿರುವ ಇತರ ಸಂಸ್ಥೆಗಳಲ್ಲಿ, ಜನರಲ್ಲಿ ಇಂತಹ ಸಾಂಸ್ಕೃತಿಕ ಪ್ರತೀಕಗಳ ಬಗ್ಗೆ ಅರಿವು ಇರಬೇಕು ಮತ್ತು ಅದಕ್ಕೆ ಅವರು ಸಂವೇದನಾಶೀಲರಾಗಿರಬೇಕು. ಏಕೆಂದರೆ ವಾರ್ಲಿ ಜನ ಜೀವಶಾಸ್ತ್ರದ ಹಿನ್ನೆಲೆಯಲ್ಲಿ ಮಾತ್ರ ಪ್ರಾಣಿಯೊಂದರ ಜೊತೆ ಇಂತಹ ಸಂಬಂಧ ಹೊಂದಿಲ್ಲ, ವಾಘೋಬಾ ಅದನ್ನು ಮೀರಿದ ಸಹಬಾಳ್ವೆಯ ಪ್ರತೀಕ.
ಮಾನವ-ವನ್ಯಜೀವಿ ಸಂಬಂಧಗಳನ್ನು ನಾವು ಅರ್ಥ ಮಾಡಿಕೊಳ್ಳುವ ಮತ್ತು ಅದರಿಂದ ಒಮ್ಮೊಮ್ಮೆ ಉಂಟಾಗುವ ಸಂಘರ್ಷಕ್ಕೆ ಪರಿಹಾರ ಹುಡುಕುವ ವಿಧಾನಗಳ ಹರಹನ್ನು ಹಿಗ್ಗಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಸ್ಥಳೀಯ ಸಂಸ್ಥೆಗಳು ಮಾನವ ಮತ್ತು ವನ್ಯಜೀವಿಗಳ ಸಹಬಾಳ್ವೆಗೆ, ಸಂಘರ್ಷದ ಹೊರತಾಗಿಯೂ ಹೇಗೆ ತಮ್ಮ ಕೊಡುಗೆ ನೀಡುತ್ತವೆ, ಮತ್ತು ಸಂಘರ್ಷ ಎದುರಾದಾಗ ಅದಕ್ಕೆ ಹೇಗೆ ಪರಿಣಾಮಕಾರಿ ಪರಿಹಾರಗಳನ್ನು ಹುಡುಕುತ್ತವೆ ಎಂಬುದರ ಮೇಲೆ ಅಧ್ಯಯನ ಬೆಳಕು ಚೆಲ್ಲುತ್ತದೆ.
ವನ್ಯಜೀವಿಗಳಿಂದಾಗಿ ಜನರು ಅನುಭವಿಸುವ ನಷ್ಟವನ್ನು ತಡೆಯುವ ಮತ್ತು ಪರಿಹಾರ ಹುಡುಕುವ ಸ್ಥಳೀಯ ವ್ಯವಸ್ಥೆಗಳು ಇನ್ನೂ ಅನೇಕ ಭೂಪ್ರದೇಶಗಳಲ್ಲಿ ಮತ್ತು ಇತರ ಅನೇಕ ಸಂಸ್ಕೃತಿಗಳಲ್ಲಿ ಇರಬಹುದು. ವನ್ಯಜೀವಿ ಸಂರಕ್ಷಣೆಗಾಗಿ ಸ್ಥಳೀಯ ಸಮುದಾಯಗಳನ್ನು ಒಳಗೂಡಿಸಿಕೊಳ್ಳಲು ಮತ್ತು ಅವರ ಸಹಭಾಗಿತ್ವ ಪಡೆಯಲು ಮಧ್ಯಪ್ರವೇಶಿಸುವ ಯಾರೇ, ಯಾವುದೇ ಸಂಸ್ಥೆಯಾದರೂ, ಆಯಾ ಪ್ರದೇಶಗಳಲ್ಲಿ ಸಂಸ್ಥೆಗಳ ಪ್ರವೇಶಕ್ಕೆ ಮುನ್ನವೇ ವನ್ಯಜೀವಿಗಳ ಜೊತೆಗಿನ ಸ್ಥಳೀಯ ಜನರ ಸಂಬಂಧಕ್ಕೆ ಅದರದ್ದೇ ಆದ ಇತಿಹಾಸವಿರುತ್ತದೆ ಎಂದು ಮನಗಾಣುವುದು ಅತ್ಯವಶ್ಯಕ.