(ಮುಂದುವರೆದ ಭಾಗ…)
ಲೇಖಕರು: ಸತೀಶ ಗಣೇಶ ನಾಗಠಾಣ
ದಂಡಕಾರಣ್ಯದ ಸುತ್ತ ಚಲಿಸುವ ಹೆಜ್ಜೆಗಳು!
(ಭಯ, ಕೂತುಹಲ, ಹಾಸ್ಯ)
ಎಷ್ಟೊಂದು ಚಳಿ ಇದೆ ಇವತ್ತು ಅಬ್ಬಾ! ಮೈ ಕೊರೆಯುವಂತಹ ಚಳಿ, ಇಂತಹ ಚಳಿ ಮೈಯಲ್ಲಿ ಹೊಕ್ಕಿದ್ದರಿಂದ ಗಡಗಡ ನಡಗುತ್ತ ಮಾಡುವ ನೃತ್ಯ ನೋಡೋರ ಕಣ್ಣಿಗೆ ಹಾಸ್ಯ ಉಂಟು ಮಾಡಿದ್ದಂತೂ ಸತ್ಯ. ಅದೋ ಬ್ರಹ್ಮಗಿರಿ ವನ್ಯಜೀವಿ ಅರಣ್ಯಧಾಮ ಶೋಲಾ ಕಾಡುಗಳಿಂದ ಆವರಿಸಿದ ದೊಡ್ಡ ಕಾನನ. ಈ ಶೋಲಾ ಕಾಡುಗಳನ್ನು ನೋಡುವ ಹುಮ್ಮಸ್ಸು, ಉತ್ಸುಕತೆ ಎಲ್ಲರಲ್ಲಿ ಮನೆ ಮಾಡಿತ್ತು. ಒಂದರ್ಥದಲ್ಲಿ ಹೇಳುವುದಾದರೆ ಮೈ ಜುಮ್ಮೆನ್ನಿಸುವ ರಮಣೀಯ ಸ್ವರ್ಗ ಅಂತಲೇ ಹೇಳಬಹುದು. ನಿತ್ಯ ಹರಿದ್ವರ್ಣದ ಮತ್ತು ಅರೆ-ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಕಾಡುಗಳಿಂದ ಧೋ! ಧೋ! ಎಂದು ಹಾಲಿನ ನೊರೆಯನ್ನು ಸೂಸುವ ಹಾಗೇ ಸುಮಾರು 60 ಮೀಟರುಗಳಿಂದ ಇರ್ಪು ಜಲಪಾತದಿಂದ ನೀರು ಧುಮ್ಮುಕ್ಕುತ್ತಿತ್ತು. ಆ ಸಂದರ್ಭದಲ್ಲಿ ನನಗೆ ನೆನಪಾಗಿದ್ದೇ ‘ಎಂಥಾ ಸೌಂದರ್ಯ ನೋಡು ಈ ನಮ್ಮ ಕರುನಾಡು ಬೀಡು‘ ಹಾಡಿನ ಒಂದು ಸಾಲು, ಅದು ನನ್ನ ಮೈ ಮನಗಳಲ್ಲಿ ಓಡಾಡಲಾರಂಭಿಸಿತು. ವ್ಹಾ! ವ್ಹಾರೆ ವ್ಹಾ ಕ್ಯಾ ಬಾತ್ ಹೈ, ಕ್ಯಾ ಬಾತ್ ಹೈ, ಕುದ್ರತ್ ಕಾ ಕರಿಶ್ಮಾ ಅಂದರೆ ಇದೇನೆ ಎಂದು ಗೊಣಗುತ್ತ ವಿಸ್ಮಯ ನಗರಿಯ ಸೌಂದರ್ಯವನ್ನು ವರ್ಣಿಸುತ್ತ ನನ್ನನ್ನೇ ನಾನು ಮರೆತು ಹೋದೆ. ದಕ್ಷಿಣ ಭಾರತದ ಕಾಶ್ಮೀರ ಅಂತ ಕೆರೆಯಿಸಿಕೊಳ್ಳುವ ಈ ಜಲಪಾತವನ್ನ ನಾನು ನನ್ನ ಕಣ್ಮುಂದೆಯೆ ನೋಡತ್ತ ಭಾವಪರವಶನಾದೆ.
ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಮಡಿಕೇರಿಯಿಂದ ಸುಮಾರು 50 ಕಿ.ಮೀ ಮತ್ತು ಕೊಡಗು ಹಾಗೂ ಕೇರಳ ರಾಜ್ಯದ ಗಡಿ ಭಾಗವಾದ ಕುಟ್ಟ ಎಂಬ ಸ್ಥಳದಲ್ಲಿ ಕಾಣಸಿಗುವುದು. ಒಮ್ಮೆ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ಉಳಿದಿದ್ದನು ಎಂದು ಪುರಾಣದಲ್ಲಿ ಪ್ರತೀತಿ ಇದೆ. ಲಕ್ಷ್ಮಣ ತನ್ನ ಅಣ್ಣನಾದ ರಾಮನಿಗೆ ನೀರು ತರಲು ಹೋದಾಗ ನೀರು ಎಲ್ಲಿಯೂ ಸಿಗದೇ ಇದ್ದಂತಹ ಸಂದರ್ಭದಲ್ಲಿ ಲಕ್ಷ್ಮಣ ತನ್ನ ಬಾಣವನ್ನು ಕಾಡಿಗೆ ಬಿಟ್ಟನು. ಬಿಟ್ಟಂತಹ ಬಾಣವು ಕಾಡಿಗೆ ಬಡಿದು ಜಲಪಾತ ಸೃಷ್ಟಿಯಾಯಿತೆಂದು ತಿಳಿದುಕೊಳ್ಳಬಹುದಾಗಿದೆ. ನಯನಮನೋಹರವಾದ ಈ ಹಸಿರು ತಪ್ಪಲಿನಲ್ಲಿ ಈ ಜಲಪಾತವನ್ನು ಕಂಡು ಪಾವನ ಪುನೀತನಾದೆ. ಅಷ್ಟರಲ್ಲಿ ದೂರದಿಂದ ಒಂದು ಧ್ವನಿ ಕೇಳಿಸಲಾರಂಭಿಸಿತು. ಅದುವೆ ತಿಮ್ಮ. “ರೀ, ಸರ್, ಬನ್ನಿ! ಬನ್ನಿ! ಹೋಗೋಣ. ಇನ್ನೂ ಬೆಟ್ಟ ಹತ್ತಿ ಮೇಲೆ ಹೋಗಬೇಕು, ಇಲ್ಲೇ ಕಾಲ ಕಳೆದರೆ ಮುಂದೆ ಹೋಗಲು ತಡವಾಗಬಹದು, ಬೇಗ ಬನ್ನಿ ಹೊತ್ತಾಗುತ್ತಿದೆ,” ಎಂದರು.
“ಛೇ! ಬಂದೆ ಇರ್ರಿ ಮಾರಾಯ್ರೆ!” ಜಗತ್ತೇ ತಲೆ ಮೇಲೆ ಬಿದ್ದ ಹಾಗೆ ಚಡಪಡಿಸುತ್ತಿರುವುದು ಯಾಕೋ ನನಗೆ ಸ್ವಲ್ಪ ನಿರಾಸೆ ಉಂಟು ಮಾಡಿತು. ನಿಧಾನವಾಗಿ ಅಲ್ಲೇ ಇದ್ದ ಬ್ಯಾಗುಗಳನ್ನು ಹೆಗಲಿಗೆ ಹಾಕಿಕೊಂಡು ನಡೆಯಲು ಶುರುಮಾಡಿದೆ. ನಮ್ಮ ಬಳಗದ ಎಲ್ಲ ಸದಸ್ಯರ ಜೊತೆಗೂಡಿ ಆವತ್ತು ಒಂದು ಕ್ಯಾಂಪಿಗೆ ಹೋಗಬೇಕಾಗಿತ್ತು – ಅದುವೆ ‘ನರಿಮಲೆ’ ಕ್ಯಾಂಪ್. ಈ ಕ್ಯಾಂಪಿಗೆ ‘ನರಿಮಲೆ’ ಅಂತ ಹೆಸರು ಬರಲು ಏನಾದರೂ ಕಾರಣವಿರಬೇಕು? ಅದು ಹೇಗೆ ಬಂತು ಎಂದು ಯೋಚಿಸುತ್ತ ನಡೆಯುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ‘ನರಿಮಲೆ’ ಪದದ ಮೊದಲ ಎರಡು ಅಕ್ಷರಗಳಾದ ‘ನರಿ' ಎಂಬುದು ಕೊಡಗಿನ ಸ್ಥಳೀಯ ಭಾಷೆಯಲ್ಲಿ ‘ಹುಲಿ’ ಎಂದರ್ಥ. ಬಹಳ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಹೀಗಾಗಿ ಈ ಬೆಟ್ಟವನ್ನು ‘ನರಿಮಲೆ’ ಅಂತ ಕರೆಯುತ್ತಾ ಇದ್ದುದ್ದರಿಂದ ಈ ಕ್ಯಾಂಪಿನ ಹೆಸರನ್ನು ‘ನರಿಮಲೆ’ ಕ್ಯಾಂಪ್ ಅಂತ ಇಡಲಾಗಿದೆ ಎಂದು ಹೇಳಿದರು. ಆಶ್ಚರ್ಯದಿಂದಲೇ ಸಿಬ್ಬಂದಿಯವರಿಗೆ ಕೃತಜ್ಞತೆ ಸಲ್ಲಿಸುತ್ತಾ, “ಕ್ಯಾಂಪಿನ ಬಗ್ಗೆ ನಿಮಗೆ ಗೊತ್ತಿರುವ ವಿಷಯಗಳನ್ನು ಕೇಳಿ ಬಹಳ ಸಂತೋಷವಾಯಿತು,” ಎಂದೆ.
ಚಿತ್ರ: ಶೋಲಾ ಕಾಡುಗಳ ವಿಹಂಗಮ ನೋಟ – ಬ್ರಹ್ಮಗಿರಿ ವನ್ಯಜೀವಿಧಾಮ.
ಇದೆಲ್ಲಾ ಹೇಗೆ ತಿಳಿದುಕೊಂಡಿರಿ ಎಂದು ಮರು ಪ್ರಶ್ನಿಸಿದಾಗ, “ಈ ಕಾಡಲ್ಲೇ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿರುವುದರಿಂದ ಅಲ್ಪ ಸ್ವಲ್ಪ ಗೊತ್ತಿದೆ ಅಷ್ಟೇ ಹೊರತು, ಮತ್ತೇನೂ ಅಷ್ಟು ಆಳವಾಗಿ ಗೊತ್ತಿಲ್ಲ,” ಎಂದು ಅವರು ಹೇಳುತ್ತಾ ನಮ್ಮಿಬ್ಬರ ಸಂಭಾಷಣೆಯು ಮುಂದುವರೆಯುತ್ತ ಸಾಗಿತು. ಕಡಿದಾದ, ಸ್ವಲ್ಪ ದೂರದವರೆಗೆ ಹಾಳು ಕಲ್ಲು ಮಿಶ್ರಿತ ದಾರಿ ಮತ್ತೆ ಮುಂದೆ ಸಾಗುತ್ತ ಹೋಗಬೇಕಾದರೆ, ಮಣ್ಣಿನ ಅಂಕುಡೊಂಕಾದ ರಸ್ತೆ ಮಧ್ಯೆ ಮಧ್ಯೆ ಜುಳು ಜುಳು ಹರಿಯುವ ನೀರಿನ ಕೊಳಲಿನ ನಾದ ಮನಸ್ಸಿಗೆ ಹಿತವೆನ್ನಿಸುತ್ತಿತ್ತು. ಬೂಟು ನೀರಿನಲ್ಲಿ ಮುಳಗದ ಹಾಗೆ ಕಲ್ಲಿನ ಅಕ್ಕಪಕ್ಕ ನಿಧಾನವಾಗಿ ಅತ್ತಂದಿತ್ತ ಮಂಗನ ಹಾಗೆ ಜಿಗಿಯುತ್ತ ಹೋಗಬೇಕಾದಂತಹ ದಾರಿ ಅದಾಗಿತ್ತು. ರಸ್ತೆ ಬದಿಯಲ್ಲಿ ಸಿಗುವಂತಹ ಹೋಟೆಲಿನ ನೀರನ್ನು ತುಂಬಿಕೊಳ್ಳುವ ಆಸಕ್ತಿ ಇಲ್ಲದ ಕಾರಣ ಬೆಟ್ಟದ ಇಳಿಜಾರಿನಿಂದ ಹರಿದು ಬರುವ ನೀರನ್ನು ಕುಡಿಯಲು ನನ್ನ ಬಾಟಲಿಯಲ್ಲಿ ತುಂಬಿಸಿಕೊಳ್ಳುತ್ತಿದೆ. ಸ್ವಲ್ಪ ಆಯಾಸವಾದಂತಹ ಸಂದರ್ಭದಲ್ಲಿ ಬಾಟಲಿಯಲ್ಲಿ ತುಂಬಿಕೊಂಡಂತಹ ನೀರನ್ನು ಕುಡಿದರೆ, ಆಹಾ! ‘ಸರಸರ’ ಅಂತ ಇಳಿದು ಹೋಗುತ್ತಿತ್ತು. ದಣಿವು, ಹಸಿವು ಎಲ್ಲವೂ ಮಾಯವಾಗುತ್ತಿತ್ತು. ಹಲ್ಲುಗಳು ಜುಮ್ ಎನ್ನುತ್ತಿದ್ದವು. ವನಸ್ಪತಿಯ ನೀರು ದಾಹವನ್ನು ನೀಗಿಸುತ್ತಿತ್ತು. ಸುಮಾರು 5 ರಿಂದ 7 ಕಿ.ಮೀ.ನಷ್ಟಿರುವ ನಡಿಗೆ ತುಂಬಾ ಚೈತನ್ಯದಿಂದ ಉಲ್ಲಾಸಭರಿತವಾಗಿತ್ತು. ತಂಡದ ಸದಸ್ಯರು ಸುಮಾರು ಐದು ಜನ, ಉಳಿದಂತಹ ಇಲಾಖೆಯ ಸಿಬ್ಬಂದಿ ವರ್ಗದವರು ಮೂರು ಜನ, ಒಟ್ಟು ಎಂಟು ಜನರ ಗುಂಪು ಕ್ಯಾಂಪಿನಲ್ಲಿ ತಂಗಲು ಬೇಕಾದ ಸರಂಜಾಮುಗಳನ್ನು ಹೊತ್ತು ಸಾಗುತ್ತಿದ್ದೆವು.
ಬೆಟ್ಟವನ್ನು ಹತ್ತುವುದೊಂದೇ ನಮ್ಮ ಉದ್ದೇಶವಾಗಿತ್ತು. ಬೆಟ್ಟವನ್ನು ಹತ್ತಿ ಕ್ಯಾಂಪನ್ನು ತಲುಪುವುದು, ನಂತರ ಕ್ಯಾಂಪಿನಲ್ಲಿ ಒಂದು ರಾತ್ರಿ ಉಳಿದುಕೊಂಡು ನಸುಕಿನ ಜಾವದಲ್ಲಿ ಸರ್ವೇ ಕೆಲಸ ಶುರು ಮಾಡುವುದು ಎಂಬ ಪ್ಲ್ಯಾನು ಮೊದಲೇ ಮಾಡಿಯಾಗಿತ್ತು. ಅದರಂತೆ ಸರ್ವೇಗೆ ಸಂಬಂಧಿಸಿದ ಸರಂಜಾಮುಗಳು, ಸ್ಲೀಪಿಂಗ್ ಬ್ಯಾಗುಗಳನ್ನು ಹೊತ್ತುಕೊಂಡು ಬೆಟ್ಟ ಹತ್ತಿ ಬಂದು ಕ್ಯಾಂಪ್ ತಲುಪಿದೆವು. ಬೆಳಿಗ್ಗೆ ಸುಮಾರು ಏಳು ಗಂಟೆಗೆ ನಡೆಯಲು ಶುರುಮಾಡಿದವರು ಕ್ಯಾಂಪಿಗೆ ಬಂದು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ. ಅಂದಾಜು ನನಗೆ ಗೊತ್ತಿರುವ ಹಾಗೆ ಒಂದು ಗಂಟೆಯ ಆಸುಪಾಸಿನಲ್ಲಿ. ಚಿಕ್ಕದಾದ ಒಂದು ಮನೆಯಂತಿರುವ ಮತ್ತು ಮನೆಯ ಸುತ್ತಲು ಸೌರಶಕ್ತಿ ಬೇಲಿ ತಂತಿಗಳು ಹಾಗೂ ಆಳವಾದ ಟ್ರೆಂಚ್ ಇದ್ದುದ್ದನ್ನು ಬಿಟ್ಟರೆ ಕ್ಯಾಂಪಿನ ಮುಂದುಗಡೆ ಸುಮಾರು 50 ಮೀಟರುಗಳ ಅಂತರದಲ್ಲಿ ಇರುವ ಒಂದು ನೀರಿನ ಹೊಂಡ ಶುಭ್ರವಾಗಿ ಕಂಗೊಳಿಸುತ್ತಿತ್ತು. ಜೂನ್ 5, 1995ರಲ್ಲಿ ನಿರ್ಮಾಣವಾದ ಈ ಕ್ಯಾಂಪ್ ನಿಸರ್ಗದ ಮಡಿಲಲ್ಲಿ ಬಹಳ ಆಕರ್ಷಕವಾಗಿ ಕಾಣುತಿತ್ತು. ಕ್ಯಾಂಪಿನ ಮೇಲ್ಛಾವಣಿ ಪತ್ರಾಸ (Metal-roofing sheet)ದಿಂದ ಮಾಡಲಾಗಿತ್ತು. ಪ್ರಕೃತಿಯ ಹಚ್ಚ ಹಸುರಿನ ಬಣ್ಣ ಮತ್ತು ಗೋಡೆಯ ಮೇಲಿರುವ ಬಣ್ಣ ಎರಡು ಒಂದೇ ಆಗಿತ್ತು. ಹೊರಗಡೆ ಜುಮ್ಮೆನ್ನಿಸುವ ಚಳಿ ಕ್ಯಾಂಪಿನ ಒಳ ಹೊಕ್ಕರೆ ಬೆಚ್ಚನೆ ಆಹ್ಲಾದಕರವಾಗಿತ್ತು.
ಬೆಟ್ಟ ಏರಿದ್ದ ಪರಿಣಾಮವಾಗಿ ದಣಿವಾದ ದೇಹಕ್ಕೆ ನಿದ್ರೆ ಚೈತನ್ಯ ತುಂಬುವಂತಿತ್ತು. ನಮ್ಮ ಜನ ಹೇಳುವ ‘ಚಿಂತೆ ಇಲ್ಲದಿದ್ದರೆ ಸಂತೆಯಲ್ಲೂ ನಿದ್ರೆ ಬರುತ್ತೆ’ ಎಂಬ ಯುಕ್ತಿ ನೆನಪಿಗೆ ಬಂದಂತಾಯಿತು. ಆ ದಿನದ ನಿದ್ರೆ ನನ್ನ ಎಲ್ಲ ಆಯಾಸವನ್ನೂ ಶಮನಮಾಡಿ, ಧೀರ್ಘಕಾಲದಿಂದ ಈ ತರಹ ನಿದ್ದೆ ಮಾಡಿಲ್ಲವೇನೋ ಎಂದೆನಿಸುತ್ತಿತ್ತು. ಯಾರ ಕಿರಿಕಿರಿಯೂ ಇಲ್ಲವಾಗಿತ್ತು. ರಾತ್ರಿಯೆಲ್ಲ ಸೂಯಂ ಎಂದು ಬೀಸುವ ಗಾಳಿಯ ಸದ್ದು, ವಟ್ರ ವಟ್ರ ಎಂಬ ಕಪ್ಪೆಗಳ ಕೂಗು ಹಿತವೆನ್ನಿಸುತ್ತಿತ್ತು. ಆ ದಿನದ ನಿದ್ರೆ ನನ್ನ ಎಲ್ಲ ಚಿಂತೆಗಳನ್ನೂ ದೂರಮಾಡಿತ್ತು. ಅಂತೂ ಬೆಚ್ಚನೆಯ ಹೊದಿಕೆಯನ್ನು ಹೊದ್ದುಕೊಂಡು ಹೊರಗಿನ ಬಾಗಿಲದವರೆಗೆ ಬಂದರೆ ಕಾಲುಗಳು ಜುಮ್ಮ ಜುಮ್ಮ ಎಂದು ನಡುಗುತ್ತಿದ್ದವು. ‘ಎಪ್ಪೋ! ಈ ಥರಹ ಚಳಿ ಎಲ್ಲೂ ನೋಡಿಲ್ಲವಲ್ಲ, ಈ ಹಾಳಾದ ಸ್ಲೀಪಿಂಗ್ ಬ್ಯಾಗ್ ಹೊದ್ದುಕೊಂಡು ಮಲಗಿದರೂ ಚಳಿ ಒಂದೇ ಸಮನೆ ಒಳಹೊಕ್ಕು ರಾಜ್ಯಭಾರ ಮಾಡುತ್ತಿದೆಯಲ್ಲ, ಏನಪ್ಪಾ ಮಾಡೋದು! ಮಣಿಕಂಠ, ನೀನೇ ಕಾಪಾಡಬೇಕು’ ಎಂದುಕೊಂಡೆ. ಹಾಗೂ ಹೀಗೂ ಹೊರ ಬಂದು ನೋಡ್ತೀನಿ, ದಟ್ಟವಾದ ಮಂಜು ಕವಿದ ವಾತಾವರಣ. ಯಾರೊಬ್ಬರೂ ಸಹ ಈ ಮಂಜಿನಲ್ಲಿ ಕಾಣಿಸುತ್ತಿಲ್ಲ, ಅಷ್ಟೊಂದು ವ್ಯಾಪಕವಾಗಿ ಆವರಿಸಿಕೊಂಡುಬಿಟ್ಟಿದೆ. ಬೆಳಿಗ್ಗೆ ಸಮಯ 6 ಗಂಟೆ 30 ನಿಮಿಷವಾದರೂ ಮಸುಕುಮಸುಕಾದ ನಸುಕಿನ ಜಾವ ಹೊಸ ಜಗತ್ತಿಗೆ ನನ್ನನ್ನು ಕರೆದುಕೊಂಡು ಬಂದುಬಿಟ್ಟಿದೆಯಲ್ಲ ಅಂತ ಅನ್ನಿಸತೊಡಗಿತು.
ಇನ್ನು ಸ್ವಲ್ಪ ಸಮಯ ಕಳೆದರೆ ಬೆಳಕು ಬರಬಹುದು ನೋಡೋಣ ಎಂದು ಕಾಯುತ್ತ ಕುಳಿತೆ. ಅಷ್ಟರಲ್ಲಿ, ನನ್ನ ಸಹೋದ್ಯೋಗಿಗಳು ಮತ್ತು ಗುಂಪಿನ ಸದಸ್ಯರು ಒಬ್ಬೊಬ್ಬರಾಗಿ ಹೊರಬಂದರು. ಒಬ್ಬೊಬ್ಬರಾಗಿ ಬಂದವರು ಶುಭೋದಯ, ಗುಡ್ ಮಾರ್ನಿಂಗ್, ಅಂತ ಹೇಳುತ್ತ ಬೆಳಗಿನ ಎಲ್ಲ ಕಾರ್ಯಕಲಾಪಗಳನ್ನು ಮುಗಿಸಿ ತಯಾರಾದರು. ನಾನೂ ನನ್ನ ಎಲ್ಲ ಕಲಾಪಗಳನ್ನು ಶೀಘ್ರವಾಗಿ ಮುಗಿಸಿ ಹೊರಡಲು ಸಿದ್ಧನಾದೆ. ಮೂರು ಗುಂಪುಗಳು ಮಾಡಲ್ಪಟ್ಟು ಪ್ರತಿಯೊಂದು ಗುಂಪಿನಲ್ಲಿ ಇಬ್ಬರು-ಮೂವರಂತೆ ಮೂರು ಗುಂಪುಗಳಾದವು. “ಬೇಗಬೇಗ ನಡೆಯಿರಿ, ನಿಮ್ಮ ನಿಮ್ಮ ಸರಂಜಾಮುಗಳು ಮತ್ತು ನಿಮ್ಮ ಸರ್ವೇಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಈ ಕ್ಯಾಂಪಿನಿಂದ ಸ್ವಲ್ಪ ಮುಂದೆ ಈಗಾಗಲೇ ಮ್ಯಾಪಿನಲ್ಲಿ ಸೂಚಿಸಿದಂತೆ ನಿಮ್ಮ ನಿಮ್ಮ ಸ್ಥಳಕ್ಕೆ ಹೋಗಿ ಅಲ್ಲಿಂದಲೇ ಸರ್ವೇ ಶುರು ಮಾಡಿ, ನಡ್ರಿ ನಡ್ರಿ,” ಎಂಬ ಉದ್ಗಾರ ಒಂದೇ ಸಮನೆ ಶುರುವಾಯಿತು. ಎರಡು ಗುಂಪುಗಳಲ್ಲಿನ ಸದಸ್ಯರು ಬೇಗ ಹೋಗಿ ತಮ್ಮ ಸರ್ವೇ ಕೆಲಸವನ್ನು ಶುರುಮಾಡುತ್ತ, ಕ್ಷಣಾರ್ಧದಲ್ಲೇ ಹುಲ್ಲುಗಾವಲಿನ ಕಾನನದಲ್ಲಿ ಮರೆಯಾದರು. ಉಳಿದಿರುವುದು ನಮ್ಮದೇ ಕೊನೆಯ ಗುಂಪು. ಈ ಗುಂಪಿನಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿಯಾದ ಎಮ್. ಎನ್. ಸಂತೋಷರವರು. ಬಹಳ ತೀಕ್ಷ್ಣವಾದ ಚತುರತೆ, ಗಾಂಭೀರ್ಯತೆ ಹೊಂದಿದ ವ್ಯಕ್ತಿ. ಬಹಳ ವರ್ಷಗಳಿಂದ ಸರ್ವೇ ಅನುಭವ ಹೊಂದಿದ ಎಮ್. ಎನ್. ಸಂತೋಷರವರನ್ನು ಶಾರ್ಟಕಟ್ ಆಗಿ ಎಮ್. ಎನ್. ಅಂತ ಎಲ್ಲರೂ ಕರೆಯುತ್ತಿದ್ದರು. ಏನೇ ಆದರೂ ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದೇ ಅವರ ಛಲವಾಗಿತ್ತು. ಅವರ ಜೊತೆಯಾಗಿ ಆಗ ತಾನೇ ಬಂದ ನನಗೆ ಇವರ ಕೌಶಲ್ಯಗಳನ್ನು ತಿಳಿಯುವ ತವಕ ಮತ್ತು ಕೂತುಹಲ ಆವರಿಸಿತ್ತು. “ಸತೀಶ, ಹಾಗಾದರೇ ಹೋಗೊಣವೇ? ಬನ್ನಿ, ಬನ್ನಿ ಬೇಗ, ನಮ್ಮ ಗುಂಪಿನಲ್ಲಿ ಇರೋದು ನಾವಿಬ್ಬರೇ ಹೊರತು ಬೇರೆ ಯಾರೂ ಇಲ್ಲ,” ಎನ್ನುತ್ತ, “ಈಗ ಕೆಲಸ ಶುರು ಮಾಡೋಣ. ನಾನು ಜಿಪಿಎಸ್ (Global Positioning System) ಹ್ಯಾಂಡಲ್ ಮಾಡುತ್ತೇನೆ, ನೀವು ಡೇಟಾ ಶೀಟ್ ತುಂಬಿ,” ಅಂತ ಕೆಲಸ ಶುರುಮಾಡಿದೆವು.
“ನೀವು ಮುಂದೆ ಮುಂದೆ ನಾನು ನಿಮ್ಮ ಹಿಂದೆ ಹಿಂದೆ ಎಮ್. ಎನ್.ರವರೇ,” ಅಂತ ನಡೆಯಲು ಶುರುಮಾಡಿದೆ. ನನ್ನ ದೇಹದ ಎತ್ತರದ ಅರ್ಧ ಭಾಗದಷ್ಟು ಬೆಳೆದಿರುವ ಹುಲ್ಲುಗಾವಲಿನಲ್ಲಿ ನಡೆದುಕೊಂಡು ಸಾಗುತ್ತಿದ್ದೆವು. ಅಲ್ಲಲ್ಲಿ ಹಚ್ಚ ಹಸುರಾಗಿ ಕಾಣುತ್ತಿದ್ದ ಚಿಕ್ಕಚಿಕ್ಕ ಗಾತ್ರದ ಕುಬ್ಜ ಮರಗಳನ್ನು ಹೊಂದಿದಂತಹ ಮರಗಳ ಸಾಲುಗಳ ಗುಂಪು ನಮ್ಮ ಕಣ್ಣೆದುರಿಗೆ ಕಾಣುತ್ತಿತ್ತು.
“ಈ ಶೋಲಾ ಕಾಡುಗಳ ಮಹತ್ವ ಗೊತ್ತೇ ಸತೀಶ?”
“ಹಾಂ! ಗೊತ್ತು.“
“ಒಂದು ವಿಶಿಷ್ಠವಾದ ಕಾಡು ಪ್ರದೇಶ ಎರಡು ಬೆಟ್ಟಗಳ ನಡುವೆ ಅಥವಾ ಮಧ್ಯ ಭಾಗದಲ್ಲಿ ಇರುವ ಸಸ್ಯ ಸಂಪತ್ತು, ಬೆಟ್ಟದ ಮೇಲ್ಮೈಯಲ್ಲಿ ಬೆಳೆದ ಹುಲ್ಲುಗಾವಲು, ಮಳೆಗಾಲದ ನೀರನ್ನು ತನ್ನ ಒಳಪದರದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಹುಲ್ಲುಗಾವಲಿನಲ್ಲಿದೆ.”
ನಮ್ಮೊಳಗೆ ಆದ ಒಂದು ಸಣ್ಣ ಚರ್ಚೆಯಲ್ಲಿ ನಾವಿಬ್ಬರೂ ತೊಡಗಿಸಿಕೊಂಡಿದ್ದೆವು. ನಡೆಯುತ್ತ ನಡೆಯುತ್ತ ಮುಂದೆ ಹೋಗಬೇಕಾದರೆ ಸಣ್ಣದಿದ್ದ ದಾರಿ ಬರಬರುತ್ತ ದೊಡ್ಡದಾಗಿ ಕಾಣಲು ಶುರುವಾಯಿತು. ಅದು ಎರಡು ರಾಜ್ಯಗಳ ಅರಣ್ಯ ಸರಹದ್ದಾಗಿತ್ತು. ಹತ್ತು ಅಡಿಗಳಷ್ಟು ಅಗಲವಾದ ದಾರಿಯನ್ನು ಸುಮಾರು 8 ರಿಂದ 10 ಕಿ.ಮೀ.ಗಳಷ್ಟು ನೇರವಾಗಿ ಇಲಾಖೆಯವರು ನಿರ್ಮಿಸಿದ್ದರು.
ಆ ಸರಹದ್ದಿನ ದಾರಿಯ ಮಧ್ಯದಲ್ಲಿ ನಿಂತುಕೊಂಡು ಒಂದು ಕಾಲನ್ನು ಎಡಗಡೆ ಇಟ್ಟರೆ ಅದು ನಮ್ಮ ಕರ್ನಾಟಕ ಸರಹದ್ದು, ಇನ್ನೊಂದು ಕಡೆ ಕಾಲನ್ನು ಇಟ್ಟರೆ ಅದು ಕೇರಳ ಸರಹದ್ದು. ಒಟ್ಟಿನಲ್ಲಿ, ಎರಡು ರಾಜ್ಯಗಳ ಸರಹದ್ದಿನ ದಾರಿಯನ್ನು ಒಂದೇ ಕಡೆ ನೋಡಿದಂತಾಯಿತು. ಬರಬರುತ್ತ ಆ ದಾರಿ ಆಳವಾದ ತಗ್ಗು ಪ್ರದೇಶಕ್ಕೆ ಇಳಿಯತೊಡಗಿತು. ಮುಂದೇನಪ್ಪಾ ಗತಿ ಈ ದಾರಿಯನ್ನು ಹೇಗೆ ಇಳಿದು ಸಾಗಬೇಕು ಅಂತ ಯೋಚಿಸುತ್ತ ನಿಂತಿರುವಷ್ಟರಲ್ಲಿ ಎಮ್. ಎನ್.ರವರು “ನೋಡಿ ಸತೀಶ, ನಾನು ಮುಂದೆ ನಿಧಾನವಾಗಿ ಇಳಿಯುತ್ತೇನೆ. ನಾನು ಇಳಿದಾದ ಮೇಲೆ ನೀವು ಇಳಿಯಿರಿ, ಏಕೆಂದರೆ ಆಳ ಇರುವುದರಿಂದ ಕೆಳಗೆ ಬೀಳುವ ಆಪತ್ತು ಕಡಿಮೆ ಇರುತ್ತೆ. ಆದರೂ ಅಷ್ಟೊಂದು ಆಳವೇನಿಲ್ಲ. ನಿಧಾನವಾಗಿ ಹಿಂಬದಿಯಾಗಿ ಇಳಿದು ಹೋಗಬಹುದು, ಸರಿಯಾ?” ಅಂತ ಹೇಳಿದರು. ಅದಕ್ಕೆ ನಾನು “ಸರಿ ಸರಿ” ಅಂತ ತಲೆಯಾಡಿಸಿದೆ. ಆಯಿತು, ಇನ್ನೇನು ಮಾಡುವುದು ಬೇರೆ ದಾರಿಯಿಂದ ಇಳಿಯಬೇಕಾದರೂ ಆ ದಾರಿ ಸಹ ಹೀಗೇ ಇತ್ತು. ಹುಲ್ಲುಗಾವಲಿನ ಪ್ರದೇಶದಲ್ಲಿ ಈ ತರಹದ ಕಸರತ್ತು ಮಾಡಲು ಬಹಳಷ್ಟು ಎಚ್ಚರಿಕೆಯಿರಬೇಕು. ನಮಗೆ ದಟ್ಟವಾದ ಹುಲ್ಲುಗಾವಲಿನಲ್ಲಿ ಸರಿಯಾದ ದಾರಿ ಕಾಣಿಸದೇ ಇರುವುದು ಒಂದು ಕಾರಣ ಮತ್ತು ಹುಲ್ಲುಗಾವಲಿನ ಮಣ್ಣು ಅಷ್ಟೊಂದು ಗಟ್ಟಿಯಾಗಿ ಇರದಿರುವುದು ಮತ್ತೊಂದವು ಕಾರಣ. ಮೊನಚಾದ ಹುಲ್ಲುಗಳು ಒಂದೊಂದು ಸಲ ಕೈ ಹಿಡಿತದಲ್ಲಿ ಸಿಗದೇ ಇರುವುದರಿಂದ ಜಾರಿ ಬಿಳ್ಳುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಹುಲ್ಲು ಕಡಿಮೆ ಇರುವ ಪ್ರದೇಶದಿಂದ ನಡೆದು ಸಾಗಬೇಕು ವಿನಃ ಬೇರೆ ಯಾವ ದಾರಿಯೂ ಇರಲಿಲ್ಲ. ಹಾಗೂ ಹೀಗೂ ಮಾಡಿ ನಡೆಯಬೇಕಾದರೆ ಹೊಂಚು ಹಾಕಿ ಕುಳಿತಿದ್ದ ನನ್ನ ಬೂಟು ಸರಿಯಾದ ಸಮಯಕ್ಕೆ ಜಾರಿ ಬಿಟ್ಟಿತು. ನಿಂತ ಜಾಗದಿಂದ ರಭಸದಿ ಜಾರಿ ಬಿದ್ದೆ! “ಎಪ್ಪೋ! ಎಪ್ಪೊ!” ಅನ್ನುತಿರಲು ಕೆಳಗಿದ್ದ ಎಮ್. ಎನ್. ರವರು, “ಅಯ್ಯಯ್ಯೋ, ನಿಧಾನ ರೀ, ನಿಧಾನವಾಗಿ ಬನ್ನಿ ಸೊಂಟಗಿಂಟ ಮುರಿತೇನ್ರಿ?” ಅಂದರು. ಆ ವಿಷಯಕ್ಕೆ ನನಗೆ ನಗಬೇಕೋ ಅಥವಾ ಅಳಬೇಕೋ ಗೊತ್ತಾಗಲಿಲ್ಲ. ಒಂಥರಹ ಅವರಾಡಿದ ಮಾತು ವಿಕೆಟ್ ಕೀಪರ್ ಸ್ಟಂಪ್ ಔಟ್ ಮಾಡಿದಂತೆ ಇತ್ತು ಮತ್ತು ಬಲು ಹಾಸ್ಯದಿಂದ ಕೂಡಿತ್ತು.
ನಿಧಾನವಾಗಿ ಇಳಿಜಾರಿನಿಂದ ಕೆಳೆಗೆ ಇಳಿದು ಬಂದು ನೋಡಿದರೆ ಎರಡು ರಾಜ್ಯಗಳ ಸರಹದ್ದು ನೇರವಾಗಿ ಕಾಣುತ್ತಿತ್ತು. “ಅಬ್ಬಬ್ಬಾ! ಎಷ್ಟ ಚಂದ ಹುಲ್ಲುಗಾವಲನ್ನ ಕತ್ತರಿಸಿ ಮಾಡ್ಯಾರ ನೋಡ್ರಿ! ಮಸ್ತ್ ಅದ ಬಿಡ್ರಿ,” ಅಂದೆ. ಪಶ್ಚಿಮ ಘಟ್ಟಗಳ ತಂಪಾದ ಗಾಳಿಯು ನಮ್ಮ ಬೆವರನ್ನೆಲ್ಲ ನುಂಗಿಹಾಕಿತ್ತು. ಆಯಾಸದ ಮಧ್ಯೆಯೂ ಒಂಥರಹದ ಸಂತೋಷದ ಅನುಭೂತಿಯನ್ನು ನನ್ನಲ್ಲಿ ನಾ ಕಂಡೆ. ಅಷ್ಟರಲ್ಲಿ ಏನೋ ಒಂದು ಸದ್ದು ಹುಲ್ಲುಗಾವಲಿನಲ್ಲಿ, ಅಷ್ಟೇ, ನನ್ನ ಕಾಲುಗಳು ನಿಂತಲ್ಲೇ ಅಲುಗಾಡಲು ಶುರುವಾಯಿತು. ಒಮ್ಮೆಲೇ ಸಿಡಿಲು ಬಡಿದಂತಾಗಿ ಮಿಂಚು ಮೈಯಲ್ಲೆಲ್ಲಾ ಸಂಚರಿಸಿದಂತಾಯಿತು. ನಾಲ್ಕು ಕಿ.ಮೀ.ನಷ್ಟು ನಡೆದುಕೊಂಡು ಬಂದರೆ ಕಡವೆ, ಜಿಂಕೆಗಳ ಹೆಜ್ಜೆ ಗುರುತುಗಳು ಮಾತ್ರ ಸಿಕ್ಕಿದ್ದು ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಹೀಗಿರುವಾಗ ಒಮ್ಮೆಲೇ ಏನಿದು ಬೆಳವಣಿಗೆ ಅಂತ ಮನಸ್ಸಿನಲ್ಲಿ ಅನ್ನುತಿರಲು, ನಾನು ಎಮ್. ಎನ್.ರವರತ್ತ ಮುಖ ತಿರುಗಿಸಲು, ಅವರು ಕೈ ಸನ್ನೆ ಜೊತೆ,” ನಿಲ್ಲಿ! ಓಡಬೇಡಿ” ಎಂದರು. ಎದೆ ಢವಢವ ಅಂತ ಬಡಿದುಕೊಳ್ಳುತ್ತಿದೆ, ಮುಖದ ಮೇಲಿರುವ ಬೆವರು ಡೇಟಾ ಶೀಟ್ ಮೇಲೆ ಬೀಳುತ್ತಿದೆ. ಕೊನೆಯ ಕ್ಷಣದಲ್ಲಿ ಹುಲ್ಲುಗಾವಲಿನಿಂದ ಯಾವುದಾದರೂ ಪ್ರಾಣಿ ಹೊರಬರಬಹುದು ಎಂದು ಕಾಯುತ್ತಿರುವ ಸಂದರ್ಭದಲ್ಲಿ ಗಿಜಗುಡುವ ಸದ್ದು ಕ್ರಮೇಣವಾಗಿ ನಿಂತೇ ಹೋಯಿತು. ಏನಪ್ಪಾ ಇದು ಆಶ್ಚರ್ಯ. ಸ್ವಲ್ಪ ಸಮಯದ ಹಿಂದೆ ನೋಡಿದರೆ ಹುಲ್ಲುಗಾವಲಿನಲ್ಲಿ ಶಬ್ದ, ನಂತರ ಸ್ವಲ್ಪ ಸಮಯದ ತರುವಾಯ ನೋಡಿದರೆ ಏನೂ ಇಲ್ಲವಲ್ಲ ಅಂತ ಶಾಂತನಾದೆ. ಅಬ್ಬಾ! ಕಳೀತು ಆಪತ್ತು, ಬಚಾವ್ ಆದ್ವಿ ಅಂತ ಮುಂದೆ ಹೊರಡಲು ಸಿದ್ಧರಾದೆವು.
ಹೀಗೆ ಮುಂದೆ ಸಾಗುತ್ತ ಸರ್ವೇ ಕಾರ್ಯವನ್ನು ಮುನ್ನಡೆಸುತ್ತ ಹೋಗುತ್ತಿರಬೇಕಾದರೆ ಒಂದು ದೊಡ್ಡದಾದ ಮರದ ಮೇಲೆ ಏನೋ ಕಪ್ಪುಕಪ್ಪಾಗಿ ಕುಳಿತಿರುವುದು ಕಾಣಿಸಿತು. ಆ ಮರದ ಮೇಲೆ ಎಮ್. ಎನ್. ಮತ್ತು ನಾನು ತದೇಕಚಿತ್ತದಿಂದ ನೋಡುತ್ತಿರಲು ನಮಗೆ ಆದ ಖುಷಿಗೆ ಪಾರವೇ ಇರಲಿಲ್ಲ. ಒಂದೇ ಸಲಕ್ಕೆ ಜಾಕ್ಪಾಟ್ ಹೊಡೆದಂತಹ ಖುಷಿ ಎಷ್ಟರ ಮಟ್ಟಿಗೆ ಆಯಿತೆಂದರೆ ಇದೇನು ಕನಸೋ ಅಥವಾ ನನಸೋ ಅಂತ ಅಂದುಕೊಂಡು ಬಿಟ್ಟೆವು. ಒಂದೇ ಮರದಲ್ಲಿ ಸುಮಾರು ಒಂಭತ್ತು ಸಿಂಹಬಾಲದ ಸಿಂಗಳೀಕ (lion-tailed macaque)ಗಳನ್ನು ನೋಡಿಯೇಬಿಟ್ಟೆವು. ಸರ್ಕೊಪಿಥೆಸಿಡೆ (Cercopithecidae) ಕುಟುಂಬಕ್ಕೆ ಸೇರಿದ ಈ ಕೋತಿಯ ವೈಜ್ಞಾನಿಕ ಹೆಸರು ಮಕಾಕಾ ಸಿಲೆನಸ್ (Macaca Silenus). ಅವೂ ನಮತ್ತ ನೋಡಿ ಕೂಗಲು ಶುರು ಮಾಡಿದವು. “ಏನ್ರೀ ಎಮ್. ಎನ್.ರವರೇ, ಹಿಂಗ್ ಕೂಗ್ಲಿಕ್ ಹತ್ತಾವ,” ಅಂತ ಅಂದೆ. ಅಷ್ಟರಲ್ಲಿ ಬಹಳ ಸಂಕೋಚದ ಪ್ರಾಣಿಗಳಾದ ಸಿಂಗಳೀಕಗಳು ನಮ್ಮನ್ನು ನೋಡಿದ ತಕ್ಷಣವೇ ಬೇರೆ ಮರಕ್ಕೆ ಜಿಗಿಯಲು ಶುರು ಮಾಡಿದವು. ಎಮ್.ಎನ್.ರಿಗೆ ಅವತ್ತು ಬಹಳಷ್ಟು ಸಂತೋಷವಾಯಿತು. ನಾನೂ ಸಹ ಇಷ್ಟೊಂದು ಸಿಂಗಳೀಕಗಳನ್ನು ಎಲ್ಲಿಯೂ ನೋಡಿರಲಿಲ್ಲ. ಒಂದು ಪುಟ್ಟ ಮರಿ ಅಮ್ಮನ ಮಡಿಲಲ್ಲಿ ಹಾಯಾಗಿ ಮಲಗಿದೆ. ತಾಯಿಯ ವಾತ್ಸಲ್ಯದ ಮುಂದೆ ಎಲ್ಲವೂ ಶೂನ್ಯ ಈ ಜಗತ್ತೇ ನಶ್ವರ ಎಂದೆನಿಸಿಬಿಟ್ಟಿತ್ತು. ಪುಟ್ಟಪುಟ್ಟ ಕಂದಮ್ಮಗಳನ್ನ ಹೊತ್ತ ತಾಯಿ ಸಿಂಗಳೀಕಗಳು ನೋಡಲು ಬಲು ಸುಂದರವಾಗಿದ್ದವು. ಅಳವಿನ ಅಂಚಿನಲ್ಲಿರುವ ಸಿಂಗಳೀಕಗಳನ್ನು ನೋಡುವುದು ಬಲು ಅಪರೂಪದಲ್ಲಿ ಅಪರೂಪ. ವಿಶ್ವಸಂಸ್ಥೆಯು ಈ ಸಿಂಗಳೀಕಗಳನ್ನು ಅಳಿವಿನ ಅಂಚಿನ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ ಎಂಬುದರ ವಿಷಯ ಕೇಳಿ ಬಹಳ ದುಃಖವಾಯಿತು.
ಚಿತ್ರ: ಮರದ ಮೇಲೆ ಕುಳಿತ ಅಪರೂಪದ ಅಳಿವಿನ ಅಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕ (lion-tailed macaque)ಗಳನ್ನು ಕಣ್ಣ ರೆಪ್ಪೆಯನ್ನು ಮಿಟುಕಿಸದೇ ತದೇಕಚಿತ್ತದಿಂದ ನೋಡುತ್ತಿರುವ ಘಳಿಗೆ. ಚಿತ್ರ ರಚಿಸಿದವರು: ಕೃಷ್ಣಾ ಸಾತಪೂರ.
ಒಂದೈದು ನಿಮಿಷ ನಾವಿಬ್ಬರೂ ಚರ್ಚೆಮಾಡುತ್ತ ಸಿಂಹಕ್ಕಿರುವ ನೀಳವಾದ ದುಂಡನೆಯ ಬಾಲವನ್ನು ಈ ಕೋತಿಗಳು ಹೊಂದಿರುವುದರಿಂದ ಇವುಗಳನ್ನು ಸಿಂಹಬಾಲದ ಸಿಂಗಳೀಕ ಎಂದು ಕರೆಯುವರು ಮತ್ತು ಗಡ್ಡಬಿಟ್ಟ ಕೋತಿ (ಬಿಯರ್ಡ್ ಏಪ್) ಎಂದೂ ಕರೆಯುವರು. ಯಾವಾಗಲೂ ಮರದ ಮೇಲೆಯೇ ಇವುಗಳ ಜೀವನ. ಗುಂಪಿನಲ್ಲಿ ವಾಸಿಸಲು ಇಷ್ಟ ಪಡುವ ಪ್ರಾಣಿ. ಬಲಿಷ್ಠವಾದ ಸಿಂಗಳೀಕಗಳು ಗುಂಪಿನ ನೇತೃತ್ವವನ್ನು ವಹಿಸುತ್ತವೆ. ಸದಾ ಸಂಚರಿಸುವುದು ಮತ್ತು ನಿದ್ರಿಸುವುದು ಇವುಗಳ ಜೀವನ ಶೈಲಿ.
ಸಿಂಗಳೀಕಗಳನ್ನು ಅವುಗಳ ಪಾಡಿಗೆ ಬಿಟ್ಟು ತೊಂದರೆ ಮಾಡದೇ ಆ ಜಾಗದ ಅಕ್ಷಾಂಶ ಮತ್ತು ರೇಖಾಂಶವನ್ನು ಒಂದು ಪುಸ್ತಕದಲ್ಲಿ ನಮೂದಿಸಿಕೊಂಡು ಜಿಪಿಎಸ್-ನಲ್ಲಿ ಪಾಯಿಂಟ್ ಸೇವ್ ಮಾಡಿ ಮುಂದೆ ನಡೆದೆವು. ಇನ್ನೂ ನಮ್ಮ ಸರ್ವೇ ಕೆಲಸ ಮುಗಿದಿರಲಿಲ್ಲ, ಹೀಗಾಗಿ ಇನ್ನೂ ಮುಂದೆ ಸಾಗಬೇಕಾಗಿತ್ತು. ನಮ್ಮ ಹತ್ತಿರ ಸಮಯ ಬಹಳ ಇಲ್ಲವಾದ್ದರಿಂದ ನಾವು ಮುಂದೆ ಬಹಳ ದೂರ ಹೋಗಬೇಕಾಗಿತ್ತು. “ಬನ್ನಿ, ಬನ್ನಿ, ಸತೀಶ, ಹೋಗೋಣ. ಇನ್ನೂ ಕೆಲಸ ಬಹಳಷ್ಟಿದೆ. ಇನ್ನೂ ಒಂದು ನಾಲ್ಕು ಕಿ.ಮೀ. ನಡೆದರೆ ನಮ್ಮ ಈ ದಿನದ ಸಂಪೂರ್ಣ ಸರ್ವೇ ಮುಗಿದಹಾಗೆ,” ಎಂದು ಎಮ್. ಎನ್. ಅನಲು, “ಆಯಿತು ಬನ್ನಿ, ಎಮ್. ಎನ್.ರವರೇ,” ಎಂದು ನಾನು ಅನ್ನುತ ಮತ್ತೆ ಸರ್ವೇಯಲ್ಲಿ ತಲ್ಲೀನರಾದೆವು. ಮತ್ತೆ ದಂಡಕಾರಣ್ಯದ ಸುತ್ತ ಚಲಿಸುವ ಹೆಜ್ಜೆಗಳನ್ನು ಹುಡುಕುತ್ತ ಹುಡುಕುತ್ತ ಒಂದು ಸಮಾನ ದೃಷ್ಟಿಕೋನದ ನಡಿಗೆ ನಡೆಯುತ್ತ ಮುಂದೆ ಸಾಗಿದೆವು. ನಮ್ಮ ಸಮಯವನ್ನು ಎಲ್ಲೂ ವ್ಯರ್ಥ ಮಾಡದೇ ಸರಿಯಾದ ಸಮಯದೊಂದಿಗೆ ನಾವು ನಮ್ಮ ಸಂಪೂರ್ಣ ಸರ್ವೇಯನ್ನು ಮುಗಿಸಿ ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಭಾಗದಲ್ಲಿರುವ ಒಂದು ಪುಟ್ಟ ಹಳ್ಳಿ ತಿರುನೆಲ್ಲಿ(ಕೇರಳ)ಗೆ ಬಂದು ತಲುಪಿದೆವು. ಕೊನೆಯಲ್ಲಿ ನಾವು ಕಷ್ಟ ಪಟ್ಟು ಬೆಟ್ಟದ ಏರಿಳಿತಗಳ ಹಾದಿಯನ್ನು ದಾಟಿ, ಮೊನಚಾದ ಹುಲ್ಲುಗಳಿಂದ ಚುಚ್ಚಿಸಿಕೊಂಡು, ಶೋಲಾ ಕಾಡುಗಳನ್ನು ನೋಡಿ ನಮಗಾದ ಸಂತೋಷವನ್ನು ವ್ಯಕ್ತಪಡಿಸುತ್ತಾ, ಮತ್ತು ಅಲ್ಲಲ್ಲಿ ಚರ್ಚೆ ಮಾಡುತ್ತಾ, ಮುಂದೆ ನಮ್ಮ ಪಿಕ್-ಅಪ್ ಪಾಯಿಂಟ್ ಕಡೆಗೆ ಸಂತೋಷದಿಂದ ಸಾಗುತ್ತಾ ಹೊರಟು ನಿಂತೆವು.
ಒಟ್ಟಿನಲ್ಲಿ, ಈ ‘ವಿಸ್ಮಯಲೋಕದ ನಾವಿಕರು!’ ಎಂಬ ಲೇಖನದ ತಾತ್ಪರ್ಯ ಇಷ್ಟೇ: ಪಶ್ಚಿಮ ಘಟ್ಟಗಳ ದಂಡಕಾರಣ್ಯದ ಅವಿಸ್ಮರಣೀಯ ಅನುಭವಗಳನ್ನು, ಹಲವಾರು ಮಜಲುಗಳನ್ನು ಕಥಾ ಹಂದರದ ರೂಪದಲ್ಲಿ ಅಚ್ಚುಕಟ್ಟಾಗಿ ಹೆಣೆಯುತ್ತ, ಮುಂದೆ ಸಾಗುವ ನಿಜ ರೂಪದ ಕಥೆಯ ಅತಿ ಮಧುರ ಕ್ಷಣಗಳನ್ನು ಸೊಗಸಾಗಿ ಇಲ್ಲಿ ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದೇನೆ.
(ಮುಕ್ತಾಯ)
ಮೊದಲ ಭಾಗವನ್ನು ಇಲ್ಲಿ ಓದಿ
ಎರಡನೇ ಭಾಗವನ್ನು ಇಲ್ಲಿ ಓದಿ