(ಮಾನವ-ವನ್ಯಜೇವಿ ಸಂಘರ್ಷದ ಬಗ್ಗೆ ಎರಡು ದಶಕಕ್ಕೂ ಮೀರಿದ ಸಂಶೋಧನೆ ನಡೆಸಿರುವ, ಅಧ್ಯಯನ ಮುಂದುವರೆಸಿರುವ ವನ್ಯಜೀವಿ ವಿಜ್ಞಾನಿ ಡಾ।। ವಿದ್ಯಾ ಆತ್ರೇಯಾ ಅವರ ಲೇಖನವೊಂದರ ಭಾವಾನುವಾದ)
ಭಾವಾನುವಾದ: ಸೌರಭಾ ರಾವ್
ಯಾವುದೇ ಮಾನವ-ವನ್ಯಜೇವಿ ಸಂಘರ್ಷದ ಘಟನೆ ನಡೆದರೂ ಎರಡೂ ಕಡೆಯ ಮೇಲೆ ಬೀರುವುದು ಪ್ರತಿಕೂಲ ಪಾರಿಣಾಮವೇ. ರಕ್ಷಿತಾರಣ್ಯಗಳ ಸುತ್ತ ಬೇಲಿ ಹಾಕಿಬಿಡಬೇಕೆಂಬ ಆಲೋಚನೆಯ ಹಿಂದಿನ ಉದ್ದೇಶ ಒಳ್ಳೆಯದಾದರೂ ಅದು ವೈಜ್ಞಾನಿಕವಾದ ಪರಿಹಾರವಲ್ಲ. ಮನುಷ್ಯರಾದ ನಮ್ಮ ತಿಳುವಳಿಕೆಗೆ ನಿಲುಕುವ 'ಬೇಲಿ', 'ಗಡಿ' ಎಂಬ ವಿಷಯಗಳು ಹುಲಿಗಳಿಗೆ ಅರ್ಥವಾಗುವುದಿಲ್ಲ. ಹಾಗಾದರೆ ಅವುಗಳು "ಬೇಲಿ ದಾಟಿ ಹೊರಗೆ ಹೋಗಿ" ಮನುಷ್ಯರು ಸಾಕಿದ ದನಕರುಗಳನ್ನು ಕೊಂದಾಗ ಏನಾಗುತ್ತದೆ?
© ಟೈಗರ್ ವಾಚ್
1.3 ಬಿಲಿಯನ್-ಗೂ ಮೀರಿದ ಜನಸಂಖ್ಯೆಯಿದ್ದರೂ ನಮ್ಮ ದೇಶದಲ್ಲಿ ಬೇರೆ ಆಗ್ನೇಯ ಏಷ್ಯಾ ದೇಶಗಳಿಗಿಂತ ಹೆಚ್ಚು ದೊಡ್ಡ ವನ್ಯಜೀವಿಗಳ ಪ್ರಭೇದಗಳಿವೆ. ಹುಲಿ, ಏಶಿಯನ್ ಆನೆ, ಚಿರತೆ, ಕರಡಿ, ಕಾಡೆಮ್ಮೆ (ಕಾಟಿ), ಮುಂತಾದ ಪ್ರಾಣಿಗಳ ಅತೀ ಹೆಚ್ಚು ಸಂಖ್ಯೆ ಇರುವುದು ಭಾರತದಲ್ಲಿ. ಈ ಪ್ರಾಣಿಗಳನ್ನು ಕೇವಲ ನಮ್ಮ ಲೆಕ್ಕದ ಕೆಲವು ನೂರು ಕಿಲೋಮೀಟರ್ ರಕ್ಷಿತಾರಣ್ಯಗಳ ಒಳಗೆ ನಿರ್ಬಂಧಿಸಲು ಸಾಧ್ಯವಿಲ್ಲ. ಹಾಗಿದ್ದಿದ್ದರೆ ಅವು ಅಂತಸ್ಸಂಬಂಧ ತಳಿವೃದ್ಧಿಯಿಂದ (ಇನ್ ಬ್ರೀಡಿಂಗ್) ಮತ್ತು ಸಂಪರ್ಕ ಕಡಿತದಿಂದ ಕಣ್ಮರೆಯಾಗುತ್ತವೆ. ಹುಲಿಗಳು ದೊಡ್ಡ ಪ್ರಾಣಿಗಳಾಗಿರುವುದರಿಂದ ಅವುಗಳಿಗೆ ದೊಡ್ಡ ಸ್ಥಳಾವಕಾಶ ಬೇಕು. ಭಾರತದಲ್ಲಿ ಇಂಥ ದೊಡ್ಡ ಜಾಗಗಳನ್ನು ಅವುಗಳಿಗೆ ಮಾಡಿಕೊಡಲು ಸಾಧ್ಯವಿಲ್ಲದಿರುವುದರಿಂದ, ವನ್ಯಜೀವಿಗಳು ಮನುಷ್ಯರ ಬಳಕೆಯಲ್ಲಿರುವ ಪ್ರದೇಶಗಳಿಗೆ ಬರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ – ಇದು ಮನುಷ್ಯರು ಮತ್ತು ಮನುಷ್ಯರಷ್ಟೇ ಹಳೆಯ ಸತ್ಯ. ಜನರಿಗೆ ಇದು ತಿಳಿದಿದೆ, ಮತ್ತು ನಮ್ಮ ಸಂಸ್ಕೃತಿಗಳಲ್ಲೂ ವನ್ಯಜೀವಿಗಳು ಅಂತರ್ಗತವಾಗಿವೆ. ನಮ್ಮ ಎಲ್ಲ ದೇವತೆಗಳಿಗೂ ಒಂದಲ್ಲಾ ಒಂದು ವನ್ಯಜೀವಿಯ ಜೊತೆ ಕಥೆ ಹೆಣೆದುಕೊಂಡಿರುತ್ತದೆ, ಇಲ್ಲಾ ಒಂದು ಬೇರೆ ಪ್ರಾಣಿ ಅವರ ವಾಹನವಾಗಿರುತ್ತದೆ. ನಮ್ಮ ಮಾನಸಿಕ, ಬೌದ್ಧಿಕ ತೆರವಿನಲ್ಲಿ ವನ್ಯಜೀವಿಗಳನ್ನು ನಾವು ಬಹಳ ಹಿಂದೆಯೇ ಸ್ವಾಗತಿಸಿದ್ದೇವೆ. ಎಷ್ಟೋ ಸಮುದಾಯಗಳ ಜನ ವನ್ಯಜೀವಿಗಳನ್ನು ಈಗಲೂ ಪೂಜಿಸುತ್ತಾರೆ.
ಭಾರತದಲ್ಲಿ ಭೂಪ್ರದೇಶವನ್ನು ಜನ ಮೊದಲಿನಿಂದಲೂ ಬೇರೆ ಪ್ರಾಣಿಗಳ ಹಂಚಿಕೊಂಡು ಬದುಕುತ್ತಲೇ ಇದ್ದಾರೆ. ಹಾಗಂತ ಮಾನವ-ವನ್ಯಜೇವಿ ಸಂಘರ್ಷ ಹಾನಿಯುಂಟುಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಪರಿಹಾರ ಇರುವುದು ಬೇಲಿ ಹಾಕುವುದರಲ್ಲಲ್ಲ, ನಮ್ಮ ಬೇಲಿ ಎಂಬ ಅರ್ಥ ವನ್ಯಜೀವಿಗಳಿಗೆ, ಒಂದು ಹುಲಿಗೆ ಅರ್ಥವಾಗಬೇಕಿಲ್ಲ. ಒಬ್ಬ ಮನುಷ್ಯ ಒಂದು ಬೇಲಿ ದಾಟಬಹುದಾದರೆ ಒಂದು ಹುಲಿಯೂ ದಾಟಬಹುದು. ನಮ್ಮ ದೇಶದ ಪರಿಸ್ಥಿತಿಗೆ ಸದ್ಯಕ್ಕಿರುವ ಪರಿಹಾರ, ಹುಲಿಗಳ ಇರುವಿಕೆಯ ಜೊತೆ ಸ್ಥಳೀಯ ಜನರ ಒಡನಾಟದಿಂದ ಇಬ್ಬರಿಗೂ ಹಾನಿಯಾಗುವುದನ್ನು ತಡೆಗಟ್ಟಬಹುದಾದ, ಅಭಿವೃದ್ಧಿ ಹೊಂದಬಹುದಾದ ಮಾರ್ಗಗಳು. ಹುಲಿ ಅಭಯಾರಣ್ಯಗಳ ಘೋಷಣೆಯಿಂದ ಹುಲಿಗಳ ರಕ್ಷಣೆಯೂ ಆಗುತ್ತದೆ ಮತ್ತು ಸ್ಥಲಿಯ ಜನರಿಗೂ ಇದರ ಪೂರ್ತಿ ಲಾಭ ದೊರೆಯುವಂತೆ ವ್ಯವಸ್ಥೆ ಪಾರದರ್ಶಕವಾಗಬೇಕು. ಹುಲಿಗಳು ನಮ್ಮ ನಡುವೆ ಇದ್ದೇ ಇರುತ್ತವೆ, ನದಿ ಮತ್ತು ಕಾಡುಗಳು ಇದ್ದಂತೆ, ಆದರೆ ಇದರ ಮೂಲಕ ವನ್ಯಜೀವಿ ಪ್ರವಾಸೋದ್ಯಮದಂತಹ ದಾರಿಗಳಿಂದ ಸ್ಥಳೀಯ ಜನರಿಗೆ ಜೀವನೋಪಾಯ ದೊರಕಿಸಿಕೊಡಬೇಕು. ವನ್ಯಜೀವಿ ಪ್ರವಾಸೋದ್ಯಮದಿಂದ ಬರುವ ಹಣವನ್ನು ಸ್ಥಳೀಯ ಸಮುದಾಯಗಳ ಯುವಜನತೆಗೆ ವಿವಿಧ ರೀತಿಯ ಜೀವನೋಪಾಯ ತರಬೇತಿ ನೀಡಬೇಕು. ಹುಲಿ ಅಭಯಾರಣ್ಯಗಳ ಸುತ್ತಲಿನ ಹಳ್ಳಿಗಳಿಗೆ ಒಳ್ಳೆಯ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಅರಣ್ಯಾಧಿಕಾರಿಗಳ ಮತ್ತು ಜನರ ನಡುವೆ ಮುಕ್ತ, ಪಾರದರ್ಶಕ ಸಂವಹನ ಏರ್ಪಡಬೇಕು, ಅವರು ಅಭಿವೃದ್ಧಿಗೆ ಬದ್ಧರಾಗಿರಬೇಕು. ಹುಲಿಗಳಿಂದ ಅನುಕೂಲಗಳೇ ಹೆಚ್ಚಾದರೆ, ಅವುಗಳ ಮೇಲೆ ಜನರಿಗೆ ಅಸಮಾಧಾನ ಹೋಗುತ್ತದೆ. ಹೀಗೆ ಸ್ಥಳೀಯ ಜನರ ಏಳಿಗೆಯಿಂದ, ಹುಲಿ ಮತ್ತು ಇತರ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಅವರಲ್ಲೂ ಕಾಳಜಿ ಬೆಳೆಯುತ್ತದೆ.
© ಟೈಗರ್ ವಾಚ್
ಇಷ್ಟೆಲ್ಲಾ ದೂರದೃಷ್ಟಿಯಾದರೆ, ಅಲ್ಪಾವಧಿಯಲ್ಲಿ ಮಾನವ-ವನ್ಯಜೇವಿ ಸಂಘರ್ಷ ಉಂಟಾದಾಗ ಜನರಿಗೆ ಸಿಗುವ ನಷ್ಟಪರಿಹಾರ ಯೋಜನೆಗಳು ಮತ್ತಷ್ಟು ಸುಧಾರಿಸಬೇಕು. ಪರಿಹಾರಧನ ಜನರ ನಷ್ಟಪರಿಹಾರ ಆಗುವಷ್ಟು ನ್ಯಾಯಸಮ್ಮತವಾಗಿರಬೇಕು. ಪರಿಹಾರಕ್ಕಾಗಿ ದಾಖಲೆಪತ್ರಗಳ ಪ್ರತಿಕ್ರಿಯೆ, ಕಾರ್ಯನಿರ್ವಹಣೆ ಸುಲಭವಾಗಬೇಕು ಮತ್ತು ಜನರು ನಷ್ಟದಿಂದ ನಿರಾಶರಾಗದಂತೆ ಸಮಯಕ್ಕೆ ಸರಿಯಾಗಿ ಸಹಾಯಧನ ಸಿಗಬೇಕು. ವ್ಯವಸ್ಥೆಯಲ್ಲಿ ಸ್ವಲ್ಪವೂ ಭ್ರಷ್ಟಾಚಾರ ಇರಬಾರದು, ಲಂಚದ ಹೊಂಚಿರಬಾರದು.
ನಷ್ಟವನ್ನು ನ್ಯಾಯಸಮ್ಮತವಾಗಿ ಅಳೆದು, ಆನ್ಲೈನ್ ವ್ಯವಸ್ಥೆ ಮಾಡಿ ಪರಿಹಾರ ಜನರ ಬ್ಯಾಂಕ್ ಖಾತೆಗೆ ನೇರ ತಲುಪುವಂತೆ ಮಾಡಬೇಕು. ಇದರಿಂದ ಪಾರದರ್ಶಕತೆ ಉಂಟಾಗಿ ಜನರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಬೆಳೆಯುತ್ತದೆ.
ಹಾಗೆ ನೋಡಿದರೆ ಪರಿಹಾರಗಳು ಸುಲಭವಾಗಿ ಜಾರಿ ಮಾಡಬಹುದಾದಂಥವೇ. ದೀರ್ಘಾವಧಿಯಲ್ಲಿ ವನ್ಯಜೇವಿಗಳಿಗೂ ಮತ್ತು ಮನುಷ್ಯರಿಗೂ ಸಕಾರಾತ್ಮಕವಾದಂಥ, ವೈಜ್ಞಾನಿಕ, ನ್ಯಾಯಸಮ್ಮತ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಬೇಕು. ಅಭಯಾರಣ್ಯಗಳ ಸುತ್ತಲ ಸ್ಥಳೀಯ ಜನರಿಗೆ ನಾವು ಪ್ರಾಮಾಣಿಕವಾಗಿ, ದಕ್ಷರಾಗಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದರೆ, ಅವರ ಅಭಿವೃದ್ಧಿಗೆ ನಾವು ಶ್ರಮಿಸಿದರೆ, ಅವರು ಹುಲಿಗಳ ಮತ್ತು ಎಲ್ಲ ವನ್ಯಜೀವಿಗಳ ರಕ್ಷಕರಾಗುವುದರಲ್ಲಿ ಯಾವ ಸಂಶಯವೂ ಇಲ್ಲ.