ವಿಸ್ಮಯಲೋಕದ ನಾವಿಕರು...
(ಭಯ, ಕುತೂಹಲ, ಹಾಸ್ಯ)
ದಂಡಕಾರಣ್ಯದ ಸುತ್ತ ಚಲಿಸುವ ಹೆಜ್ಜೆಗಳು...
ಲೇಖಕರು – ಸತೀಶ ಗ. ನಾಗಠಾಣ
ಬೆಳಗಿನ ಹೊತ್ತು ತಂಪಾಗಿ ಬೀಸುತ್ತಿರುವ ಗಾಳಿ ಮತ್ತು ದಟ್ಟವಾಗಿ ಕವಿದಿದ್ದ ಮೋಡಗಳು ನೆಲಕ್ಕೆ ತಾಗಿದಂತಾಗಿತ್ತು. ದಟ್ಟ ಕಾಡು ಕಿಕ್ಕಿರಿದು ತುಂಬಿದ ಬೃಹತ್ ಮರಗಳ ಸಾಲುಗಳ ಮಧ್ಯದಲ್ಲಿ ಒಂದು ಅಂಕು-ಡೊಂಕಾದ ಮಣ್ಣಿನ ರಸ್ತೆ ಬಹಳ ದೂರದವರೆಗೆ ಹಾದು ಹೋಗುತ್ತಿತ್ತು. ಗುಡ್ಡಗಾಡುಗಳಿಂದ ಆವರಿಸಿದ ಕಣಿವೆಗಳ ಸುತ್ತ ಚಿಕ್ಕ-ಚಿಕ್ಕ ನೀರಿನ ಜಲಪಾತಗಳನ್ನು ತನ್ನ ಒಡಲೊಳಗೆ ಧುಮ್ಮಿಕ್ಕಿ ಹರಿಯುವ ಇಳಿಜಾರುಗಳಿಂದ ಕೂಡಿದ ಆಳವಾದ ತಗ್ಗು ಪ್ರದೇಶ ಅದಾಗಿತ್ತು. ಸಮರೋಪಾದಿಯಲ್ಲಿ ಚಲಿಸುವ ಮಣ್ಣಿನ ರಸ್ತೆ ತನ್ನದೇ ಆದ ಒಂದು ವಿಸ್ಮಯಲೋಕಕ್ಕೆ ಮೊದಲಬಾರಿಗೆ ಹೆಜ್ಜೆ ಇಡುತ್ತಿದ್ದೆವೇನೋ ಎಂದನಿಸುವಂತೆ ಮಾಡುತ್ತಿತ್ತು.
ಸಲೀಸಾಗಿ ಒಂದು ಜೀಪು ಮಾತ್ರ ಸಾಗಬಹುದಾದ ಏಕಮುಖ ಸಂಚಾರ ಹೊಂದಿದ ದಾರಿ, ಏಕೆಂದರೆ ಮತ್ತೊಂದು ಕಡೆಯಿಂದ ಬರುವಂತಹ ದಾರಿ ಯಾವುದೂ ಇಲ್ಲವಾಗಿತ್ತು. ನಡೆದುಕೊಂಡೇ ಹೋದರೆ ತುಂಬಾ ರೋಮಾಂಚನವಾದ ಗುಡ್ಡಗಾಡು ಪ್ರದೇಶ. ದೊಡ್ಡದಾದ ಗುಡ್ಡವನ್ನು ಕೊರೆದು ಮಾಡಿದ ರಸ್ತೆ ಅಷ್ಟೊಂದು ಗಟ್ಟಿ ಇರಲಿಲ್ಲ, ಸ್ವಲ್ಪ ಸ್ವಲ್ಪ ಮಣ್ಣು ಅಲ್ಲಲ್ಲಿ ಜಾರಿ ಬೀಳುತ್ತಿತ್ತು. ಮಳೆ ಏನಾದರೂ ವಕ್ಕರಿಸಿದರೆ ಕಥೆ ಹರೋಹರ, ನಾವು ಅಂದುಕೊಂಡ ಹಾಗೆ ರಸ್ತೆಯ ಮೇಲೆ ಹಾಕಿದ ಮಣ್ಣು ಅಷ್ಟೊಂದು ಗಟ್ಟಿ ಇರಲಿಲ್ಲ. ಅಪ್ಪಿತಪ್ಪಿ ಏನಾದರೂ ಕೆಸರು ತುಂಬಿದ ಮಣ್ಣಲ್ಲಿ ಕಾಲಿಟ್ಟರೆ ಒಂದೆರೆಡು ಮೂರು ಲಗಾಟಿ ಹೊಡೆದು ಬಹಳ ದೂರ ಹೋಗಿ ಜಾರಿ ಬೀಳುವಂತಹ ಸ್ಥಳವಾಗಿತ್ತು. ಹೇಗಪ್ಪಾ ಮಾಡೋದು, ಈ ಸ್ಥಳದಿಂದ ನಡೆದುಕೊಂಡು ಇವತ್ತು ನಾವು ಹೋಗಲೆಬೇಕು ಇಲ್ಲವಾದಲ್ಲಿ ಈ ದಂಡಕಾರಣ್ಯದಲ್ಲಿಯೇ ಉಳಿಯಬೇಕಾದೀತು ಅಂತ ನಾನು ನನ್ನ ಜೊತೆಯಲ್ಲಿರುವ ಸಂಗಡಿಗರಿಗೆ ಹೇಳಿದೆ. ಛೇ! ಎಲ್ಲವನ್ನೂ ಹೇಳ್ತಾ ಹೇಳ್ತಾ ನನ್ನ ಜೊತೆಯಲ್ಲಿ ಬಂದವರನ್ನ ಪರಿಚಯ ಮಾಡಿಸಲೇ ಇಲ್ಲ ನೋಡಿ. ಕಾಡಿನ ಇಂಚು-ಇಂಚುಗಳ ಮಾಹಿತಿ ಗೊತ್ತಿರುವ ಮತ್ತು ಒಳ್ಳೆಯ ಮಾತುಗಾರಿಕೆಯ ವ್ಯಕ್ತಿತ್ವ ಹೊಂದಿದ ಚಿಕ್ಕ ವಯಸ್ಸಿನ ಅನುಭವಿ ವ್ಯಕ್ತಿ ಅಂದರೆ ಅದುವೇ ಆನಂದ. ಕೈಯಲ್ಲಿ ಒಂದು ಕೋಲು ವಿನಹಃ ನಡಿಗೆ ತುಂಬಾ ಜೋರು. ಅರಣ್ಯ ಇಲಾಖೆಯ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿತ್ತು ಅಷ್ಟೇ. ಇನ್ನೊಬ್ಬರು ನನ್ನ ಸಹದ್ಯೋಗಿ ಕಿರಣ, ಬಹಳ ಚುರುಕು ಬುದ್ದಿ, ಧೈರ್ಯ ಮತ್ತು ಸಾಹಸಿ. ಇವರುಗಳ ಜೊತೆಗೂಡಿ ಕೆಲಸದ ನಿಮಿತ್ತ ತಲಕಾವೇರಿ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಜಾಡನ್ನು ಹಿಡಿದು ನಡೆಯುವ ಸರ್ವೇ ಕೆಲಸ ಶುರುವಾಗಿತ್ತು.
ಬಿಸಿಲನಾಡಿನ ಪ್ರದೇಶದಿಂದ ಬಂದಂತಹ ನಮಗೆ ಈ ಮಳೆ, ಗಾಳಿ, ತಂಪು ಅಂದರೆ ಗೊತ್ತಿರಲಿಲ್ಲ. ನಮಗೂ ಈ ತಂಪಿಗೂ ವಿರುದ್ದ ಅವಿನಾಭಾವ ಸಂಭಂದ ನೋಡ್ರಿ! ಒಂದೇ ಸಮನೆ ಚಳಿಯಿಂದ ಗಡಗಡ ಅಂತ ನಡುಗ್ತಾ ಇದ್ದೆ. ಪಕ್ಕದಲ್ಲಿದ್ದ ಕಿರಣ ನೆಗಡಿಯಿಂದ ಜೋರಾಗಿ ಸೀನಿದರೆ ಇಡೀ ಕಾಡಿನಲ್ಲೇ ಜೋರಾಗಿ ಅನುರಣಿಸಿದಂತಾಗುತ್ತಿತ್ತು. ಏನಾದರೂ ಹೆಜ್ಜೆ ಗುರುತುಗಳು ಸಿಗಬಹುದು ಎಂದು ನಾನು ಆನಂದ ಸೂಕ್ಷ್ಮವಾಗಿ ಗಮನಿಸುತ್ತಿರುವಾಗ ಪಕ್ಕದಲ್ಲಿದ್ದ ಕಿರಣ ಸಿಡಿಲು ಬಡಿದ ಹಾಗೆ ಹಾಂಕ್ಷಿಂ.. ಹಾಂಕ್ಷಿಂ… ಅಂತ ಸೀನುವಾಗ ಎದೆ ಝಲ್ ಅಂತ ಸದ್ದು ಮಾಡುತ್ತಿತ್ತು. ಸೂಜಿ ಬಿದ್ದರೂ ಸಪ್ಪಳವಾಗದ ಈ ವಾತಾವರಣದಲ್ಲಿ ಮನಸ್ಸು, ಬುದ್ಧಿ ಒಂದೇ ಕಡೆ ಸೀಮಿತವಾಗಿ ಕೆಲಸ ಮಾಡುತ್ತಿರುವಾಗ ಈ ತರಹ ಘಟನೆಗಳು ನಡೆದು ಬಿಟ್ಟರಂತೂ ಅರ್ಧ ಕಥೆ ಮುಗಿದ ಹಾಗೇ! ಎದೆ ಲಬಕ್ ಅಂತ ಕಿತ್ತಿಕೊಂಡು ಬಾಯಿಗೆ ಬಂದಂಗಾಗಿ ಉಸಿರೇ ನಿಂತೇ ಹೋಯಿತೇನೋ ಅಂತ ಗಟ್ಟಿಯಾಗಿ ಎದೆಯ ಮೇಲೆ ಕೈ ಇಟ್ಟಾಗ ಹೃದಯ ‘ಲಬಡಬ’ ‘ಲಬಡಬ’ ಅಂತ ಜೋರಾಗಿ ಬಡಿದುಕೊಳ್ಳುತ್ತಿತ್ತು. ಒಂದೊಂದು ಸಲ ಕಾಡಿನಲ್ಲಿ ನಡೆಯುವಾಗ ಪಕ್ಕದಲ್ಲಿ ನಮಗೆ ಗೊತ್ತಿರದ ಹಾಗೇ ಜಿಂಕೆ ಅಥವಾ ಕಡವೆ ಜೋರಾಗಿ ಸದ್ದು ಮಾಡಿದಾಗಲೂ ಎದೆ ಕಿತ್ತುಕೊಂಡು ಬಂದು ಎದೆ ಬಡಿತ ನಿಂತೇ ಹೋಯಿತೇನೋ ಅಂತ ಅನ್ನಿಸದೇ ಇರಲಾರದು. “ರೀ... ಕಿರಣ, ನೀವು ಈ ತರಹ ಮಾಡಿದರ ನನ್ನ ಕಾಲುಗಳು ಗಡಗಡ ನಡುಗ್ತಾವ, ಯಾಕಂದರ ದಟ್ಟ ಕಾಡು ಬೇರೆ! ಯಾವ ಪ್ರಾಣಿ ಯಾವ ಮೂಲ್ಯಾಗ ಇರತದ ಏನೋ, ಯಾರಿಗೂ ಗೊತ್ತಿಲ್ಲ! ಅಂತಹದರಲ್ಲಿ, ಈ ಪ್ರದೇಶದ ತುಂಬಾ ಗಜರಾಜನ ಹಾವಳಿ ಬೇರೆ ಜೋರಾಗಿ ಇದೆ ಅಂತ ನಮ್ಮ ಆನಂದ ಬೇರೆ ಹೇಳುತ್ತಿರುವರು. ನೋಡಿ ಕಿರಣ, ಒಂದು ವೇಳೆ ನಿಮಗೇನಾದರೂ ಸೀನು ಬಂತಂದರ ನನಗ ಹೇಳಿ! ಏನಾದರೂ ಸೀನು ತಡಿಯೋದಕ್ಕ ಕಷಾಯ ಹಾಕುವ ಪ್ಲ್ಯಾನ್ ಮಾಡುವ” ಅಂತ ಹೇಳಿ ಹೊರಟೆವು.
ಕಿರಿದಾದ ಜಾಗದಿಂದ ಕೂಡಿದ ದಾರಿಯ ಅಕ್ಕಪಕ್ಕದಲ್ಲಿ ನಡೆದು ಹೋಗುತ್ತಿದ್ದೆವು. ನಡೆದೂ ನಡೆದೂ ಸುಸ್ತಾದ ಕಾರಣ ಒಂದು ಐದು ನಿಮಿಷ ಇಲ್ಲೆ ಸ್ವಲ್ಪ ಹೊತ್ತು ಕಾಲ ಕಳೆದು ಮುಂದೆ ಹೋಗೋಣ, ಏನಾದರೂ ಸಿಗಬಹುದು ಅಂತ ಅಂದುಕೊಳ್ಳುತ್ತಿರುವಾಗ, ಒಂದು ಆಳವಾದ ತಗ್ಗಿರುವ ಜಾಗದಿಂದ ಒಂದು ಶಬ್ದ ಕೇಳಿಸಲು ಶುರುವಾಯಿತು. ಏನಿರಬಹುದು ಅಂತ ಇಣುಕಿ ಇಣುಕಿ ಗಮನಿಸುತ್ತಿರುವಾಗ ತಗ್ಗು ತುಂಬಿದ ಇಳಿಜಾರಿನ ಪ್ರದೇಶದ ಕೆಳಗೆ ಸಿಕ್ಕಾಪಟ್ಟೆ ಮರಗಳು ಇರುವ ಜಾಗದಿಂದ ಶಬ್ದ ಬಹಳ ಸೂಕ್ಷ್ಮವಾಗಿ ಕೇಳಿಸುತ್ತಿತ್ತು. ಯಾವುದೋ ಮರ ಅಲುಗಾಡಿದ ಹಾಗೇ ಕಾಣ್ತಾ ಇತ್ತು! ಬೆಟ್ಟದ ಮೇಲೆ ಇದ್ದುದ್ದರಿಂದ ಬಚಾವ್ ಆದೆವು. ಲಟಕ-ಪಟಕ ಅಂತ ಶಬ್ದ ಬೇರೆ ಕೇಳುತ್ತಿತ್ತು. ಬಹುಶಃ ಇದು ಪಕ್ಕಾ ಗಜರಾಜನ ಎಂಟ್ರಿ ನೋಡ್ರಿ ಅಂದೆ. ಲೇಟಾದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದ ಗಜರಾಜನಿಗೆ ನಮ್ಮ ಇರುವಿಕೆಯ ಅರಿವು ಇರಲಿಲ್ಲ. ನಾವು ಒಂದು ತೀರ ಇದ್ದರೆ ಗಜರಾಜ ಇನ್ನೊಂದು ತೀರದ ಕಡೆ ಮೇಯುತ್ತಿರುವಾಗ ಜೋರಾಗಿ ಕಿರುಚಿಯೇ ಬಿಟ್ಟಿದ್ದ. ಗಜರಾಜನ ಕಿರುಚುವಿಕೆಯು ದಟ್ಟ ಕಾಡುಗಳ ಮಧ್ಯದಿಂದ ಜೋರಾಗಿ ಪ್ರತಿಧ್ವನಿಯಾಗಿ ಕೇಳಿಸಲಾರಂಭಿಸಿತು. ಮನಸ್ಸಿನ ಉದ್ವೇಗ ಒಂದು ಕಡೆಯಾದರೆ, ಇನ್ನೊಂದು ಕಡೆ ಗಜರಾಜನ ಇರುವಿಕೆಯಿಂದ ಬಹಳ ದೂರವಿರುವ ನಾವುಗಳು ಕೊಂಚ ರಿಲ್ಯಾಕ್ಸ್ ಆದ ಮೂಡನಲ್ಲಿ ಇದ್ದೆವು. ಅಬ್ಬಾ! ಮೈ ಕೊರೆಯುವಂತಹ ಚಳಿ ಇದ್ದರೂ ಹಣೆಯ ಮೇಲಿರುವ ಬೆವರು ಹನಿಹನಿಯಾಗಿ ಬೀಳುತ್ತಿತ್ತು.
ಕೆಸರು ತುಂಬಿದ ಮಣ್ಣಿನ ರಸ್ತೆ ಮೇಲೆ ಸಿಕ್ಕ ಅಪರೂಪದ ಹೆಜ್ಜೆಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದೃಶ್ಯ ಮತ್ತು ಇನ್ನೊಂದು ತೀರದಲ್ಲಿ ಒಂಟಿಯಾಗಿ ಮೇಯುತ್ತಿರುವ ಆನೆಯ ಪಟ. ಚಿತ್ರ: ಕೃಷ್ಣಾ ಸಾತಪೂರ
ತುಂತುರು ಮಳೆ ಬರುವ ಎಲ್ಲಾ ಲಕ್ಷಣಗಳಿದ್ದರೂ ಅವತ್ತು ಮಳೆ ಬರಲಿಲ್ಲ. ಬೆಟ್ಟದ ಕೆಳಗಿರುವ ಗಜರಾಜನ ಹಿಂಬದಿ ಮಾತ್ರ ಕಾಣುತ್ತಿತ್ತು. ಅಜಾನುಬಾಹು ಆದ ಅದರ ದೇಹ ನೋಡಲು ಬಲು ಸುಂದರ, ಉದ್ದನೆಯ ಕೋರೆ ಹಲ್ಲುಗಳು, ಸೊಂಡಿಲು ಅಮೋಘ ಅಂತ ಅನ್ನುತಿರಲು, ಪಕ್ಕದಲ್ಲಿದ್ದ ಆನಂದ ಬಹುಶಃ ಒಂಟಿ ಸಲಗ ಇರಬಹುದು, ಅದಕ್ಕೇ ಈ ಪಾಟಿ ಪುಸುಗುಟ್ಟುತ್ತಿದೆ ನೋಡಿ ಸರ್ ಅಂತ ಅತ್ತಂದಿತ್ತ ಓಡಾಡಿ ನೋಡಿ ಹೇಳಿದ. “ಮೊನ್ನೆ ಮೊನ್ನೆ ಇದೇ ದಾರಿಯಾಗೆ ಸ್ವಲ್ಪ ದೂರ ಹೋದರೆ ಒಂದು ಕಾಫಿ ಎಸ್ಟೇಟ್ ಬರುತ್ತೆ. ಅಲ್ಲಿ ಇದೇ ತರಹದ ಒಂದು ಒಂಟಿ ಸಲಗ ಒಬ್ಬನನ್ನು ಬೆನ್ನು ಬಿಡದೆ ಅಟ್ಟಾಡಿಸಿ ಓಡಿಸಿದ್ದರಿಂದ ಆತ ಹೇಗೋ ಅಪಾಯದಿಂದ ಉಪಾಯ ಮಾಡಿ ಎದ್ನೋ-ಬಿದ್ನೋ ಅಂತ ಅಲ್ಲಿಂದ ಪಾರಾಗಿದ್ದಾನೆ ಸರ್” ಅಂದ. “ಹೌದಾ! ಈ ಕಾಡಲ್ಲಿ ಕಾಫಿ ಎಸ್ಟೇಟ್ ಗಳಾ? ಈ ಎಸ್ಟೇಟಗಳು ಇಲ್ಲಿ ಇರಲು ಹೇಗೆ ಸಾಧ್ಯ, ಆನಂದ?” ಅಂತ ಕೇಳಿದೆ. “ಈ ಪ್ರದೇಶದಲ್ಲಿ ಬಹಳ ಹಳೇ ಕಾಲದ ಎಸ್ಟೇಟಗಳು ಇವೆ. ಆದರೆ ಇಲ್ಲಿರುವ ಎಸ್ಟೇಟಗಳನ್ನ ಈಗ ಯಾರೂ ನೋಡಿಕೊಳ್ಳುತ್ತಿಲ್ಲ ಹೊರತು ಆಗಾಗ ಜನರ ಓಡಾಟ ಇರುವುದರಿಂದ ಈ ತರಹದ ಘಟನೆಗಳು ನಡೆಯುತ್ತಿರುತ್ತವೆ. ಇವೆಲ್ಲಾ ಈ ಭಾಗದಲ್ಲಿ ಮಾಮೂಲಿ ಬಿಡಿ. ನಡೀರಿ, ನಡೀರಿ ಸರ್” ಅಂತ ಹೇಳುತ್ತಿರುವಾಗ, ‘ಆಸಮಾನ್ ಸೆ ಗಿರಾ... ಸೀದಾ ಜಾಕರ್ ಖಜುರ ಮೆ ಅಟಕಾ…’ ಅನ್ನೋ ಯುಕ್ತಿ ನನ್ನ ತಲೆಯಲ್ಲಿ ‘ಬುಲೆಟ್ ಟ್ರೇನ್' ತರಹ ಸಂಶಯಾಸ್ಪದ ಸುಳಿ ಹುಟ್ಟಿಹಾಕಿದ್ದಂತೂ ಸುಳ್ಳಲ್ಲ. “ಸರ್, ನಾವೇನಾದರೂ ಈ ಆನೆ ಕೈಯಾಗೆ ಸಿಕ್ಕಬುಟ್ಟರೆ, ಬುಗರಿ... ಬುಗರಿ... ಆಡಿಸಿದಂಗೆ ಆಟ ಆಡಿಸಬಿಡುತೈತೆ. ಸ್ವಲ್ಪ ಮೈಯೆಲ್ಲಾ ಕಣ್ಣಾಗಿರಿ, ಹುಷಾರು!” ಅಂತ ಅಂದರು ಆನಂದ. ಅದೇನೋ ಅಂತಾರಲ್ಲರೀ ಕಿರಣ ನಮ್ಮ ಕಡೆ, ‘ಮಜಾಕ್ ಮಜಾಕ್ ಮೇ ರಜಾಕ್ ಮರಗಯಾ!’ ಅಂತ, ಹಂಗಾಗಬಾರದು ನೋಡ್ರಿ ನಮ್ಮ ಕಥೇನೂ, ಸ್ವಲ್ಪ ನೀವು ಮ್ಯಾಲೆ ಕೆಳಗೆ ನೋಡಕೊಂತ ನಡೀರಿ” ಅನ್ನುತಿರಲು, “ಬನ್ನಿ, ಬನ್ನಿ ಸರ್, ಬೇಗ ಬೇಗ ಹೋಗೋಣ. ಇಲ್ಲೇ ಎಲ್ಲೋ ಮೇಯುತ್ತ ನಿಂತಿರುತ್ತವೆ ಆನೆಗಳು, ಮೊದ್ಲೇ ಈ ದಾರಿಯಾಗೆ ಬಿದಿರುಗಳು ಬಹಳಷ್ಟಿವೆ, ಆದಷ್ಟೂ ಇಲ್ಲಿಂದ ನಾವು ಪಾರಾಗಬೇಕು” ಅಂತ ಪುಸುಗುಟ್ಟುತ್ತ ನಡೆಯಲು ಶುರುಮಾಡಿದ.
ಆನಂದ ಹೇಳುತ್ತಿರೋದು ನಿಜಾ ಆದರೂ ಆಗಿರಬಹುದು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತ ಹೋಗುತ್ತಿರಬೇಕಾದರೆ ಕೆಲವು ಹೆಜ್ಜೆಗುರುತುಗಳು ಕೆಸರು ತುಂಬಿದ ಮಣ್ಣಿನಲ್ಲಿ ನಮಗೆ ಕಂಡವು. “ಈ ಹೆಜ್ಜೆ ಗುರುತುಗಳನ್ನ ನೋಡುತ್ತಿದ್ದರೆ ಯಾವುದೋ ಮಾಂಸಾಹಾರಿ ಪ್ರಾಣಿ ಇಲ್ಲಿಂದ ಹಾದು ಹೊದಂಗಾಗಿದೆ, ಜಸ್ಟ್ ಮಿಸ್ (ಹತಾಶೆಯಿಂದ ಆನಂದ ಸ್ವಲ್ಪ ಮುಖವನ್ನು ಗಂಟಾಗಿಸಿಕೊಂಡು). ಇಲ್ಲಾಂದರೆ ಇವತ್ತು ನಮ್ಮ ಕಣ್ಣಿಗೆ ಕಾಣುತ್ತಿದ್ದವು ನೋಡಿ.” ಪಕ್ಕದಲ್ಲಿದ್ದ ಕಿರಣ ತನ್ನ ಅಗಲವಾದ ಕನ್ನಡಕವನ್ನು ತೆಗೆದು ಬಟ್ಟೆಯಿಂದ ಸರಿಯಾಗಿ ಒರೆಸಿ ಕಣ್ಣಿನ ಮೇಲೆ ಮತ್ತೊಂದು ದಪ್ಪ ಗಾಜಿನ ಕನ್ನಡಕವನ್ನ ಹಾಕಿ ಅದರಿಂದ ಕಿಕ್ಕರಿಸಿ ನೋಡುತಿರಲು, “ಇದು ಕೆನ್ನಾಯಿಯ ಹೆಜ್ಜೆಗಳು ಇದ್ದರೂ ಇರಬಹುದು. ಆದರೆ, ಈ ಕೆಸರಿನಲ್ಲಿ ಇನ್ನು ಹಲವು ಪ್ರಾಣಿಗಳು ಓಡಾಡಿವೆ” ಎನ್ನುತಿರಲು ನನ್ನ ಹಿಂಬದಿಯ ಕಾಲಿನಲ್ಲಿ ನಾನು ಬಗ್ಗಿ ನೋಡುತಿರಲು ಚಿರತೆಯ ಹೆಜ್ಜೆಗಳು ಕಾಣಿಸಿಕೊಂಡವು! “ಅಬ್ಬಾ! ಇಲ್ಲಿ ನೋಡಿ! ನೋಡಿ! ಎಷ್ಟ ಚಂದದ ನೋಡ್ರಿ! ಹೊಡಿ ಒಂಭತ್ತ, ಸಿಕ್ಕೇಬಿಟ್ಟಿತು!” ಅಂತ ರೆಕಾರ್ಡ್ ಹಾಳೆಯಲ್ಲಿ ನಮೂದಿಸಿಕೊಂಡೆವು. ನೋಡನೋಡುತ್ತ ಕಡವೆ, ಜಿಂಕೆ, ಕಾಡು ಕುರಿ, ಕಾಡೆಮ್ಮೆ (ಕಾಟಿ), ರಾಶಿ ರಾಶಿ ಹೆಜ್ಜೆಗಳನ್ನ ಹುಡುಕಿ ಹುಡುಕಿ ಪತ್ತೆ ಹಚ್ಚುವ ಕೆಲಸ ಮಜಾ ಕೊಡುತ್ತಿತ್ತು.
ಅಷ್ಟರಲ್ಲಿ ನಾವು ಕ್ರಮಿಸಬೇಕಾದ ದಾರಿ ಕೊನೆಯ ಘಟ್ಟದಲ್ಲಿರಲು ನೋಡನೋಡುತ್ತ ಬೆಳಕು-ಕತ್ತಲೆಯ ರೂಪ ತಾಳುವುದರೊಳಗೆ ನಾವು ಇಲ್ಲಿಂದ ಬೇಗ ಬೇಗ ನಡೆದು ಮುಂದೆ ಸಾಗಬೇಕು. ಹೇಗಾದರೂ ಮಾಡಿ ಇವತ್ತು ನಮ್ಮ ಗುರಿಯನ್ನ ತಲುಪಲೇಬೇಕು ಅಂತ ಹೇಳಿ ಕಾಡಿನ ದಾರಿಯತ್ತ ಮುಖ ಮಾಡಿ ಹೊರಡಲು ಸಿದ್ಧರಾದೆವು.
(ಮುಂದುವರೆಯುವುದು…)
ಮುಂದುವರಿದ ಭಾಗವನ್ನು ಇಲ್ಲಿ ಓದಿ