ಪಶ್ಚಿಮ ಘಟ್ಟಗಳ ಮಾಯಾಲೋಕದಿಂದಃ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ...
ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ...
ಮುಂದುವರೆದ ಕೊನೆಯ ಭಾಗ....
ಸತೀಶ ಗಣೇಶ ನಾಗಠಾಣ
ಸೃಷ್ಟಿಯಲ್ಲಿ ಗೋಚರಿಸುವ ನಿಸರ್ಗದ ಒಡನಾಟಗಳ ಮಧ್ಯೆ ನಾನು ಬಹಳಷ್ಟು ಕಲಿಯುತ್ತಾ ಮುಂದೆ ಸಾಗುತ್ತಿದೆ ಎಂಬುದರ ಬಗ್ಗೆ ಅರಿವು ಮನದಲ್ಲಿ ಹರಿದಾಡಲು ಶುರುವಾಯಿತು. ಪ್ರತಿ ದಿನದ ಕಾಯಕಗಳನ್ನೇಲ್ಲ ಪ್ರಕೃತಿ ಮಡಲಲ್ಲಿ ಮೀಸಲಿಟ್ಟಿದ್ದೆ ಎಂಬುದರ ತಾತ್ಪರ್ಯ ನನ್ನನ್ನು ಹುಸಿಗೊಳಿಸಲಿಲ್ಲ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಅಂಚಿನಲ್ಲಿ ಬರುವ ಕಂಭಂ ಪ್ರದೇಶದಲ್ಲಿ ಕೊನೆಯ ದಿನದ ಕೆಲಸ ಮುಗಿಸುವ ಕಾತರದಲ್ಲಿ ನಮ್ಮ ಬಳಗದ ಸದಸ್ಯರೆಲ್ಲರು ಕೆಲ ದಿನಗಳಿಂದ ಅಲ್ಲಿಯೇ ಬೀಡು ಬಿಟ್ಟಿದ್ದೇವು. ಇನ್ನೇನು ಎಲ್ಲ ಕೆಲಸ ಮುಗಿಯಿತು ಎಂದು ಹರ್ಷದ ತುದಿಗಾಲಲ್ಲಿ ಎಲ್ಲರು ಮುಖಗಳು ಫಳಫಳನೆ ಹೊಳೆಯುವ ಸೂರ್ಯಕಾಂತಿಯ ಹಾಗೆ ಮಿಂಚಲು ಶುರುಮಾಡಿದ್ದವು. ನಿರಂತರವಾದ ನಡಿಗೆಯಿಂದ ಕೆಲ ದಿನಗಳ ವಿಶ್ರಾಂತಿಯಾದರು ಸಿಕ್ಕಿತು ಎಂಬ ಮೋಹದಿಂದ ನಗುವಿನ ಪತಾಕೆ ಎಲ್ಲರಲ್ಲಿಯೂ ಕಾಣುತ್ತಿತ್ತು. ಬಿಸಿಲಿನ ತಾಪಕ್ಕೆ ಎಲ್ಲರ ಮುಖಗಳು ಕಲ್ಲಿದ್ದಲಿನ ರೂಪತಾಳಿತ್ತು. ಬೆಳಗಾಯಿತೆಂದರೆ ಕೊರೆಯುವ ಚಳಿಯಿಂದ ಎಲ್ಲರೂ ತತ್ತರಿಸಿ ಹೋಗಿದ್ದರು ಸಹ ಕೊನೆಯ ದಿನ ಮರಭೂಮಿಯಲ್ಲಿ ದುರ್ಲಭವಾಗಿ ದೊರಕುವ ಓಯಾಸಿಸ್ ಹಾಗೇ ಪಟಪಟನೇ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಆ ದಿನಗಳ ಹುಮ್ಮಸ್ಸು, ಚೈತನ್ಯವನ್ನ ನಾವು ಈ ದಿನಮಾನದಲ್ಲಿ ದುಡ್ಡಿನಿಂದ ಖರೀದಿಸಲು ಸಾಧ್ಯವೇ ಇಲ್ಲ.
ಒಂದಿನ ನಾನು ಮತ್ತು ಹರ್ಷಾ ಹಾಗೂ ಟೀಮ್ ನಲ್ಲಿ ಹೊಸದಾಗಿ ಸೇರ್ಪಡೆಯಾದ ಇಬ್ಬರು ಸ್ವಯಂ ಸೇವಕರ ಜೊತೆಯಲ್ಲಿ ಒಂದು ಪ್ರದೇಶಕ್ಕೆ ಹೋಗಿದ್ದೆ. ಆ ದಿನ ನಾವು ಜೀಪಿನಲ್ಲಿ ಸಾಗುವಾಗ ನನ್ನೊಂದಿಗೆ ನನ್ನ ಸಹೋದ್ಯೋಗಿ, ವಾಹನದ ಚಾಲಕ, ಸ್ವಯಂ ಸೇವಕರೊಳಗೊಂಡ ನಮ್ಮ ಟೀಮ್ ನ್ನು ಬಿಡಲು ಜೀಪು ಕಲ್ಲುಗಳ ಮಧ್ಯೆ ಧಡಕ-ಭಡಕ ಅಂತ ಸದ್ದು ಮಾಡುತ್ತ ನಮ್ಮನ್ನೆಲ್ಲ ಆಗಸದಲ್ಲಿ ಎತ್ತಿ ಒಗೆಯುವ ಹಾಗೇ ಸುಂಟರಗಾಳಿತರಹ ಹೋಗುತ್ತಿತ್ತು. ಆ ದಿನದ ದೂರ ನಮ್ಮನ್ನೆಲ್ಲಾ ನುಂಗಿ ಹಾಕಿತ್ತು .. ರೀ ಸ್ವಲ್ಪ ನೋಡಕೊಂಡು ಓಡಸರಿ ಅಂತ ಎಲ್ಲರೂ ಅಳಲು ತೋಡಿಕೊಳ್ಳುತ್ತಿದ್ದರು ಸಹ ಅದರ ಪರಿವೇ ಇಲ್ಲದೆ ಚಾಲಕ ಮಾತ್ರ ತನ್ನ ಪಾಡಿಗೆ ತಾನೇ ಸಾರಥಿಯಾದ ಶ್ರೀ ಕೃಷ್ಣನ ಹಾಗೇ ರಥವನ್ನು ಓಡಿಸಿಕೊಂಡು ಹೋಗುತ್ತಿದ್ದ.
ಅಯ್ಯಯ್ಯೋ ಹಿಂಗ ಜೀಪನ್ನ ಓಡಿಸಿದರ ನನ್ನ ಬೆನ್ನ ಏನಾಗಬೇಕು ಮಾರಾಯ ಸ್ವಲ್ಪ ನಿಧಾನಗತಿಯಲ್ಲಿ ಓಡಿಸೋ ಪುಣ್ಯಾತ್ಮ ಅಂತ ಹೇಳಿ ಜೀಪನ್ನ ನಿಲ್ಲಿಸೆ ಬಿಟ್ಟೆ ಯಾವಾಗ ನಮ್ಮ ದಾರಿ ಬರುತ್ತೋ ಅಂತ ಹತ್ತಾರು ಬಾರಿ ಜಿ.ಪಿ.ಎಸ್ ನೋಡುತ್ತ ಜೀಪನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಸ್ವಲ್ಪ ವಿಶ್ರಾಂತಿ ಪಡೆದಾದ ನಂತರ ಸಾಗೋಣ ಅಂತ ಕುರುಚಲುಗಳಿಂದ ಕೂಡಿದ ಮುಳ್ಳಿನ ಮರದ ಕೆಳಗೆ ವಿಶ್ರಾಂತಿ ಪಡೆದೆವು. ಇನ್ನೇನು ದಾರಿ 4 ಕಿ.ಮೀ ಅಷ್ಟೇ ಇದೆ ಎಂದು ಅಳಕುತ್ತ ಮತ್ತೆ ಅದೇ ದಾರಿಯಲ್ಲಿ ಚಲಿಸಿದೇವು. ಅಂತು ಇಂತು ನಮ್ಮ ಪಾಯಿಂಟ್ ಗೆ ಬಂದು ತಲುಪಿದ ಕೂಡಲೇ ನಿಟ್ಟುಸಿರು ಬಿಟ್ಟು ಮುಂದೆ ಸಾಗಬೇಕಾದರೆ ನಮಗೆ ದೊರಕಿದ್ದು ಬಹಳಷ್ಟು ಹಳೆಯದಾದ ಬತ್ತಿಹೋದ ಕೆರೆ ಅದರಲ್ಲಿರು ಸಾವಿರಾರು ಕಲ್ಲುಗಳ ಮೇಲೆ ನಡೆದುಕೊಂಡು ಹೋಗಬೇಕು ಅವತ್ತು ನನ್ನ ಟೀಮ್ ನಲ್ಲಿ ನನ್ನ ಸಹೋದ್ಯೋಗಿ ಮತ್ತು ಇಬ್ಬರು ಸ್ವಯಂ ಸೇವಕರನ್ನು ಬಿಟ್ಟು ಮುಂದಿನ ಹಂತದತ್ತ ದಾಪುಗಾಲು ಹಾಕುತ್ತ ಜೀಪು ಮತ್ತೆ ಅದೇ ದಾರಿಯನ್ನು ಬಳಸಿ ಶಬ್ದ ಮಾಡುತ್ತ ಸಾಗಿತು. ಎಲ್ಲಿ ನೋಡಿದರಲ್ಲಿ ರಾಶಿ-ರಾಶಿ ಕಲ್ಲುಗಳು, ಬೃಹದಾಕಾರದ ಬಂಡೆಗಳು ಅಲ್ಲಲ್ಲಿ ಬೆಳೆದುಕೊಂಡಿರುವ ಮುಳ್ಳಿನ ಮರಗಳನ್ನು ಎಲ್ಲರೂ ಹೌಹಾರಿ ನೋಡುತ್ತ ಮುಂದೆ ಸಾಗಿದೇವು. ಒಂದೆರಡು ಬಾರಿ ನಾನು ಸಹ ಕಲ್ಲುಗಳ ಮಧ್ಯೆ ನಡೆದುಕೊಂಡು ಹೋಗುವಾಗ ಕಾಲು ಸಿಕ್ಕಿಕೊಂಡು ‘ಧಡಲ’ ಅಂತ ಬಿದ್ದಿದ್ದೇನೆ. ನನ್ನ ಜೊತೆಯಲ್ಲಿರುವವರು ನನ್ನನ್ನು ನೋಡಿ ಮುಸುಕು ನಗೆ ಬೀರುತ್ತ ನಗುತ್ತಿದ್ದರು. ಇರಲಿ ಇರಲಿ ನಿಮಗೂ ಕಾದಿದೆ ಅಂತ ನಾನು ಕೂಡಾ ಒಳ ಒಳಗೆ ನಗುತ್ತ ಮುಂದೆ ಸಾಗಬೇಕಾದರೆ ನನ್ನನ್ನು ನೋಡಿ ನಕ್ಕವರು ಮುರ್ನಾಲ್ಕು ಬಾರಿ ಎಡೆಬಿಡದೆ ಜಾರಿ ಜಾರಿ ಬಿಳ್ಳುತ್ತಿದ್ದರು ಮತ್ತೆ ಎದ್ದು ನಡೆಯಬೇಕಾದರೆ ಎಡವಿ ಬಿಳ್ಳೊದೆ ಹೀಗೆ ನಮ್ಮ ಪಯಣ ಸಾಗುತ್ತಿರಬೇಕಾದರೆ ನನ್ನ ಕಣ್ಣಿಗೆ ಒಂದು ಪುಟ್ಟ ಕರಡಿ ಮರಿ ನನ್ನ ಮುಂದೆ ಕೇವಲ 10 ಅಡಿಗಳ ಅಂತರದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಓಡಿ ಹೋಯಿತು. ಎಲ್ಲರಿಗೂ ನಿಧಾನವಾಗಿ ಸನ್ನೆ ಮಾಡುತ್ತ ನಿಲ್ಲಿ.. ನಿಲ್ಲಿ.. ನಾನು ಒಂದು ಕರಡಿ ಮರಿ ಓಡಿ ಹೋದದ್ದನ್ನು ನೋಡಿದೆ ಎಲ್ಲರೂ ತದೇಕಚಿತ್ತದಿಂದ ನನ್ನನ್ನು ನೋಡುತ್ತ ನಾವಂತು ನೋಡಿಲ್ಲ ನೀವು ಬೇರೆ ಏನ್ನನ್ನೋ ನೋಡಿ ಕರಡಿ ಮರಿ ಅಂತ ಹೇಳುತ್ತಿದ್ದಿರಾ ನಾವು ಯಾರು ಒಪ್ಪುವುದಿಲ್ಲ ನಿಮ್ಮ ಮಾತನ್ನ. ಆಗ ಪಕ್ಕದಲ್ಲಿದ್ದ ನನ್ನ ಸಹೋದ್ಯೋಗಿ ಮತ್ತು ಸ್ವಯಂಸೇವಕರು ನೀವು ನೋಡಿದ್ದು ‘ನಾಯಿ’ ಇರಬೇಕು ಅಂತ ನನ್ನನ್ನೇ ಗೇಲಿ ಮಾಡಲು ಶುರುಮಾಡಿದರು.
ಕರಡಿಯನ್ನ ‘ನಾಯಿ’ ಅಂತ ವಾದ ಮಾಡವವರನ್ನ ಏನ ಹೇಳಬೇಕು ಅಂತ ತಿಳಿಯದೆ ಅಲ್ಲೇ ಬಿದ್ದಿದ್ದ ರಾಶಿ ರಾಶಿ ಕಲ್ಲುಗಳನ್ನು ತೆಗೆದುಕೊಂಡು ತೆಲೆಗೆ ಚೆಚ್ಚಿಕೊಳ್ಳಬೇಕು ಅಂತ ಅನ್ನಿಸಿತು. ಓಕೆ.. ಆಲ ರೈಟ್ ಈಗ ಸಮಯವನ್ನು ಹಾಳು ಮಾಡುವುದು ಬೇಡ ಬನ್ನಿ.. ಬನ್ನಿ.. ನಿಮಗೆಲ್ಲಾ ಕರಡಿ ಅಲ್ಲಾ ಕರಡಿ ತಾಯಿಯನ್ನು ಭೇಟಿ ಮಾಡಸ್ತಿನಿ ಅಂತ ಹೇಳುತ್ತ ಸಾಗಿದೆ. ಇನ್ನೇನು ಕೆಲ ಅಂತರದಲ್ಲಿ ಮುಂದೆ ಸಾಗತ್ತಿರಬೇಕಾದರೆ ನಮ್ಮ ಮುಂದೆ ಬೃಹದಾಕಾರದ ಬಂಡೆ ಸಿಕ್ಕಿತು. ಈ ಬಂಡೆಯನ್ನು ದಾಟಿ ಹೋಗಲು ಹಳೆಯದಾದ ಪೂರ್ವಿಕ ದಾರಿಯೊಂದು ಸಿಕ್ಕಿತು ಆ ದಾರಿಯನ್ನು ಬಳಸಿ ನಾನು ಒಂದು ಕಡೆ ದಾರಿ ಮಾಡಿ ಚಲಿಸುತ್ತಿರಬೇಕಾದರೆ ನನ್ನ ಪಕ್ಕದಲ್ಲಿದ್ದವರು ಸಹ ಅದೇ ದಾರಿಯನ್ನು ಬಳಸುತ್ತ ಸಾಗುವ ಆತುರದಲ್ಲಿ ಸ್ವಲ್ಪ ಹಿಂದೆ ಉಳಿದು ಬಿಟ್ಟರು ನನಗೆ ಈ ಬೆಟ್ಟದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಹೆಗಳು ಕಾಣಲು ಶುರುವಾದವು. ಬೆಟ್ಟ ಹತ್ತುವಂತಹ ಸಮಯದಲ್ಲಿ ನನಗೆ ಸ್ವಲ್ಪ ಭಯ ಆಯಿತು ಯಾಕೋ ಏನೋ ಮಿಸ್ ಹೊಡಿತಾ ಇದೆ ಅಲ್ಲಾ ಅಂತ ಅಂದುಕೊಳ್ಳುತ್ತಾ ನಿಧಾನವಾಗಿ ಬೆಟ್ಟ ಹತ್ತಲು ಶುರುಮಾಡಿದೆ. ನನ್ನ ಜೊತೆ ಉಳಿದವರೆಲ್ಲರು ಸಹ ನನ್ನ ಹಿಂಬದಿಯಿಂದ ಬೆಟ್ಟ ಹತ್ತಲು ಶುರುಮಾಡಿದರು. ಇಲ್ಲಿ ಏನೋ ಇದೆ ಅಂತ ನಾನು ಒಂದು ಪ್ರಯೋಗ ಮಾಡಲು ಹೊರಟೆ ಅಲ್ಲೆ ಕೆಳಗೆ ಬಿದ್ದ ಒಂದು ಕಲ್ಲನ್ನು ತೆಗೆದು ಜೋರಾಗಿ ನನ್ನ ಪಕ್ಕದಲ್ಲಿದ್ದ ಇನ್ನೊಂದು ಕಲ್ಲಿಗೆ ಜೋರಾಗಿ ಬಡೆಯಲು ಶುರುಮಾಡಿದೆ. ಸದ್ದಿನ ಶಬ್ದಕ್ಕೆ ಯಾವ ಪ್ರಾಣಿಯು ಹೊರ ಬರಲಿಲ್ಲ ಹಾಗಾದರೆ ಇಲ್ಲಿ ಯಾವ ಪ್ರಾಣಿಯು ವಾಸ ಮಾಡುತ್ತಿಲ್ಲ ಎಂಬುದು ಖಾತ್ರಿ ಆಗಿತ್ತು ಯಾಕೆಂದರೆ ಹೆಚ್ಚಾಗಿ ಇಂತಹ ಸ್ಥಳಗಳಲ್ಲಿ ಕರಡಿಗಳ ವಾಸಸ್ಥಾನ ಇರುವುದರಿಂದ ನಿಧಾನವಾಗಿ ನಡೆದುಕೊಂಡು ಹೋಗಬೇಕಾಗುತ್ತೆ. ಹಾಗು ಹೀಗೂ ಬೆಟ್ಟವನ್ನ ಎಡಬಿಡದೆ ಹತ್ತುತ್ತಿರಬೇಕಾದರೆ ಒಂದು ಅಗಲವಾದ ಸಮತಟ್ಟಾದ ಬಂಡೆಯನ್ನು ದಾಟಿ ಇನ್ನೇನು ಹೋಗಬೇಕು ಅಂತ ಇದ್ದೆ ಸ್ವಾಮಿ! ಅಷ್ಟರಲ್ಲಿ ನಾನು ಬರುವುದನ್ನು ಹೊಂಚು ಹಾಕುತ್ತ ಕಾಯುತ್ತ ಕುಳಿತು ಬಿಟ್ಟಿದ್ದೆ ‘ಕರಡಿಮಾತೆ’ ಅದರ ಪಕ್ಕದಲ್ಲಿ ಎರಡು ಪುಟ್ಟ ಮರಿಗಳು ಆಟವಾಡುತ್ತಿವೆ . ನನಗೆ ಆ ಸ್ಥಳದಲ್ಲಿ ಕರಡಿ ಇದೇ ಎಂದು ಗೊತ್ತಿರಲಿಲ್ಲ . ನನ್ನ ಮುಂದೆ ಕರಡಿ ಎದುರಾದಗ ಜೋರಾಗಿ ಶಬ್ದ ಮಾಡಲು ಶುರು ಮಾಡಿತು. ಅಯ್ಯಯ್ಯೊ ಕರಡಿ! ಕರಡಿ! ಓಡಿ.. ಓಡಿ.. ಇಲ್ಲಾ ಅಂದರೆ ಕರಡಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ನಮ್ಮನ್ನೆಲ್ಲಾ ಅನ್ಯ ಗ್ರಹದ ಜೀವಿಗಳನ್ನಾಗಿ ಪರಿವರ್ತಿಸಿ ಬಿಡುತ್ತೆ ಅಂತ ಹೇಳುತ್ತ ನಮ್ಮವರನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿದೆ.
ಓಡಬೇಡಿ.. ಓಡಬೇಡಿ..ಅಂತ ನಮ್ಮವರು ಸಾರಿ ಸಾರಿ ಹೇಳಿದರು ಅದನ್ನ ಲೆಕ್ಕಿಸದೆ ಓಡಲು ಶುರುಮಾಡಿದೆ. ಕಾಲುಗಳು ಭಯದಿಂದ ಒಂದೇ ಸಮನೇ ಬ್ರೆಕ್ ಡ್ಯಾನ್ಸ್ ಮಾಡಲು ಶುರುಮಾಡಿದವು. ಜೋರಾಗಿ ಕೂಗಿ ನಮ್ಮವರಿಗೆ ಹೇಳೋಣ ಅಂತ ಅಂದುಕೊಳ್ಳುವಷ್ಟರಲ್ಲಿ ದೊಡ್ಡ ಕರಡಿ ಹಠಾತ್ ನೆ ದಾಳಿ ಮಾಡಲು ಬೇರೆ ಜಾಗದಿಂದ ಓಡಿ ಬಂದೆ ಬಿಟ್ಟಿತು. ಯಪ್ಪೋ.. ಕರಡಿ! ನಾನು ಇರುವ ಜಾಗದಲ್ಲಿ ರಭಸದಿಂದ ಓಡಿ ಬರುತ್ತಿವೆ ಈಗ ಏನು ಮಾಡಬೇಕು ಅಂತ ಯೋಚನೆ ಮಾಡುತ್ತ ನಾನು ನಿಂತಿರುವ ಬಂಡೆಯಿಂದ ಆಳವಾದ ಜಾಗಕ್ಕೆ ಇಳಿಯುವ ಸಂಧರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದುಬಿಟ್ಟೆ. ದೃತಿಗೆಡದೆ ಮತ್ತೆ ಎದ್ದು ನೋಡುತಿರಲು ಕರಡಿಗಳು ಬಂಡೆಯಿಂದ ಬಂಡೆಗೆ ಜಿಗಿಯುತ್ತಿವೆ. ಏನ ಮಾಡೋದು ಶಿವ.. ಶಿವ.. ಹೇಗಾದರು ಮಾಡಿ ಈ ಕರಡಿಗಳನ್ನ ಬೇರೆ ದಾರಿಗೆ ಅಟ್ಟಬೇಕು ಇಲ್ಲವಾದಲ್ಲಿ ನಮಗೆ ಆಪತ್ತು ತಪ್ಪಿದ್ದಲ್ಲ ಅಂತ ಧೀಡಿರನೆ ಬೇರೆ ದಾರಿಯನ್ನು ಹುಡುಕಿ ಮತ್ತೆ ಎತ್ತರವಾದ ಬೆಟ್ಟಗಳನ್ನು ಸುತ್ತಿ ಅತ್ತ ಇತ್ತ ತಿರುಗಿ ಬೇರೆ ದಾರಿ ಬಳಸಿ ನಮ್ಮವರು ಇರುವ ಜಾಗದಲ್ಲಿ ಬಂದು ಸೇರಿದೆ. ರೀ ಹರ್ಷಾ, ಪರಂಜಯ, ಆನಂದ ಬನ್ನಿ ಬೇರೆ ಜಾಗಕ್ಕೆ ಹೋಗೋಣ ಬೇಗ ಬೇಗ ಬನ್ನಿ ಅಂತ ಹೇಳಿ ಪಟಪಟನೆ ಬೆಟ್ಟ ಹತ್ತಿ ಮುಂದೆ ಸಾಗುತ್ತಿರಬೇಕಾದರೆ ಕರಡಿಗಳು ಜೋರಾಗಿ ಶಬ್ದ ಮಾಡುತ್ತಿವೆ. ನಾವೆಲ್ಲರೂ ಕೂಡಾ ಒಟ್ಟಿಗೆ ಜೋರಾಗಿ ಶಬ್ದ ಮಾಡಲು ಕರಡಿಗಳು ಅಲ್ಲಿಂದ ಪಲಾಯನ ಮಾಡಿದವು ಅಂತು ಇಂತು ನಾನು ‘ಯಮ’ನ ಕೈಯಿಂದ ಬಚಾವ ಆದೆ ಅಂತ ಎದೆ ಢವ ಢವ ಅನ್ನುತ್ತಿರಲು ನನ್ನ ಜೊತೆಗೆ ಬಂದಂತಹವರು ಕೂಡಾ ಅಷ್ಟೇ ಭಯ ಪಟ್ಟಿದ್ದರು. ಆದರೆ, ಈ ಎಲ್ಲಾ ಗೊಂದಲಗಳ ಮಧ್ಯೆ ಉಳಿದವರು ಕರಡಿಗಳನ್ನ ನೋಡಲೆ ಇಲ್ಲ. ಹೊರತಾಗಿ, ಕರಡಿಗಳು ಜೋರಾಗಿ ಅರಚುತ್ತಿದ್ದವು ಎಂಬುದು ಮಾತ್ರ ಅವರಿಗೆ ಮನವರಿಕೆಯಾಗಿತ್ತು. ಮಧ್ಯಾಹ್ನದ ಬಿಸಿಲಿನ ತಾಪಕ್ಕೆ ನನ್ನ ಮೈಯೆಲ್ಲಾ ಒದ್ದೆಯಾಗಿ ಹೋಗಿತ್ತು. ಜವರಾಯನ ಕೈಯಿಂದ ಪಾರಾದೆ ಅಂತ ನಮ್ಮವರೆಲ್ಲರಿಗೂ ಹೇಳುತ್ತ ಸ್ವಲ್ಪ ಹೊತ್ತು ಗಿಡದ ಮರೆಯಲ್ಲಿ ದಣಿವಾರಿಸಿಕೊಂಡು ಹೊರಟು ಹೋಗೋಣ ಅಂತ ಹೇಳಿ ಅಲ್ಲಿಂದ ದಾರಿಕಿತ್ತಿದೇವು.
ಬೆಟ್ಟವನ್ನು ಹತ್ತುವಂತಹ ಸಮಯದಲ್ಲಿ ಎದುರಿಗೆ ಸಿಕ್ಕ ಕರಡಿ ಮತ್ತು ಪುಟ್ಟ ಮರಿಗಳು | ಚಿತ್ರ ರಚಿಸಿದವರು – ಕೃಷ್ಣಾ ಸಾತಪುರ, ತಾ:ಇಂಡಿ, ಜಿ: ವಿಜಯಪುರ.
ಈ ಎಲ್ಲಾ ಅದ್ಬುತಗಳು ಒಂದೊಂದಾಗಿ ಸಮರೋಪಾದಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ನನಗೆ ಒಂದೊಂದು ಸಲ ಆಶ್ಚರ್ಯ ಚಕಿತ ಉಂಟುಮಾಡುತ್ತೆ ಮತ್ತು ನವ ಚೈತನ್ಯದ ಉತ್ಸಾಹವನ್ನು ಕೂಡ ಹುರಿದುಂಬಿಸುತ್ತೆ.
ಆಂದ್ರಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಶ್ರೀಶೈಲಂನ ಅಭಯಾರಣ್ಯದಲ್ಲಿ ಕೆಲವೊಂದು ಭಾಗಗಳಲ್ಲಿ ಹೊಸದಾಗಿ ಟ್ರಾನ್ಸ್ಯೆಕ್ಟ ಲೈನ್ (ಸಿಳುದಾರಿ) ಗಳನ್ನು ಮಾಡಲು ರೂಪರೇಷೆಗಳನ್ನು ಮೊದಲೇ ಸಿದ್ದಪಡಿಸಲಾಗಿತ್ತು. ಅದರಂತೆ ಈ ಸಿಳುದಾರಿಯನ್ನು ಮಾಡಲು ಸರಿಸುಮಾರು 10 ಜನರಾದರು ಬೇಕಾಗುತ್ತೆ. ಪ್ರತಿ ಗುಂಪಿನಲ್ಲಿ 5 ಜನರು, ಅಂದರೆ 2 ಗುಂಪಿನಂತೆ ವಿಂಗಡಿಸಿ ಬೇರೆ ಬೇರೆಯಾಗಿ ಕೆಲಸ ಮಾಡಬೇಕು . ಈ ಹೊಸದಾದ ದಾರಿಗಳನ್ನು ಮಾಡಲು ಪರಣಿತ ನುರಿತ ವ್ಯಕ್ತಿಗಳಿಂದಲೇ ಮಾತ್ರ ಸಾಧ್ಯ ಅದು ಹೇಗೆಂದರೆ ಕೆಲವು ದಿಕ್ಕುಗಳ ಅಕ್ಷಾಂಶ-ರೇಖಾಂಶಗಳನ್ನು ಜಿ.ಪಿ.ಎಸ್ ನಲ್ಲಿ ನಮೂದಿಸಿದಾಗ ಎಷ್ಟು ದೂರ ಚಲಿಸಬೇಕು ಮತ್ತು ಯಾವ ದಿಕ್ಕಿನಲ್ಲಿ ಚಲಿಸಿದರೆ ದಾರಿ ಸಿಗುತ್ತೆ ಅಂತ ಕ್ಷಣಾರ್ಧದಲ್ಲಿ ತೋರಿಸಿ ಬಿಡುತ್ತೆ. ಈ ಎಲ್ಲಾ ಸೂತ್ರಗಳನ್ನು ಬಳಸಿ ನಾವು ಹೊಸದಾಗಿ ಸಿಳುದಾರಿಯನ್ನು ಸಿದ್ದಪಡಿಸಲು ಪ್ರತಿ 100 ಮೀಟರ ಅಂತರವನ್ನು ಹಗ್ಗದ ಸಹಾಯದಿಂದ ಅಳತೆ ಮಾಡಿ ಅಳೆಯುತ್ತೇವೆ. ಒಂದು ಸಿಳುದಾರಿ ಗರೀಷ್ಠವೆಂದರು 3.2 ಕಿ.ಮೀ ಗಳಷ್ಟು ಚೌಕಾಕಾರದ ಡಬ್ಬದ ಹಾಗೇ ಇರುತ್ತೆ. ಪ್ರತಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಚಲಿಸಬೇಕಾದರೆ ನಾವು ದಿಕ್ಸೂಚಿಗಳನ್ನು ಬಳಸಿ ನಡೆಯುತ್ತೇವೆ.
ಒಂದು ದಿನ ಆ ಸಮಯ ಬಂದೆ ಬಿಟ್ಟಿತ್ತು, ಕಾಡಿನ ಮಧ್ಯೆ ಎಲ್ಲೋ ಒಂದು ಕಡೆ ಜಿ.ಪಿ.ಎಸ್ ಪಾಯಿಂಟನ್ನು ಸೂಚಿಸುತ್ತಿತ್ತು . ಆ ಪಾಯಿಂಟ್ ನ್ನು ಬಳಸಿ ನಾವು ಹೋಗಬೇಕಾದ ದಾರಿ ಅಷ್ಟೋಂದು ಸಲಿಸಾಗಿರಲಿಲ್ಲ, ಎರಡು ತಂಡಗಳಿಗೆ ಎರಡು ಜೀಪುಗಳು. ಪ್ರತಿ ತಂಡದಲ್ಲಿ ಐದು ಜನರು ಕುಳಿತುಕೊಳ್ಳುವಷ್ಟು ಜಾಗ ಮತ್ತು ಇವೆಲ್ಲವುಗಳ ಮಧ್ಯೆ ವಸ್ತು, ಸರಂಜಾಮುಗಳು, ಊಟದ ಡಬ್ಬಗಳು ನೀರಿನ ದೊಡ್ಡ ಕ್ಯಾನಗಳನ್ನು ತುಂಬಿಸಿಕೊಂಡು ಹೊರಡಲು ಸಿದ್ದರಾದೇವು. ಹೀಗೆ ಮುಂದೆ ಸಾಗುತ್ತಿರಬೇಕಾದರೆ ದಾರಿ ಮಾತ್ರ ಒಂದು ಅಂಚಿನಲ್ಲಿ ಬಂದು ಕೊನೆಯಾಗಿ ಬಿಟ್ಟಿತ್ತು. ಮುಂದೆ ಹೋಗಲು ದಾರಿ ಇಲ್ಲ ಏನಪ್ಪಾ ಮಾಡೋದು ಈಗ ಆ ಪಾಯಿಂಟನ್ನು ತಲುಪಲು ನಡೆದುಕೊಂಡೆ ಹೋಗಬೇಕು ಸರಿಸುಮಾರು 2 ಕಿ.ಮೀ ಗಳಷ್ಟು ಇರುವ ಜಾಗವನ್ನು ಎಲ್ಲ ಸರಂಜಾಮುಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ನಡೆಯಲು ಶುರುಮಾಡಿದೇವು. ಒಂದು ಚಿಕ್ಕಾದಾದ ಬಂಡೆ ಆ ಬಂಡೆಯ ಮಧ್ಯೆ ಹಳೆಯದಾದ ದಾರಿ ಒಂದಿತ್ತು ಆ ದಾರಿಯನ್ನು ಬಳಸಿ ನಡೆಯಲು ಶುರುಮಾಡಿದೇವು. ಬಂಡೆ ಹತ್ತುವುದು ಮತ್ತೆ ನೋಡ ನೋಡುತ್ತ ಇಳಿದು ಹತ್ತಿ ಮುಂದೆ ಸಾಗಬೇಕು ನನಗಂತು ಆ ದಿನ ನಡೆದು ನಡೆದು ಸಾಕಾಗಿ ಹೋಗಿತ್ತು.
ಯಾವಾಗ ಪಾಯಿಂಟ ಸಿಗುತ್ತೋ ಶಿವನೇ ಅಂತ ಚಡಪಡಿಸುತ್ತಿದ್ದೆ ಹೇಗಾದರು ಮಾಡಿ ಹೋಗಬೇಕು ಇಲ್ಲದಿದ್ದರೆ ನನ್ನ ಜೊತೆ ಬಂದವರೆಲ್ಲರು ಒಂದಾನೊಂದು ಕಾಲದಲ್ಲಿ ಭರ್ಜರಿ ಮ್ಯಾರಥಾನ್ ಓಟಗಾರರಾಗಿದ್ದರು ಒಂದೇ ಸಮನೆ ಬಿಟ್ಟು ಬಿಡದೆ ನಡೆಯುತ್ತಿದ್ದರು. ಅಬ್ಬಬ್ಬಾ ಅವರ ನಡಿಗೆ ನೋಡಿದರೆ ನನ್ನನಂತು ಒಂಬಟ್ಟಿಯನ್ನಾಗಿ ಮಾಡಿ ಹೋಗಿ ಬಿಡುತ್ತಾರೆ ಅಂತ ತಿಳಿದು ನಾನು ಸಹ ಎಡ ಬಿಡದೆ ನಡೆದೆ ಅಂತು ಇಂತು ಹೈರಾಣಾಗಿ ಬಂದು ಒಂದು ಮರದ ಅಡಿಯಲ್ಲಿ ಹೋಗಿ ಕುಳಿತುಕೊಂಡೆ.. ನಮ್ಮ ಟೀಮ್ ನ ನಾಯಕರಿಗೆ ಸ್ವಲ್ಪ ಸಮಯ ವಿಶ್ರಾಂತಿ ಮಾಡಬೇಕು ದಯವಿಟ್ಟು ಒಂದು ಐದು ನಿಮಿಷ ಸಮಯ ಕೊಡಿ ಅಷ್ಟರಲ್ಲಿ ನಾನು ಕೂಡಾ ಕೆಲಸದಲ್ಲಿ ಶಾಮೀಲ ಆಗುವೆ ಅಂತ ಹೇಳಿ ವಿಶ್ರಾಂತಿ ಪಡೆದೆ.
ವಿಶ್ರಾಂತಿ ಸಮಯ ಕೆಲವೇ ಕ್ಷಣದಲ್ಲಿ ಮುಗಿದುಹೋಗಿತ್ತು . ಛೇ! ಎಂತ ಮಾಡೋದು ಸ್ವಾಮಿ! ಅಂತ ಬ್ಯಾಗಿನಲ್ಲಿದ್ದ ವೃತ್ತಾಕಾರದ ಟೊಪ್ಪಿಗೆಯನ್ನು ತೆಲೆಗೆ ಹಾಕಿಕೊಂಡು ಹೊರಡಲು ಸಿದ್ದವಾಗಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ ನಮ್ಮ ತಂಡದ ನಾಯಕರು ನನ್ನನ್ನು ಕರೆದು ಒಂದು ತುದಿಯಲ್ಲಿ ಹೋಗಿ ನಿಲ್ಲಲು ಹೇಳಿದರು. ದಿಕ್ಸೂಚಿಯನ್ನು ಬಳಸಬೇಕಾದರೆ ಮುಂದೆ ಯಾರಾದರೂ ಹೋಗಿ ನಿಲ್ಲಬೇಕು ಆಗ ಮಾತ್ರ ಸರಿಯಾದ ದಾರಿಯನ್ನು ಅಳೆಯಲು ಸಾಧ್ಯವಾಗುತ್ತೆ ಅಂತ ತಲೆ ಅಲ್ಲಾಡಿಸುತ್ತ ನಿಂತಿರಬೇಕಾದರೆ ಇನ್ನೊಬ್ಬ ಹಗ್ಗವನ್ನು ಎಳೆದುಕೊಂಡು ಬಂದು ನಿಂತ. ನೀವು ಮುಂದೆ ಹೋಗಿ ಸಾರ್ ನಾನು ನಿಮ್ಮ ಹಿಂದ ಹಿಂದೆನೆ ಬರುವೆ ಸಾರ್ ಮುಂದೆ ನಡೆದುಕೊಂಡು ಹೋಗಬೇಕಾದರೆ ಹುಷಾರು ಸಾರ ಅಂದ. ಸುಮ್ಮನೆ ಬಾಯಿ ಮುಚ್ಚಪ್ಪ ಯಾಕಪ್ಪ ಜೋರಾಗಿ ಅರಚತಿಯಾ ಮಾರಾಯ ಮೊದಲೆ ಈ ದಾರಿ ದಟ್ಟವಾದ ಬಿದಿರುಗಳಿಂದ ಆವೃತ್ತವಾಗಿದೆ ಅದರಲ್ಲಿ ಮತ್ತೆ ನುಸುಳಿಕೊಂಡು ಹೋಗಬೇಕೆಂದರೆ ಮುಳ್ಳಿನ ಪೊದೆಗಳು ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡು ಬಿಟ್ಟಿದ್ದರಿಂದ ಮುಂದೆ ಹೋಗಲು ಎಲ್ಲಿಯೂ ದಾರಿ ಕಾಣುತ್ತಿಲ್ಲ.
ನಮ್ಮ ತಂಡದ ನಾಯಕರಿಗಂತು ರೀ..ಸತೀಶ ರೀ.. ಸತೀಶ ಎಲ್ಲಿದ್ದಿರಾ ಮುಂದೆ ಬನ್ನಿ ಕಾಣಿಸುತ್ತಿಲ್ಲ. ನೀವು ಎಲ್ಲಿ ನಿಂತಿದ್ದಿರಾ ಅಂತ ಹೇಳಲು ಸಾವಕಾಶವಾಗಿ ಬಿದಿರನ್ನು ಅಲ್ಲಾಡಿಸಿ ನಾನು ಇಲ್ಲಿದ್ದಿನಿ ಕಾಣಸ್ತಾ ಇದೆಯಾ ಅಂತ ಸನ್ನೆ ಮಾಡಿ ಹೇಳುತ್ತಿದ್ದೆ. ಆದರೂ ಒಳ ಒಳಗೆ ಭಯವಿದ್ದರು ಸಹ ಒಂದು ಕಡೆ ಏನಾದರೂ ಸಿಗಬಹುದು ಎಂಬ ಕುತೂಹಲ ಹೆಚ್ಚಾಗಿತ್ತು . ಈ ದಟ್ಟವಾದ ಬಿದುರುಗಳಲ್ಲಿ ಏನಾದರೂ ಸಿಗಬಹುದು ಅಥವಾ ಬಲಿಪ್ರಾಣಿಗಳನ್ನು ಹೊಂಚು ಹಾಕಿ ಹಿಡಿಯಲು ದೊಡ್ಡ ಪ್ರಾಣಿಗಳು ಕುಳಿತಿರಬಹುದು ಅಂತ ಅಂದುಕೊಳ್ಳುತ್ತ ಹೋಗುತ್ತಿರಬೇಕಾದರೆ ಒಂದು ಉದ್ದನೆಯ ಬಿದಿರು ಓರೆಯಾಗಿ ದಾರಿ ಮಧ್ಯದಲ್ಲಿ ಬಿದ್ದಿದ್ದನ್ನು ನಾನು ನೋಡುತಿರಲು ನಾನು ನಿಂತ ಎಡ ಭಾಗದಲ್ಲಿ ಒಂದು ಚಿಕ್ಕ ಕಲ್ಲಿನ ಬಂಡೆ ಸಿಕ್ಕಿತು. ನೋಡ ನೋಡತ್ತ ಯಾವುದೋ ಪ್ರಾಣಿ ಕುತಿರುವಂತೆ ಕಾಣಿಸಿತು. ಬಿಸಿಲಿನ ತಾಪಕ್ಕೆ ಮಣಿದು ನೆರಳಿನ ಅಡಿಯಲ್ಲಿ ಆರಾಮಾಗಿ ಏನೋ ತಿನ್ನುತ್ತ ಕುಳಿತಿದೆ. ನನಗೆ ಒಂದು ಕಡೆ ಸಂಶಯ ಇದು ಯಾವ ಪ್ರಾಣಿ ಆಗಿರಬಹುದು ಅಂತ ನಿಧಾನವಾಗಿ ಅದಕ್ಕೆ ಗೊತ್ತಾಗದ ಹಾಗೇ ಹೋಗಿ ಬಿದಿರಿನ ಅಡಿಯಲ್ಲಿ ಬಗ್ಗಿ ನೋಡಿದರೆ ಆ ಪ್ರಾಣಿಯ ಎಡಗಾಲು ಮಾತ್ರ ಕಾಣಿಸುತ್ತಿದ್ದೆ. ಇನ್ನು ಸ್ವಲ್ಪ ಮುಂದೆ ಹೋಗಿ ನೋಡ್ತಿನಿ ಒಂದು ಪುಟ್ಟ ಚಿರತೆ ಮರಿ ಹಾಯಾಗಿ ಕುಳಿತುಕೊಂಡಿದೆ.
ಅಬ್ಬಾ! ಇಷ್ಟು ಹತ್ತಿರದಿಂದ (5-8 ಅಡಿಗಳು) ಚಿರತೆ ಮರಿಯನ್ನು ನೋಡಿದ್ದು ಇದೇ ಮೊದಲ ಬಾರಿ ಅಂತ ಅಂದುಕೊಳ್ಳುತ್ತಾ ಅಲ್ಲಿಂದ ನಿಧಾನವಾಗಿ ಹಿಂದೆ ಬಂದು ನಮ್ಮವರೆಲ್ಲರನ್ನು ಸಾವಕಾಶವಾಗಿ ಒಂದು ಕಡೆ ಸೇರಿಸಿ ಹೇಳಿದೆ . ನೋಡಿ ಆ ಜಾಗದಲ್ಲಿ ಒಂದು ಚಿರತೆ ಮರಿ ಕುಳಿತಿದೆ ನೀವು ಹೋಗಿ ನೋಡೋದಾದರೆ ಅದಕ್ಕೆ ಯಾವುದೇ ರೀತಿಯಿಂದಲು ತೊಂದರೆ ಕೊಡಬಾರದು. ಓಕೆ ನಾ ಅಂತ ಹೇಳಿ ಕರೆದುಕೊಂಡು ಹೋಗಿ ಎಲ್ಲರಿಗೂ ತೋರಿಸಿದೆ ಅರ್ಧ ಬಾಯಿ ತೆಗೆದು ನೋಡ ನೋಡುತ್ತ ಕಣ್ಣುಗಳನ್ನು ಅಲುಗಾಡಿಸದೇ ಒಂದೇ ಸಮನೆ ದಿಟ್ಟಿಸಿ ನೋಡುತಿರಲು ಈ ಪುಟ್ಟ ಚಿರತೆ ಮರಿ ತಾಯಿಯನ್ನು ಬಿಟ್ಟು ಒಬ್ಬಂಟಿಯಾಗಿ ಕುಳಿತಿದೆ ಅಲ್ಲಾ ಅಂತ ಎಲ್ಲರೂ ಗುಸುಗುಸು-ಪಿಸುಪಿಸು ಅಂತ ಮಾತನಾಡಲು ಶುರುಮಾಡಿದರು. ಅಷ್ಟರಲ್ಲಿ ಚಿರತೆ ಮರಿಗೆ ನಾವಿರುವುದು ಗೊತ್ತಾಯಿತು ಆಗ ಅದು ನಿಧಾನವಾಗಿ ನಮ್ಮತ್ತ ನೋಡುತ್ತ ಬಂಡೆಯಿಂದ ಇಳಿದು ಕೆಳಗೆ ಹೋಯಿತು. ಪುನಃ ಅದೇ ಜಾಗದಲ್ಲಿ ಬಂದು ಕುಳಿತುಕೊಳ್ಳೊದು ಮತ್ತೆ ಇಳಿದು ಹೋಗುವುದನ್ನು ಮೂರರಿಂದ ನಾಲ್ಕು ಬಾರಿ ಮಾಡಿತು.
ಅತ್ಯದ್ಬುತಗಳಲ್ಲಿ ಒಂದಾದ ಈ ವನ್ಯಜೀವಿಗಳನ್ನು ನೋಡುವುದೇ ಒಂದು ರೋಮಾಂಚನ, ಭಾಗ್ಯ ಅಂತ ಎಲ್ಲರು 10 ನಿಮೀಷದವರೆಗೆ ಕಣ್ತುಂಬಿ ನೋಡಿ ಆನಂದ ಪಟ್ಟೇವು.
ಬಿಸಿಲಿನ ತಾಪಕ್ಕೆ ಮಣಿದು ಹಾಯಾಗಿ ಮರದ ನೆರಳಿನಡಿಯಲ್ಲಿ ಕುಳಿತ ಚಿರತೆಯನ್ನು ಅತೀ ಹತ್ತಿರದಿಂದ ವೀಕ್ಷಿಸುತ್ತಿರುವ ದೃಶ್ಯ | ಚಿತ್ರ ರಚಿಸಿದವರು - ಕೃಷ್ಣಾ ಸಾತಪುರ, ತಾಃ ಇಂಡಿ, ಜಿಃ ವಿಜಯಪುರ.
ಈ ಮಾಯಲೋಕದ ಒಳ ಹೊರ ಕನ್ನಡಿಯನ್ನ ಅರಿಯಲು ಬಹಳಷ್ಟು ವರ್ಷಗಳೆ ಬೇಕಾಗಬಹುದು. ಸುಂದರ ಕಾನನಗಳ ಮಧ್ಯೆ ವಿಫುಲವಾಗಿ ದೊರಯುವ ಹಲವಾರು ಬಗೆಯ ವೃಕ್ಷಗಳು, ಜೀವ-ಜಂತುಗಳ ಪ್ರಬೇಧಗಳನ್ನು ಕಣ್ತುಂಬಿ ನೋಡುವುದೇ ಒಂದು ಭಾಗ್ಯ ಅಂತ ಅಂದುಕೊಳ್ಳುತ್ತ ಮುಂದಿನ ಕಾರ್ಯಕ್ಕೆ ಪ್ರಯಾಣ ಬೆಳೆಸಿದೆ.
ನಾಗಾರ್ಜುನ ಸಾಗರ (ಆಂಧ್ರ ಪ್ರದೇಶ) ದಿಂದ ‘ಡೋರನಾಳ’ ಎಂಬ ಪುಟ್ಟ ಊರನ್ನು ತಲುಪಲು ಅಗಲವಾದ ಡಾಂಬರೀಕರಣ ರಸ್ತೆಯೊಂದು ಗುಡ್ಡಗಾಡುಗಳ ಮಧ್ಯೆ ಹಾದು ಹೋಗುತ್ತದೆ. ಈ ರಸ್ತೆಯನ್ನು ಬಳಸಿಕೊಂಡು ಹೋಗಬೇಕಾದರೆ ದಾರಿ ಮಧ್ಯದಲ್ಲಿ ‘ಪೆದ್ದರುಟ್ಲಾ ರಾಸ್ತಾ' ಎಂಬ ಹೆಸರಿನ ಒಂದು ಗೇಟ ಕಾಣಸಿಗುತ್ತದೆ. ಆವತ್ತು ನಮ್ಮ ತಂಡದವರು ಅಲ್ಲಿ ಹೊಸದಾಗಿ ಟ್ರಾನ್ಸ್ಯಕ್ಟ ದಾರಿಗಳನ್ನು ಮಾಡಲು ಸಲಕರಣೆಗಳನ್ನು ಜೀಪನಲ್ಲಿ ಹೊತ್ತು ಹೋಗಬೇಕಾಗಿತ್ತು. ನಾನು ಆ ದಾರಿಯನ್ನು ಸುಮಾರು ಸಲ ಸುತ್ತಿದ್ದೇನೆ ಒಂದೇ ಒಂದು ಜೀಪು ಹೋಗಲು ಬರಲು ಇಕ್ಕಟ್ಟಾದ ರಸ್ತೆ ಅದಾಗಿತ್ತು. ಕಲ್ಲುಗಳ ಮಧ್ಯದಿಂದ ಹಾದು ಹೋಗಲು ರಸ್ತೆ ಇದೆ ಆದರೆ, ನಿಧಾನವಾಗಿ ಚಲಿಸುತ್ತ ಸಾಗಬೇಕು ಹೀಗಿರುವಾಗ ಒಂದು ದಿನ ನಮ್ಮ ತಂಡದಿಂದ ಕೆಲ ಕೆಲಸಗಾರರನ್ನು ಕರೆದುಕೊಂಡು ಮತ್ತು ಸರಕು-ಸರಂಜಾಮುಗಳನ್ನು ( ಹಗ್ಗ,ಪೇಯಿಂಟ್ ಡಬ್ಬಗಳು, ಬ್ರಶ, ಪ್ರತಿ 100 ಮೀ ಸೂಚಿಸುವ ಅಲ್ಯೂಮೀನಿಯಂ ಪ್ಲೇಟ ಫಲಕಗಳು,ನೀರಿನ ಕ್ಯಾನ, ಊಟದ ಡಬ್ಬಗಳು) ಜೀಪಿನಲ್ಲಿ ತುಂಬಿಸಿಕೊಂಡು 10 ಕಿ.ಮೀ ವರೆಗೆ ಸಂಚರಿಸಲು ತಯ್ಯಾರಾಗಿ ಹೊರಡಲು ನಿಂತೆವು. ಹಾಳಾಗಿ ಹದಗೆಟ್ಟು ಹೋಗಿದ್ದ ಕಲ್ಲು ಮಿಶ್ರಿತ ಮಣ್ಣಿನ ದಾರಿ ಅವತ್ತು ನಮ್ಮ ಜೀವವನ್ನೇ ತಿಂದು ಹಾಕಿತ್ತು.
ಒಂದರ ಹಿಂದೆ ಒಂದರಂತೆ ಜೀಪುಗಳು ಹೊಸ ಹೊಸ ಶಬ್ದಗಳನ್ನು ಹೊರಸುಸುವ ಮುಖಾಂತರ ದಡಕಾ-ಬಡಕಾ ಅಂತ ಶಬ್ದ ಮಾಡುತ್ತ ಗಗನಯಾನವನ್ನು ಹಿಂದಿಕ್ಕುವ ಭರದಲ್ಲಿ ಹೋಗುತ್ತಿದ್ದವೇನು ಅಂತ ನನಗೆ ಅನ್ನಿಸತೊಡಗಿತ್ತು. ಆ ದಿನ ನಾವುಗಳೆಲ್ಲ ‘ದಾರಾಬೈಲು’ಎಂಬ ಕ್ಯಾಂಪಗೆ ಬೇಗ ಹೋಗಿ ತಲುಪಿದರೆ ಅಲ್ಲಿದ್ದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬೇಗ ಬರಬಹುದು ಅಂತ ಲೆಕ್ಕಾಚಾರ ನಮ್ಮದಾಗಿತ್ತು. ಈ ಎಲ್ಲಾ ಆಯಾಮ,ಕಸರತ್ತುಗಳನ್ನು ದಾಟಿ ಅಂತು ಕ್ಯಾಂಪ ಬಂದು ತಲುಪಿದೇವು. ಮುಂಜಾವಿನ ಬಿಸಿಲು ಮೈಯನ್ನು ಸೋಕಿದಾಕ್ಷಣ ಒಂಥರಹ ದೇಹದಲ್ಲಿ ಚಿಲುಮೆ ಬಂದ ಹಾಗೇ ಅನ್ನಿಸ ತೊಡಗಿತು . ಹೊಸ ಜಗತ್ತಿಗೆ ಮೊದಲಬಾರಿಗೆ ಎಂಟ್ರಿ ಕೊಟ್ಟ ಹಾಗೇ ಅನ್ನಿಸುತಿರಲು ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಪಾತ ಬೆಟ್ಟದ ಆಳದಲ್ಲಿ ಕಾಣಿಸಿತು. ಆದರೆ, ಆ ಜಲಪಾತದಲ್ಲಿ ನೀರು ಇರಲಿಲ್ಲ ಬೇಸಿಗೆ ಕಾಲವಾಗಿದ್ದರಿಂದ ನೀರೆಲ್ಲ ಬತ್ತಿಹೋಗಿತ್ತು. ಮಳೆಗಾಲದಲ್ಲಿ ಜಲಪಾತ ಮಾತ್ರ ಭೋರ್ಗರೆದು ಮೇಲಿಂದ ಕೆಳಕ್ಕೆ ನೀರು ದುಮ್ಮಿಕ್ಕಿ ಹರಿಯುತ್ತೆ ಸರ್ ಅಂತ ಅಲ್ಲೆ ಇದ್ದ ನಮ್ಮ ತಂಡದ ಕ್ಷೇತ್ರ ಸಹಾಯಕ ಚಂದು ಹೇಳತೊಡಗಿದ . ಓಹೋ! ಹೌದಾ ಅಂತ ನಾನು ಎಲ್ಲರೊಡನೆ ಮಾತಿಗಿಳಿದೆ.
ಎಲ್ಲ ಸಿಬ್ಬಂದಿ ವರ್ಗದವರ ಜೊತೆ ಮಾತನಾಡುತ್ತಿರುವಾಗ ಸಹದ್ಯೋಗಿಗಳಾದ ಶ್ರೀಕಾಂತ ಮತ್ತು ಸೋಮ, ಅಮರ ರವರು ಬನ್ನಿ..ಬನ್ನಿ... ಹೋಗೋಣ ಟೈಮ್ ಆಗ್ತಾ ಬಂತು ಎಲ್ಲರಿಗೂ ಒಂದು ಕಡೆ ಸೇರಿಸಿರಿ ಅಂತ ಹೇಳಿದರು . ಆಯ್ತು.. ಆಯ್ತು.. ‘ನಿಧಾನಂ ಪ್ರಧಾನಂ’ ಅಂತ ಎಲ್ಲ ಕ್ಷೇತ್ರ ಸಹಾಯಕರಿಗೆ ಒಟ್ಟುಗೂಡಿಸಿ ಒಂದೊಂದು ಕೆಲಸವನ್ನು ಹಂಚಿಕೊಟ್ಟೆ ನೀವೆಲ್ಲಾ ಈ ಕೆಲಸಗಳನ್ನ ಸರಿಯಾಗಿ ಮಾಡಬೇಕು ಬೇಗ ಬೇಗ ಹಗ್ಗ,ಪೇಯಿಂಟ್ ಡಬ್ಬಗಳು, ಬ್ರಶಗಳನ್ನು ತೆಗೆದುಕೊಂಡು ಒಬ್ಬರ ಹಿಂದೆ ಒಬ್ಬರಂತೆ ಎರಡು ಗುಂಪುಗಳಲ್ಲಿ ಹೊರಡಲು ಸಿದ್ಧರಾದೇವು. ನಾನು ಮುಂದೆ ಸಾಗುತಿರಲು ನನ್ನ ಕೈಯಲ್ಲಿ ಜಿ.ಪಿ.ಎಸ್ ನಲ್ಲಿರುವ ಅಕ್ಷಾಂಶ-ರೇಖಾಂಶಗಳನ್ನು ಬಳಸಿ ಯಾವ ದಾರಿಗೆ ಮತ್ತು ಯಾವ ದಿಕ್ಕಿಗೆ ಹೋಗಬೇಕೆಂದು ನಾನು ಲೆಕ್ಕಹಾಕುತ್ತ ಮುಂದೆ ನಡೆಯುತ್ತಿದೆ. ಅದೇ ರೀತಿಯಾಗಿ ಇನ್ನೊಂದು ತಂಡ ಅದೇ ಅಕ್ಷಾಂಶ-ರೇಖಾಂಶಗಳನ್ನು ಬಳಸಿಕೊಂಡು ನನ್ನ ಪಕ್ಕದ ಬಲದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಹೀಗೆ ಎಲ್ಲರೂ ಕಾಡಲ್ಲಿ ನಡೆದುಕೊಂಡು ಹೋಗಿ ಮುಖ್ಯವಾದ ಪಾಯಿಂಟ್ ಗೆ ಹೋಗಿ ತಲುಪಬೇಕಾಗಿತ್ತು.
ಎರಡು ಗುಂಪುಗಳ ಸದ್ದು-ಗದ್ದಲಗಳ ನಡುವೆ ಶ್ರೀಕಾಂತ,ಅಮರ,ರಸೂಲ,ರಂಗಾ,ಅಂಜಯ್ಯ ಮತ್ತು ಅವರ ತಂಡದ ಎಲ್ಲ ಕ್ಷೇತ್ರ ಸಹಾಯಕರು ಬೇಗ ಬೇಗ ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತ ನೋಡ ನೋಡುತ್ತ ಮುಂದೆ ನಡೆದುಕೊಂಡು ಹೋಗೆ ಬಿಟ್ಟರು. ಆಗ, ನಾನು ನಮ್ಮ ತಂಡದಲ್ಲಿದ್ದ ಸೋಮ, ಜಾಕೋಬ,ಚಂದು,ಗುರುವಯ್ಯ,ಮತ್ತು ಉಳಿದ ಕ್ಷೇತ್ರ ಸಹಾಯಕರು ಹಿಂದೆಯಿಂದ ನಡೆಯುತಿರಲು ಒಂದು ಮಣ್ಣಿನ ದೊಡ್ಡ ದಿಣ್ಣೆಯನ್ನು ದಾಟಿ ಹೋಗುತ್ತಿರಬೇಕಾದರೆ ನನಗೆ ಒಂದು ಜಾಗದಲ್ಲಿ ಬಿದಿರುಗಳ ಹಂದರ ಸಿಕ್ಕಿತ್ತು ನಾನು ಅಲ್ಲೆ ಸ್ವಲ್ಪ ನಿಂತು ದಿಕ್ಸೂಚಿ ಪ್ರಕಾರ ಯಾವ ದಾರಿಗೆ ಹೋಗಬಹುದು ಎಂದು ನೋಡುತ್ತ ನಿಂತಿದ್ದೆ.
ಅದೇನೋ ಆಯ್ತು ಗೊತ್ತಿಲ್ಲ ಕೆಲವೇ ಕ್ಷಣದಲ್ಲಿ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಇವರ ಮೈಯಲ್ಲಿ ಏನಾದರೂ ‘ಮೈಕಲ್ ಜಾಕ್ಸನ್' ಹೊಕ್ಕಿ ಬಿಟ್ಟನಾ ಇವರೆಲ್ಲ ಹಿಗ್ಯಾಕೆ ಅಡ್ಡಾ-ದಿಡ್ಡಿಯಾಗಿ ಕುಣಿಯುತ್ತಿದ್ದಾರೆ . ನನಗೆ ಒಂದು ಕಡೆ ನಗು ತಡಕೊಳ್ಳಲಿಕ್ಕೆ ಆಗ್ತಾ ಇಲ್ಲ ಇನ್ನೊಂದು ಕಡೆ ಇವರೆಲ್ಲರಿಗೂ ಯಾವುದೋ ಪ್ರಾಣಿ ಬೆನ್ನು ಹತ್ತಿರಬಹುದು ಅದಕ್ಕೆ ಇವರೆಲ್ಲಾ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಅಂತ ಅಂದುಕೊಂಡೆ. ಆದರೆ, ನನಗೆ ಆ ಮಣ್ಣಿನ ದಿಣ್ಣೆ ಎತ್ತರವಾಗಿದ್ದರಿಂದ ಮುಂದಿನ ತಂಡದ ಸದಸ್ಯರ ಕಿರುಚಾಟ ಮಾತ್ರ ಕೇಳುತ್ತಿತ್ತು ಹೊರತು ಮತ್ತೇನು ಕಾಣುತ್ತಿರಲಿಲ್ಲ. ಚಂದು ಜೋರಾಗಿ ಹೂಷ.. ಹೂಷ.. ಎಂದು ಒಂದೇ ಸಮನೇ ಬಾಯಿ ಬಡಿದುಕೊಳ್ಳುತ್ತಿದ್ದ. ಜಾಕೋಬ ಆ ಕಡೆ ಓಡಿಸಿ ಈ ಕಡೆ ಓಡಿಸಿ ಅಂತ ಅವನ ತೊಳಲಾಟ , ಮಧ್ಯದಲ್ಲಿ ರಂಗನಿಗೆ ಏನು ಮಾಡಬೇಕು ಎಂದು ತಿಳಿಯದೇ ವರಾಹವನ್ನು ನಮ್ಮತ್ತ ಓಡಿಸಿ ಬಿಟ್ಟು ಕೈ ತೊಳೆದುಕೊಂಡು ಬಿಟ್ಟ. ಈ ಎಲ್ಲ ಘಟನೆಗಳನ್ನು ಶ್ರೀಕಾಂತರವರು ಸಾಕ್ಷಾತ ದೇವಲೋಕದ ‘ಇಂದ್ರನ’ ಹಾಗೇ ತದೇಕ ಚಿತ್ತದಿಂದ ಒಂದು ಕಡೆಯಿಂದ ಆರಾಮಾಗಿ ನಿಂತು ನೋಡುತ್ತಿದ್ದಾರೆ. ಭೂ ಮಂಡಲದಲ್ಲಿ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಎಂಬರ್ಥದಲ್ಲಿ ಅವರಿಗೆ ಮಾತ್ರ ವರಾಹ ದರ್ಶನ ಕೊಟ್ಟಿತು ವಿನಃ ಬೇರೆನು ತೊಂದರೆ ಮಾಡಿಲಿಲ್ಲ.
ಯಾವುದೋ ಚಿಕ್ಕದಾದ ಮೊಲ ಸಿಕ್ಕಿರಬಹುದು ಅದಕ್ಕೆ ಈ ತರಹ ಯಕ್ಷಗಾನ ತರಬೇತಿಯಲ್ಲಿ ನಮ್ಮವರು ತಲ್ಲಿನರಾಗಿದ್ದಾರೆ ಅಂತ ಅನ್ನಿಸಿತು. ಹಾಗೂ ಹೀಗೂ ನೋಡ ನೋಡುತ್ತ ಎರಡು ಹಂದಿಗಳು ಉದ್ದನೆಯ ಕೊರೆ ಹಲ್ಲುಗಳನ್ನು ಮುಂದೆ ಮಾಡಿ ಮೂತಿಯಿಂದ ಜೋರಾಗಿ ಅಟ್ಟಹಾಸದಿ ಓಡುತ್ತ ಎಲ್ಲರನ್ನು ಚೆಲ್ಲಾಪಿಲ್ಲಿಯಾಗಿಸಿ ಬಿಟ್ಟವು. ಗುಂಪು ಜನಗಳ ಮಧ್ಯದಲ್ಲಿ ಓಡಲು ದಾರಿ ಕಾಣದೇ ಹೆದರಿ ಅದರಲ್ಲಿದ್ದ ಒಂದು ಹಂದಿ ಬೇರೆ ದಾರಿಗೆ ಕಾಲ್ಕಿತ್ತು ಓಡಿ ಹೋಯಿತು. ಇನ್ನೊಂದು ಹಂದಿ ನಮ್ಮತ್ತ ಓಡಿಕೊಂಡು ಬರುತ್ತಿದೆ ನನ್ನ ಮುಂದೆ ಎತ್ತರ ಜಾಗದಲ್ಲಿ ನಿಂತ ಅಮರರವರ ಕಾಲಿಗೆ ಪಕ್ಕದಿಂದ ಬಂದು ಹಂದಿ ಗುದ್ದಿ ಬಿಟ್ಟಿತ್ತು . ನನಗೆ ಆ ಶಬ್ದ ಕೇಳಿ ‘ಕರಡಿ’ ಅಂತ ಅಂದುಕೊಂಡು ಬಿಟ್ಟೆ ಸ್ವಾಮಿ! ಕಪ್ಪು ಕಪ್ಪಾಗಿ ದೇಹ ಕಾಣಿಸುತ್ತಿದೆ ಏನಿರಬುಹುದು ಅಂತ ಅಂದುಕೊಳ್ಳುವಷ್ಟರಲ್ಲಿ ಹೊಡಿತು ನೋಡಿ ಒಂದೆ ಒಂದು ನೆಗೆತ ಸಿದಾ ನನ್ನ ತಲೆಯ ಮೇಲಿಂದ ಜಿಗಿದು ಹೋಯಿತು. ಯಪ್ಪೋ ... ಹಾಂ.. ಹಾಂ.. ಅನ್ನುತ್ತ ನಾನು ಸ್ವಲ್ಪ ಹಿಂದೆ ಬಾಗಿದೆ ನೋಡಿ ಇಳಿಜಾರ ಪ್ರದೇಶದಲ್ಲಿ ನನ್ನ ಬಲಗಾಲು ಜಾರಿದ್ದರಿಂದ ಎರಡರಿಂದ ಮೂರು ಸುತ್ತು ಪಲ್ಟಿ ಹೊಡೆದು ಕೆಳಗೆ ಬಿಳ್ಳುವಷ್ಟರಲ್ಲಿ ನನ್ನ ಪಕ್ಕದಲ್ಲಿದ್ದ ಸೋಮ ಎಸ್ಕೇಪ್ ಆಗಿದ್ದರು. ಹೆದರಿಕೆಯಿಂದ ಕ್ಷೇತ್ರ ಸಹಾಯಕರು ಸಿಕ್ಕ ಸಿಕ್ಕ ಮರಗಳನ್ನು ಹತ್ತುತಲಿರಲು ಮರದ ಟೊಂಗೆಗಳು ಇವರ ಭಾರದಿಂದ ನೆಲಕ್ಕೆ ಡೊಂಕಾಗಿ ಬಾಗಿ ಬಿಟ್ಟವು. ಅಷ್ಟರಲ್ಲಿ ನಾನು ದಡಬಡ ಅಂತ ಪಲ್ಟಿ ಹೊಡೆಯುತ್ತ ಚಿಕ್ಕದಾಗಿ ಬೆಳದು ನಿಂತ ಇಚಲು ಮರದಲ್ಲಿ ತಲೆ ಕೆಳಗಾಗಿ ಬಿದ್ದು ನನ್ನ ಬೂಟುಗಳ ಲೇಸು ಇಚಲು ಗಿಡದಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿತು.
ಸಾಕಷ್ಟು ಬಾರಿ ಪ್ರಯತ್ನ ಮಾಡಿದರು ಇಚಲು ಮರದಲ್ಲಿ ಸಿಕ್ಕ ಲೇಸು ಬಿಡಿಸಿಕೊಳ್ಳಲಾಗುತ್ತಿಲ್ಲ. ಎಲ್ಲ ಮರಗಳು ನನ್ನ ಕಣ್ಣಿಗೆ ಮಾತ್ರ ಬುಡ ಮೇಲಾಗಿ ಕಾಣುತ್ತಿವೆ, ಮರದ ಟೊಂಗೆಯಲ್ಲಿ ಜೋತು ಬಿದ್ದವರು ಆಕಾಶದಲ್ಲಿ ಹಾರಾಡುತ್ತಿರುವಂತೆ ಅನ್ನಿಸ ತೊಡಗಿತ್ತು. ಆಗ ನಾನು ಜೋರಾಗಿ ಮರದ ಮೇಲೆ ಕುಳಿತವರನ್ನು ಇಳಿರೋ ಕೆಳಗೆ ಬನ್ನರೋ ಇಲ್ಲಿ ಅಂತ ಕರೆದರು ಯಾರೊಬ್ಬರು ಬರುತ್ತಿಲ್ಲ. ಈಗಲೇ ಹೀಗಾದರೆ ಮುಂದೆ ಇವರೆಲ್ಲ ಹೆಂಗಪ್ಪಾ ಲೈನನಲ್ಲಿ ನಡಿತಾರೆ ಅಂತ ಗೊಣಗುತಿರಲು ಇಚಲು ಮರದ ಬುಡದಲ್ಲಿ ಕಾಲುಗಳು ಸಿಕ್ಕಿ ಹಾಕಿಕೊಂಡಿದ್ದನ್ನು ನೋಡಿ ಬೇರೆ ಕಡೆಯಿಂದ ಸರ್..ಸರ್.. ಅಂತ ಕೂಗುತ್ತ ರಂಗ, ಚಂದು, ಜಾಕೋಬ ಓಡಿ ಬಂದು ನನ್ನನ್ನು ಅಲ್ಲಿಂದ ಎತ್ತಿ ಬೇರೆ ಕಡೆ ಕರೆದುಕೊಂಡು ಹೋಗಿ ಕುಳಿತು ಕೊಳ್ಳಲು ಸಹಾಯ ಮಾಡಿದರು. ಆದರೆ, ನನ್ನ ಪಾದ ಉಳಿಕಿದ್ದರಿಂದ ಅತೀವ ನೋವಾಗುತ್ತಿತ್ತು ಜೊತೆಗೆ ಕೈ ಕಾಲುಗಳ ಚರ್ಮ ಕಿತ್ತಿದ್ದರಿಂದ ರಕ್ತ ಬರುತ್ತಿತ್ತು. ಧರಿಸಿದ ಪ್ಯಾಂಟ ಬಿದ್ದ ರಭಸಕ್ಕೆ ಮೊಣಕಾಲಿನ ಸಮೇತ ಬಟ್ಟೆ ಹರಿದು ಹೋಗಿತ್ತು. ಬ್ಯಾಗಿನಲ್ಲಿದ್ದ ನೀರಿನ ಬಾಟಲಿಯನ್ನು ತೆಗೆದು ಸ್ವಲ್ಪ ನೀರು ಕುಡಿದೆ ಆಗ ಸ್ವಲ್ಪ ಆರಾಮ ಸಿಕ್ಕಂತ್ತಾಯಿತು ಹೊರತು ಅದೃಷ್ಟವಶಾತ್ ತಲೆಗೆ ಪೆಟ್ಟು ಬಿದ್ದಿರಲಿಲ್ಲ.
ಈ ಎಲ್ಲ ಘಟನೆಗಳು ನೋಡ ನೋಡುತ್ತ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಉಳಿದ ತಂಡದ ಸದಸ್ಯರುಗಳು ಬಂದು ಸಾಂತ್ವನ ಹೇಳಿ ನೀವು ಇಲ್ಲಿಂದ ಬಂದ ದಾರಿಗೆ ವಾಪಸ್ಸಾಗಿ ನಿಧಾನವಾಗಿ ಜೀಪನತ್ತ ಹೋಗಿ ಅಲ್ಲೆ ವಿಶ್ರಾಂತಿ ಪಡೆಯಿರಿ ನಾವು ಇನ್ನು ಸ್ವಲ್ಪ ಹತ್ತಿರದಲ್ಲಿಯೇ ಪಾಯಿಂಟ್ ಇದೆ ಅಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತೇವೆ ಅಂತ ಹೇಳಿ ನನ್ನ ಜೊತೆ ಒಬ್ಬ ಕ್ಷೇತ್ರ ಸಹಾಯಕನನ್ನು ಕಳುಹಿಸಿ ಹೊರಟು ಹೋದರು. ನಾನು ಮತ್ತೆ ಅದೇ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಮತ್ತೆ ಕಾಲು ಜಾರಿ ಬಿದ್ದು ಬಿಟ್ಟೆ ಥತ್ ತೇರಿ ಕೆ ನಮ್ಮ ನಸೀಬ ಖರಾಬ ಐತಿ ಈ ದಿನ ಅಂತ ಅಂದುಕೊಳ್ಳುತ್ತ ಕುಂಟುತ್ತ 200 ಮೀಟರಗಳಷ್ಟು ನಿಧಾನವಾಗಿ ನಡೆದು ವಾಪಸ್ಸು ಬಂದು ಜೀಪಿನ ಹಿಂಬದಿ ಸೀಟಿನ ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ನಿಟ್ಟುಸಿರು ಬಿಡುತ್ತ ಆರಾಮಾಗಿ ವಿಶ್ರಾಂತಿಯಲ್ಲಿ ಲಿನನಾದೆ.
ಚಿಕ್ಕದಾದ ಮಣ್ಣಿನ ದಿಣ್ಣೆಯನ್ನು ಹತ್ತುವಂತಹ ಸಡಗರದಲ್ಲಿ ನೋಡ ನೋಡುತ್ತ ಎಗರಿದ ವರಾಹ. ಭಯದಿಂದ ಎಲ್ಲ ಕ್ಷೇತ್ರ ಸಹಾಯಕರು ದಿಕ್ಕಾಪಾಲಾಗಿ ಓಡಿ ಮರ ಹತ್ತಿರುವ ದೃಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪುರ, ತಾಃ ಇಂಡಿ, ಜಿಃ ವಿಜಯಪುರ.
ಹೀಗೆ ಪ್ರತಿ ಹಂತದಲ್ಲು ನಾನು ಸಾಕಷ್ಟು ಬಾರಿ ಪ್ರಕೃತಿಯಿಂದ ಪಾಠ ಕಲಿತಿದ್ದೇನೆ. ಈಗಲು ಕಲಿಯುವುದು ಬೆಟ್ಟದಷ್ಟಿದೆ ಈ ಮಾಯಾಲೋಕದಲ್ಲಿ ಅಡಗಿದ ಸಹಸ್ರಾರು ಬಗೆಯ ಹಲವು ವೈಶಿಷ್ಟ್ಯಗಳನ್ನು ವರ್ಣಿಸಲು ನನಗೆ ಈ ಜನ್ಮವೇ ಸಾಲದು. ಪಶ್ಚಿಮ ಘಟ್ಟಗಳ ವಿಸ್ಮಯ ಲೋಕ ಒಂದು ಕಡೆಯಿಂದ ಕೈಚಾಚಿ ಕರೆದರೆ ಪೂರ್ವ ಘಟ್ಟಗಳ ಸರಣಿ ಬಂಡೆಗಾಡುಗಳು ಮತ್ತೊಂದು ಕಡೆಯಿಂದ ಕೈಬಿಸಿ ಕರೆಯುತ ನಿರಂತರವಾದ ಈ ನನ್ನ ಪಯಣವು ಸಾಗುತಲಿದೆ.
ಒಟ್ಟಿನಲ್ಲಿ, ನಿಸರ್ಗ ಮಾತೆಯ ಮಾಯೆ ಬಹಳ ಅಪರೂಪವಾದದ್ದು ಅಂತ ಹೇಳುತ್ತ ಎಲ್ಲ ಓದುಗರಿಗೆ ಅನಂತ ನಮನಗಳನ್ನು ಸಲ್ಲಿಸುತ್ತ ಈ ಲೇಖನದ ಕೊನೆಯ ಭಾಗ ಇಲ್ಲಿಗೆ ಮುಕ್ತಾಯವಾಗುತ್ತೆ.
ಧನ್ಯವಾದಗಳು..
Catch up on the story below:
http://wcsindia.org/home/2018/08/03/my-journey-from-the-magical-world-of-western-ghats-to-rocky-hills-of-eastern-ghats/
http://wcsindia.org/home/2018/10/23/my-journey-from-the-magical-world-of-western-ghats-to-rocky-hills-of-eastern-ghats-kannada-part-ii/
http://wcsindia.org/home/2019/01/11/my-journey-from-the-magical-world-of-western-ghats-to-rocky-hills-of-eastern-ghats-kannada-part-iii/
http://wcsindia.org/home/2019/06/11/my-journey-from-the-magical-world-of-western-ghats-to-rocky-hills-of-eastern-ghats-kannada-part-iv/