ಲೇಖನ: ಆರ್. ರಘುರಾಮ್
ಜನವರಿ ಮಾಹೆಯ ಒಂದು ಮುಂಜಾನೆ ನಾನು ಮತ್ತು ನನ್ನ ಸಹೋದ್ಯೋಗಿ ಶ್ರೀ ಸೆಂದಿಲ್ ಪಕ್ಷಿ ವೀಕ್ಷಣೆಗಾಗಿ ಆಯ್ಕೆಮಾಡಿಕೊಂಡಿದ್ದು ಚಾಮರಾಜನಗರದ ಹೊರವಲಯದಲ್ಲಿರುವ ದೊಡ್ಡಕೆರೆಯನ್ನು. ದೊಡ್ಡಕೆರೆ ಸುಮಾರು ೧೦೦೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಒಂದು ನೀರಿನ ಸಂಗ್ರಹ ಪ್ರದೇಶ. ಈ ಹಿಂದೆ ಈ ಕೆರೆ ದೊಡ್ಡಮೋಳೆ, ಚಿಕ್ಕಮೋಳೆ ಹಾಗೂ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುತ್ತಿದ್ದ ಪ್ರಮುಖ ಜೀವನಾಡಿ. ಹಲವಾರು ವರ್ಷಗಳಿಂದ ಪಕ್ಕದ ಗ್ರಾಮಗಳ ಆಟದ ಮೈದಾನವಾಗಿದ್ದ ಇಲ್ಲಿ ಕಳೆದ ವರ್ಷದ ಉತ್ತಮ ಮಳೆಯಿಂದಾಗಿ ನೀರಿನ ಪ್ರಮಾಣ ಅಧಿಕವಾಗಿಯೇ ಇತ್ತು. ಸುಮಾರು ವರ್ಷಗಳ ಮಳೆಯ ಕೊರತೆಯಿಂದ ಸಮೃದ್ಧವಾಗಿ ಬೆಳೆದಿದ್ದ ಬಳ್ಳಾರಿ ಜಾಲಿ ಮರಗಳು ಸಣ್ಣ ಕಾಡನ್ನೇ ಸೃಷ್ಠಿಸಿದ್ದವು. ಹಾಗಾಗಿ ಚಾಮರಾಜನಗರ ಪ್ರಾದೇಶಿಕ ವಲಯದ ಕರಿವರದರಾಜಸ್ವಾಮಿ ಬೆಟ್ಟದ ಕಾಡಿನಿಂದ ವಲಸೆ ಬಂದ ಸುಮಾರು ೧೫ ಜಿಂಕೆಗಳ ಗುಂಪೊಂದು ಈ ಕಾಡಿನಲ್ಲಿ ನೆಲೆಸಿದ್ದವು. ದೊಡ್ಡಕೆರೆಗೆ ಪಶ್ಚಿಮ ದಿಕ್ಕಿನ ಪ್ರವೇಶ ದ್ವಾರದಲ್ಲಿ ಮೊದಲಿಗೆ ಸಿಗುವುದು ಶ್ರೀ ಸಿರಿಗಳ್ಳಿ ಲಕ್ಷ್ಮೀ ದೇವಿ ದೇವಸ್ಥಾನ. ಈ ದೇವಸ್ಥಾನದ ಮಗ್ಗುಲಲ್ಲೇ ಸಾಗುವ ಕೆರೆಯ ಹಾದಿಯಲ್ಲಿ ಸಾಗುತ್ತಿದ್ದ ನಮಗೆ ಮೊದಲು ಕೇಳಿಸಿದ್ದು ಗಿಳಿಗಳ (Rose-ringed parakeet) ಕೀಕ್. . . ಕೀಕ್ ರಾಗ. ಸುಮಾರು ೧೫ ರಿಂದ ೨೦ ಗಿಳಿಗಳು ದೇವಸ್ಥಾನದ ಆವರಣದಲ್ಲಿರುವ ನಾಲ್ಕು ದೊಡ್ಡ ಆಲದ ಮರದ ಹಣ್ಣುಗಳಿಗೆ ಮುತ್ತಿಗೆ ಹಾಕುತ್ತಿದ್ದವು.
ಮುಂದುವರೆದು ಪಶ್ಚಿಮ ದಿಕ್ಕಿನಿಂದ ಕೆರೆಯ ಏರಿಯ ಮೇಲೆ ಏರಿದ ನಮಗೆ ಕಾಣಿಸಿದ್ದು ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದ ನೀರುಕಾಗೆ (Little cormorant) ಮತ್ತು ಹಾವಕ್ಕಿ (Darter). ನಮ್ಮನ್ನು ಕಂಡೊಡನೆ ನೀರುಕಾಗೆ ತನ್ನ ಕರ್ಕಶ ಧ್ವನಿಯನ್ನು ಹೊರಡಿಸುತ್ತಾ ಹಾರಿ ಕಣ್ಮರೆಯಾಯಿತು. ಆದರೆ ಹಾವಕ್ಕಿ ನಮ್ಮನ್ನು ನೆಪಮಾತ್ರಕ್ಕಾದರೂ ನೋಡದೆ ತನ್ನ ಸೂರ್ಯ ಸ್ನಾನವನ್ನು ಮುಂದುವರೆಸಿತು. ನಂತರದಲ್ಲಿ ಬಳ್ಳಾರಿ ಜಾಲಿ ಗಿಡಗಳ ಮೇಲೆ ಕುಳಿತಿದ್ದ ಹಲವಾರು ಗರುಡಗಳು(Brahminy kite) ತಮ್ಮ ಕ್ಕ್ಯಾ. . ಕ್ಕ್ಯಾ. . ಕ್ಕ್ಯಾ.. ಧ್ವನಿಯಿಂದ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುತ್ತಿದ್ದವು. ಬಿಳಿ ಮಿಂಚುಳ್ಳಿ(Lesser pied kingfisher) ಮತ್ತು ನೀಲಿ ಮಿಂಚುಳ್ಳಿ (Small blue kingfisher) ಗಳೆರಡು ತಮ್ಮ ಬೇಟೆಗಾಗಿ ಸದ್ದಿಲ್ಲದೆ ಕಾಯುತ್ತಿದ್ದವು. ಸುಮಾರು ಮೂರು ಕಿಲೋಮೀಟರ್ ಉದ್ದವಿರುವ ಕೆರೆಯ ಏರಿಯ ಮೇಲೆ ನಿಧಾನವಾಗಿ ಸಾಗುತ್ತಿದ್ದ ನಮಗೆ ನಾಲ್ಕು ಕರಿಕೆಂಬರಲು (Oriental white ibis) ಮತ್ತು ಮೂರು ಬಿಳಿ ಕೆಂಬರಲುಗಳು (White necked stork) ಯಾವ ಆತಂಕವೂ ಇಲ್ಲದೆ ತಮ್ಮ ಆಹಾರ ಹುಡುಕುತ್ತಿದ್ದ ದೃಶ್ಯ ಕಾಣಿಸಿತು. ಇದರ ಕೂಗಳತೆಯ ದೂರದಲ್ಲಿ ನಾಲ್ಕು ಗೋದ್ಬಾದ (White necked Stork) ಮತ್ತು ೧೨ ಬಣ್ಣದ ಕೊಕ್ಕರೆಗಳು (Painted stork) ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದವು. ಮುಂದುವರೆದ ನಮಗೆ ಕೆರೆಯ ನಡುಗಡ್ಡೆಯೊಂದರ ಮೇಲೆ ಹಲವಾರು ಬಣ್ಣದ ಕೊಕ್ಕರೆಗಳು, ಗೋವಕ್ಕಿಗಳು (Cattle Egret), ವರಟೆ (Spot billed duck) ಗಳು ಬಿಸಿಲ ಜಳಕ ಮಾಡುತ್ತಿದ್ದವು. ಹೀಗೆ ಕೊಳದ ಬಕ (Indian pond heron), ಗುಳುಮುಳುಕ (Little grebe), ಸಿಳ್ಳೇಬಾತು (Lesser whistling duck), ನಾಮದ ಕೋಳಿ (Common coot), ಚೋರೆಹಕ್ಕಿ (Spotted dove), ಕೆಂಬೂತ (Lesser coucal), ಚಂದ್ರಮುಕುಟ (Common hoopoe), ಗೊರವಂಕ (Common myna), ಕೆಂಪುಬಾಲದ ಪಿಕಳಾರ(Red vented bulbul), ಚಿಟ್ಟು ಮಡಿವಾಳ (Indian robin) ಹೀಗೆ ೩೪ ವಿವಿಧ ಪ್ರಭೇದಗಳ ಪಕ್ಷಿಗಳನ್ನು ನೋಡಿದೆವು.
ಚಾಮರಾಜನಗರದ ಜನವಸತಿ ಪ್ರದೇಶದ ಪಕ್ಕದಲ್ಲಿಯೇ ಇರುವ ಈ ಪಕ್ಷಿ ಪ್ರಪಂಚ ಪಕ್ಷಿ ವೀಕ್ಷಕರಿಗೆ ಉತ್ತಮ ತಾಣ (ನೀರಿನ ಸಂಗ್ರಹವಿದ್ದರೆ ಮಾತ್ರ). ಈ ಪಕ್ಷಿ ಪ್ರಪಂಚಕ್ಕೆ ಭೇಟಿ ಮಾಡುವವರು ತೀರಾ ವಿರಳ ಹಾಗಾಗಿ ಯಾರ ಅಡ್ಡಿ ಆತಂಕಗಳಿಲ್ಲದೆ ಪಕ್ಷಿಗಳ ವಾಸಕ್ಕೆ ಸೂಕ್ತ ತಾಣ ಎನ್ನಬಹುದು. ಸ್ಥಳೀಯರ ಮಾಹಿತಿಯ ಪ್ರಕಾರ ಪುರಾತನವಾದ ಹಾಗೂ ಸಮೃದ್ಧವಾಗಿದ್ದ ಈ ಕೆರೆ ಇತ್ತೀಚಿನ ಮಳೆಯ ಕೊರತೆಯಿಂದ ಬರಡಾಗಿ ಜಾಲಿಯ ಕಾಡಾಗಿದೆ. ಆದರೆ ಜಿಲ್ಲೆಯ ಹಲವು ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯಕ್ರಮದಲ್ಲಿ ಈ ಕೆರೆಗೂ ನೀರು ಹರಿಸಿದರೆ ಈ ಕೆರೆಯ ಪ್ರಾಚೀನ ವೈಭವ ಮರಳುವುದು ಸತ್ಯ ಮತ್ತು ಕೆರೆಯ ಸೂಕ್ತ ನಿರ್ವಹಣೆ ಮಾಡಿದರೆ ಅದ್ಭುತವಾದ ಪಕ್ಷಿ ಪ್ರಪಂಚವೇ ಸೃಷ್ಠಿಯಾಗಬಹುದು. ಆದ್ದರಿಂದ ಇಂತಹ ನೀರಿನ ಸಂಗ್ರಹಾಗಾರಗಳನ್ನು ಕಾಪಾಡಿ, ನಿರ್ವಹಿಸಿ, ಉಳಿಸಿಕೊಳ್ಳುವುದು ಸೂಕ್ತ.