(ಭಯ, ಕುತೂಹಲ, ಹಾಸ್ಯ)
ಲೇಖಕರು: ಸತೀಶ ಗಣೇಶ ನಾಗಠಾಣ
ಮುಂದುವರೆದ ಭಾಗ...
ದೊಡ್ಡ ಗಾತ್ರದ ಮರಗಳ ಸಾಲುಗಳೆತ್ತರ ನೋಡುತ್ತ ಆಚೀಚೆ ಹರಡಿದ ಬಲು ವ್ಯಾಪಕವಾಗಿ ಬೃಹದಾಕಾರವಾಗಿ ಆವರಿಸಿದ ಮರದ ರೆಂಬೆ-ಕೊಂಬೆಗಳ ಹಸಿರು ತಪ್ಪಲಿನ ಸಾಮ್ರಾಜ್ಯವು ಬಹಳ ದೂರದವರೆಗೆ ಕೊಂಡೊಯಿದಂತೆ ಕಾಣುತ್ತಿತ್ತು. ಕಾನನದ ವರ್ಣನೆ ಮಾಡಲು ಸೂರ್ಯ-ಚಂದಿರರಿಬ್ಬರು ಸಾಕ್ಷಿಯಾಗುವಂತೆ ಪ್ರಕಾಶಮಾನವಾದ ಸೂರ್ಯ ತನ್ನ ಸ್ಪರ್ಶವನ್ನು ಧರೆಗೆ ಅಪ್ಪಳಿಸಿ ಕಾಡಿನ ತುಂಬೆಲ್ಲ ಬೆಳಕು ಪಸರಿಸುತ್ತ ನಿಸರ್ಗದ ಕವಿತೆಗಳ ಸಾಲನ್ನು ಬರೆಯಲು ಸೂರ್ಯ- ಚಂದಿರರಿಬ್ಬರು ಅಣಿಯಾಗುತ್ತ ಕವಿಯಾಗತೊಡಗುತ್ತಾರೆ.
ರಾತ್ರಿಯಾದಂತೆ ಚಂದಿರ ತನ್ನ ಬೆಳದಿಂಗಳಿನ ಬೆಳಕು ಚೆಲ್ಲುತ್ತ ಅವನ ಅಂದಕೆ ಮನಸೋತ ನಕ್ಷತ್ರಗಳು ಆಗಸದ ತುಂಬೆಲ್ಲ ಚುಕ್ಕೆಗಳ ರೂಪದಲ್ಲಿ ಮಿಣಮಿಣ ಅಂತ ಕಂಗೊಳಿಸುತ್ತ ಮಿನುಗುತ್ತಿರುವ ದೃಶ್ಯವನ್ನು ನೋಡುವುದೇ ಒಂದು ಮುಗ್ದತೆಯ ರೊಮಾಂಚನವೆ ಸರಿ.
ಒಂದಿನ ಮುಂಜಾನೆ ಸುಮಾರು ದೂರದವರೆಗೆ ಹುಲ್ಲುಗಾವಲುಗಳು ಮೇಲೆ ಹರಡಿರತಕ್ಕಂತ “ಇಬ್ಬನಿಗಳ ಹಾಸೆ” (ಹುಲ್ಲುಗಾವಲುಗಳ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ, ವಕ್ರಿಭವಿಸಿ ವರ್ಣರಂಜಿತ ದೃಶ್ಯವನ್ನೆ ಮೂಡಿಸುವ ಹಾಸೆಯನ್ನ ಇಬ್ಬನಿ (spider web with dew drops) ಹಾಸೆ ಅಂತಲೂ ಕರೆಯುವರು ) ಮುತ್ತುಗಳ ರೂಪವುಳ್ಳ ವಜ್ರದಂತೆ ಮಿಂಚುತ್ತಿದ್ದವು. ಸಣ್ಣ ಪ್ರಮಾಣದಲ್ಲಿ ಮಳೆರಾಯ ಕಾನನದ ಸುತ್ತೆಲ್ಲ ಕ್ರಮೇಣವಾಗಿ ಆವರಿಸುತ್ತಿದ್ದ ಹೊರತು ಅಷ್ಟೊಂದು ಜೋರಾಗೇನು ಇರಲಿಲ್ಲ. ಸುಳಿಗಾಳಿಗಳು ಕಾನನದ ತುಂಬೆಲ್ಲ ಪಸರಿಸಿತ್ತಾದರು, ಆ ದಿನದ ಆನಂದವು ನಮ್ಮೆಲ್ಲರಲ್ಲಿ ಸಂತೋಷದ ಪುಟಿದೇಳುವಂತೆ ಮಾಡಿತ್ತು.
ಕೀರ್ತಿ ಅಣ್ಣಾ! ಇವತ್ತು ನಮ್ಮ ಪಯಣ ಯಾವ ಕಡೆಗೆ ಎಂದು ಕೇಳಿದಾಗ, ಹೇಳ್ತಿನಿ ತಡಿಯಪ್ಪ ಆತುರ ಬೇಡ. ಜೀಪಿನ ಹಿಂದೆ ಕುಳಿತಂತವರು ಇತ್ತ ಕಡೆ ಸ್ವಲ್ಪ ಲಕ್ಷ್ಯವಿಟ್ಟು ಕೇಳಿ ನಾವು ಈಗ ಹೋಗುತ್ತಿರುವುದು ಕೆಲವೆ ಕೆಲವು ಮೈಲಿಗಳವರೆಗೆ ಹಾಗಾಗಿ ಎಲ್ಲರೂ ಸಮಾಧಾನದಿಂದ ಇರಬೇಕು. ನಾನು ನಿಮಗೆಲ್ಲ ಹೇಳುವುದಿಷ್ಟೆ ಈ ಕಾಡು ನಿಮ್ಮ ಊರಲ್ಲ ಎಲ್ಲಿ ಬೇಕೆಂದರಲ್ಲಿ ಸುತ್ತಾಡಿ ಬರೋಕೆ ಈ ಸ್ಥಳದಲ್ಲಿರುವ ನೀವೆಲ್ಲ ಆಲಕ್ಷ್ಯವಹಿಸಬಾರದು. ಒಂದು ವೇಳೆ, ಆಲಕ್ಷ್ಯತನದಿಂದ ವರ್ತನೆ ಕಂಡು ಬಂತೆಂದರೆ ನಿಮ್ಮನ್ನ ನಿಮ್ಮ ವಸ್ತುಗಳ ಸಮೇತ ಮನೆಗೆ ಕಳುಹಿಸಬೇಕಾಗುತ್ತದೆ. ಹುಷಾರು, ಎಚ್ಚರದಿಂದ ವರ್ತಿಸಿ ಅಂತ ಸಮಜಾಯಿಸಿ ಹೇಳುತ್ತಲಿದ್ದಾಗ ಕೀರ್ತಿ ಅಣ್ಣನ ಮಾತಿಗೆ ಎಲ್ಲರೂ ಓಕೆ! ಸರ್.. ನೀವು ಹೇಳಿದಂತಾಗಲಿ ಎಂದು ಗಜರಾಜನ ಹಾಗೆ ಕುತ್ತಿಗೆಯನ್ನ ಅಲ್ಲಾಡಿಸುತ್ತ ಶರಣಾದರು.
ಈಗ ಇನ್ನು ಸ್ವಲ್ಪ ಕಗ್ಗತ್ತಲಾಗಿದ್ದರಿಂದ ಬೆಳಕು ಬಂದಾದ ಮೇಲೆ ಒಂದು ಗುಂಪನ್ನ ಈ ಕಾಡಿನಲ್ಲಿ ಲೈನವಾಕ್ ಮಾಡಲು ಬಿಡೋಣ. ಹಾಗೇಯೆ, ಇನ್ನೊಂದು ಗುಂಪನ್ನು ಸ್ವಲ್ಪ ಮುಂದೆ ಹೋಗಿ ಅವರನ್ನು ಸಹ ಬಿಡೋಣ ಆದರೆ, ಒಂದು ಗುಂಪಿಗೆ ಮಾತ್ರ ಇವತ್ತು ವಿಶ್ರಾಂತಿ ಇದ್ದ ಕಾರಣ ಅವರು ಜೀಪಿನಲ್ಲಿಯೇ ಕುಳಿತು ವಿಶ್ರಮಿಸಲಿ ಎಂದು ಅಣ್ಣ ನಮ್ಮನ್ನೆಲ್ಲಾ ಉದ್ದೇಶಿಸಿ ಈ ಮೇಲಿನಂತೆ ಹೇಳಿದರು.
ದಟ್ಟ ಕಾನನವನ್ನ ಸಮೀಪಿಸುತ್ತಿದ್ದಂತೆ ಎಲ್ಲರೂ ತಮ್ಮ ತಮ್ಮ ಲೈನುಗಳ (ಟ್ರಾನ್ಸೇಕ್ಟ ವಾಕ್) ಬಗ್ಗೆ ಅತಿ ಮುಖ್ಯವಾಗಿ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಸೈಟಿಂಗ್ ಮಿಸ್ ಆಗುತ್ತೆ ವಿನಃ ಮತ್ತೇನು ಆಗುವುದಿಲ್ಲ ಎಂದು ಬಾಡಿಹೋದ ಎಲ್ಲರ ಮುಖದಲ್ಲಿ ಮಂದಹಾಸದ ನಗುವನ್ನ ಚೆಲ್ಲಿ ಭಯ ಪಡಬೇಡಿ ಎಂದು ಹೇಳುತ್ತಲ್ಲಿದ್ದ ಅಣ್ಣನ ಮಾತಗಳನ್ನು ಕೇಳಿ ಎಲ್ಲರೂ ಚಿಂತೆಯಿಂದ ದೂರಾದ ಹಾಗೆ ನಿಟ್ಟುಸಿರು ಬಿಡುತ್ತ ತಾವರೆ ಹೂವಿನಂತೆ ಫಳ-ಫಳ ಅಂತ ಹೊಳೆಯ ತೊಡಗಿದರು.
ಅಂಕು ಡೊಂಕಾದ ಮಣ್ಣಿನ ರಸ್ತೆಗಳ ಮಧ್ಯೆ ಜೀಪು ನಿಧಾನವಾಗಿ ಹೋಗುತ್ತಿರಬೇಕಾದರೆ ಅಲ್ಲಲ್ಲಿ ಹರಡಿಕೊಂಡಿದ್ದ ಕಾಲುವೆಗಳ ಮೇಲೆ ಇರುವ ರಸ್ತೆ ಅಷ್ಟೊಂದು ಗಟ್ಟಿಯಾಗಿರಲಿಲ್ಲ. ಧಡಭಡ, ಧಡಭಡ ಅಂತ ಸದ್ದು ಮಾಡುತ್ತ ಜೀಪು ಹೋಗುತ್ತಿತ್ತು. ಅಣ್ಣನ, ಪಕ್ಕದಲ್ಲಿದ್ದ ನನಗೆ ಆ ಸದ್ದು ಒಂಥರಹ ಎತ್ತಿನ ಗಾಡಿಯನ್ನು ಓಡಿಸಿದಾಗ ಬರುವಂತಹ ಸದ್ದು ಹೇಗಿರುತ್ತೋ ಹಾಗೆ ಆ ಸದ್ದು ಬಹಳ ದೂರದವರೆಗೆ ವ್ಯಾಪಿಸುವ ಹಾಗೆ ಕೇಳಿಸುತ್ತಿತ್ತು.
ಛೇ! ಏನ್ ರಸ್ತೆ ರೀ ಅಣ್ಣಾ! ಇದು ಅಂತ ಗೊಣಗುತ್ತಿರಬೇಕಾದರೆ ದೂರದಲ್ಲಿ ಎಲ್ಲೊ ಒಂದು ಕಡೆ ಗಜರಾಜ ಜೋರಾಗಿ ಘೀಳುಡುವಂತಹ ಶಬ್ಧ ಕೇಳಿಸಲಾರಂಭಿಸಿತು. ಎಲ್ಲರ ಎದೆ ಢವ-ಢವ ಅಂತ ಬಡಿದುಕೊಳ್ಳಲು ಶುರುವಾಯಿತು. ಜೀಪು ಮಾತ್ರ ಸದ್ದು ಮಾಡುತ್ತ ಬಿಟ್ಟುಬಿಡದೆ ಮುಂದೆ ಸಾಗುತ್ತಿದ್ದಂತೆ ಗಜರಾಜನ ಧ್ವನಿ ಹತ್ತಿರವಾಗುತ್ತ ಜೀಪಿನ ಹಿಂಬದಿಯಲ್ಲಿ ಕುಳಿತ ಒಬ್ಬ ಕ್ಷೇತ್ರ ಸೇವಕ ನನ್ನ ಆಸನದ ಪಕ್ಕದ ಸೀಟಿನಲ್ಲಿ ಉದ್ದನೆಯ ಬಾಲದ ಮುಷ್ಯಾನ (langur) ಹಾಗೆ ಚಂಗನೆ ಜಿಗಿದು ನನ್ನ ಹಿಂಬದಿಯ ಸೀಟಿಗೆ ರಭಸವಾಗಿ ಜಾರಿದ. ಜಾರಿದ ರಭಸಕ್ಕೆ ಹಿಂಬದಿಯಿಂದ ಮುಂದಿನಭಾಗಕ್ಕೆ ನಾನು ಕುಳಿತ ಸೀಟು ಒಮ್ಮೆಲೆ ಮಡಚಿಕೊಂಡಿದ್ದರ ಪರವಾಗಿ ನನ್ನ ಮುಖ ಮುಂಭಾಗದ ಜೀಪಿನ ಗಾಜಿಗೆ ಲಬಕ್ ಅಂತ ಅಂಟಿಕೊಂಡಿತು. ಆತನ ಪರಾಕ್ರಮ ಮತ್ತು ಧೈರ್ಯವನ್ನು ನೋಡಿ ಎಲ್ಲರೂ ಭಯದಿಂದ ಚಂಗನೆ ಹಾರಿ ಮುಂದಿನ ಸೀಟಿಗೆ ಲಗ್ಗೆ ಇಟ್ಟರು.
ಚಿತ್ರ: ದಟ್ಟಕಾನನದ ಮಧ್ಯೆ ಸಾಗುವ ದಾರಿಯಲ್ಲಿ ಕಂಡ ಆನೆಗಳ ದೊಡ್ಡ ಗುಂಪಿನ ದೃಶ್ಯ. ವಯನಾಡು - ಕೇರಳ. ಚಿತ್ರ ರಚಿಸಿದವರು- ಕೃಷ್ಣಾ ಸಾತಪೂರೆ.
ಅಯ್ಯಯ್ಯೋ, ನಿಧಾನ ಕಣ್ರಪ್ಪ ಯಾಕ್ರಿ ಭಯ ಪಡ್ತಿರಾ ನಾವಿನ್ನು ಜೀಪಿನಲ್ಲಿದ್ದೇವೆ ಭಯ ಪಡಬೇಡಿ. ಹಿಂದೆ ಹೋಗಿ ಕುಳಿತುಕೊಳ್ಳಿ ಅಂತ ಹೇಳುತಲಿದ್ದ ನಾನು ಜೀಪಿನ ಹಿಂಬದಿಯಿಂದ ಇಣುಕಿ ನೋಡುತ್ತಿದ್ದಾಗ ಗಜರಾಜ ಜೋರಾಗಿ ಘೀಳಿಡುತ್ತ ಧೂಳೆಬ್ಬಿಸುತ್ತ ಜೀಪನ್ನು ಅಟ್ಟಾಡಿಸಿಕೊಂಡು ಬೆನ್ನುಹತ್ತುತ್ತಿರುವ ದೃಶ್ಯವನ್ನ ನೋಡಿ, ಉಲ್ಕಾಪಿಂಡ ಬಂದು ಧರೆಗೆ ಅಪ್ಪಳಿಸಿದಂತೆ ಆಗುವ ಭಯಾನಕ ಅನುಭವದ ಹಾಗೆ ಎಲ್ಲರೂ ಕರೆಂಟ್ ಹೊಡೆದ ಕಾಗೆ ಥರಹ ವಿಲವಿಲ ಅಂಥ ಒದ್ದಾಡುತ್ತಿದ್ದರು. ಒಂದು ವೇಳೆ ಹಠಾತ್ತನೆ ಜೀಪು ನಿಂತಿದ್ದರೆ ಆ ಕ್ಷಣ ನಾವೆಲ್ಲ ಗಾಳಿಯಲ್ಲಿ ಹಾರಾಟವೆ ಮಾಡಬೇಕಾಗಿತ್ತು. ಗಜರಾಜನ ಈ ವರ್ತನೆಯನ್ನ ನೋಡಿ ನಮಗೆಲ್ಲ ಈ ದಿನ ಏನಪ್ಪ ಮಾಡೋದು ಅಂತ ಎಲ್ಲರೂ ಪರಿಪರಿಯಾಗಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ಈ ಕಷ್ಟದಿಂದ ಪಾರುಮಾಡು ದೇವ-ಹರಿಹರ ಎಂದು ಎನ್ನುತ್ತಿದ್ದಾಗ ಪಕ್ಕದಲ್ಲಿದ್ದ ಕೀರ್ತಿ ಅಣ್ಣ, ನಿಧಾನವಾಗಿ ಸಮಜಾಯಿಸಿ ಹೇಳುತ್ತ ನೀವೆಲ್ಲ ಜೀಪಿನಲ್ಲಿಯೆ ಕುಳಿತು ಈ ರೀತಿ ಬೇಡಿಕೊಂಡರೆ ಆ ಬ್ರಹ್ಮಾಂಡ ನಾಯಕನಾದ ‘ಶಿವ’ ಬಂದರು ನಿಮಗೆ ಕಾಪಾಡುವುದಿಲ್ಲ. ಅಯ್ಯೋ, ವಿಧಿಯೇ! ನೀವೆಲ್ಲ ಲೈನವಾಕ್ ನಡೆಯುವವರು ನಿಮ್ಮ ಧೈರ್ಯ ಮತ್ತು ಸಾಹಸಕ್ಕೆ ಒಂದು ದೊಡ್ಡ ನಮಸ್ಕಾರ. ನೀವೇನಾದ್ರು ಹೀಗೆ ಕಪಿಗಳ ಥರಹ ಚೇಷ್ಟೆ ಮಾಡಿದ್ರೆ ಹೇಗೆ? ಸುಮ್ಮನೆ ಕಾಲಹರಣ ಮಾಡುತ್ತ ಚಿಂತಿಸಬೇಡಿ. ಆಗ ಜೀಪು ತನ್ನ ಗತಿ(ವೇಗ)ಯನ್ನ ಕಳೆದುಕೊಂಡಂತೆ ಒಮ್ಮೆಲೆ ನಿಂತೆ ಬಿಟ್ಟಿತ್ತು.
ಆನೆ.. ಆನೆ.. ಎಂದು ಗಾಬರಿಯಿಂದ ಬಿಲದಲ್ಲಿರುವ ಇಲಿಯ ಹಾಗೆ ಒದ್ದಾಡುತ್ತಲಿರುವ ನಾವುಗಳೆಲ್ಲ ಅಣ್ಣನತ್ತ ನೋಡುತ್ತ ಅಣ್ಣ ಗಹಗಹಿಸಿ ಗುಮ್ಮನ ಗುಸುಕು ಥರಹ ನಸುನಕ್ಕು ಆನೆ, ಅಲ್ಲಲ್ಲ ಶಿವನ ಮಗ ಗಣೇಶ ನಿಮ್ಮ ಸೇವೆಗೆಂದೆ ಅಣಿ-ಅಣಿಯಾಗಿ ಓಡುತ್ತ ಬರುತ್ತಲಿರುವವನು ಅವನ ಮಾರ್ಗದಂತೆ ನೀವೆಲ್ಲ ಈ ಕಾನನವನ್ನ ಶೋಧಿಸಲು ಹೊರಡಿ ಎಂದು ಹೇಳುತ್ತಿರಬೇಕಾದ್ರೆ ಗಜರಾಜ ಜೀಪಿನ ಹತ್ತಿರ ದೊಡ್ಡದಾಗಿ ಡ್ರಾಮಾ ಮಾಡುತ್ತ ರಣರಂಗದಲ್ಲಿ ಅರ್ಜುನ ಸೈನ್ಯ ಪಲಾಯನ ಮಾಡಿದಂತೆ ಗಜರಾಜನು ಕೂಡ ಅಲ್ಲಿಂದ ತನ್ನ ದಿಕ್ಕನ್ನು ಬದಲಿಸಿ ಲಂಟನಾ ಒಳಗೆ ಭರಭರನೆ ರಭಸವಾಗಿ ಜೋರಾಗಿ ಘೀಳಿಡುತ್ತ ಒಂದೇ ಸಮನೆ ದಿಕ್ಕಾಪಾಲಾಗಿ ಓಡುತ್ತ ದಟ್ಟ ಕಾನನದ ಒಳಗೆ ಮರೆಯಾಯಿತು.
ಅಬ್ಬಾ! ಗಣೇಶ ನಿನಗೆ ದೊಡ್ಡದಾದ ಸಾಷ್ಟಾಂಗ ನಮಸ್ಕಾರಪ್ಪ ಅಂತ ಜೀಪಿನ ಹಿಂಬದಿಯಲ್ಲಿ ಕುಳಿತವರೆಲ್ಲರು ದೊಡ್ಡದಾಗಿ ನಿಟ್ಟುಸಿರು ಬಿಡುತ್ತ ಚೇತರಿಸಿಕೊಳ್ಳುತ್ತಲಿದ್ದಾಗ ಯಾರು ಕೂಡಾ ಜೀಪಿನಿಂದ ಕೆಳೆಗೆ ಇಳಿಯುವಂತಹ ಧೈರ್ಯಕ್ಕೆ ಕೈ ಹಾಕಲಿಲ್ಲ. ಹೊರತು, ವೀರಪರಾಕ್ರಮಿಯಾದ ಗಜರಾಜನ ಛಾಪು ಮಾತ್ರ ಎಲ್ಲರ ಎದೆಯನ್ನ ಒಂದು ಘಳಿಗೆ ನಡುಗಿಸಿ ಬಿಟ್ಟಂಗಾಗಿತ್ತು.
ಅಷ್ಟರಲ್ಲಿ ಅಣ್ಣ! ಈ ಮೊದಲ ಗುಂಪಿನವರು ಜೀಪಿನಿಂದ ಕೆಳಗೆ ಇಳಿಯಿರಿ. ಅದೋ, ಅಲ್ಲಿ ನಿಮ್ಮ ಲೈನ್ ಗೆ ತಲುಪಬೇಕಾದಂತಹ ಕೆಂಪು ಬಣ್ಣ ಕಾಣುತ್ತಿದೆಯಲ್ಲ ಅಲ್ಲಿಂದಲೆ ಹೊರಡಿ ಬೇಗ ಬೇಗ ಎಂದು ಹೇಳುತ್ತಲ್ಲಿದ್ದಾಗ ಗದ್ಗದಿತರಾದಂತೆ ಆ ಗುಂಪಿನ ಸದಸ್ಯರು ಭಯದಿಂದ ತತ್ತರಿಸುತ್ತಲಿದ್ದಾಗ ನಾನು ಆ ಗುಂಪಿನ ಸದಸ್ಯರುಗಳಿಗೆ ಧೈರ್ಯವನ್ನು ತುಂಬುತ್ತ ಕಾಡು ಅಂತ ಅಂದ್ಮೇಲೆ ಎಲ್ಲ ವಿವಿಧ ಬಗೆಯ ಪ್ರಾಣಿಗಳಿರುತ್ತವೆ ಭಯ ಪಡಬೇಡಿ. ನೀವೆಲ್ಲ ಧೈರ್ಯವಂತರಾಗಬೇಕು ಏನು ಆಗಲ್ಲ ಹೋಗಿ ಎಂದು ಕಳುಹಿಕೊಟ್ಟೆವು. ಮತ್ತೆ ನಮ್ಮ ಜೀಪು ಕಾನನದ ಪ್ರಪಂಚದ ಒಳಗೆ ಪಯಣ ಮುಂದುವರೆಸಿತು.
ಜೀಪಿನಲ್ಲಿ ಉಳಿದಂತಹ ಎರಡು ಗುಂಪಲ್ಲಿ ನನ್ನನ್ನು ಸೇರಿಸಿ ಅಣ್ಣನಿಗೆ ಪ್ರಶ್ನೆಮಾಡುತ್ತ ಈಗ! ನಿಮ್ಮ ಲೈನಿಗೆ ತಲುಪ ಬೇಕಾದ್ರೆ ಇನ್ನೆಷ್ಟು ಸಮಯಬೇಕಾಗುತ್ತೆ ಅಣ್ಣಾ ಎಂದು ಕೇಳುವ ತವಕದಲ್ಲಿದ್ದ ನನಗೆ ಇನ್ನೇನು ಹಿಂದೆ ಬಿಟ್ಟಂತಹ ಗುಂಪಿನಿಂದ ಸುಮಾರು ಆರು ಕಿಲೋಮೀಟರ್ ಅಂತರದಲ್ಲಿದೆ ಎಂದು ಅಣ್ಣ ಉತ್ತರಿಸುತ್ತ ನಿಧಾನವಾಗಿ ಚಲಿಸುತ್ತಿದ್ದ ಜೀಪು ತನ್ನ ವೇಗವನ್ನ ಹೆಚ್ಚಿಸುತ್ತ ಮುಂದೆ ಸಾಗುತ್ತಿರಬೇಕಾದರೆ ಮತ್ತೆ ಗಜರಾಜನ ಘೀಳಿಡುವ ಶಬ್ಧ ಅನತಿ ದೂರದಲ್ಲಿ ಕೇಳಿಸಲಾರಂಭಿಸಿತು.
ಪಾರಂಪರಿಕ ಮಾರ್ಗಗಳನ್ನು ಅನುಸರಿಸಿಕೊಂಡು ಚಲಿಸುತ್ತಿರುವ ಆನೆಯ ದೃಶ್ಯ. ಗೋಪಾಲ ಸ್ವಾಮಿ ಬೆಟ್ಟ, ಬಂಡೀಪುರ. ಕೃಪೆ- ಮೋಹನಕುಮಾರ
ಈ ಕಾನನವೆ ಗಜರಾ(ಜ)ಣಿಯರ ಭದ್ರ ಕೋಟೆ. ಈ ಕೋಟೆಯ ಒಳಗೆ ನಾವೆಲ್ಲ ನಿಧಾನವಾಗಿ ಮುಂದೆ ಸಾಗಲೇಬೇಕಾಗಿತ್ತು. ಎಲ್ಲಿ ಬೇಕೆಂದರಲ್ಲಿ ಕಣ್ಣು ಹಾಯಿಸಿದರು ಚಿಕ್ಕ -ದೊಡ್ಡ ಗಾತ್ರದ ಆನೆಗಳೆ ಕಾಣಿಸುತ್ತಿದ್ದವು. ಅಬ್ಬಬ್ಬಾ, ಎಷ್ಟೊಂದು ರಮಣೀಯ ದೃಶ್ಯ ( ಗುಸುಗುಸು ಶಬ್ದ ಒಬ್ಬರನ್ನೊಬ್ಬರು ಮಾತನಾಡಿಕೊಳ್ಳುತ್ತ) ಅಲ್ಲಿ ಹುಲುಸಾಗಿ ಬೆಳೆದ ಹುಲ್ಲಿನ ದೊಡ್ಡದಾದ ಜಾಗೆಯಲ್ಲಿ ನೂರಾರು ಆನೆಗಳನ್ನ ಕಂಡ ತಕ್ಷಣ ನಮ್ಮ ದೇಹದಲ್ಲಿ ಅಡಗಿಕೊಂಡಿದ್ದ ಭಯವೆಂಬ ‘ಭೂತ' ದಿಕ್ಕೆದ್ದ ಕಡೆಗೆ ಓಡಲಾರಂಭಿಸಿತು. ಒಂದು ಆನೆಯ ಪ್ರಕೋಪವನ್ನ ತಡೆಯದ ನಾವುಗಳು ಇನ್ನು ಈ ನೂರಾರು ಆನೆಗಳು ಅಟ್ಟಿಸಿಕೊಂಡು ಬಂದರೆ ಗತಿ ಏನಾಗಬಹುದು ಎಂಬ ಆತಂಕದಲ್ಲಿದ್ದಾಗ ಅಣ್ಣ, ನಮ್ಮನ್ನೆಲ್ಲ ಉದ್ದೇಶಿಸಿ ಈ ರೀತಿ ಹೇಳುತ್ತ. ನೋಡಿ! ಆನೆಗಳು ಬಹಳ ಬುದ್ದಿವಂತ ಜೀವಿಗಳು ಅವುಗಳಿಗೆ ಏನಾದರು ನಾವು ತೊಂದರೆ ಕೊಟ್ಟರೆ ಅವುಗಳು ಪ್ರತಿ ದಾಳಿ ಮಾಡುವುದು ಸಹಜ ಪ್ರಕ್ರಿಯೆ. ಹಾಗಂತ, ಆನೆಗಳೇನು ಸುಖಾಸುಮ್ಮನೆ ಅಟ್ಟಿಸಿಕೊಂಡು ಬರುವುದಿಲ್ಲ. ಒಮ್ಮೆ ಆನೆಯ ಬಿಹೇವಿಯರ್ ಅರ್ಥಮಾಡಿಕೊಂಡು ಬಿಟ್ಟರೆ ಸಾಕು ಪ್ರಾಣಿಗಳಿಗಿಂತಲು ಇಷ್ಟವಾಗಿ ಬಿಡುತ್ತವೆ ಈ ಆನೆಗಳು. ರಹಸ್ಯ ಲೋಕದ ನಿಜವಾದ ಬುದ್ದಿವಂತ ಪ್ರಾಣಿ ಅಂತಾದರೆ ಅದುವೇ ಈ ಆನೆ ಮಾತ್ರ.
ಎಂತಹ ಕಷ್ಟವಾದ ಬೆಟ್ಟವನ್ನಾದರು ಸರಿ ಏರಿ ಇಳಿದು ಬಿಡುತ್ತವೆ ಈ ಆನೆಗಳು. ಎಂತೆಂಥ ಬಲಿಷ್ಠ ವ್ಯಕ್ತಿಗಳನ್ನ ತನ್ನ ಒಂದು ಘೀಳಿನ ಮುಖಾಂತರ ನಡುಗಿಸಿ ಬಿಡುತ್ತವೆ ಈ ಚಾಣಾಕ್ಷ ಬುದ್ದಿವಂತ ಆನೆ. ಆನೆಗಳು ಯಾವಾಗಲು ಪ್ರಶಾಂತವಾದ ವಾತಾವರಣದಲ್ಲಿರುವವು ಮತ್ತು ಸಾಧಾರಣವಾಗಿ ಗದ್ದಲು ತುಂಬಿದ ಪ್ರದೇಶಗಳಿಂದ ದೂರದಲ್ಲಿರುವವು. ನಿಮಗೆಲ್ಲ ಗೊತ್ತೆ ಏಷ್ಯಾದ ಅತಿ ದೊಡ್ಡ ಆನೆಗಳ ಕಾರಿಡಾರ್ ಈ ನಮ್ಮ ಪಶ್ಚಿಮ ಘಟ್ಟಗಳ ಶ್ರೇಣಿ.
ಈ ಕಾನನದ ನಿಜವಾದ ಆರಕ್ಷಕರು ಈ ಆನೆಗಳು. ಒಂದು ವೇಳೆ ಈ ಭೂಮಿಯ ಮೇಲೆ ಜೀವ ಸಂಕುಲದ ಸಂತತಿ ಇಲ್ಲವಾಗಿದ್ದರೆ? ಈ ದಟ್ಟ ಕಾಡುಗಳು ಯಾವತ್ತೊ ಮರೆಯಾಗಿ ಬಿಡುತ್ತಿದ್ದವು. ಆನೆ ಮತ್ತು ಮನುಷ್ಯನ ಸಂಘರ್ಷ ನಿನ್ನೆ-ಮೊನ್ನೆಯದಲ್ಲ ಶತಶತಮಾನದಷ್ಟು ಹಳೆಯದು.
ಮನುಷ್ಯನ ಅತಿಯಾದ ದುರಾಸೆಯಿಂದ ಇವತ್ತು ಕಾಡಿನ ತುಂಬೆಲ್ಲ ಬರಿ ರಸ್ತೆಗಳದ್ದೆ ಕಾರುಬಾರು. ಲಕ್ಷೋಪ ಲಕ್ಷ ಗಿಡಗಳ ಮಾರಣಹೋಮ ಮಾಡಿ ರೈಲು ಮಾರ್ಗಗಳನ್ನು ಕಾಡಿನ ತುಂಬೆಲ್ಲ ಹಬ್ಬಿಸಿದರ ಪರವಾಗಿ ಜೀವ ಸಂಕುಲಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ ಹಾಗಾಗಿ ಆನೆಗಳು ಮತ್ತು ಬೇರೆ ಜೀವಿಗಳು ಕಾಡಿನಿಂದ ನಾಡಿಗೆ ಯಾಕೆ ಬರುತ್ತಿವೆ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡಿರುತ್ತದೆ ಮತ್ತು ಮೂಡಿರಲೆ ಬೇಕಾದ ಯಕ್ಷ ಪ್ರಶ್ನೆ ಹಾಗೆಯೇ ನಿಮ್ಮಲ್ಲಿಯೂ ಸಹ ಮೂಡಿರಬಹುದು ಹೌದಲ್ಲವೆ. ಕಾರಣ, ಇಷ್ಟೇ ಕಾನನ ತುಂಬೆಲ್ಲ ನೂರಾರು ಅಭಿವೃದ್ಧಿಯ ನೆಪಗಳನ್ನ ಒಡ್ಡುತ್ತ ಸಾವಿರಾರು ಸಲಾಕೆಗಳನ್ನ ಹಾಕಿ ಅಲ್ಲಲ್ಲಿ ನದಿ ತಿರುವುಗಳನ್ನ ಬದಲಿಸಿ ಆಣೆಕಟ್ಟುಗಳನ್ನ ನಿರ್ಮಿಸಿದ್ದರ ಫಲವಾಗಿ ಇವತ್ತು ಆನೆಗಳ ಪಾರಂಪರಿಕ ಮಾರ್ಗಕ್ಕೆ ಅಗಾಧ ಹೊಡೆತ ಬಿದ್ದಂತಾಗಿದೆ.
ಆನೆಗಳ ಲದ್ದಿಯಲ್ಲಿ ಮೊಳಕೆಯೊಡೆದ ಮಶ್ರುಮ್ ಸಸಿ. ಕೃಪೆ- ಮೋಹನಕುಮಾರ, ಬಂಡೀಪುರ.
ಒಬ್ಬ ಒಳ್ಳೆಯ ಕೃಷಿಕನ ಪಾತ್ರವನ್ನ ಈ ಆನೆಗಳು ಅನಾದಿ ಕಾಲದಿಂದಲೂ ನಿರ್ವಹಿಸುತ್ತ ಬಂದಿವೆ. ಆನೆಗಳ ಲದ್ದಿ ಬಹಳ ಉಪಯುಕ್ತವಾದ ಸಾವಯವ ಗೊಬ್ಬರ ನೀವೆಲ್ಲ ಹಲವಾರು ಬಾರಿ ನೋಡಿರಬಹುದು ಆನೆಗಳ ಲದ್ದಿಯಲ್ಲಿ ಚಿಕ್ಕ ಚಿಕ್ಕ ಮೊಳಕೆಯೊಡೆದ ಹಲವಾರು ಬಗೆಯ ಸಸಿಗಳನ್ನ, ಹಾಗಾಗಿ ಆನೆಗಳ ಪಾತ್ರ ಕಾಡುಗಳಿಗೆ ಬಹುಮುಖ್ಯವಾದದ್ದು ಈ ಎಲ್ಲ ಅಂಶ ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ ಎಂದು ಹೇಳುತ್ತ ಅಣ್ಣ ಜೀಪಿನಿಂದ ಕೆಳಗಿಳಿದು ಲೈನವಾಕ್ ದಾರಿಯತ್ತ ನಮ್ಮನ್ನೆಲ್ಲ ಮಂದಹಾಸದಿ ಮುಗಳ್ನಗೆಯನ್ನ ಬೀರುತ್ತ ಮತ್ತೆ ನಿಮ್ಮಲ್ಲಿಗೆ ಕೆಲವೇ ಗಂಟೆಗಳಲ್ಲಿ ಬಂದು ಸೇರುವೆನೆಂದು ಹೇಳಿ ಕ್ಷೇತ್ರ ಸಹಾಯಕನ ಜೊತೆಗೂಡಿ ನಿಗೂಢ ಕಾನನದ ಒಳಹೊಕ್ಕು ನಡೆಯ ತೊಡಗಿದರು. ಹಿಂದಿನಿಂದ ನಾನು ಮತ್ತು ಕ್ಷೇತ್ರ ಸಹಾಯಕ ಬೆಸ್ಟ್ ಆಫ್ ಲಕ್ ಒಳ್ಳೆಯದಾಗಲಿ ಸರಿಯಾಗಿ ಸೈಟಿಂಗ್ ಮಾಡಿಕೊಂಡು ಬನ್ನಿ ಅಂತ ಬೀಳ್ಕೊಡುಗೆ ಕೊಟ್ಟೆವು.
ಆ ದಿನ ನಮ್ಮ ಗುಂಪಿಗೆ ವಿಶ್ರಾಂತಿ ಇದ್ದ ಕಾರಣ ಅಲ್ಲೆ ಒಂದು ಚಿಕ್ಕ ಗಾತ್ರದಲ್ಲಿ ಹೊಸದಾಗಿ ನಿರ್ಮಿಸಿದ ಚೆಕ್ ಡ್ಯಾಂನ ಹತ್ತಿರ ಜೀಪಿನಲ್ಲಿ ಕುಳಿತುಕೊಂಡು ನಾನು ಮತ್ತು ಕ್ಷೇತ್ರ ಸಹಾಯಕ ಅವರ ಬರುವಿಕೆಗಾಗಿ ಹಾತೊರೆಯುತ್ತ ಪ್ರಶಾಂತವಾದ ನೀಲಾಗಸವನ್ನು ನೋಡುತ್ತ, ತಂಪಾದ ಗಾಳಿಯ ಕಂಪನ್ನ ಅಹ್ಲಾದಿಸುತ್ತ, ಪಕ್ಷಿಗಳ ಕಲರವವನ್ನು ಇಂಪಾಗಿ ಕೇಳುತ್ತ, ಸುದೀರ್ಘ ಮೌನವಾದ ಚರ್ಚೆಯಲ್ಲಿ ತೊಡಗಿಕೊಂಡು ಕುಳಿತು ಬಿಟ್ಟೆವು.
ಕೆಲವು ಸಮಯಗಳ ತದನಂತರದಲ್ಲಿ ಅಣ್ಣ ಲೈನ್ ವಾಕ್ ಮುಗಿಸಿಕೊಂಡು ಬರುತ್ತಿರುವ ಕಾಲ್ನಡಿಗೆಯ ಶಬ್ದವನ್ನು ಕೇಳಿ ನಾವಿಬ್ಬರು ಅಲರ್ಟ ಆದೇವು. ಓಹೋ ಸಂತೋಷದಿಂದ ಅಣ್ಣಾ! ಲೈನಿನಲ್ಲಿ ಏನಾದರೂ ಸಿಕ್ಕಿತೆ? ಎಂದಾಗ, ಮುಗಳ್ನಗುತ್ತ ಹೋಯ್.. ಅದೆ ಮಾರಾಯ್ರೆ ಆನೆಗಳು!.. ಒಂದಲ್ಲ ಎರಡಲ್ಲ ಬರೋಬ್ಬರಿ ಐದು, ವ್ಹಾ ಬಂಪರ್ ಲಾಟರಿ ಅಣ್ಣಾ.. ಹೊಡಿ ಒಂಬತ್ತ ಮತ್ತೆ ಆನೆಗಳನ್ನ ಬಿಟ್ಟರೆ ಮತ್ತೇನು ಸಿಕ್ಕಿತು ಎಂದಾಗ, ಗುಂಪು ಗುಂಪಾಗಿ ಕಾಣಿಸಿಕೊಂಡ ಜಿಂಕೆಗಳನ್ನ ಬಿಟ್ಟರೆ ಒಂದು ಕೆಂದಳಿಲು ಮಾತ್ರ ಸೈಟಿಂಗ್ ಆಯಿತೆಂದು ಅಣ್ಣ ಖುಷಿಯಿಂದ ಹೇಳುತ್ತ ಈ ದಿನದ ಕೊನೆಯ ವಾಕ್ ಮುಗಿತು. ಬನ್ನಿ ಬನ್ನಿ ಬೇಗ ಬೇಗ ಹಿಂದೆ ನಾವು ಈಗಾಗಲೇ ಬಿಟ್ಟಂತಹ ಗುಂಪು ನಮಗಾಗಿ ಕ್ಷಣ-ಕ್ಷಣವು ಕಾಯುತ್ತಲಿರುವರು ಅಲ್ಲಿಗೆ ಹೋಗೋಣ ನಮ್ಮಿಂದಾಗಿ ಅವರ ಸಮಯವನ್ನು ವ್ಯರ್ಥ ಮಾಡದೆ ಬಹು ಬೇಗ ಇಲ್ಲಿಂದ ಹೋಗಿ ಅವರಲ್ಲಿ ಸೇರಿಕೊಳ್ಳೋಣ ಎಂದು ಅಣ್ಣ ಜೀಪಿನತ್ತ ಮುಖ ತಿರುಗಿಸಿ ಅಲ್ಲಿಂದ ಮುಂದೆ ಹೊರಡಲು ನಾವೆಲ್ಲರೂ ಸಿದ್ಧರಾದೆವು.
ಜೀಪು ಮತ್ತದೆ ಶಬ್ದವನ್ನು ಮಾಡುತ್ತ ಹೊರಡಲು ಸಿದ್ಧವಾಯಿತು. ನಾವೆಲ್ಲ ಜೀಪಿನ ಒಳಗೆ ಆಸನವನ್ನ ಅಲಂಕರಿಸಿ ಅಲ್ಲಿಂದ ಮುಂದೆ ಸಾಗಿದೆವು.
ಕೆಲವು ಸಮಯಗಳ ತರುವಾಯ ನಮಗಾಗಿ ಕಾದು ಕುಳಿತ ಕೊನೆಯ ತಂಡದ ಕುಶಲೋಪ ವಿಚಾರವನ್ನು ತಿಳಿದುಕೊಂಡು ನಿಮಗೇನಾದರೂ ಸೈಟಿಂಗ್ ಆಯಿತೆ ಅಂದಾಗ, ಗುಂಪಿನ ಸದಸ್ಯರು ಬೇಸರದಿಂದ ನಮಗೇನು ಇವತ್ತು ಸಿಗಲಿಲ್ಲವೆಂದಾಗ, ಬೇಜಾರಾಗ ಬೇಡಿ ಮಿತ್ರರೆ ಇದೆ ಕೊನೆಯಲ್ಲ ಎಂದು ನಾವೆಲ್ಲರೂ ಅವರಿಗೆ ಸಾಂತ್ವನ ಹೇಳುತ್ತ ಬನ್ನಿ, ಈಗ ಜೀಪಿನಲ್ಲಿ ಕುಳಿತುಕೊಳ್ಳಿ ಬಹಳ ದೂರದವರೆಗೆ ಸಾಗಿ ನಾವೆಲ್ಲ ಕ್ಯಾಂಪ್ ಸೇರಬೇಕು.
ಎಲ್ಲರೂ ಜೀಪಿನಲ್ಲಿದ್ದಾರೆಂದು ಪಟ್ಟಿಮಾಡಿಕೊಂಡು ಬೃಹದಾಕಾರವಾಗಿ ಆವರಿಸಿದ ಕಾನನದ ನೆನಪುಗಳನ್ನು ಹೊತ್ತ ನಮ್ಮ ಜೀಪು ‘ಕಾನನದ ಸುತ್ತ' ಕೋಟೆಯ ಒಳಗಿಂದ ಹೊರಗಡೆಯ ಕಡೆಗೆ ಮುಖಮಾಡಿ ನಿಧಾನವಾಗಿ ಸಾಗುತ್ತ ತನ್ನ ಪ್ರಯಾಣ ಮುಂದುವರೆಸಿತು.
ಮುಕ್ತಾಯ
ಮೊದಲನೆ ಭಾಗವನ್ನು ಇಲ್ಲಿ ಓದಿ.
ಎರಡನೆ ಭಾಗವನ್ನು ಇಲ್ಲಿ ಓದಿ.