ವಿಸ್ಮಯಲೋಕದ ನಾವಿಕರು...
(ಭಯ, ಕುತೂಹಲ, ಹಾಸ್ಯ)
ದಂಡಕಾರಣ್ಯದ ಸುತ್ತ ಚಲಿಸುವ ಹೆಜ್ಜೆಗಳು...
ಲೇಖಕರು – ಸತೀಶ ಗ. ನಾಗಠಾಣ
ಮುಂದುವರೆದ ಭಾಗ…
ಅಂತು ಇಂತು ಕೆಸರು ತುಂಬಿದ ಮಣ್ಣಿನ ದಾರಿಯಲ್ಲಿ ಕಾಲುಗಳು ತಡವರಿಸದೇ ಜಾರುತ್ತಿದ್ದರೂ ಸಹ ಬೀಳುತ್ತಾ, ಏಳುತ್ತಾ, ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುತ್ತಾ ನಿಧಾನಗತಿಯಲ್ಲಿ ನಡೆದು ಬಂದು ಶಿಬಿರಕ್ಕೆ ತಲುಪಿದೆವು. ಶಿಬಿರದಲ್ಲಿ ಗುಸುಗುಸು ಚರ್ಚೆ ‘’ಹುಯ್ಯೋ ಹುಯ್ಯೋ ಮಳೆರಾಯ’ ಅನ್ನೋತರಹ ಒಬ್ಬರಿಗೊಬ್ಬರು ಚಟಪಟ ಅಂತ ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ನೆರೆದ ಗುಂಪುಗಳು ನಮ್ಮತ್ತ ನೋಡಿ ಗುಮ್ಮನ ಗುಸುಕು ತರಹ ಒಳಗೊಳಗೇ ನಗುತ್ತ, ಮುಗುಳ್ನಗೆ ಬಿರುತ್ತಾ, “ನೀವು ಬೇಗ ಹೋಗಿ ಸ್ನಾನ ಮುಗಿಸಿ ಊಟಕ್ಕೆ ಬನ್ನಿ” ಎಂದರು. ಆದರೆ ಇವರೆಲ್ಲ ನಮ್ಮನ್ನು ನೋಡಿ ನಕ್ಕಿದ್ದು ಯಾಕಿರಬಹುದು ಎಂದು ಯೋಚಿಸಿತ್ತಾ, ಓಹೋ! ಇದಾ ವಿಷಯಾ, ಕೆಸರಿನಲ್ಲಿ ಮುಳುಗಿಹೋದ ನಮ್ಮ ಬೂಟುಗಳ ಮೇಲೆ ಮಣ್ಣು ಬಹಳಷ್ಟು ಮೆತ್ತಿಕೊಂಡಿತ್ತು, ಮತ್ತು ನಾವು ನಡೆದು ಬಂದ ದಾರಿಯಲ್ಲಿ ಗಜರಾಜನ ಹಾವಳಿ ಬೇರೆ ಜೋರಾಗಿತ್ತು. ಹೀಗಾಗಿ, ನಾವೇನಾದರೂ ಈ ಗಜರಾಜನ ಕೈಯಲ್ಲಿ ಸಿಕ್ಕಿಹಾಕಿಕೊಂಡು ದಿಕ್ಕಾಪಾಲಾಗಿ ಓಡಿಬಿಟ್ಟೆವಾ ಎಂದು ಇವರ ಊಹೆಯಾಗಿರಬಹುದಾ ಎಂಬ ಆಲೋಚನೆ ನನ್ನ ಮನದಲ್ಲಿ ಉದ್ಭವವಾಗಿತ್ತು. ಅದೇನೇ ಇರಲಿ, ಕೊನೆಗೂ ನಾವು ಗೂಡನ್ನು ಸೇರಿಕೊಂಡುಬಿಟ್ಟೆವಲ್ಲಪ್ಪ ದೇವರೇ ಎಂದು ನಿಟ್ಟುಸಿರು ಬಿಡುತ್ತಾ, ಇನ್ನು ಆರಾಮವಾಗಿ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಬಂದು ಊಟದ ಸರದಿಯಲ್ಲಿ ಕುಳಿತು ಊಟಮಡುತ್ತಿರುವಾಗ ಕಾಡಿನ ತುಂಬೆಲ್ಲ ಹುಣ್ಣಿಮೆಯ ಬೆಳದಿಂಗಳು ಆವರಿಸಿತ್ತು. ನೀಲಾಕಾಶದಲ್ಲಿ ಹೊಳೆಯುವ ನಕ್ಷತ್ರಗಳನ್ನು ಎಣಿಸುತ್ತ, ಸೂಯಂ... ಸೂಯಂ... ಎಂದು ಆರ್ಭಟಿಸಿ ಬೀಸುವ ಗಾಳಿಯನ್ನು ಆಲಿಸುತ್ತ, ತಂಗಾಳಿಯಿಂದ ಕೂಡಿದ ವಾತಾವರಣದಲ್ಲಿ ಊಟ ಮಾಡುವ ಮಜವೇ ಬೇರೆಯಾಗಿತ್ತು.
ಈ ಪ್ರಕೃತಿಯ ಮಡಿಲಲ್ಲಿ ಕುಳಿತು ಊಟ ಮಾಡುವಂತಹ ಸೊಗಸು ಮತ್ತೆಲ್ಲಿಯೂ ಸಿಗದು ಅಂತ ಅನ್ನುತ್ತಿರುವಾಗ ಕಣ್ಣುಗಳಲ್ಲಿ ನಿದ್ರೆಯ ‘ಯಜಮಾನತಿ’ ಬಂದು ಕದ ತಟ್ಟುತ್ತಿದ್ದಳು. ನಿದ್ರೆಯ ಪರಿವಿಲ್ಲದ ನಮಗೆ ಊಟ ಮುಗಿದದ್ದೇ ಗೊತ್ತಾಗಲಿಲ್ಲ. ನಾಳೆ ಗೃಹೇಶ್ವರನ ಬೆಳಕು ಭೂಮಿಯನ್ನು ಆವರಿಸುವುದರೊಳಗೆ ನಾವು ಎಲ್ಲ ಸರಂಜಾಮುಗಳ ಸಮೇತ ಬೇರೆ ಸ್ಥಳಕ್ಕೆ ಪ್ರಯಾಣ ಬೆಳೆಸಬೇಕು. ಅಲ್ಲಿ ಇದೇ ತರಹದ ಜಾಡುಗಳನ್ನು ಪತ್ತೆಹಚ್ಚುವ ಕೆಲಸ. ನಡೆಯಿರಿ... ನಡೆಯಿರಿ... ಬೇಗ ಹೋಗಿ ಮಲಗೋಣವೆಂದು ಬೆಚ್ಚನೆಯ ಹಾಸಿಗೆಯಲ್ಲಿ ಹೊಕ್ಕಿ ಕಣ್ಣು ಮುಚ್ಚಿದ ಕೆಲವು ಘಂಟೆಗಳ ತರುವಾಯ ಹಕ್ಕಿಗಳ ಕಲರವ ನನ್ನ ಕಿವಿಗೆ ಕೇಳಲಾರಂಭಿಸಿತು. ಅಯ್ಯೋ ಶಿವನೇ! ಇಷ್ಟು ಬೇಗ ಬೆಳಕಾಗಿ ಬಿಡ್ತಲ್ಲ ಅಂತ ಅಂದುಕೊಳ್ಳುತ್ತ ದೊಡ್ಡದಾಗಿ ಬಾಯಿಯನ್ನು ತೆರೆದು ಜೋರಾಗಿ ಆಕಳಿಸುತ್ತ, ಕೈಗಳನ್ನು ಅತ್ತಿಂದಿತ್ತ ಅಲ್ಲಾಡಿಸುತ್ತ, ಬೆರಳುಗಳನ್ನು ಲಟಕ-ಪಟಕ ಅಂತ ಮುರಿಯುತ್ತ, ಹಾಸಿಗೆಯಲ್ಲಿಯೇ ಸರ್ವವ್ಯಾಯಾಮಗಳನ್ನು ಮಾಡುತ್ತ, ಕಣ್ಣನ್ನು ಉಜ್ಜುತ್ತ ಎದ್ದು ನೋಡ್ತೀನಿ, ಅರೆ, ಇದೇನಿದು, ನಂಬಲಿಕ್ಕಾಗ್ತಿಲ್ಲವಲ್ಲ, ಇನ್ನೂ ಕತ್ತಲೆ ಇದೆ! ಹಾಗಾದರೆ ಈ ಹಕ್ಕಿಗಳ ಕಲರವ ಎಲ್ಲಿಂದ ಬರುತ್ತಿದೆಯಪ್ಪ ಅಂತ ಗಮನಿಸುತ್ತಿರುವಾಗ ಪಕ್ಕದ ಕೋಣೆಯ ಮೂಲೆಯೊಂದರಲ್ಲಿ ಮಲಗಿದ್ದ ಒಬ್ಬ ವ್ಯಕ್ತಿ ಹಕ್ಕಿಗಳು ಚುಯಂ... ಚುಯಂ... ಎಂದು ಸದ್ದು ಮಾಡುವ ‘ರಿಂಗ್ಟೋನ’ನ್ನು ತನ್ನ ಮೊಬೈಲಿನ ಅಲಾರ್ಮ್ ಆಗಿ ಸೆಟ್ ಮಾಡಿಕೊಂಡು ಮಲಗಿಬಿಟ್ಟಿದ್ದಾನೆ. ಛೇ! ಯಾರೋ ಈ ಭೂಪಾ ಬೆಳಿಗ್ಗೆ ಕೂಗುವ ರಿಂಗ್ಟೋನನ್ನು ನಿದ್ದೆಗಣ್ಣಲ್ಲಿ ಮಧ್ಯರಾತ್ರಿ 2 ಗಂಟೆಗೆ ಸೆಟ್ ಮಾಡಿ ಮಲಗಿದ ಕುವರನನ್ನು ಈ ರಾತ್ರಿ ಹುಡುಕುವುದು ಇರಲಿ ಅಪ್ಪಿತಪ್ಪಿ ಏನಾದರೂ ನಾನು ಎಡವಿ ದಾಂಡಿಗರ ಮೇಲೆ ಬಿದ್ದರೆ ಒದೆ ಬಿಳುವುದಂತು ಪಕ್ಕಾ ಮಾರಾಯ, ಈ ಸಹವಾಸ ನನಗೆ ಬೇಡವೇ ಬೇಡ ಅಂತ ಮತ್ತೆ ಹೋಗಿ ಶಿವನೇ ಶಂಭುಲಿಂಗ ಕಾಪಾಡಪ್ಪ ಅನ್ನುತ ಮತ್ತೆ ಹಾಸಿಗೆ ಮೇಲೆ ಬೆಚ್ಚಗೆ ಹೊದ್ದುಕೊಂಡು ಮಲಗಿಬಿಟ್ಟೆ.
ಬೆಳಗಿನ ಸಮಯ ನನ್ನ ಜೊತೆ ಕಾಡುಪ್ರಾಣಿಗಳ ಜಾಡನ್ನು ಪತ್ತೆಹಚ್ಚುವ ಸರ್ವೇ ಕೆಲಸಕ್ಕೆ ಬರುವವರು ತಿಮ್ಮ ಮತ್ತು ರಂಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋತರಹ ಇವರ ಕೆಲಸ ಬಲು ಸೊಗಸಿನಿಂದ ಕೂಡಿತ್ತು. “ರೀ... ರಂಗ! ತಿಮ್ಮ! ಎಲ್ಲರೂ ಸಿದ್ಧರಿದ್ದಿರಾ? ಬೇಗ ಬೇಗ ಬನ್ನಿ ಹೋಗೋಣ. ಅಯ್ಯಯ್ಯೋ! ಸಮಯ ದಾಟುತ್ತಿದ್ದೆ ಬೇಗ ಬೇಗ ಹೋದ್ರೆ ಈ ಕಾಡಲ್ಲಿ ಏನಾದರೂ ಸಿಗಬಹುದು, ಬನ್ನಿ ಬನ್ನಿ ಸಾಗೋಣ” ಅಂತ ಹೊರಡಲು ಸಿದ್ಧರಾದೆವು. ಅದೋ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ‘ಬಿಸ್ಲೆ’ ಎಂಬ ಕಾದಿಟ್ಟ ಅರಣ್ಯ ಪ್ರದೇಶ, ಗುಡ್ಡಗಾಡುಗಳಿಂದ ಆವರಿಸಿದ್ದ ದಟ್ಟವಾದ ಕಾನನ. ವಿಪರೀತ ಜಿಗಣೆಗಳ ಕಾಟ, ಸ್ವಲ್ಪ ಯಾಮಾರಿದ್ರೂ ತಲೆಯ ಮೇಲೆ ಬಂದು ಕುಳಿತು ರಕ್ತ ಹೀರಿದರೂ ಗೊತ್ತಾಗುತ್ತಿರಲಿಲ್ಲ. ನಡೆಯುವ ರಭಸದಲ್ಲಿ ಸ್ವಲ್ಪ ಸ್ವಲ್ಪ ನಿಂತು ಆಗಾಗ ನೋಡಿಕೊಳ್ಳುತ್ತಾ ಸಾಗಬೇಕು. ಕುತ್ತಿಗೆ, ತಲೆ, ಬೂಟುಗಳ ಸಂದಿಗಳಲ್ಲಿ ಸಿಕ್ಕಿದರೆ ಹುಡುಕಿ ಹುಡುಕಿ ಬಿಸಾಕಿ ಹೋಗುತ್ತಿರಬೇಕು, ಮತ್ತು ಇದರ ಜೊತೆಜೊತೆಯಾಗಿ ಕಾಡುಪ್ರಾಣಿಗಳ ಜಾಡುಗಳನ್ನು ಪತ್ತೆಹಚ್ಚುತ್ತ ನಿಧಾನಗತಿಯಲ್ಲಿ ನಡೆಯಬೇಕು. ಸದಾ ನಿತ್ಯಹರಿದ್ವರ್ಣದ ಎಲೆ ಉದುರುವ ಕಾಡುಗಳಿಂದ ಆವರಿಸಿದ ಈ ಸ್ಥಳ ಎಲ್ಲೆಂದರಲ್ಲಿ ಎಲೆಗಳಿಂದ ತುಂಬಿ ಹೋಗಿತ್ತು. ಅಕ್ಕಪಕ್ಕದಲ್ಲಿ ಚಿಕ್ಕ ಚಿಕ್ಕ ನೀರಿನ ಝರಿಗಳ ಕವಲುಗಳನ್ನು ದಾಟಿ ಹೋಗಬೇಕು. ಅಲ್ಲಲ್ಲಿ ಕಲ್ಲಿನ ಮೇಲೆ ಬೆಳೆದ ಪಾಚಿ ಹಚ್ಚಹಸುರಾಗಿ ಕಂಗೊಳಿಸುತ್ತಿದ್ದವು. ಅಪ್ಪತಪ್ಪಿ ಏನಾದರೂ ಪಾಚಿಮೇಲೆ ಕಾಲಿಟ್ಟರೆ ಮುಗಿಯಿತು ಕಥೆ ಅಲ್ಲಿಗೆ – ಜಾರಿ ಬಿದ್ದು ಕೈಕಾಲು ಮುರಿಯುವುದಂತು ಖಾತ್ರಿ! ಇಂತಹ ಪರಿಸ್ಥಿತಿಯಲ್ಲಿ ನಿಧಾನವಾಗಿ ನಾನು ತಿಮ್ಮ ಮತ್ತು ರಂಗನ ಜೊತೆ ಕಿರಿದಾದ ಜಾಗಗಳಲ್ಲಿ ಬಗ್ಗಿ ಬಗ್ಗಿ ನೋಡ ನೋಡುತ್ತ ನುಸುಳಿಕೊಂಡು ಹೋಗುತ್ತಿದ್ದೆವು.
ಒಂದೆರಡು ಬಾರಿ ಅಲ್ಲ ಎಷ್ಟೋ ಸಲ ಜಾರಿ ದೂರ ಹೋಗಿ ಬಿದ್ದಿದ್ದುಂಟು, ಅದು ಬಿಟ್ಟರೆ ತಿಮ್ಮ ಮತ್ತು ರಂಗ ನಾನು ಬಿದ್ದಾಗಲೆಲ್ಲ ನನ್ನ ಮೂತಿಯನ್ನು ಪಕಪಕನೆ ನೋಡುತ್ತ ಒಳಗೊಳಗೆ ಫಳ್ಳನ್ನೆ ನಗುತ್ತಿದ್ದರು. ಜೋರಾಗಿ ನಕ್ಕುಬಿಟ್ಟರೆ ಮತ್ತೆಲ್ಲಿ ‘ಸಾರು’ ನಮ್ಮನ್ನ ನೋಡಿ ಗದರಿಸಿಬಿಡುತ್ತಾರೋ ಅಂತ ಭಯದಲ್ಲಿ ರಂಗ ಮತ್ತು ತಿಮ್ಮ ಒಬ್ಬರಿಗೊಬ್ಬರು ಮಾತನಾಡಿಕೊಂಡು ನಗುತ್ತಿದ್ದರು. “ಹಾಳಾದ್ದು ಥೂ, ಎಂಥ ಸಾವು ಮಾರಾಯ್ರೇ ಈ ದಾರಿ! ನಿಜ ಹೇಳಬೇಕೆಂದರೆ ತಿಮ್ಮ ಯಾವುದೋ ಮರದ ಬೇರು ನನ್ನ ಬೂಟಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಎಡವಿ ಬಿದ್ದಿದ್ದೀನಿ, ಇಲ್ಲಾ ಅಂದರೆ ನಾ ಬೀಳುವ ಮನುಷ್ಯನೇ ಅಲ್ಲಾ ನೋಡ್ರಿ” ಅಂದೆ. ಇಬ್ಬರೂ ನನ್ನತ್ತ ಮುಖ ಮಾಡಿ ಕತ್ತನ್ನು ಅಲುಗಾಡಿಸುತ್ತಾ, “ಹೌದು, ಹೌದು ಸಾರ್” ಎನ್ನುತ್ತಾ, “ಅದೋಗ್ಲಿ ರಂಗ, ಆ ‘ವಾಸ್ಕೋ ಡ ಗಾಮ' ಸಮುದ್ರಯಾನ ಮಾಡಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ನಮ್ಮ ಭಾರತವನ್ನು ಕಂಡು ಹಿಡಿಯಬೇಕಾದರೆ ಎಷ್ಟು ಕಷ್ಟಪಟ್ಟರಬೇಕಲ್ಲ, ಅಂಥದ್ರಲ್ಲಿ ನಾನು ಮರದ ಬೇರಿನಿಂದ ಕಾಲು ಸಿಕ್ಕಿಸಿಕೊಂಡು ಬಿದ್ದಿದ್ದೇನೆ ನೋಡಿ” ಅಂದೆ. “ಹೌದು, ಹೌದು, ಆ ವಯ್ಯಾ ಬಹಳ ಕಷ್ಟಪಟ್ಟುರಬೇಕು, ಆದ್ರೆ ಈ ವಾಸ್ಕೋ ಡ ಗಾಮ ಯಾರು?” ಅಂತ ಎದುರಾಳಿ ಹಾಕುವ ಬೌಲಿಂಗ್ ತರಹ ರಂಗನ ಪ್ರಶ್ನೆ ನನ್ನ ತೆಲೆಗೆ ನೇರವಾಗಿ ಬಂದು ಬೌಲ್ಡ್ ಮಾಡಿಬಿಟ್ಟಿತ್ತು. “ವಾಸ್ಕೋ ಡ ಗಾಮ ಗೊತ್ತಿಲ್ಲವೇ ರಂಗ? ಆತನೊಬ್ಬ ಪೋರ್ಚುಗೀಸ್ ಪರಿಶೋಧಕ. ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಶಿಬಿರಕ್ಕೆ ಹೋದ ಮೇಲೆ ಪೂರ್ಣವಾದ ಮಾಹಿತಿಯನ್ನು ನಿನಗೆ ಕೊಡ್ತಿನಿ, ಈಗ ತಾವು ಮುಂದೆ ಮುಂದೆ ದಾರಿಯ ಆಜುಬಾಜು ಸಿಗುವಂತಹ ಜಾಡನ್ನು ಹುಡುಕುತ್ತಾ ನೋಡುತ್ತಾ ನಡೆಯಿರಿ. ನಾನು ನಿಮ್ಮ ಹಿಂದೆ ಹಿಂದೆ ದಾರಿಯ ಮಧ್ಯದಲ್ಲಿಯ ಜಾಡುಗಳನ್ನು ನೋಡುತ್ತಾ ಕಣ್ಣು ಹಾಯಿಸುತ್ತಾ ನಡೆಯುತ್ತೇನೆ” ಎಂದೆ. ಹಠಾತ್ತನೆ ರಂಗ ನನ್ನತ್ತ ತಿರುಗಿ ದೊಡ್ಡದಾಗಿ ಬಿಟ್ಟ ಕಣ್ಣಿನಿಂದ ನೋಡುತ್ತಾ ನಿಂತಾಗ, ಹೇ ಪಾರ್ಥ! ಅನ್ನೋ ಪಂಚಿಂಗ್ ಡೈಲಾಗ್ ಹೊಂದಿರುವ ಬಭ್ರುವಾಹನನ ಪಾತ್ರ ನನ್ನ ಮುಂದೆ ಬಂದಂತಾಯಿತು. “ಈ ವಾಸ್ಕೋ ಡ ಗೋವಾ ಬಗ್ಗೆ ದಯವಿಟ್ಟು ಸವಿಸ್ತಾರವಾಗಿ ವಿಷಯಗಳನ್ನು ತಾವು ನನಗೆ ಹೇಳಬೇಕು ಸಾರ್” ಎಂದ ರಂಗ. “ಥೋ! ಥೋ! ಆತನ ಹೆಸರು ವಾಸ್ಕೋ ಡ ಗೋವಾ ಅಲ್ಲಪ್ಪಾ, ವಾಸ್ಕೋ ಡ ಗಾಮ, ಈಗ ಅರ್ಥ ಆಯಿತಾ ರಂಗ! ನೀವೇನೂ ಚಿಂತೆಮಾಡಬೇಡಿ, ನಾನೆಲ್ಲ ಹೇಳ್ತೀನಿ” ಎಂದೆ. ಕಾಡಿನಲ್ಲಿ ಹುಟ್ಟಿ ಕಾಡಿನಲ್ಲೇ ಬೆಳೆದ ರಂಗನಿಗೆ ಈ ವಾಸ್ಕೋ ಡ ಗಾಮನ ಬಗ್ಗೆ ಗೊತ್ತಿರಲಿಲ್ಲ ಅನ್ನೋದನ್ನು ಬಿಟ್ಟರೆ, ಕಾಡಿನ ದಾರಿ, ಪ್ರಾಣಿಗಳ ಜಾಡುಗಳನ್ನು ಹಿಡಿಯುವಲ್ಲಿ ನಿಸ್ಸೀಮರಾಗಿದ್ದ ರಂಗ ಮತ್ತು ತಿಮ್ಮ ಬಹಳ ತೀಕ್ಷ್ಣ ಚತುರರಾಗಿದ್ದರು. ಕಾಡಿನ ಮೇಲೆ ಇವರಿಗಿರುವ ಪ್ರೀತಿ ಬಹಳ ವಿಶಾಲ ಮತ್ತು ಅಗಾಧವಾಗಿತ್ತು.
ಮುಂದೆ ಸಾಗುತ್ತಾ ಸಾಗುತ್ತಾ ನಡೆದುಕೊಂಡು ಹೋಗಬೇಕಾದರೆ ನಮಗೆ ಕಾಣಿಸಿದ್ದು ಒಂದು ದೊಡ್ಡ ಮರ. ಆ ಮರದ ಉದ್ದವಾದ ಬುಡ ಮತ್ತು ರೆಂಬೆಕೊಂಬೆಗಳು ಬಹಳಷ್ಟು ಅಗಲವಾಗಿದ್ದವು. ಮರದ ಮೇಲೆ ಸಾಲುಸಾಲಾಗಿ ಸಾಕಷ್ಟು ಪಕ್ಷಿಗಳು ಕುಳಿತಿದ್ದವು. ಮರದ ಮೇಲೆ ಕುಳಿತ ಪಕ್ಷಿಗಳತ್ತ ನಮ್ಮೆಲ್ಲರ ಚಿತ್ತ ಹೋಯಿತು. ರಂಗ ಮತ್ತು ತಿಮ್ಮ ಮರಗಳ ಮೇಲೆ ಕುಳಿತ ಪಕ್ಷಿಗಳತ್ತ ಕೈ ತೋರಿಸಿ, “ಸಾರ್, ಈ ತರಹದ ಪಕ್ಷಿಗಳನ್ನ ನೀವು ಎಲ್ಲಿಯಾದರೂ ನೋಡಿದ್ದರಾ ಸಾರ್?” ಎಂದು ಕೇಳಿದ. “ಹಾಂ! ನೋಡಿದ್ದೇನೆ ತಿಮ್ಮ” ಎಂದೆ. “ಹೌದಾ! ಹಾಗಾದರೆ ಎಲ್ಲಿ ನೋಡಿದ್ದು ಸಾರ್ ತಾವು ಈ ಪಕ್ಷಿಗಳನ್ನ? ನಿಮ್ಮ ಊರಲ್ಲಿ ನೋಡಿದ್ದಿರಾ” ಎಂದು ಕೇಳಿದರು ತಿಮ್ಮ. “ಇಲ್ಲ ಇಲ್ಲ, ನಮ್ಮ ಊರಲ್ಲಿ ಸಾಮಾನ್ಯವಾಗಿ ‘ಬೂದು ಬಣ್ಣದ ಮಂಗಟ್ಟೆ' (Malabar grey hornbill) ನೋಡುವುದಕ್ಕೆ ಕಾಣಸಿಗುತ್ತವೆ ಹೊರತು ಈ ತರಹದ ದೊಡ್ಡ ಗಾತ್ರದ ಪಕ್ಷಿಗಳನ್ನು ನೋಡಲು ಕಾಣಸಿಗುವುದಿಲ್ಲ. ಈ ಪಕ್ಷಿಗಳನ್ನ ಕನ್ನಡದಲ್ಲಿ ‘ದೊಡ್ಡ ದಾಸ ಮಂಗಟೆ’ (Great Indian hornbill) ಅಂತಲೂ ಕರೆಯುವರು. ನಮ್ಮೂರಿನಿಂದ ಸುಮಾರು 260 ಕಿ.ಮೀ. ದೂರದಲ್ಲಿರುವ ಯಲ್ಲಾಪುರ ಮಾರ್ಗವಾಗಿ ಮಾಗೋಡು ಜಲಪಾತಕ್ಕೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಜೋರಾಗಿ ರೆಕ್ಕೆಗಳನ್ನು ಬಡಿಯುತ್ತ ಫಟಫಟ ಅಂತ ಸದ್ದು ಮಾಡುತ್ತ ಹಾರಿಹೋಗಿದ್ದು ನಾನು ಜೀವಮಾನದಲ್ಲಿ ಎಂದೂ ಮರೆಯದ ಆ ಕ್ಷಣ. ಹಾಗೂ ದಾಂಡೇಲಿಯಲ್ಲಿ ಸಾಕಷ್ಟು ಬಾರಿ ಈ ತರಹದ ಪಕ್ಷಿಗಳನ್ನ ನೋಡಿದ್ದೇನೆ ತಿಮ್ಮಪ್ಪನವರೇ” ಅಂದೆ.
ಚಿತ್ರ: ಮರದ ಮೇಲೆ ಸಾಲುಸಾಲಾಗಿ ಕುಳಿತ ದೊಡ್ಡ ದಾಸ ಮಂಗಟ್ಟೆ ಪಕ್ಷಿಗಳ ಗುಂಪಿನ ದೃಶ್ಯವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿರುವ ಲೇಖಕ ಮತ್ತು ಕ್ಷೇತ್ರ ಸಹಾಯಕರಾದ ರಂಗ ಮತ್ತು ತಿಮ್ಮ. ಚಿತ್ರ ರಚಿಸಿದವರು: ಕೃಷ್ಣಾ ಸಾತಪೂರ, ವಿಜಯಪುರ.
ನನಗೂ ಸ್ವಲ್ಪ ಕುತೂಹಲ, ಈ ನಮ್ಮ ರಂಗ ಮತ್ತು ತಿಮ್ಮನಿಗೆ ಈ ಪಕ್ಷಿಗಳ ಬಗ್ಗೆ ಏನಾದರೂ ಗೊತ್ತಿರಬಹುದಾ ಅಂತ. ಸುಮ್ಮನೆ ಒಂದು ಪ್ರಶ್ನೆ ಕೇಳಿ ನೋಡೋಣ, ಏನಾದರೂ ಉತ್ತರ ಸಿಗಬಹುದು ಎಂಬ ಆಶಯದಿಂದ ಕೇಳಿದೆ.
ಈ ಪಕ್ಷಿಗಳ ಬಗ್ಗೆ ನಿಮ್ಮಿಬ್ಬರಲ್ಲಿ ಯಾರಿಗಾದರೂ ಪೂರ್ಣವಾದ ಮಾಹಿತಿ ಗೊತ್ತಿದ್ದಿಯೇ ಎಂದು ಕೇಳಿದಾಗ, “ಓಹೋ! ಈ ಪಕ್ಷಿಗಳ ಬಗ್ಗೆ ನನಗ್ಗೊತ್ತು ನನಗ್ಗೊತ್ತು” ಅಂತ ಇಬ್ಬರಲ್ಲಿಯೂ ಸ್ಪರ್ಧೆ ಜೋರಾಯಿತು. “ಸ್ವಲ್ಪ ತಡಕೊಳ್ರೋ ನೀವು ಹಿಂಗ ಮಾಡಿದ್ರ ಈ ಪಕ್ಷಿಗಳಿಗೆ ನಮ್ಮ ಇರುವಿಕೆ ಗೊತ್ತಾಯಿತು ಅಂದರೆ ಇಲ್ಲಿಂದ ಹಾರಿ ಹೋಗಿ ಬಿಡ್ತಾವ ಆಗ ನಮಗ ನೋಡ ಬೇಕಂದ್ರೂ ಸಿಗುವುದಿಲ್ಲ. ನೋಡ್ರಿ, ಸ್ವಲ್ಪ ನಿಧಾನವಾಗಿ ಪಿಸುಮಾತಿನಲ್ಲಿ ಮಾತನಾಡೋಣ. ತಿಮ್ಮ, ರಂಗ ಇಷ್ಟೊಂದು ಪಕ್ಷಿಗಳನ್ನ ಅದು ಒಂದೇ ಮರದಲ್ಲಿ ಕುಳಿತಿರುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಇದು ನನ್ನ ಅತ್ಯುತ್ತಮ ಸೈಟಿಂಗುಗಳಲ್ಲಿ ಒಂದು. ಸ್ವಲ್ಪ ಬೆಳಕು ಮಸುಕಾಗಿದ್ದರಿಂದ ಸರಿಯಾಗಿ ಕಾಣುತ್ತಿಲ್ಲ ಅಷ್ಟೇ ಹೊರತು ಮತ್ತೆ ನಿಮ್ಮನ್ನ ಕೇಳ್ತಿದ್ದೀನಿ. ಈ ಪಕ್ಷಿಗಳನ್ನ ನೀವು ಎಲ್ಲಿಯಾದರೂ ನೋಡಿದ್ದಿರಾ?” ಎಂದೆ. “ಸಾರ್! ಈ ಪಕ್ಷಿಗಳು ನಮ್ಮ ಕಡೆ ಬಹಳಷ್ಟಿವೆ. ಹೀಗಾಗಿ ನಾವು ಇವುಗಳನ್ನ ‘ಮರಕಪ್ಪೆ’ ಅಂತ ಕರೆಯುತ್ತೇವೆ.” ಎಂದರು. “ಸರಿ ಹಾಗಾದರೆ, ಈ ಪಕ್ಷಿಗಳನ್ನ ‘ಮರಕಪ್ಪೆ’ ಅಂತ ಯಾಕೆ ಕರೆಯುತ್ತೀರಾ? ಇದರ ಬಗ್ಗೆ ಸ್ವಲ್ಪ ಹೇಳಿ” ಎಂದಾಗ, ತಿಮ್ಮ ಪಿಸುಮಾತಿನಲ್ಲಿ, “ಸಾರ್, ಸ್ಥಳೀಯವಾಗಿ ನಮ್ಮ ಕಡೆ ಇವುಗಳನ್ನ ಹೀಗೆ ಕರೆಯುವರು. ಯಾಕಂದರೆ ಇವು ಮರದ ಮೇಲೆ ಕುಳಿತಾಗ ಅದರ ರೆಕ್ಕೆಯ ಬಣ್ಣ ಹೆಚ್ಚು ಕಪ್ಪಾಗಿ ಕಾಣಿಸುವುದರಿಂದ ನಮ್ಮ ಕಡೆ ಈ ಪಕ್ಷಿಗಳನ್ನ ‘ಮರಕಪ್ಪೆ’ ಅಂತ ಕರೆಯುತ್ತೇವೆ ಅಷ್ಟೇ. ಈ ಪಕ್ಷಿಗಳೆಲ್ಲ ನಮ್ಮ ಕಡೆ ಮಾಮುಲಿ ಬಿಡಿ, ಇದಾವುದೋ ಹಣ್ಣಿನ ಮರದಂತಿದೆ, ಅದಕ್ಕೇ ನೋಡಿ ಎಲ್ಲ ಒಂದೆ ಕಡೆ ಕುಳಿತಿವೆ. ಈ ದೊಡ್ಡಗಾತ್ರದ ಪಕ್ಷಿಗಳು ನೋಡುವುದಕ್ಕೆ ಬಹಳಷ್ಟು ಸುಂದರ ಮತ್ತು ಇದರ ಹಳದಿ ಬಣ್ಣದ ಕೊಕ್ಕು ಇನ್ನೂ ಸುಂದರ ಸಾರ್” ಎಂದರು.
“ಈ ಪಕ್ಷಿಗಳ ತಲೆ ಮೇಲಿರುವ ‘U’ ಆಕಾರದ ಟೊಪ್ಪಿಗೆಯನ್ನು ಕನ್ನಡದಲ್ಲಿ ಶಿರಸ್ತ್ರಾಣ (helmet) ಅಂತಲೂ ಕರೆಯುವರು, ತಿಮ್ಮ. ಈ ಪಕ್ಷಿಗಳಲ್ಲಿ ಸಾಧಾರಣವಾಗಿ ಹೆಣ್ಣು ಮಂಗಟ್ಟೆಗಳು ಗಂಡು ಮಂಗಟ್ಟೆಕ್ಕಿಂತಲೂ ಚಿಕ್ಕದಾಗಿರುತ್ತವೆ.”
“ಅಬ್ಬಾ! ಒಳ್ಳೆಯ ಸೈಟಿಂಗ್ ಅಂತೂ ಆಯಿತು, ಇನ್ನು ಬೇಗ ಹೊರಡಬೇಕು ಕತ್ತಲಾಗುತ್ತಿದ್ದೆ ಅನ್ನುವಷ್ಟರಲ್ಲಿ ರಂಗ ಮತ್ತು ತಿಮ್ಮ ಮೇಲು ಧ್ವನಿಯಲ್ಲಿ, “ಸಾರ್! ಇನ್ನೇನು ಸ್ವಲ್ಪ ದೂರ ಹೋದರೆ ಇವತ್ತಿನ ಕೆಲಸ ಮುಗಿದಂಗೆ” ಎನ್ನುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದೆವು.
(ಮುಂದುವರೆಯುವುದು…)
ಮೊದಲ ಭಾಗವನ್ನು ಇಲ್ಲಿ ಓದಿ