Skip to main content
WCS
Menu
About Us
Board of Directors
Important Committees
Financials
Internal Policy
Programmes
Director
Cross-Functional
Focal
Support
Newsroom
Blog
News
Wildlife Trade News
Opportunities
Admin Consultant
Consultant - Reducing Turtle Consumption
Resources
Publications
Annual Reports
Gallery
BlueMAP-India
Donate
Search WCS.org
Search
search
Popular Search Terms
Wildlife Conservation Society - India
Wildlife Conservation Society - India Menu
About Us
Programmes
Newsroom
Opportunities
Resources
Donate
Newsroom
Blog
Current Articles
|
Archives
|
Search
My Journey from the magical world of Western Ghats to rocky hills of Eastern Ghats (Kannada - Part II)
Views: 3367
| October 23, 2018
ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ: ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ..
ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ..
ಸತೀಶ ಗಣೇಶ ನಾಗಠಾಣ.
ಮುಂದುವರೆದ ಭಾಗ..
ಅನುಭವಗಳನ್ನು ಹೇಳುತ್ತಾ ಹೋದಂತೆ ನನ್ನ ಪಯಣದ ಹಾದಿ ಮತ್ತಷ್ಟು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನುವುದು ಒಂಥರಹದಲ್ಲಿ ವಿಸ್ಮಯ ಅಂತ ಹೇಳಬಹುದು. ಕಾಡಿನಲ್ಲಿ ನಡೆಯಬೇಕಾದ ಸಂದರ್ಭಗಳಲ್ಲಿ ಹಲವಾರು ರೀತಿಯಾದಂತಹ ಘಟನೆಗಳನ್ನು ನೆನೆಸಿಕೊಂಡಾಗ ಮತ್ತು ಘಟನೆಗಳನ್ನ ಗೆಳೆಯರ ಜೊತೆ ಮತ್ತು ಸಹದ್ಯೋಗಿಗಳ ಜೊತೆ ಹಂಚಿಕೊಂಡಾಗ ಆಗುವಂತಹ ಉತ್ಸಾಹಕ್ಕೆ ಪಾರವೇ ಇಲ್ಲ ಅಂತ ಹೇಳಬಹುದು.
ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಂತೆ ‘ನುಗು’ ವಲಯದ ವ್ಯಾಪ್ತಿಗೆ ಬರುವ ‘ಯಶವಂತಪುರ’ ಎಂಬ ಗ್ರಾಮವನ್ನು ದಾಟಿದ ಮೇಲೆ ಅರಣ್ಯ ಇಲಾಖೆಯ ಒಂದು ಕ್ಯಾಂಪ್ ಸಿಗುತ್ತದೆ. ಆ ಕ್ಯಾಂಪಿನ ಹೆಸರು ‘ಯಶವಂತಪುರ ಕ್ಯಾಂಪ್' ಅಂತಾ ಕರೆಯುತ್ತಾರೆ. ೨೦೧೬ರ ಜೂನ ತಿಂಗಳಿನಲ್ಲಿ ನಮ್ಮ ತಂಡದಿಂದ ಆ ವಲಯದಲ್ಲಿ ಟ್ರಾನ್ಸ್ಯೆಕ್ಟ್ (ಸೀಳು ದಾರಿ) ಹಮ್ಮಿಕೊಳ್ಳಲಾಗಿತ್ತು. ನಾನು ಮತ್ತು ನಮ್ಮ ತಂಡದ ಸಹದ್ಯೋಗಿಗಳಾದಂತಹ ಹರ್ಷಾ ಲಕ್ಷ್ಮೀನಾರಾಯಣ, ಎಂ.ಎನ್.ಸಂತೋಷ ಮತ್ತು ಕೆಲ ಕ್ಷೇತ್ರ ಸಹಾಯಕರೊಂದಿಗೆ ಒಂದು ವಾರದ ಮಟ್ಟಿಗೆ ಕೆಲಸದ ನಿಮಿತ್ತ ಹೋಗಿದ್ದೇವು. ಕುರುಚುಲುಗಳಿಂದ ಕೂಡಿದ ಚಿಕ್ಕ ಗಾತ್ರದ ಮರಗಳಿರುವ ಅರಣ್ಯ ಪ್ರದೇಶ. ಗ್ರಾಮದ ಸಮೀಪವಿರುವ ಗದ್ದೆಗಳ ಮಧ್ಯೆ ಒಂದು ಅಗಲವಾದ ಕಚ್ಚಾ ಮಣ್ಣಿನ ದಾರಿ ಆ ದಾರಿಯನ್ನು ಬಳಸಿಕೊಂಡು ಸಲೀಸಾಗಿ ನಮ್ಮ ಜೀಪನ್ನು ಓಡಿಸಿಕೊಂಡು ಮಣ್ಣಿನ ರಸ್ತೆಯಲ್ಲಿ ಸಾಗಬಹುದು. ಅರಣ್ಯ ಮುಕ್ತಾಯವಾಗುವ ಸೀಮೆಯಲ್ಲಿ ‘ಸೋಲಾರ ತಂತಿ’ಗಳನ್ನು ನೇರವಾಗಿ ಮಣ್ಣಿನ ರಸ್ತೆಯ ಪಕ್ಕದಲ್ಲಿ ಬಹಳ ದೂರದವರೆ ಹಾಕಲಾಗಿತ್ತು. ಕಾಡುಪ್ರಾಣಿಗಳು ಯಾವುದೇ ಕಾರಣಕ್ಕೂ ಸೋಲಾರ ಬೇಲಿಗಳನ್ನು ದಾಟಿ ಹೊಲಗಳಲ್ಲಿ ಬರಬಾರದು ಅನ್ನುವ ಉದ್ದೇಶದಿಂದ ಸೌರಶಕ್ತಿಯುತ ಸೋಲಾರ ತಂತಿಗಳನ್ನು ಆ ವಲಯದಲ್ಲಿ ಹಾಕಲಾಗಿತ್ತು. ಪ್ರತಿ ದಿನ ಲೈನ್ ವಾಕ್ ಹೋಗಬೇಕಾದರೆ ಕಾಲ್ನಡಿಗೆಯಲ್ಲಿ ನಡೆಯಬೇಕಾದಂತಹ ಸಂದರ್ಭಗಳಲ್ಲಿ ‘ಚುಮು’ ‘ಚುಮು’ ಇಬ್ಬನಿಯಿಂದ ಕೂಡಿದ ಮುಂಜಾನೆಯ ನಸುಕಿನ ವಾತಾವರಣದ ಮಜಾನೆ ಬೇರೆ ಅಂತ ಹೇಳಬಹುದು. ಇಂಪಾಗಿ ಬೀಸುವ ಗಾಳಿ ಮನಸ್ಸಿಗೆ ಹಿತವನ್ನು ಕೊಡುತ್ತಿತ್ತು. ಒಂದಿನ ಲೈನ್ ವಾಕ್ ನಡೆಯಲು ಬೆಳಿಗ್ಗೆ ಬೇಗ ಎದ್ದೆ ಸಮಯ ಸರಿಯಾಗಿ ೦೪ ಗಂಟೆ ೧೫ ನಿಮಿಷ ಆಗಿತ್ತು. ಕ್ಯಾಂಪಿನಲ್ಲಿ ನೀರಿನ ಸೌಕರ್ಯ ಇದ್ದುದರಿಂದ ಸ್ನಾನ ಮಾಡಲು ಯಾವುದೇ ತೊಂದರೆ ಇರಲಿಲ್ಲ. ಆದರೆ, ಶೌಚಕ್ಕೆ ಹೋಗಲು ಶೌಚಾಲಯ ಇರಲಿಲ್ಲ. ಛೇ ಎಂತಹ ವಿಪರ್ಯಾಸ ಅಂತ ಅಂದುಕೊಳ್ಳುತ್ತ ಒಂದು ಬಿಸಲೇರಿ ಬಾಟಲಿನಲ್ಲಿ ನೀರನ್ನು ತುಂಬಿಸಿಕೊಂಡು ನಿದ್ದೆಗಣ್ಣಿನಲ್ಲಿ ಅಲುಗಾಡುತ್ತ ಕೈಯಲ್ಲಿ ದಿವಟಿಗೆ (ಟಾರ್ಚ್) ಹಿಡಿದುಕೊಂಡು ಹೊರಟೆ. ಸೋಲಾರ ತಂತಿ ದಾಟುವ ಸಲುವಾಗಿ ಇಲಾಖೆಯವರು ಕೋಣೆಯ ಬಾಗಿಲಿನ ಮುಂದೆ ತಂತಿಗಳನ್ನು ದಾಟಿ ಹೋಗಲು ಒಂದು ಚಿಕ್ಕದಾದ ದಾರಿ ಮಾಡಿದ್ದರು. ನಿದ್ದೆಗಣ್ಣಿನಲ್ಲಿ ಅಲುಗಾಡುತ್ತ ಹೋಗುತ್ತಿದ್ದೆ ಅಚಾನಕ್ಕಾಗಿ ಸೌರಯುಕ್ತ ತಂತಿ ಬೇಲಿಗಳನ್ನ ಹಿಡಿದೆ ನೋಡಿ ಸ್ವಾಮಿ ... ಅದೇ ನಾನು ಮಾಡಿದ್ದ ದೊಡ್ಡ ತಪ್ಪು ಆ ತಂತಿಯಲ್ಲಿ ಶೇಖರಗೊಂಡಿದ್ದ ವಿದ್ಯುತ್ ಪ್ರವಾಹ ನನ್ನ ಮೈಯೆಲ್ಲಾ ಒಂದೇ ಸಮನೆ ಗಡಗಡ ಅಂತ ಅಲುಗಾಡಿಸಿ ಬಿಟ್ಟಿತ್ತು. ‘ಕರೆಂಟ್ ಹೊಡೆದ ಕಾಗೆ' ತರಹ ನನ್ನ ಪರಿಸ್ಥಿತಿ ಆಗಿತ್ತು. ಮೈಯಲ್ಲಿ ಏನೋ ಒಂತರಹ ವಿದ್ಯುತ್ ಪ್ರವಾಹ ಸಂಚಾರವಾಗತೊಡಗಿತು. ತಂತಿಯ ಮೇಲೆ ಇಟ್ಟಿದ್ದ ಕೈಯನ್ನು ಧೈರ್ಯಮಾಡಿ ತೆಗೆದೆ. ಶಕ್ತಿಯುತವಾದ ಸೌರ ತಂತಿಗಳ ಪ್ರವಾಹವನ್ನು ನನಗೆ ತಡೆದುಕೊಳ್ಳಲಾಗಲಿಲ್ಲ ಅಂದ ಮ್ಯಾಲೆ ಆಹಾರವನ್ನು ಅರಸುತ್ತಾ ಕಾಡಿನಿಂದ ನಾಡಿಗೆ ಬಂದು ಸೌರ ಬೇಲಿಗಳನ್ನ ದಾಟುವಂತಹ ಕಾಡುಪ್ರಾಣಿಗಳ ಮೂಕ ರೋದನ ಕೇಳುವವರಾರು ಅಂತ ಮರುಕಪಟ್ಟೆ. ಅಂತಹದರಲ್ಲಿ ಕೈಯಲ್ಲಿರುವ ನೀರಿನ ಬಾಟಲಿ ಬಹಳ ದೂರ ಹೋಗಿ ಬಿದ್ದಿತ್ತು. ಇನ್ನೇನು ಮಾಡುವುದು ಅಂತ ಟಾರ್ಚನ ಸಹಾಯದಿಂದ ಎಲ್ಲೊ ಬಿದ್ದು ಹೋದ ನೀರಿನ ಬಾಟಲಿಯನ್ನು ಹುಡುಕಲು ಶುರುಮಾಡಬೇಕು ಅನ್ನುವಷ್ಟರಲ್ಲಿ ೪ರಿಂದ ೫ ಹೆಜ್ಜೆ ಅಷ್ಟೇ ಮುಂದೆ ಸಾಗಿದ್ದೆ ಸ್ವಾಮಿ ಮರದ ಪೊದೆಯಿಂದ ಗುರ್... ಗುರ್... ಗುರ್... ಗುರ್... ಅಂತ ಶಬ್ದ ಬರಲು ಶುರುವಾಯಿತು. ಆ ಶಬ್ದ ಕೇಳಿ ಶೌಚಕ್ಕೆ ಹೋಗುವ ಯೋಜನೆಯನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ನೇರವಾಗಿ ಜಾಗ್ರತೆಯಿಂದ ಸೌರ ತಂತಿಗಳನ್ನು ದಾಟಿ ನಮ್ಮ ಕ್ಯಾಂಪಿನ ಕೋಣೆಯಲ್ಲಿ ಹೋಗಿ ಕುಳಿತು ಬಿಟ್ಟೆ. ಸ್ವಲ್ಪ ಸಮಯದ ನಂತರ ಶಬ್ದ ಇನ್ನು ಜೋರಾಗಿ ಕೇಳಿಸತೊಡಗಿತು ಅಂತಹದರಲ್ಲಿ ನನ್ನ ಪಕ್ಕದಲ್ಲೇ ಮಲಗಿದ್ದ ಹರ್ಷಾರವರ ಗೊರಕೆ ಶಬ್ದ ಆ ಗೊತ್ತಿಲ್ಲದ ಪ್ರಾಣಿಗಿಂತ ಜೋರಾಗಿ ಕೇಳಿಸತೊಡಗಿತು. ಗುರ್... ಗುರ್... ಅಂತಾ ಒಂದೇ ಸಮನೆ ಗೊರಕೆ ಶಬ್ದ ಕೇಳಿ ಕೇಳಿ ನನಗಂತು ಸಾಕಾಗಿತ್ತು. ನಾನು ಕುಳಿತುಕೊಂಡ ಜಾಗದಿಂದ ಕೋಣೆಯ ಬಲ ಬದಿಯಲ್ಲಿ ನೇರವಾಗಿ ಇರುವಂತಹ ಕಿಟಕಿಯಲ್ಲಿ ಹೋಗಿ ನೋಡತೊಡಗಿದೆ ಏನಿರಬಹುದು ಎಂಬ ಉತ್ಸುಕತೆ ಹೆಚ್ಚಾದಾಗ ಮರದ ಪೊದೆಯಿಂದ ಚಿಕ್ಕ ಗಾತ್ರದ ಪ್ರಾಣಿ ಹೊರಬಂತು. ಅಯ್ಯೋ ಬೆಕ್ಕು ಅಂತ ಅಂದು ಕೊಂಡೆ ಯಾಕಂದರೆ ಗ್ರಾಮದ ಹತ್ತಿರದಲ್ಲೇ ಕ್ಯಾಂಪ ಇರುವದರಿಂದ ಆಹಾರಕ್ಕಾಗಿ ಬಂದಿರಬಹುದು ಎಂದು ಯೋಚನೆ ಮಾಡುತ್ತಿದ್ದಾಗ ಇಬ್ಬನಿಯಿಂದ ಕೂಡಿದ ಮುಸುಕಿನಲ್ಲಿ ಯಾವ ಪ್ರಾಣಿ ಅಂತ ಸರಿಯಾಗಿ ನನಗೆ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಏನಿರಬಹುದು ಎಂದು ಇಣುಕಿ ಇಣುಕಿ ನೋಡುತ್ತಿದ್ದಾಗ ಚಿಕ್ಕದಾಗಿ ಕಾಣುತ್ತಿದ್ದ ಪ್ರಾಣಿಯ ಗಾತ್ರ ಬರ ಬರುತ್ತ ದೊಡ್ಡದಾಗಿ ಕಾಣಿಸಲು ಶುರುವಾಯಿತು. ಕೋಣೆಯಲ್ಲಿ ಮಲಗಿದ್ದ ಹರ್ಷಾರನ್ನ ಎಚ್ಚರಿಸಿದೆ. ರೀ ಹರ್ಷಾ ಏಳರೀಪ್ಪಾ ಏಳರೀ.. ಯಾವುದೋ ಪ್ರಾಣಿ ಕಾಣಿಸ್ಲೀಕತದ ನೋಡ ಬನ್ರೀ ಅಂತ ಗೋಗೆರೆದೆ ಆದರೆ ಆ ಯಪ್ಪಾ ಏಳಲೇ ಇಲ್ಲ.. ರೀ ಇಲ್ಲಿ ಬನ್ನಿ ಅಂತ ನಿದ್ದೆಗಣ್ಣಿನಲ್ಲಿ ಇದ್ದಂತಹವರನ್ನ ಎಬ್ಬಿಸಿಕೊಂಡು ಬಂದು ಕಿಟಕಿ ಮುಂದೆ ನಿಲ್ಲಿಸಿದೆ. ನೋಡಿ ಅದು ಯಾವ ಪ್ರಾಣಿ ಅಂತ ಹೇಳಿ? ನನಗೆ ಗೊತ್ತಾಗುತ್ತಿಲ್ಲ ಎಂಬುದರ ಬಗ್ಗೆ ಚರ್ಚೆಯಲ್ಲಿ ವಾದ ಮತ್ತು ಪ್ರತಿವಾದಗಳ ಮಧ್ಯೆ ನಮಗೆ ಕಾಣಿಸಿದ್ದು ಚಿರತೆ. ನನ್ನ ಪಕ್ಕದಲ್ಲೇ ನಿಂತಿದ್ದ ಹರ್ಷಾ ಎಲ್ಲಿ ಹೋದರು ಅಂತ ಗೊತ್ತಾಗಲಿಲ್ಲ ನಾನಂತು ಚಿರತೆಯನ್ನು ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಕಿಟಕಿಯಲ್ಲಿ ನೋಡ ತೊಡಗಿದೆ. ಚಿರತೆಯು ಅಗಲವಾದ ಮಣ್ಣಿನ ರಸ್ತೆಯಲ್ಲಿ ಆರಾಮಾಗಿ ನಡೆದುಕೊಂಡು ತನ್ನ ಬಾಲವನ್ನು ಅಲ್ಲಾಡಿಸುತ್ತ ಹೋಗುತ್ತಿರುವ ದೃಶ್ಯ ಇವತ್ತಿಗೂ ಆ ಘಟನೆ ನನ್ನ ಕಣ್ಮುಂದೆ ಹಾದು ಹೋದಂತಾಗುತ್ತದೆ. ಆ ಸಮಯದಲ್ಲಿ ನನಗೆ ಈ ರೀತಿಯಾಗಿ ಅನ್ನಿಸತೊಡಗಿತು ಪಂಜರದಲ್ಲಿರುವ ಚಿರತೆಯನ್ನು ನೋಡಿ ನಾವು ಎಷ್ಟು ಸಂತೋಷ ಪಡುತ್ತೇವೋ ಅದೇ ತರಹ ನನ್ನನ್ನು ಕೂಡ ಕೋಣೆಯಲ್ಲಿ ಹಿಡಿದು ಹಾಕಿರುವ ಪ್ರಾಣಿ ಅಂತ ನನಗೂ ಕೂಡಾ ಆ ಸಮಯದಲ್ಲಿ ಅನ್ನಿಸತೊಡಗಿತು.
ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಬರುವ ‘ನುಗು’ ವಲಯದಲ್ಲಿರುವ ‘ಯಶವಂತಪುರ’ ಕ್ಯಾಂಪಿನ ನೋಟ. ನಸುಕಿನ ಜಾವ ೫ ಗಂಟೆಯ ಆಸುಪಾಸಿನ ಸಮಯದಲ್ಲಿ ಕ್ಯಾಂಪಿನ ಮುಂಭಾಗದ ಮಣ್ಣಿನ ಅಗಲವಾದ ರಸ್ತೆಯ ಮೇಲೆ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪೂರ, ಇಂಡಿ, ವಿಜಯಪುರ.
ಪ್ರತಿ ಬಾರಿಯು ನಾನು ಕಾಡನ್ನು ಸುತ್ತಾಡುತ್ತ, ಕೆಲಸದಲ್ಲಿ ಮಗ್ನವಾಗಿ ಸಾಗುವಾಗ ನನ್ನಲ್ಲಿ ನಾನು ಮರೆತು ಹೋಗುತ್ತಿದ್ದೆ. ಪ್ರಕೃತಿ ವನಸಿರಿಯು ನನ್ನನ್ನು ಕೈ ಬಿಸಿ ಕರೆಯುತ್ತಿರುವ ಅನುಭುತಿ ಸದಾ ನನಗೆ ಅಚ್ಚಳಿಯದಂತೆ ಮನದಲ್ಲಿ ಮನೆ ಮಾಡಿದಂತಹ ಕುರುಹುಗಳನ್ನು ಇವತ್ತಿಗೂ ನಾನು ನೆನಪಿಸಿಕೊಂಡರೆ ಅದರಲ್ಲಿ ಸಿಗುವಂತಹ ಆನಂದವೇ ಬೇರೆ ಅಂತ ಹೇಳಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆ ಅರಣ್ಯ ವಲಯ ವ್ಯಾಪ್ತಿ ದಾಟಿದ ಮೇಲೆ ಎಡಗಡೆ ಒಂದು ತಿರುವು ಸಿಗುತ್ತದೆ. ಆ ತಿರುವನ್ನು ಬಳಸಿಕೊಂಡು 6 ರಿಂದ 7 ಕಿ.ಮೀ ಒಳಗೆ ಜೀಪಿನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಗಜರಾಜ ಒಂಟಿಯಾಗಿ ನಿಂತು ಬಿಟ್ಟಿದೆ. ಆದರೆ. ಅದು ಸಾಕಾನೆ ಆಗಿತ್ತು ಅಂತಹದರಲ್ಲಿ ಜೀಪನ್ನ ಓಡಿಸಿತಿದ್ದವರು ಸಜನ ಬಿದ್ದಪ್ಪ ಅಂತ ಭಾರಿ ಗಟ್ಟಿ ಧೈರ್ಯದವರು ಅಂತಾನೇ ಹೇಳಬಹುದು. ನಾನು ಜೀಪಿನ ಹಿಂದಿನ ಸಿಟ್ ನಲ್ಲಿ ಕುಳಿತುಕೊಂಡಿದ್ದೆ ನನ್ನ ಜೊತೆ ಕಿರಣ ಬಿದರಳ್ಳಿ, ಹರ್ಷಾ ಮತ್ತು ಕೆಲ ಕ್ಷೇತ್ರ ಸಹಾಯಕರು ಕುಳಿತಿದ್ದರು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಹರ್ಷಾ ಕ್ಷೀಣ ಧ್ವನಿಯಲ್ಲಿ ಪಿಸುಗುಡುತ್ತಾ ರೀ ಈ ಗಜರಾಜನ ಹೆಸರು ‘ಪುಟ್ಟ’ ಅಂತ ಬಹಳ ಕೀಟಲೆ ಮಾಡೋ ಆನೆ ಅಂತ ಪಿಸುಮಾತಿನಲ್ಲಿ ಎಲ್ಲರಿಗೂ ಹೇಳುತ್ತಿದ್ದಾಗ ಗಜರಾಜ ನಮ್ಮ ಜೀಪಿನ ಮುಂದೆ ಬಂದು ನಿಂತೆ ಬಿಟ್ಟಿತು. ನಾವೆಲ್ಲ ಮನಸ್ಸಲ್ಲಿ ನಗುತ್ತ ಈ ಸಾಕಾನೆಯಿಂದ ನಮಗೆ ಯಾವುದೇ ತೊಂದರೆ ಇಲ್ಲ ಅದರ ಹಿಂದಿನ ಎರಡು ಕಾಲುಗಳಲ್ಲಿ ಕಬ್ಬಿಣದ ಸರಪಳಿ ಕಟ್ಟಿದ್ದರಿಂದ ಸ್ವಲ್ಪ ಮಟ್ಟಿಗೆ ನನಗೆ ಧೈರ್ಯ ಬಂದಿತ್ತು. ಕ್ಷಣಾರ್ಧದಲ್ಲಿ ಗಜರಾಜ ನಮ್ಮ ಜೀಪಿನ ಮುಂದೆ ಬಂದು ತಲೆ ಅಲ್ಲಾಡಿಸುತ್ತಾ 3 ರಿಂದ 4 ನಿಮಿಷದವರೆಗೆ ಮುಂದೆ ಹೋಗಲು ನಮಗೆ ದಾರಿ ಕೊಡಲಿಲ್ಲ. ಏನಪ್ಪಾ ಮಾಡೋದು ಅಂತ ನಾವು ಸಹ ಅಲ್ಲೇ ಸ್ವಲ್ಪ ಸಮಯದವರೆಗೆ ಕಾದೇವು. ಗಜರಾಜ ನಮಗೆ ಈಗ ದಾರಿ ಬಿಡುತ್ತೆ.. ಆಗ ದಾರಿ ಬಿಡುತ್ತೆ...ಅಂತ ಅಂದುಕೊಳ್ಳುತ್ತಿದ್ದಾಗ ಗಜರಾಜ ಗಿಡಗಳ ಮಧ್ಯೆ ಹುಲ್ಲು ತಿನ್ನುತ್ತಾ ದಟ್ಟ ಅರಣ್ಯದಲ್ಲಿ ಮರೆಯಾಯಿತು ಇನ್ನೇನು ನಿಧಾನವಾಗಿ ಹೋಗಬೇಕು ಅನ್ನುವಷ್ಟರಲ್ಲಿ ಮತ್ತೆ ಗಜರಾಜ ತಿರುಗಿ ಬಂದು ಅದೇ ದಾರಿಯಲ್ಲಿ ನಿಂತು ಸಿಟ್ಟಿನಿಂದ ತನ್ನ ಶಕ್ತಿ ಪ್ರದರ್ಶನ ತೋರಿಸುತ್ತಿದ್ದೆ. ಕಾಲಿನಿಂದ ಮಣ್ಣನ್ನು ಒದೆಯುತ್ತಿದೆ, ಕೋರೆ ಹಲ್ಲುಗಳನ್ನ ನೆಲಕ್ಕೆ ತಾಗಿಸಿ ಮಣ್ಣನ್ನು ಕೆದರುತ್ತಿದೆ, ಜೋರಾಗಿ ಕಿರುಚುತ್ತಿದೆ. ಆಗ, ನನ್ನ ಮನಸ್ಸಿನಲ್ಲಿ ಬಂದ ಯೋಚನೆ ಹೀಗಾಗಿತ್ತು ಸಾಕಿದ ಆನೆಯೇ ಹೀಗಿರಬೇಕಾದರೆ ಇನ್ನು ಕಾಡಲ್ಲಿರುವ ಮಿಕ್ಕ ಆನೆಗಳು ಹೇಗಿರಬೇಕಪ್ಪ ದೇವರೆ! ಅಂತ ಅಂದುಕೊಳ್ಳುತ್ತಾ ಇದ್ದೆ. ಅಯ್ಯೋ! ದಾರಿ ಅಂತು ಬಿಡತಾ ಇಲ್ಲ.. ಏನಪ್ಪಾ ಮಾಡೋದು ಶಿವ! ಶಿವ! ಅಂತ ನಾಮ ಜಪ ಮಾಡತೊಡಗಿದೆ. ಅಷ್ಟರಲ್ಲಿ ಗಜರಾಜ ತನ್ನ ಶಕ್ತಿ ಪ್ರದರ್ಶನ ತೋರಿಸುತ್ತಾ ಕುಂಟುತ್ತ ನಮ್ಮ ಜೀಪ ಹತ್ತಿರ ಬರುತ್ತೆ ಮತ್ತೆ ಕಾಡಿನ ಒಳಗೆ ಕುಂಟುತ್ತಾ ಹೋಗುತ್ತೆ ಒಟ್ಟಿನಲ್ಲಿ ನಮಗೆ ದಾರಿ ಬಿಡುತ್ತಿಲ್ಲ. ಹೀಗಾದರೆ ನಾವು ಇಲ್ಲೇ ಇರಬೇಕಾಗುತ್ತದೆ ಹೇಗಾದರೂ ಮಾಡಿ ನಾವು ಇಲ್ಲಿಂದ ಹೋಗಬೇಕು ಅಂತ ಉಪಾಯ ಮಾಡುತ್ತಿರುವಾಗ ಆಕ್ರೋಶದ ಪರಮಾವಧಿಯಲ್ಲಿದ್ದ ಗಜರಾಜ ಸ್ವಲ್ಪ ಜಾಗ ಮಾಡಿಕೊಟ್ಟಿತು. ಆ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಾವು ಅಲ್ಲಿಂದ ಜೀಪ ಸಮೇತ ಜಾಗ ಖಾಲಿ ಮಾಡಿ ಮುಂದಿನ ದಾರಿ ಹಿಡಿದು ಕ್ಯಾಂಪ್ ತಲುಪಿದೇವು.
ಕೆಲದಿನಗಳಾದ ನಂತರ ನಾವು ತಂಗಿದ್ದ ಕ್ಯಾಂಪನ ಪಕ್ಕದಲ್ಲಿ ಕೆಲ ಸಾಕಾನೆಗಳು ಹುಲ್ಲು ಮೇಯುತ್ತ ಅತ್ತಂದಿತ್ತ ಓಡಾತ್ತಿದ್ದವು . ಮಾವುತರು ಸಾಕಾನೆಗಳನ್ನ ತಮ್ಮ ಗುಡಿಸಲಿನ ಪಕ್ಕದಲ್ಲಿಯೇ ಅವುಗಳಿಗೆ ಬೇಕಾದ ಎಲ್ಲ ತರಹದ ಉಪಚಾರಗಳನ್ನು ಮಾಡುವುದರ ಮೂಲಕ ನಿಗಾ ವಹಿಸುತ್ತಿದ್ದರು. ಒಂದಿನ ಮಳೆಗಾಲದ ರಾತ್ರಿ ಸಮಯ ಕಾರ್ಮೋಡಗಳು ಇದ್ದರೂ ಸಹ ಮಳೆ ನಿಂತು ಹೋಗಿತ್ತು. ಸೊಂಪಾಗಿ ಗಾಳಿ ಬೀಸುತ್ತಿತ್ತು . ಒಂದು ಚಿಕ್ಕ ಮರದ ಮೇಲೆ ಹೊಳಪನ್ನು ಹೊತ್ತೊಯ್ಯುವಂತಹ ಹುಳುಗಳು ಹಾರಾಡುತ್ತಿದ್ದವು. ಕೈಯಲ್ಲಿರುವ ಟಾರ್ಚನ ಸಹಾಯದಿಂದ ನೋಡಿದೆ ‘ಮಿಂಚು ಹುಳಗಳು’ ಸಾಕಷ್ಟು ಪ್ರಮಾಣದಲ್ಲಿ ಬೆಳಕನ್ನು ಪ್ರಕಾಶಿಸುತ್ತಾ ಹಾರಾಡುತ್ತಿವೆ. ಮಿಂಚು ಹುಳಗಳು ಬೆಳಕನ್ನ ಉತ್ಪತ್ತಿ ಮಾಡುವ ಪ್ರಕ್ರಿಯೆ ಇದೆ ಅಲ್ಲ ಅದೊಂತರಹ ನೋಡೋದರಲ್ಲಿ ಸಿಗುವಂತಹ ಆನಂದ, ಸಂತೋಷ ಮತ್ತೆ ಬೇರೆ ಯಾವುದರಲ್ಲಿ ಸಿಗುವುದಿಲ್ಲ ಅಂತ ಅನ್ನಿಸತೊಡಗಿತು. ಮದುವಣಗಿತ್ತಿಯರಂತೆ ಮಿಂಚು ಹುಳಗಳು ಕತ್ತಲೆ ಆವರಿಸಿದ್ದ ಕಾಡನ್ನು ಪ್ರಕಾಶಮಾನವಾಗಿ ಬೆಳಗಿಸುವ ನಿಟ್ಟಿನಲ್ಲಿ ಹಾರಾಡುತ್ತಿದ್ದವು ಅನ್ನುವಂತಹ ಪ್ರಸಂಗ ನನ್ನನ್ನು ಈಗಲೂ ಮೂಕವಿಸ್ಮಿತವನ್ನಾಗಿಸಿ ಬಿಟ್ಟಿವೆ.
ಮಿಂಚು ಹುಳಗಳು ಹಾರಾಡುತ್ತಿರುವುದನ್ನ ಏಕಚಿತ್ತದಿಂದ ಗಮನಿಸುತ್ತಿರುವ ದೃ಼ಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪೂರ, ಇಂಡಿ, ವಿಜಯಪುರ.
ಮುಂದುವರೆಯುವುದು..
Read Part I here
Photo credits: Rujan Sarkar (Cover)